ಜೊಮ್ಯಾಟೋಗೆ ಸಲಹೆ ನೀಡಿದ ಬೆಂಗಳೂರು ವ್ಯಕ್ತಿಗೆ ಉದ್ಯೋಗದ ಆಫರ್; ಆಹಾರ ಸರಬರಾಜು ವಿಚಾರದಲ್ಲಿ ಸಲಹೆ ಕೊಟ್ಟಿದ್ದರೆ ಸಿಇಒ ಕೊಟ್ಟ ಉಡುಗೊರೆ
Nov 11, 2024 04:20 PM IST
ಬೆಂಗಳೂರಿನ ವ್ಯಕ್ತಿಯೊಬ್ಬರು ಜೊಮ್ಯಾಟೋ ನಿಯಮಗಳ ವಿಚಾರವಾಗಿ ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಸಿಇಒ ದೀಪೀಂದರ್ ಗೋಯಲ್ ಅವರಿಂದ ಉದ್ಯೋಗ ಆಫರ್ ದೊರೆತಿದೆ.
Zomato Ceo Offer: ಭಾರತ ಆಹಾರ ವಿತರಣೆಯ ಪ್ರಮುಖ ಸಂಸ್ಥೆ ಜೊಮ್ಯಾಟೋ ಜಾರಿಗೊಳಿಸಿರುವ ಹೊಸ ನಿಯಮಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬೆಂಗಳೂರಿನ ವ್ಯಕ್ತಿಗೆ ಭರ್ಜರಿ ಉದ್ಯೋಗದ ಆಫರ್ ದೊರೆತಿದೆ.
ಬೆಂಗಳೂರು: ನಿಮ್ಮ ಸಲಹೆಗಳು ವಸ್ತುನಿಷ್ಠ, ಪ್ರಾಮಾಣಿಕ ಹಾಗೂ ಹೊಸತನದಿಂದ ಕೂಡಿದ್ದರೆ ನಿಮಗೆ ಆಶ್ಚರ್ಯಕರ ಎನ್ನುವ ಅವಕಾಶಗಳು ಬರಬಹುದು. ಬೆಂಗಳೂರಿನಲ್ಲಿಯೂ ನಡೆದದ್ದೂ ಅದೇ. ಆಹಾರ ಸರಬರಾಜು ಪ್ರಮುಖ ಕಂಪೆನಿ ಜೊಮ್ಯಾಟೋದ ನೀತಿಗೆ ಸಂಬಂಧಿಸಿದಂತೆ ಬೆಂಗಳೂರಿನ ವ್ಯಕ್ತಿಯೊಬ್ಬರು ಸಾಮಾಜಿಕ ಮಾಧ್ಯಮದ ಮೂಲಕ ರಚನಾತ್ಮಕ ಸಲಹೆಗಳನ್ನು ನೀಡಿದರು. ಇದು ಜೊಮ್ಯಾಟೋ(Zomato.)
ಕಂಪೆನಿಯ ಸಿಇಒ ದೀಪಿಂದರ್ ಗೋಯಲ್ ಅವರನ್ನು ಸೆಳೆಯಿತು. ಅವರು ನೀಡಿದ ಸಲಹೆ, ಸೂಚನೆ, ಅಭಿಪ್ರಾಯಗಳಿಗೆ ಮೆಚ್ಚುಗೆ ಸೂಚಿಸುತ್ತಲೇ ದೀಪಿಂದರ್ ಗೋಯಲ್(Deepinder Goyal) ಅವರು ಉತ್ತರವನ್ನೂ ನೀಡಿದರು. ನೀವು ನಮ್ಮೊಂದಿಗೆ ಕೆಲಸ ಮಾಡುತ್ತೀರಿ ಎನ್ನುವುದಾದರೆ ನಿಮಗೆ ಅವಕಾಶವಿದೆ. ಅರ್ಜಿ ಸಲ್ಲಿಸಿ ಎನ್ನುವ ಆಫರ್ ಅನ್ನು ನೀಡಿದರು.
ಜೊಮ್ಯಾಟೋ ಸಲಹೆಗಳು
ಜೊಮಾಟೊ ಇತ್ತೀಚೆಗೆ ಹೊಸ ಸೇವೆಗಳನ್ನು ಘೋಷಿಸಿದೆ. ಇದರಲ್ಲಿ ಬಳಕೆದಾರರಿಗೆ ರದ್ದುಗೊಳಿಸಿದ ಆಹಾರ ಆದೇಶಗಳನ್ನು ರಿಯಾಯಿತಿ ಬೆಲೆಯಲ್ಲಿ ಖರೀದಿಸಲು ಅನುವು ಮಾಡಿಕೊಡುವ ಹೊಸ ನಿಯಮವೂ ಸೇರಿದೆ. ಜೊಮ್ಯಾಟೋದ ಈ ಸೇವೆವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಬೆಂಗಳೂರಿನ ವ್ಯಕ್ತಿಯೊಬ್ಬರು ನೀಡಿದ ಸಲಹೆಗಳು ಜೊಮಾಟೊ ಸಿಇಒ ದೀಪಿಂದರ್ ಗೋಯಲ್ ಅವರನ್ನು ತುಂಬಾ ಆಕರ್ಷಿಸಿದವು, ಅವರು ಆ ವ್ಯಕ್ತಿಯನ್ನು ನೀವು ನಮ್ಮಲ್ಲಿ ಕೆಲಸಕ್ಕೆ ಏಕೆ ಅರ್ಜಿ ಸಲ್ಲಿಸಬಾರದು ಎಂದು ಕೇಳಿದರು. ಇದು ನಡೆದದ್ದು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ.
ಜೊಮ್ಯಾಟೋ ಕಾಲಕಾಲಕ್ಕೆ ತನ್ನ ಕಾರ್ಯಚಟುವಟಿಕೆಗಳ ಶೈಲಿಯನ್ನು ಬದಲಾಯಿಕೊಳ್ಳುತ್ತಲೇ ಇರುತ್ತದೆ. ಹಿಂದೆಲ್ಲಾ ಜೊಮ್ಯಾಟೋ ಮೂಲಕ ಮಾಡಿದ ಆರ್ಡರ್ ರದ್ಧಾದರೆ ಅದನ್ನು ವಾಪಾಸ್ ಪಡೆಯಲಾಗುತ್ತಿತ್ತು. ಅದು ಈಗಲೂ ಇದೆ. ಆದರೆ ವಾಪಾಸ್ ಪಡೆದ ನಂತರ ಅದನ್ನು ಮರು ಖರೀದಿಗೆ ಅವಕಾಶ ನೀಡಲಾಗಿದೆ. ಇದಕ್ಕೆ ರಿಯಾಯಿತಿಯನ್ನೂ ಜೊಮ್ಯಾಟೋ ಘೋಷಿಸಿದೆ. ಹೀಗೆ ವಾಪಾಸ್ ಪಡೆದ ಆಹಾರ ತ್ಯಾಜ್ಯವಾಗಬಾರದು. ಅದನ್ನು ಇಂತಿಷ್ಟು ಅವಧಿಯೊಳಗೆ ಬಳಸಲು ಅವಕಾಶ ನೀಡಲಾಗಿದೆ ಎಂದು ಎಕ್ಸ್‌ನಲ್ಲಿ ಗ್ರಾಹಕರೊಬ್ಬರ ಪ್ರಶ್ನೆಗೆ ಜೊಮಾಟೊ ಸಿಇಒ ದೀಪಿಂದರ್ ಗೋಯಲ್ ಉತ್ತರಿಸಿದ್ದರು.
ಬದಲಾವಣೆ ಏನು
ಹೊಸ "ಫುಡ್ ರೆಸ್ಕ್ಯೂ" ವೈಶಿಷ್ಟ್ಯದ ಅಡಿಯಲ್ಲಿ, ರದ್ದಾದ ಆದೇಶಗಳನ್ನು ಹತ್ತಿರದ ಗ್ರಾಹಕರಿಗೆ ಖರೀದಿಸಲು ಲಭ್ಯವಾಗುವಂತೆ ಮಾಡಲಾಗುವುದು. ರದ್ದಾದ ಆದೇಶಗಳು ಈಗ ಹತ್ತಿರದ ಗ್ರಾಹಕರಿಗೆ ಪಾಪ್ ಅಪ್ ಆಗುತ್ತವೆ. ಅವರು ಅವುಗಳನ್ನು ನಿಗದಿತ ಬೆಲೆಯಲ್ಲಿ, ಅವರ ಮೂಲ ಅಡೆತಡೆಯಿಲ್ಲದ ಪ್ಯಾಕೇಜಿಂಗ್ ನಲ್ಲಿ ಪಡೆದುಕೊಳ್ಳಬಹುದು ಮತ್ತು ಅವುಗಳನ್ನು ಕೆಲವೇ ನಿಮಿಷಗಳಲ್ಲಿ ಸ್ವೀಕರಿಸಬಹುದು" ಎಂದು ಗೋಯಲ್ ವಿವರಿಸಿದ್ದರು.
ಹೊಸ ವೈಶಿಷ್ಟ್ಯವನ್ನು ಘೋಷಿಸಿರುವ ಪೋಸ್ಟ್ ಜೊಮಾಟೊ ಬಳಕೆದಾರರಲ್ಲಿ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ರದ್ದಾದ ಆರ್ಡರ್ಗಳನ್ನು ಖರೀದಿಗೆ ಇಡುವುದು ಅಪಾಯಗಳನ್ನು ಆಹ್ವಾನಿಸದಂತೆಯೇ. ಆಹಾರದ ವಿಚಾರದಲ್ಲಿ ಇದು ಬೇಡ ಎಂದು ಕೆಲವರು ಹೇಳಿದರೆ, ಟ್ಯಾಂಪರ್-ಪ್ರೂಫ್ ಪ್ಯಾಕೇಜಿಂಗ್‌ನ ಜೊಮಾಟೋದ ಭರವಸೆಯ ಹೊರತಾಗಿಯೂ, ಇತರರು ರಿಯಾಯಿತಿ ಬೆಲೆಯಲ್ಲಿ ಆಹಾರವನ್ನು ಪಡೆಯುವ ಅವಕಾಶ ಒಳ್ಳೆಯದೇ ಎಂದು ಅಭಿಪ್ರಾಯಪಟ್ಟಿದ್ದರು.
ಗ್ರಾಹಕರ ಪ್ರಾಮಾಣಿಕ ಪ್ರತಿಕ್ರಿಯೆ
ಇದನ್ನು ಗಮನಿಸಿದ್ದ ಬೆಂಗಳೂರಿನ ಭಾನು ಎಂಬುವವರು ತಾವೂ ಪ್ರತ್ರಿಕ್ರಿಯೆ ನೀಡಿದ್ದರು.ಈ ವೈಶಿಷ್ಟ್ಯದ ದುರುಪಯೋಗವನ್ನು ಹೇಗೆ ತಡೆಗಟ್ಟುವುದು ಎಂಬುದರ ಕುರಿತು ಜೊಮಾಟೊಗೆ ಸಲಹೆಗಳನ್ನು ನೀಡಿದರು.
ಕ್ಯಾಶ್ ಆನ್ ಡೆಲಿವರಿ ಆರ್ಡರ್ ಗಳಿಗೆ ಫುಡ್ ರೆಸ್ಕ್ಯೂ ಆಯ್ಕೆ ಲಭ್ಯವಿರಬಾರದು. ಡೆಲಿವರಿ ಪಾಲುದಾರರು ತಮ್ಮ ಸ್ಥಳದಿಂದ 500 ಮೀಟರ್ ಒಳಗೆ ತಲುಪಿದರೆ ಜೊಮಾಟೊ ಗ್ರಾಹಕರು ತಮ್ಮ ಆದೇಶಗಳನ್ನು ರದ್ದುಗೊಳಿಸಲು ಅನುಮತಿಸಬಾರದು. ಇಬ್ಬರು ಊಟವನ್ನು ಹಂಚಿಕೊಳ್ಳುವ ಸಾಧ್ಯತೆಗಳು, ಆರ್ಡರ್ ಮಾಡುವ ಮತ್ತು ರದ್ದುಗೊಳಿಸುವ ಸಾಧ್ಯತೆಗಳು ಒಂದೇ ಸಮಯದಲ್ಲಿ ರಿಯಾಯಿತಿ ಸ್ಥಳ ಸೇವೆಯನ್ನು ದುರುಪಯೋಗಪಡಿಸಿಕೊಳ್ಳಬಹುದು. ಜೊಮಾಟೋ ಗ್ರಾಹಕರಿಗೆ ದಿನಕ್ಕೆ ಗರಿಷ್ಠ ಎರಡು ಆದೇಶಗಳನ್ನು ರದ್ದುಗೊಳಿಸಲು ಅವಕಾಶ ನೀಡಬೇಕು ಎಂದು ಅವರು ಸಲಹೆ ನೀಡಿದರು.
ಸಿಕ್ಕಿತು ಉದ್ಯೋಗ ಅವಕಾಶ
ಇದಕ್ಕೆ ಪ್ರತಿಕ್ರಿಯಿಸಿದ ಜೊಮಾಟೊ ಸಿಇಒ ದೀಪಿಂದರ್ ಗೋಯಲ್, ಈ ಸುರಕ್ಷತಾ ಕ್ರಮಗಳು ಮತ್ತು ಹೆಚ್ಚಿನವು ಈಗಾಗಲೇ ಜಾರಿಯಲ್ಲಿವೆ. ಅದೇನೇ ಇದ್ದರೂ, ತನ್ನ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲು ಎಕ್ಸ್ ಬಳಕೆದಾರರನ್ನು ಕೇಳಲು ಹಿಂಜರಿಯಲಿಲ್ಲ.
ನಿಮ್ಮ ಸಲಹೆಗಳೆಲ್ಲವೂ ಒಳ್ಳೆಯ ಆಲೋಚನೆಯಾಗಿವೆ. ನೀವು ಯಾರು ಮತ್ತು ನೀವು ಏನು ಮಾಡುತ್ತೀರಿ? ನಿಮ್ಮನ್ನು ಹೆಚ್ಚು ತಿಳಿದುಕೊಳ್ಳಲು ಇಷ್ಟಪಡುತ್ತೇನೆ, ಮತ್ತು ನಾವು ಒಟ್ಟಿಗೆ ಕೆಲಸ ಮಾಡಬಹುದೇ ಎಂದು ನೋಡುತ್ತೀರಾ?" ಎಂದು ಗೋಯಲ್ ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಭಾನು, ನಾನು ಸ್ಟಾರ್ಟ್ಅಪ್ ಒಂದರಲ್ಲಿ ಉತ್ಪನ್ನ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿರುವೆ. ಬೆಂಗಳೂರು ನಿವಾಸಿ ಎಂದು ಹೇಳಿದ್ದರು. ನಿಮ್ಮ ಕಂಪನಿಯನ್ನು ಟ್ಯಾಗ್ ಮಾಡುವ ಮೂಲಕ ಟ್ವಿಟರ್ ಮೂಲಕ ಸೇವೆಗಳನ್ನು ಸುಧಾರಿಸಲು ನಾನು ನಿಯಮಿತವಾಗಿ ಸಲಹೆಗಳನ್ನು ನೀಡುತ್ತಲೇ ಇರುತ್ತೇನೆ ಎಂದೂ ಭಾನು ಪ್ರತಿಕ್ರಿಯಿಸಿದರು. ಉದ್ಯೋಗ ಆಫರ್ ಬಗ್ಗೆ ಏನನ್ನೂ ಹೇಳಿಲಿಲ್ಲ.
ವಿಭಾಗ