ಜೀವಿತಾವಧಿವರೆಗೂ ಬಾಧಿಸುತ್ತೆ ಸೆರೆಬ್ರಲ್ ಪಾಲ್ಸಿ ಸಮಸ್ಯೆ; ವಿಶ್ವ ಸೆರೆಬ್ರಲ್ ಪಾಲ್ಸಿ ದಿನದ ಇತಿಹಾಸ, ಮಹತ್ವ, ಆಚರಣೆಯ ಉದ್ದೇಶ ತಿಳಿಯಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  ಜೀವಿತಾವಧಿವರೆಗೂ ಬಾಧಿಸುತ್ತೆ ಸೆರೆಬ್ರಲ್ ಪಾಲ್ಸಿ ಸಮಸ್ಯೆ; ವಿಶ್ವ ಸೆರೆಬ್ರಲ್ ಪಾಲ್ಸಿ ದಿನದ ಇತಿಹಾಸ, ಮಹತ್ವ, ಆಚರಣೆಯ ಉದ್ದೇಶ ತಿಳಿಯಿರಿ

ಜೀವಿತಾವಧಿವರೆಗೂ ಬಾಧಿಸುತ್ತೆ ಸೆರೆಬ್ರಲ್ ಪಾಲ್ಸಿ ಸಮಸ್ಯೆ; ವಿಶ್ವ ಸೆರೆಬ್ರಲ್ ಪಾಲ್ಸಿ ದಿನದ ಇತಿಹಾಸ, ಮಹತ್ವ, ಆಚರಣೆಯ ಉದ್ದೇಶ ತಿಳಿಯಿರಿ

ಸೆರೆಬ್ರಲ್‌ ಪಾಲ್ಸಿ ಎನ್ನುವುದು ಹುಟ್ಟುವಾಗಲೇ ಕಾಣಿಸುವ ಸಮಸ್ಯೆ. ಪ್ರಸವದ ಸಂದರ್ಭದಲ್ಲಿ ಉಂಟಾಗುವ ಆಮ್ಲಜನಕದ ಪೂರೈಕೆಯ ವ್ಯತ್ಯಯದಿಂದ ಮಗುವಿನ ಮೆದುಳಿನ ನರಗಳಲ್ಲಿ ತೊಂದರೆಯಾಗಿ ಈ ಸಮಸ್ಯೆ ಕಾಣಿಸಬಹುದು. ಇದರಿಂದ ಮಗು ಸಾಯುವವರೆಗೂ ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ವಿಶ್ವ ಸೆರೆಬ್ರಲ್ ಪಾಲ್ಸಿ ದಿನ
ವಿಶ್ವ ಸೆರೆಬ್ರಲ್ ಪಾಲ್ಸಿ ದಿನ

ಸೆರೆಬ್ರಲ್ ಪಾಲ್ಸಿ ಎನ್ನುವುದು ನರಗಳಿಗೆ ಸಂಬಂಧಿಸಿದ ಸಮಸ್ಯೆಯಾಗಿದೆ. ಅಂದರೆ ಹುಟ್ಟುವಾಗಲೇ ನರಗಳಲ್ಲಿ ತೊಂದರೆಯಾಗಿ ಇದರಿಂದ ಜೀವನಪೂರ್ತಿ ನಡೆದಾಡಲು ಕಷ್ಟವಾಗಬಹುದು, ಮಾತ್ರವಲ್ಲ ಈ ರೀತಿ ಜನಿಸುವ ಮಕ್ಕಳು ವಿಶೇಷ ಮಕ್ಕಳಂತೆ ಕಾಣಿಸಬಹುದು. ಪ್ರಸವ ಸಮಯದಲ್ಲಿ ಉಂಟಾಗುವ ಆಮ್ಲಜನಕ ಪೂರೈಕೆಯಲ್ಲಿನ ವ್ಯತ್ಯಯವು ಮಗುವಿನಲ್ಲಿ ಮೆದುಳಿನ ನರಗಳು ಊದಿಕೊಳ್ಳುವಂತೆ ಮಾಡಬಹುದು. ಇದರಿಂದ ಅಂಗವೈಕಲ್ಯ ಅಥವಾ ನಡೆದಾಡಲು ಶಕ್ತಿ ಇಲ್ಲದಂತಹ ಮಗು ಜನಿಸಬಹುದು.

ಇದೊಂದು ಜೀವನ ಪರ್ಯಂತ ಕಾಡುವ ಹಾಗೂ ಗುಣಪಡಿಸಲು ಸಾಧ್ಯವಾಗದಂತಹ ಸಮಸ್ಯೆಯಾಗಿದೆ. ಇತರರಿಗೆ ಹೋಲಿಸಿದರೆ ಈ ಸಮಸ್ಯೆ ಇರುವವರರಿಗೆ ಜೀವತಾವಧಿಯೂ ಕಡಿಮೆ.ಈ ತೊಂದರೆ ಇರುವವರಿಗೆ ಸರಿಯಾಗಿ ನಡೆಯಲು ಆಗುವುದಿಲ್ಲ, ಮಾತನಾಡಲು ಸಾಧ್ಯವಾಗುವುದಿಲ್ಲ, ಅವರು ತಮ್ಮ ದೈನಂದಿನ ಕೆಲಸಗಳನ್ನು ಮಾಡಿಕೊಳ್ಳಲು ಅಸಮರ್ಥರಿರುತ್ತಾರೆ. ಕೆಲವೊಮ್ಮೆ ಅಪಸ್ಮಾರ ಮತ್ತು ಬೌದ್ಧಿಕ ಅಸಾಮರ್ಥ್ಯವನ್ನು ಹೊಂದಿರುತ್ತಾರೆ.

ಸೆರೆಬ್ರಲ್‌ ಪಾಲ್ಸಿಗೆ ಕಾರಣ

ಮೆದುಳಿನ ಅಸಹಜ ಬೆಳವಣಿಗೆ ಸೆರೆಬ್ರಲ್‌ ಪಾಲ್ಸಿ ಸಮಸ್ಯೆ ಕಾಣಿಸಿಕೊಳ್ಳಲು ಪ್ರಮುಖ ಕಾರಣ. ಗರ್ಭಿಣಿಯರಲ್ಲಿ ಉಂಟಾಗುವ ಸೋಂಕು, ಪಾರ್ಶ್ವವಾಯು ಮತ್ತು ಆಮ್ಲಜನಕರ ಕೊರತೆಯಿಂದ ಮಗುವಿನಲ್ಲಿ ಈ ಸಮಸ್ಯೆ ಕಾಣಿಸುವ ಸಾಧ್ಯತೆ ಇದೆ. ತಾಯಿಯ ಗರ್ಭದಲ್ಲಿ ಇದ್ದಾಗಲೇ ಮಗುವಿನ ಮೆದುಳಿನಲ್ಲಿ ಸಮಸ್ಯೆ ಕಾಣಿಸುತ್ತದೆ. ಮಗುವಿನ ಜನನದ ನಂತರ ದೇಹದ ಇತರಗಳಲ್ಲಿ ಕಾಣಿಸುತ್ತದೆ.

ಸೆರೆಬ್ರಲ್ ಪಾಲ್ಸಿಯಿಂದ ಸಮಸ್ಯೆ ಎದುರಿಸುತ್ತಿರುವವರ ಕಷ್ಟಗಳನ್ನು ವಿವರಿಸುವ ಹಾಗೂ ಇಂತಹ ಮಕ್ಕಳಿಗೆ ಶಿಕ್ಷಣ ನೀಡುವುದು ಹೇಗೆ ಎಂಬಿತ್ಯಾದಿ ಉದ್ದೇಶವನ್ನು ವಿವರಿಸುವ ಹಿನ್ನೆಲೆಯಲ್ಲಿ ಪ್ರತಿವರ್ಷ ಸೆರೆಬ್ರಲ್ ಪಾಲ್ಸಿ ದಿನವನ್ನು ಆಚರಿಸಲಾಗುತ್ತದೆ. ಹಾಗಾದರೆ ಸೆರೆಬ್ರಲ್ ಪಾಲ್ಸಿ ದಿನ ಯಾವಾಗ, ಈ ದಿನದ ಇತಿಹಾಸ, ಮಹತ್ವ ತಿಳಿಯಿರಿ.

ವಿಶ್ವ ಸೆರೆಬ್ರಲ್ ಪಾಲ್ಸಿ ದಿನ

ಪ್ರತಿವರ್ಷ ಅಕ್ಟೋಬರ್‌ 6ರಂದು ವಿಶ್ವ ಸೆರೆಬ್ರಲ್‌ ಪಾಲ್ಸಿ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಭಾನುವಾರ ಅಂದರೆ ಇಂದು ಸೆರೆಬ್ರಲ್‌ ಪಾಲ್ಸಿ ದಿನಾಚರಣೆ ಇದೆ.

ವಿಶ್ವ ಸೆರೆಬ್ರಲ್ ಪಾಲ್ಸಿ ದಿನದ ಇತಿಹಾಸ

2012ರಲ್ಲಿ ಸೆರೆಬ್ರಲ್‌ ಪಾಲ್ಸಿ ಅಲೈಯನ್ಸ್‌ ಅಕ್ಟೋಬರ್‌ 6 ಅನ್ನು ವಿಶ್ವ ಸೆಲೆಬ್ರಲ್‌ ಪಾಲ್ಸಿ ದಿನ ಎಂದು ಘೋಷಿಸಿತು. ಈ ನರ ವೈಜ್ಞಾನಿಕ ಅಸ್ವಸ್ಥತೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮತ್ತು ಸೆರೆಬ್ರಲ್‌ ಪಾಲ್ಸಿ ಸಮಸ್ಯೆ ಇರುವವರು ಪ್ರಪಂಚದಲ್ಲಿ ಬದುಕುತ್ತಿರುವ ಇತರರಂತೆ ಸಮಾನ ಹಕ್ಕುಗಳು, ಅವಕಾಶಗಳನ್ನು ಹೊಂದಬೇಕು ಎಂಬುದನ್ನು ಪ್ರತಿಪಾದಿಸುವ ಉದ್ದೇಶದಿಂದ ಈ ದಿನದ ಆಚರಣೆಗೆ ಕರೆ ನೀಡಲಾಯಿತು. ಈ ಹಿನ್ನೆಲೆಯಲ್ಲಿ ಪ್ರತಿವರ್ಷ ವಿಶ್ವದಾದ್ಯಂತ ಸೆರೆಬ್ರಲ್ ಪಾಲ್ಸಿ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಸೆರೆಬ್ರಲ್ ಪಾಲ್ಸಿ ದಿನದ ಮಹತ್ವ

ಈ ದಿನವು ಸೆರೆಬ್ರಲ್‌ ಪಾಲ್ಸಿ ಹೊಂದಿರುವ ವ್ಯಕ್ತಿಗಳು, ಅವರ ಕುಟುಂಬಗಳು, ಬೆಂಬಲಿಗರನ್ನು ಒಟ್ಟುಗೂಡಿಸುವ ಉದ್ದೇಶವನ್ನು ಹೊಂದಿದೆ. 100ಕ್ಕೂ ಹೆಚ್ಚು ದೇಶಗಳು ಸೆರೆಬ್ರಲ್‌ ಪಾಲ್ಸಿಯನ್ನು ದಿನವನ್ನು ಆಚರಿಸುತ್ತವೆ. ಸೆರೆಬ್ರಲ್‌ ಪಾಲ್ಸಿ ಹೊಂದಿರುವ ಮಕ್ಕಳು ಮತ್ತು ವಯಸ್ಕರು ಸಮಾಜದಲ್ಲಿ ಬೇರೆಯವರಂತೆಯೆ ಬದುಕುವ ಸಮಾನ ಹಕ್ಕು, ಅವಕಾಶ ಹೊಂದಿದ್ದಾರೆ. ಇದನ್ನು ಖಚಿತ ಪಡಿಸಿಕೊಳ್ಳುವ ಉದ್ದೇಶದಿಂದಲೇ ಸೆರೆಬ್ರಲ್‌ ಪಾಲ್ಸಿ ದಿನವನ್ನು ಆಚರಿಸಲಾಗುತ್ತಿದೆ.

Whats_app_banner