ಜೊಮಾಟೊ, ಸ್ವಿಗ್ಗಿಗಿಂತಲೂ ಶೇ 15-20ರಷ್ಟು ಕಡಿಮೆ ದರದಲ್ಲಿ ಆಹಾರ ಪೂರೈಕೆ; ಈ ಸಂಸ್ಥೆ ಕುರಿತು ತಿಳಿದರೆ ನಿಮಗೆ ಲಾಭ
ಕನ್ನಡ ಸುದ್ದಿ  /  ಕರ್ನಾಟಕ  /  ಜೊಮಾಟೊ, ಸ್ವಿಗ್ಗಿಗಿಂತಲೂ ಶೇ 15-20ರಷ್ಟು ಕಡಿಮೆ ದರದಲ್ಲಿ ಆಹಾರ ಪೂರೈಕೆ; ಈ ಸಂಸ್ಥೆ ಕುರಿತು ತಿಳಿದರೆ ನಿಮಗೆ ಲಾಭ

ಜೊಮಾಟೊ, ಸ್ವಿಗ್ಗಿಗಿಂತಲೂ ಶೇ 15-20ರಷ್ಟು ಕಡಿಮೆ ದರದಲ್ಲಿ ಆಹಾರ ಪೂರೈಕೆ; ಈ ಸಂಸ್ಥೆ ಕುರಿತು ತಿಳಿದರೆ ನಿಮಗೆ ಲಾಭ

Food Delivery: ಸ್ವಿಗ್ಗಿ, ಜೊಮಾಟೋಗಿಂತಲೂ ಶೇ 15-20 ರಷ್ಟು ಕಡಿಮೆ ದರದಲ್ಲಿ ಆಹಾರ ಸರಬರಾಜು ಮಾಡುವ ಸಂಸ್ಥೆಯ ಕುರಿತು ನಿಮಗೆ ತಿಳಿದಿದೆಯೇ? ಗೊತ್ತಿಲ್ಲವೆಂದರೆ ಇಂದೇ ಪ್ರಯತ್ನಿಸಿ ನೋಡಿ, ಪಡೆಯಿರಿ ಅದರ ಲಾಭ. (ವರದಿ-ಎಚ್.ಮಾರುತಿ)

ಜೊಮಾಟೊ, ಸ್ವಿಗ್ಗಿಗಿಂತಲೂ ಶೇ 15-20ರಷ್ಟು ಕಡಿಮೆ ದರದಲ್ಲಿ ಆಹಾರ ಪೂರೈಕೆ
ಜೊಮಾಟೊ, ಸ್ವಿಗ್ಗಿಗಿಂತಲೂ ಶೇ 15-20ರಷ್ಟು ಕಡಿಮೆ ದರದಲ್ಲಿ ಆಹಾರ ಪೂರೈಕೆ

ಬೆಂಗಳೂರು: ನಗರದಲ್ಲಿ ಊಟ ತಿಂಡಿ ಸರಬರಾಜು ಡೆಲಿವರಿ ಮಾಡುವ ಸ್ವಿಗ್ಗಿ ಮತ್ತು ಜೊಮಾಟೊ ಸಂಸ್ಥೆಗಳದ್ದೇ ಪಾರುಪತ್ಯ. ವಹಿವಾಟಿನಲ್ಲಿ ಇವರ ಹತ್ತಿರ ಸುಳಿಯಲೂ ಇತರರಿಗೆ ಸಾಧ್ಯವಾಗಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ. ಎರಡೂ ದೈತ್ಯ ಸಂಸ್ಥೆಗಳು ಸೇರಿದಂತೆ ಎಲ್ಲಾ ಡೆಲಿವರಿ ಸಂಸ್ಥೆಗಳು ಹೋಟೆಲ್​​ಗಳಿಂದಲೇ ಆಹಾರ ಪದಾರ್ಥ ಪೂರೈಕೆ ಮಾಡಬೇಕು. ಆದರೆ, ಸ್ವಿಗ್ಗಿ ಮತ್ತು ಜೊಮೊಟೊಗೆ ಸೆಡ್ಡು ಹೊಡೆಯುವಂತಹ ಮತ್ತೊಂದು ಸಂಸ್ಥೆ ಬೆಂಗಳೂರಿನಲ್ಲಿದೆ. ಅದು ಕೂಡ ಈ ಎರಡು ಸಂಸ್ಥೆಗಳಿಗಿಂತ ಶೇ 15 ಮತ್ತು 20ರಷ್ಟು ಕಡಿಮೆ ದರದಲ್ಲಿ ಆಹಾರ ಪೂರೈಸುತ್ತಿವೆ ಎಂಬುದು ಇದರ ವಿಶೇಷ.

ಓಪನ್‌ ನೆಟ್​ವರ್ಕ್‌ ಫಾರ್‌ ಡಿಜಿಟಲ್‌ ಕಾಮರ್ಸ್‌ (ಓಎನ್​​ಡಿಸಿ) ಅಡಿಯಲ್ಲಿ ಬೃಹತ್‌ ಬೆಂಗಳೂರು ಹೋಟೆಲ್‌ ಮಾಲೀಕರ ಸಂಘ (ಬಿಬಿಎಚ್​ಎ) ಮತ್ತು ಗ್ರೋಥ್‌ ಫಾಲ್ಕನ್ಸ್‌ ಸಂಸ್ಥೆಗಳು ಟೈಯಪ್ ಮಾಡಿಕೊಂಡಿದ್ದು, ಆಹಾರ ಸರಬರಾಜಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಆದರೆ ಇದಕ್ಕೆಂದೇ ಪ್ರತ್ಯೇಕವಾದ ಆ್ಯಪ್ ಇಲ್ಲ. ಆದರೆ ಓಲಾ ಆ್ಯಪ್​ ಹೊಂದಿರುವ ಗ್ರಾಹಕರಿಗೆ ಇದರ ಅನುಕೂಲ ಸಿಗಲಿದೆ. ಓಲಾ ಆ್ಯಪ್​​ನ ಗ್ರಾಹಕರನ್ನು ಬಳಸಿಕೊಂಡು ಪ್ರತಿದಿನ 50-60,000 ಆರ್ಡರ್​​ಗಳನ್ನು ಡೆಲಿವರಿ ಮಾಡುತ್ತಿದೆ.

2023 ರಿಂದ ಈ ವಹಿವಾಟು ನಡೆಸುತ್ತಿದ್ದು, ಇದರಿಂದ ಹೋಟೆಲ್​​ಗಳು ಮತ್ತು ಗ್ರಾಹಕರಿಬ್ಬರಿಗೂ ಅನುಕೂಲವಾಗುತ್ತಿದೆ. ಪ್ರತಿಷ್ಠಿತ ಹೋಟೆಲ್​ಗಳಾದ ವಿದ್ಯಾರ್ಥಿ ಭವನ್‌, ಸ್ವಾತಿ ಗ್ರೂಪ್‌ ಹೋಟೆಲ್ಸ್‌, ಕಾಮತ್‌ ಹೋಟೆಲ್​​ಗಳು ಸೇರಿದಂತೆ ಬೃಹತ್‌ ಬೆಂಗಳೂರು ಹೋಟೆಲ್‌ ಮಾಲೀಕರ ಸಂಘದ ಸದಸ್ಯತ್ವ ಪಡೆದಿರುವ ಸುಮಾರು 300 ಹೋಟೆಲ್​ಗಳು ಓಎನ್​ಡಿಸಿ ವ್ಯಾಪ್ತಿಗೆ ಒಳಪಟ್ಟಿವೆ. ಮಾರುಕಟ್ಟೆ ಮೇಲೆ ಸ್ವಾಮ್ಯ ಹೊಂದಿದ್ದ ಪ್ರತಿಷ್ಠಿತ ಸಂಸ್ಥೆಗಳು ಗ್ರಾಹಕರಿಗೆ ಹೆಚ್ಚಿನ ಡೆಲಿವರಿ ದರ ಮತ್ತು ಹೋಟೆಲ್‌ ಗಳಿಗೆ ರಹಸ್ಯ ದರಗಳನ್ನು ವಿಧಿಸುತ್ತಿದ್ದವು.

ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಹೇಳಿದ್ದೇನು?

ಹೋಟೆಲ್​​ಗಳ ಸಂಘ ಗ್ರೋಥ್‌ ಫಾಲ್ಕನ್‌ ಕೈ ಜೋಡಿಸಿರುವುದರಿಂದ ಎರಡೂ ಸಂಸ್ಥೆಗಳಿಗೆ ನಷ್ಟವಿಲ್ಲದೆ, ಗ್ರಾಹಕರಿಗೂ ಹೊರೆಯಾಗದ ರೀತಿಯಲ್ಲಿ ಆಹಾರ ಪೂರೈಕೆ ಮಾಡುತ್ತಿವೆ. ಮುಂದಿನ ದಿನಗಳಲ್ಲಿ 1000ಕ್ಕೂ ಹೆಚ್ಚು ಹೋಟೆಲ್​ಗಳು ಕೈ ಜೋಡಿಸುವ ನಿರೀಕ್ಷೆ ಇದೆ. ಗ್ರಾಹಕರಿಗೆ ಶೇ 15-20 ರಷ್ಟು ಕಡಿಮೆ ದರದಲ್ಲಿ ಆಹಾರ ಪೂರೈಕೆ ಮಾಡುತ್ತೇವೆ ಎಂದು ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್‌ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಓಎನ್​ಡಿಸಿ ವೇದಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ರಿಯಾಯಿತಿ ಘೋಷಿಸುತ್ತಿವೆ ಮತ್ತು ಉಚಿತವಾಗಿಯೂ ಆಹಾರವನ್ನು ಡೆಲಿವರಿ ಮಾಡುತ್ತಿವೆ. ಒಂದು ಆಪ್​​ನಲ್ಲಿ ಕನಿಷ್ಠ 130 ರೂ.ಗಳ ಆರ್ಡರ್‌ ಮಾಡಬೇಕು. ಮತ್ತೊಂದು ಆಪ್​ನಲ್ಲಿ ಕೇವಲ 30 ರೂ.ಗಳಿಗೆ ಆಹಾರವನ್ನು ಆರ್ಡರ್‌ ಮಾಡಿದರೂ ಡೆಲಿವರಿಯಾಗುತ್ತದೆ. ಆದರೆ, ಓಎನ್​​ಡಿಸಿಯಲ್ಲಿ ಕನಿಷ್ಠ ಆರ್ಡರ್‌ ಇಲ್ಲದಿದ್ದರೆ ಡೆಲಿವರಿ ಆಗುವುದಿಲ್ಲ. ಆಹಾರ ಪೂರೈಕೆ ಮಾಡಿದಿದ್ದರೂ ಓಎನ್​​ಡಿಸಿಯಲ್ಲಿ ಚಾರ್ಜ್‌ ವಿಧಿಸಲಾಗುತ್ತದೆ ಎಂಬ ಆರೋಪ ಕೇಳಿ ಬರುತ್ತಿದೆ.

ಈ ಬಗ್ಗೆ ಗ್ರೋಥ್‌ ಫಾಲ್ಕನ್‌ ಮುಖ್ಯಸ್ಥರು ಹೇಳುವುದೇನೆಂದರೆ ಲಾಜಿಸ್ಟಿಕ್ಸ್‌ ಆ್ಯಪ್​​ಗಳಲ್ಲಿ ಇದೊಂದು ಸಾಮಾನ್ಯ ಸಮಸ್ಯೆಯಾಗಿದೆ. ಡೆಲಿವರಿ ಮಾಡುವವರು ಒಮ್ಮೊಮ್ಮೆ ಅಪಘಾತಕ್ಕೆ ಒಳಗಾಗುತ್ತಾರೆ. ವಾಹನದ ತೊಂದರೆ ಉಂಟಾಗಬಹುದು. ಇಂತಹ ಸಂದರ್ಭಗಳಲ್ಲಿ ಮತ್ತೊಂದು ಡೆಲಿವರಿ ಪಾರ್ಟನರ್‌ ಸಂಸ್ಥೆಗೆ ಆಹಾರ ಪೂರೈಕೆ ಮಾಡಲು ಕೇಳಿಕೊಳ್ಳುತ್ತೇವೆ. ಇದೂ ಸಾಧ್ಯವಾಗದಿದ್ದರೆ ಹಣವನ್ನು ಹಿಂತಿರುಗಿಸಲಾಗುತ್ತದೆ ಎಂದು ಹೇಳುತ್ತಾರೆ. ಆಹಾರ ಪೂರೈಕೆ, ಬುಕ್ಕಿಂಗ್​​ನಲ್ಲಿ ಸಣ್ಣಪುಟ್ಟ ಸಮಸ್ಯೆಗಳಿರಬಹುದು. ಮುಂದಿನ ದಿನಗಳಲ್ಲಿ ಗ್ರಾಹಕರ ಅನುಭವದ ಆಧಾರದ ಮೇಲೆ ಓಎನ್​ಡಿಸಿ ಸರಿಪಡಿಸಿಕೊಳ್ಳಲಿದೆ ಎಂದು ತಿಳಿಸುತ್ತಾರೆ.

ಓಎನ್​​ಡಿಸಿ ಕಾರ್ಯನಿರ್ವಹಣೆ ಹೇಗೆ?

ಇನ್ನು ಓಎನ್​​ಡಿಸಿ ಎಂದರೆ ಏನೆಂದು ಸ್ಥೂಲವಾಗಿ ನೋಡೋಣ. ಈ ಸಂಸ್ಥೆಯನ್ನು ಕೇಂದ್ರ ಸರ್ಕಾರದ ಕೈಗಾರಿಕಾ ಉತ್ತೇಜನ ಮತ್ತು ಆಂತರಿಕ ವ್ಯಾಪಾರ ಇಲಾಖೆ ಸ್ಥಾಪಿಸಿದೆ. ಡಿಜಿಟಲ್‌ ಮಾರುಕಟ್ಟೆಯಲ್ಲಿ ಏಕಸ್ವಾಮ್ಯತೆಯನ್ನು ನಿಯಂತ್ರಿಸಲು ಮತ್ತು ಸ್ಥಳೀಯವಾಗಿ ವಹಿವಾಟನ್ನು ಉತ್ತೇಜಿಸಲು ಸ್ಥಾಪಿಸಲಾಗಿದೆ. ಸಣ್ಣ, ಅತಿ ಸಣ್ಣ, ವ್ಯಾಪಾರಿಗಳಿಗೂ ಆ‌ನ್​ಲೈನ್‌ ಮಾರುಕಟ್ಟೆಯಲ್ಲಿ ಅವಕಾಶಗಳನ್ನು ಕಲ್ಪಿಸುತ್ತದೆ. ಈ ಓಎನ್​ಡಿಸಿ ಸಹಕಾರದಿಂದ ಫಾಲ್ಕನ್‌ ಗ್ರೋಥ್‌ ಕಾರ್ಯ ನಿರ್ವಹಿಸುತ್ತಿದೆ.

Whats_app_banner