ಕೃತಕ ಪನೀರ್ ಮಾರಾಟ: ಜೊಮ್ಯಾಟೊ ಹೈಪರ್‌ಪ್ಯೂರ್ ವಿರುದ್ಧ ಆಕ್ರೋಶ, ಫೇಕ್ ಪನೀರ್ ಪತ್ತೆ ಹಚ್ಚಲು ಇಷ್ಟು ಮಾಡಿ ಸಾಕು
ಕನ್ನಡ ಸುದ್ದಿ  /  ಜೀವನಶೈಲಿ  /  ಕೃತಕ ಪನೀರ್ ಮಾರಾಟ: ಜೊಮ್ಯಾಟೊ ಹೈಪರ್‌ಪ್ಯೂರ್ ವಿರುದ್ಧ ಆಕ್ರೋಶ, ಫೇಕ್ ಪನೀರ್ ಪತ್ತೆ ಹಚ್ಚಲು ಇಷ್ಟು ಮಾಡಿ ಸಾಕು

ಕೃತಕ ಪನೀರ್ ಮಾರಾಟ: ಜೊಮ್ಯಾಟೊ ಹೈಪರ್‌ಪ್ಯೂರ್ ವಿರುದ್ಧ ಆಕ್ರೋಶ, ಫೇಕ್ ಪನೀರ್ ಪತ್ತೆ ಹಚ್ಚಲು ಇಷ್ಟು ಮಾಡಿ ಸಾಕು

ರೆಸ್ಟೋರೆಂಟ್‌ಗಳಲ್ಲಿ ನೀವು ತಿನ್ನೋದು ಅಸಲಿ ಪನೀರ್‌ ಅಂತ ಅಂದುಕೊಳ್ಳಬೇಡಿ, ಅದು ತರಕಾರಿ ಕೊಬ್ಬಿನಿಂದ ತಯಾರಿಸಿದ ಕೃತಕ ಪನೀರ್ ಕೂಡ ಆಗಿರಬಹುದು. ಕೃತಕ ಪನೀರ್ ಮಾರಾಟದ ವಿಚಾರವಾಗಿ ಜೊಮ್ಯಾಟೊ ಹೈಪರ್‌ಪ್ಯೂರ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ನೀವು ಫೇಕ್ ಪನೀರ್ ಪತ್ತೆ ಹಚ್ಚಲು ಇಷ್ಟು ಮಾಡಿ ಸಾಕು ನೋಡಿ.

ಪನೀರ್ ನಿಜವಾದುದೋ ಅಥವಾ ಕೃತಕವೋ ಎಂಬುದನ್ನು ತಿಳಿಯವುದು ಹೇಗೆ ಎಂಬ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)
ಪನೀರ್ ನಿಜವಾದುದೋ ಅಥವಾ ಕೃತಕವೋ ಎಂಬುದನ್ನು ತಿಳಿಯವುದು ಹೇಗೆ ಎಂಬ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ) (Pexels)

ರೆಸ್ಟೋರೆಂಟ್‌ಗಳಿಗೆ ಫೇಕ್ ಪನೀರ್ ಅನ್ನು ಪೂರೈಸುತ್ತಿರುವ ಕಾರಣಕ್ಕೆ ಜೊಮ್ಯಾಟೊ ಹೈಪರ್‌ಪ್ಯೂರ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಅನೇಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಜ್ಯೊಮ್ಯಾಟೊ ಹೈಪರ್‌ಪ್ಯೂರ್ ವೆಬ್‌ಸೈಟ್‌ಲ್ಲಿ ಸ್ಪಷ್ಟವಾಗಿ ಅನಲಾಗ್ ಪನೀರ್ ಎಂಬ ಲೇಬಲ್‌ ಇದ್ದು, ಅದು ಟಿಕ್ಕಾ, ಗ್ರೇವಿ ಪನೀರ್‌ ಖಾದ್ಯಗಳಿಗೆ ಬಳಸಲು ಸೂಕ್ತ ಎಂಬ ಒಕ್ಕಣೆ ಇರುವ ಕಾರಣ ಬಳಕೆದಾರರ ಅಸಮಾಧಾನಕ್ಕೆ ಗುರಿಯಾಗಿದೆ. ಆಹಾರ ಸುರಕ್ಷೆ, ಆರೋಗ್ಯ ಕಾಳಜಿ ಮುನ್ನೆಲೆಗೆ ಬಂದಿದ್ದು, ಜೊಮ್ಯಾಟೊ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಸುಮಿತ್ ಬೆಹಲ್ ಎಂಬುವವರು ಫೇಕ್ ಪನೀರ್ ವಿಚಾರ ಪ್ರಸ್ತಾಪಿಸಿದ ಕಾರಣ ಅದು ಬಹುಬೇಗ ಎಲ್ಲರ ಗಮನಸೆಳೆಯಿತು. ಬೆಹಲ್ ಅವರು ಜೊಮ್ಯಾಟೊ ತಾಣ ಅನಲಾಗ್ ಪನೀರ್ ಅನ್ನು ರೆಸ್ಟೋರೆಂಟ್‌ಗಳಿಗೆ ಮಾರಾಟ ಮಾಡುತ್ತಿರುವುದರ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದರು. ಈ ಫೇಕ್‌ ಚೀಸ್‌, ಪನೀರ್ ಅನ್ನು ಬಳಸಿಕೊಂಡು ರೆಸ್ಟೋರೆಂಟ್‌ನವರು ಆಹಾರವನ್ನು ಗ್ರಾಹಕರಿಗೆ ಹೇಗೆ ಪೂರೈಸುತ್ತಾರೆ ಎಂದು ಪ್ರಶ್ನಿಸಿದ್ದರು.

ಭಾರತ, ಭಾರತೀಯರು ಪನೀರ್ ಖಾದ್ಯಗಳನ್ನು ಇಷ್ಟಪಡುತ್ತಾರೆ. ರೆಸ್ಟೋರೆಂಟ್‌ಗಳು ಫೇಕ್‌ ಪನೀರ್‌ ಬಳಸಿ ತಯಾರಿಸಿದ ಖಾದ್ಯವನ್ನು ಯಾವುದೇ ಮುನ್ನೆಚ್ಚರಿಕೆ ಇಲ್ಲದೇ ಮಾರಾಟ ಮಾಡುತ್ತಿವೆ. ನೀವು ತಿನ್ನುವ ಖಾದ್ಯ ಆರೋಗ್ಯಕರವಾದುದು ಎಂಬ ನಿಮ್ಮ ನಂಬಿಕೆಯನ್ನು ಅವು ದುರುಪಯೋಗ ಮಾಡುತ್ತಿವೆ. ಪನೀರ್ ಹೆಸರಲ್ಲಿ ಜಂಕ್ ಫುಡ್ ಅನ್ನು ಕೊಡುತ್ತಿವೆ ಎಂದು ಬೆಹಲ್‌ ಕಳವಳ ವ್ಯಕ್ತಪಡಿಸಿದ್ದಾರೆ. ಗಮನಿಸಬೇಕಾದ ಅಂಶ ಎಂದರೆ ಇದು ಜೊಮ್ಯಾಟೋದಲ್ಲಿ ಮಾರಾಟವಾಗುತ್ತಿದೆ ಎಂದೂ ಉಲ್ಲೇಖಿಸಿದ್ದಾರೆ.

ಬೆಹಲ್ ಅವರ ಈ ಪೋಸ್ಟ್ ಸಂಚಲನ ಮೂಡಿಸಿದ್ದು, ಎಲ್ಲರ ಆಕ್ರೋಶ ಜೊಮ್ಯಾಟೋ ಕಡೆಗೆ ತಿರುಗಿದೆ.

ಏನಿದು ಅನಲಾಗ್‌ ಪನೀರ್‌; ಫೇಕ್‌ ಪನೀರ್‌ನಿಂದ ಹೃದಯ ಸಂಬಂಧಿ ಕಾಯಿಲೆ

ಅನಲಾಗ್ ಪನೀರ್ ಅನ್ನು ನಕಲಿ ಅಥವಾ ಸಿಂಥೆಟಿಕ್ ಪನೀರ್ ಎಂದೂ ಕರೆಯುತ್ತಾರೆ. ಇದನ್ನು ಸಾಂಪ್ರದಾಯಿಕ ಪನೀರ್‌ಗೆ ಪರ್ಯಾಯವಾಗಿ ಬಳಸುತ್ತಾರೆ. ಇದು ಡೇರಿ ಉತ್ಪನ್ನ ಅಲ್ಲ. ಇದು ಅಗ್ಗದ ಉತ್ಪನ್ನ. ನಿಂಬೆ ರಸ ಅಥವಾ ವಿನೆಗರ್‌ನೊಂದಿಗೆ ಮೊಸರು ಮಾಡಿದ ತಾಜಾ ಹಾಲಿನಿಂದ ತಯಾರಿಸಲಾದ ನಿಜವಾದ ಪನೀರ್‌ಗಿಂತ ಭಿನ್ನವಾಗಿ, ಅನಲಾಗ್ ಪನೀರ್ ಸಾಮಾನ್ಯವಾಗಿ ತರಕಾರಿ ಕೊಬ್ಬುಗಳು, ಪಿಷ್ಟಗಳು ಇತ್ಯಾದಿಗಳನ್ನು ಬಳಸಿ ಮಾಡಿರುತ್ತಾರೆ.

ಜೊಮ್ಯಾಟೋ ಹೈಪರ್‌ಪ್ಯೂರ್‌ನಲ್ಲಿ, ಅನಲಾಗ್ ಪನೀರ್‌ನ ವಿವರಣೆ ಇದೆ. ಅದರಲ್ಲಿ ಇಂಗ್ರಿಡಿಯೆಂಟ್ಸ್ ಗಮನಿಸಿದರೆ, ಹಾಲಿನ ಕೊಬ್ಬು ಎಂದು ಇರಬೇಕಾದಲ್ಲಿ ತರಕಾರಿ ಕೊಬ್ಬು ಮತ್ತು ಲಿಂಬೆ ರಸ, ವಿನೀಗರ್ ಬಳಸಿ ತಯಾರಿಸಲಾಗಿದೆ ಎಂಬ ಒಕ್ಕಣೆ ಇದೆ. ಈ ಪನೀರ್ ನಿಜವಾದ ಪನೀರ್‌ಗಿಂತ ಅಗ್ಗ. ನಿಜವಾದ ಹಾಲಿನ ಪನೀರ್‌ಗೆ ಒಂದು ಕಿಲೋಗೆ 450 ರೂಪಾಯಿ ಇದ್ದರೆ, ಅನಲಾಗ್ ಪನೀರ್‌ಗೆ 210 ರೂಪಾಯಿ ಮಾತ್ರ. ಹೀಗಾಗಿ ಕಡಿಮೆ ದರದ ಪನೀರ್ ಅನ್ನೇ ರೆಸ್ಟೋರೆಂಟ್‌ಗಳು ಖರೀದಿಸುತ್ತವೆ.

ಬಹುತೇಕ ಸಸ್ಯಾಹಾರಿಗಳು ಪನೀರ್ ಅನ್ನು ಉತ್ತಮ ಪೌಷ್ಟಿಕಾಂಶ ಇದೆ ಎಂಬ ಕಾರಣಕ್ಕೆ ತಿನ್ನುತ್ತಾರೆ. ಆದರೆ ಫೇಕ್ ಪನೀರ್‌ ತಿನ್ನುವುದರಿಂದ ಅವರು ನಿರೀಕ್ಷಿಸುವ ಪೌಷ್ಟಿಕಾಂಶ ಸಿಗುವುದಿಲ್ಲ. ಅನೇಕ ಅನಲಾಗ್ ಪನೀರ್‌ಗಳಲ್ಲಿ ತರಕಾರಿ ಕೊಬ್ಬನ್ನು ಬಳಸುತ್ತಾರೆ. ಇದು ಟ್ರಾನ್ಸ್ ಕೊಬ್ಬನ್ನು ಹೊಂದಿರಬಹುದು. ಇವು ಹೃದಯರಕ್ತನಾಳದ ಆರೋಗ್ಯಕ್ಕೆ ಹಾನಿಕಾರಕ ಮತ್ತು ಹೃದ್ರೋಗ, ಅಧಿಕ ಕೊಲೆಸ್ಟ್ರಾಲ್ ಮತ್ತು ಉರಿಯೂತದ ಅಪಾಯವನ್ನು ಹೆಚ್ಚಿಸಬಹುದು ಎನ್ನುತ್ತಾರೆ ಪರಿಣತರು.

ಫೇಕ್ ಪನೀರ್ ಪತ್ತೆ ಹಚ್ಚಲು ಹೀಗೆ ಮಾಡಿ

1) ನಿಮ್ಮ ಸ್ವಚ್ಛ ಮತ್ತು ಬರಿಯ ಕೈಗಳನ್ನು ಬಳಸಿ ಸ್ವಲ್ಪ ಪನೀರ್ ಅನ್ನು ಸರಳವಾಗಿ ಮ್ಯಾಶ್ ಮಾಡಿ. ಕಲಬೆರಕೆ ಮಾಡಿದ ಪನೀರ್ ಅನ್ನು ಕೆನೆ ತೆಗೆದ ಹಾಲಿನಿಂದಲೂ ತಯಾರಿಸಲಾಗುತ್ತದೆ. ಆದ್ದರಿಂದ ಇದು ಕೈಗಳ ಒತ್ತಡವನ್ನು ಸಹಿಸುವುದಿಲ್ಲ ಮತ್ತು ಒತ್ತಡವನ್ನು ಅನ್ವಯಿಸಿದಾಗ ಅದು ಪುಡಿಯಾಗುತ್ತದೆ.

2) ಪನೀರ್ ಸಹಜವಾದುದೇ ಅಥವಾ ಕೃತಕವಾಗಿದೆಯೇ ಎಂದು ಪರೀಕ್ಷಿಸಲು, ಅಯೋಡಿನ್ ಟಿಂಚರ್ ಅನ್ನು ಬಳಸಬಹುದು. ಒಂದು ಬಾಣಲೆಗೆ ನೀರು ಸೇರಿಸಿ, ಅದರಲ್ಲಿ ಪನೀರ್ ಅನ್ನು ಇರಿಸಿ ಮತ್ತು ಅದನ್ನು ಕುದಿಸಿ. ತಣ್ಣಗಾಗಲು ಬಿಡಿ, ನಂತರ ಕೆಲವು ಹನಿ ಅಯೋಡಿನ್ ಟಿಂಚರ್ ಸೇರಿಸಿ ಮತ್ತು ಬಣ್ಣವು ನೀಲಿ ಬಣ್ಣಕ್ಕೆ ಬದಲಾಗುತ್ತದೆಯೇ ಎಂದು ನೋಡಿ. ಬಣ್ಣ ಬದಲಾದರೆ ಅದು ಕೃತಕ ಪನೀರ್ ಎಂದು ಅರ್ಥಮಾಡಿಕೊಳ್ಳಬಹುದು.

3) ಪನೀರ್ ಅನ್ನು ಸ್ವಲ್ಪ ನೀರಿನಲ್ಲಿ ಕುದಿಸಿ, ಅದು ತಣ್ಣಗಾಗಲು ಬಿಡಿ. ನಂತರ, ಸ್ವಲ್ಪ ತೊಗರಿ ಬೇಳೆಯ ಪುಡಿಯನ್ನು ಸೇರಿಸಿ ಮತ್ತು 10 ನಿಮಿಷಗಳ ಕಾಲ ನಿಲ್ಲಲು ಬಿಡಿ. ಪನೀರ್‌ನ ಬಣ್ಣವು ತಿಳಿ ಕೆಂಪು ಬಣ್ಣಕ್ಕೆ ಬದಲಾದರೆ, ಪನೀರ್ ಅನ್ನು ಡಿಟರ್ಜೆಂಟ್ ಅಥವಾ ಯೂರಿಯಾ ಬಳಸಿ ತಯಾರಿಸಲಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು.

4) ಪನೀರ್‌ನ ಸಣ್ಣ ತುಂಡು ತಿಂದು ನೋಡಿ. ವಿಶೇಷವಾಗಿ ತೆರೆದ ಕೌಂಟರ್‌ಗಳಿಂದ ನೀವು ಪನೀರ್ ಖರೀದಿಸುವಾಗ ಈ ತಂತ್ರ ಪ್ರಯೋಗಿಸಬಹುದು. ಅದನ್ನು ಅಗಿಯುವಾಗ ತುಂಬಾ ಹುಳಿಯಾಗಿದೆ ಎಂದರೆ ಅದನ್ನು ಡಿಟೆರ್ಜೆಂಟ್‌ ಅಥವಾ ಇನ್ಯಾವುದಾದರೂ ಉತ್ಪನ್ನ ಬಳಸಿ ತಯಾರಿಸಿರಬಹುದು ಎಂದು ಅರ್ಥ.

5) ಸ್ವಲ್ಪ ಪನೀರ್ ಅನ್ನು ನೀರಿನಲ್ಲಿ ಕುದಿಸಿ, ಅದನ್ನು ತಣ್ಣಗಾಗಲು ಬಿಡಿ, ನಂತರ ಅದಕ್ಕೆ ಸ್ವಲ್ಪ ಸೋಯಾಬೀನ್ ಪುಡಿಯನ್ನು ಸೇರಿಸಿ. ಪನೀರ್‌ನ ಬಣ್ಣವು ತಿಳಿ ಕೆಂಪು ಬಣ್ಣಕ್ಕೆ ಬದಲಾದರೆ, ಪನೀರ್ ಅನ್ನು ಡಿಟರ್ಜೆಂಟ್ ಅಥವಾ ಯೂರಿಯಾದಿಂದ ತಯಾರಿಸಲಾಗುತ್ತದೆ ಎಂದು ತಿಳಿದುಕೊಳ್ಳಿ.

Whats_app_banner