ಯುಎಸ್ಎ-ಕೆನಡಾ-ಆಸ್ಟ್ರೇಲಿಯಾ: ವಿದೇಶದಲ್ಲಿ ಎಂಬಿಎ ಮಾಡಲು ಎಷ್ಟು ವೆಚ್ಚವಾಗುತ್ತದೆ; ಯಾವ ದೇಶದಲ್ಲಿ ಖರ್ಚು ಕಡಿಮೆ?
MBA in USA: ವಿದೇಶದಲ್ಲಿ ಎಂಬಿಎ ಅಧ್ಯಯನ ಮಾಡುವ ಆಸೆ ನಿಮಗೂ ಇರಬಹುದು. ಆದರೆ ಯಾವ ದೇಶದಲ್ಲಿ ಖರ್ಚು ಕಡಿಮೆ, ಹಾಗೂ ಎಲ್ಲಿ ಓದುವುದು ಉತ್ತಮ ಎಂಬ ಗೊಂದಲವಿದ್ದರೆ ಈ ಮಾಹಿತಿ ನಿಮಗೆ ನೆರವಾಗಬಹುದು. ಮೂರು ದೇಶಗಳಲ್ಲಿ ಎಂಬಿಎ ವ್ಯಾಸಂಗಕ್ಕೆ ಆಗುವ ಖರ್ಚು-ವೆಚ್ಚಗಳ ವಿವರ ಇಲ್ಲಿದೆ.
ವಿದೇಶದಲ್ಲಿರುವ ಜನಪ್ರಿಯ ವಿಶ್ವವಿದ್ಯಾಲಯದಲ್ಲಿ ಎಂಬಿಎ ಅಧ್ಯಯನ ಮಾಡುವ ಯೋಜನೆ ಹಾಕುವಾಗ, ಮೊದಲು ಅದಕ್ಕಾಗಿ ಆಗುವ ಖರ್ಚು ವೆಚ್ಚಗಳ ಬಗ್ಗೆ ಲೆಕ್ಕ ಹಾಕಲಾಗುತ್ತದೆ. ಹಲವು ವರ್ಷಗಳಿಂದಲೂ ಭಾರತೀಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಹೆಚ್ಚಾಗಿ ಆಯ್ಕೆ ಮಾಡುವ ರಾಷ್ಟ್ರಗಳೆಂದರೆ ಯುಎಸ್ ಮತ್ತು ಯುಕೆ. ಎಂಬಿಎ ಅಥವಾ ಎಂಎಸ್‌ನಂತಹ ಉನ್ನತ ಶಿಕ್ಷಣದ ಕೋರ್ಸ್ ವಿಷಯ ಬಂದಾಗ ಭಾರತೀಯ ವಿದ್ಯಾರ್ಥಿಗಳು ಹೆಚ್ಚಾಗಿ ಯುಎಸ್ ಆಯ್ಕೆ ಮಾಡುತ್ತಾರೆ. ಆದರೆ, ಖರ್ಚುವೆಚ್ಚದ ವಿಷಯ ಬಂದಾಗ ತುಸು ಕಡಿಮೆ ಖರ್ಚಿನಲ್ಲಿ ಓದಬಹುದಾದ ರಾಷ್ಟ್ರಗಳನ್ನು ಆಯ್ಕೆ ಮಾಡಲಾಗುತ್ತದೆ. ಇಂಥಾ ಪಟ್ಟಿಯಲ್ಲಿ ಅಮೆರಿಕದ ನೆರೆಯ ದೇಶ ಕೆನಡಾ ಭಾರತೀಯರ ನೆಚ್ಚಿನ ಆಯ್ಕೆ. ಉಳಿದಂತೆ ಆಸ್ಟ್ರೇಲಿಯಾ ಕೂಡಾ ಭಾರತೀಯರ ಫೇವರೆಟ್.
ಈ ಮೂರು ದೇಶಗಳ ಉನ್ನತ ವಿಶ್ವವಿದ್ಯಾಲಯಗಳಲ್ಲಿ ಎಂಬಿಎ ಅಧ್ಯಯನ ಮಾಡಲು ಆಗುವ ವೆಚ್ಚದ ಬಗ್ಗೆ ನೋಡೋಣ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ನೀಡಿದ 2022ರ ಅಂಕಿ-ಅಂಶಗಳ ಪ್ರಕಾರ, ಯುಎಸ್‌ನಲ್ಲಿ ಭಾರತದ 4.65 ಲಕ್ಷಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಮತ್ತು ಕೆನಡಾದಲ್ಲಿ 1.83 ಲಕ್ಷ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಇದೇ ವೇಳೆ ಆಸ್ಟ್ರೇಲಿಯಾದಲ್ಲಿಯೂ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ.
ಯುಎಸ್ಎ
ಅಮೆರಿಕದಲ್ಲಿ ವಿದ್ಯಾಭ್ಯಾಸಕ್ಕೆ ಅವಕಾಶಗಳ ಆಗರವಿದೆ. ಸ್ಟ್ಯಾನ್‌ಫೋರ್ಡ್, ವಾರ್ಟನ್, ಹಾರ್ವರ್ಡ್, ಎಂಐಟಿ, ಕೊಲಂಬಿಯಾ, ನಾರ್ತ್ ವೆಸ್ಟರ್ನ್ ಮತ್ತು ಯುಸಿ ಬರ್ಕ್ಲಿ ಪ್ರಮುಖ ಶಿಕ್ಷಣ ಸಂಸ್ಥೆಗಳು. ಸ್ಟ್ಯಾನ್ಫೋರ್ಡ್‌ನಲ್ಲಿ ಒಂದು ವರ್ಷದ ಬೋಧನಾ ಶುಲ್ಕವು ಸುಮಾರು 82,455 ಡಾಲರ್. ಇಲ್ಲಿ ಒಟ್ಟಾರೆ ವೆಚ್ಚವು 1,30,746 ಡಾಲರ್‌ವರೆಗೂ ಹೋಗುತ್ತದೆ. ಇದರಲ್ಲಿ ಜೀವನ ವೆಚ್ಚ 19,000, ವಸತಿಗೆ 20,880) ವೈದ್ಯಕೀಯ ವಿಮೆ 7,620 ಮತ್ತು ಆರೋಗ್ಯ ಶುಲ್ಕವಾಗಿ 783 ಡಾಲರ್‌ಗಳು ಸೇರಿವೆ. ಹೀಗಾಗಿ ಭಾರತೀಯ ವಿದ್ಯಾರ್ಥಿಯ ಅಮೆರಿಕದ ಒಂದು ನಗರದಲ್ಲಿ ವಿದ್ಯಾಭ್ಯಾಸಕ್ಕೆ ಒಂದು ವರ್ಷಕ್ಕೆ 1.09 ಕೋಟಿ ರೂಪಾಯಿಗಳಷ್ಟು ಖರ್ಚು ಮಾಡಬೇಕಾಗುತ್ತದೆ. ಎರಡು ವರ್ಷಗಳ ಎಂಬಿಎಗೆ ಈ ವೆಚ್ಚ ದುಪ್ಪಟ್ಟಾಗುತ್ತದೆ.
ಕೆನಡಾ
ಉತ್ತರ ಅಮೆರಿಕ ಖಂಡದಲ್ಲಿರುವ ಅಮೆರಿಕದ ನೆರೆಯ ದೇಶದಲ್ಲಿ ಭಾರತದ ಹಲವು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕೆನಡಾದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಕ್ವೀನ್ಸ್ ವಿಶ್ವವಿದ್ಯಾಲಯ, ಟೊರೊಂಟೊ ವಿಶ್ವವಿದ್ಯಾಲಯ, ವಾಟರ್ಲೂ ವಿಶ್ವವಿದ್ಯಾಲಯ, ಯಾರ್ಕ್ ವಿಶ್ವವಿದ್ಯಾಲಯ, ಮೆಕ್ಗಿಲ್ ವಿಶ್ವವಿದ್ಯಾಲಯ ಪ್ರಮುಖವು. ಇಲ್ಲಿನ ಮೆಕ್ಗಿಲ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಮಾಡಲು ಭಾರತೀಯ ವಿದ್ಯಾರ್ಥಿಗಳು ಟ್ಯೂಷನ್ ವೆಚ್ಚವಾಗಿ 1,02,500 ಡಾಲರ್ ವ್ಯಯಿಸಬೇಕಾಗುತ್ತದೆ. ಜೀವನ ವೆಚ್ಚಕ್ಕೆ 24,000 ಡಾಲರ್ ಬೇಕಾಗಬಹುದು. ಹೀಗಾಗಿ ಎಂಬಿಎ ಮಾಡಲು ಒಟ್ಟು ವೆಚ್ಚ 1,05,500 + 24,000 = 1,29,500 ಆಗಿರುತ್ತದೆ. ರೂಪಾಯಿ ಮೌಲ್ಯದಲ್ಲಿ ಹೇಳುವುದಾದರೆ 80 ಲಕ್ಷ ರೂಪಾಯಿವರೆಗೂ ವರ್ಷಕ್ಕೆ ಖರ್ಚಾಗುತ್ತದೆ.
ಆಸ್ಟ್ರೇಲಿಯಾ
ಅಮೆರಿಕ, ಕೆನಡಾ ಹೊರತಾಗಿ ಆಸ್ಟ್ರೇಲಿಯಾದಲ್ಲಿ ವಿದ್ಯಾಭ್ಯಾಸ ಮಾಡಲು ವಿದ್ಯಾರ್ಥಿಗಳು ಬಯಸುವುದು ಹೆಚ್ಚು. ಮೆಲ್ಬೋರ್ನ್, ಕ್ವೀನ್ಸ್‌ಲ್ಯಾಂಡ್, ಸಿಡ್ನಿ, ವೆಸ್ಟರ್ನ್ ಆಸ್ಟ್ರೇಲಿಯಾ, ಕ್ಯಾನ್ಬೆರಾ, ವೊಲ್ಲೊಂಗಾಂಗ್ ಮತ್ತು ವಿಕ್ಟೋರಿಯಾ ವಿಶ್ವವಿದ್ಯಾಲಯಗಳು ಎಂಬಿಎಗೆ ಹೆಸರುವಾಸಿ. ಸಿಡ್ನಿ ವಿಶ್ವವಿದ್ಯಾಲಯದಲ್ಲಿ ಒಂದು ವರ್ಷದ ಎಂಬಿಎಗೆ 55,000 ಡಾಲರ್ ವೆಚ್ಚ ಬೀಳುತ್ತದೆ. 1.5 ವರ್ಷಗಳ ಎಂಬಿಎಗೆ 82,500 ಡಾಲರ್ ಖರ್ಚು ಬೀಳುತ್ತದೆ. ಇದೇ ಅವಧಿಗೆ ಜೀವನ ವೆಚ್ಚ 36,000 ಡಾಲರ್. ಹೀಗಾಗಿ ಒಟ್ಟು ವೆಚ್ಚವು 82,500 + 36,000 = 1,18,500 ಡಾಲರ್ ಆಗಿದೆ. ಭಾರತೀಯ ಕರೆನ್ಸಿಯಲ್ಲಿ ಹೇಳುವುದಾದರೆ, 66.36 ಲಕ್ಷ ರೂಪಾಯಿ ಎಂಬಿಎ ವ್ಯಾಸಂಗಕ್ಕೆ ಖರ್ಚಾಗುತ್ತದೆ.
ಇನ್ನಷ್ಟು ಶೈಕ್ಷಣಿಕ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಯುಕೆಯಲ್ಲಿ ಅಧ್ಯಯನ ಮಾಡಲು ಎಷ್ಟು ಖರ್ಚಾಗುತ್ತೆ; ಜೀವನ ವೆಚ್ಚ-ಶೈಕ್ಷಣಿಕ ವೆಚ್ಚಗಳ ಲೆಕ್ಕಾಚಾರ ಹೀಗಿದೆ