ಅಂಬೇಡ್ಕರ್ ವಿವಾದ; ಸಂಸತ್‌ನಲ್ಲಿ ಹೈಡ್ರಾಮಾ, ಅಮಿತ್ ಶಾ ಹೇಳಿದ್ದೇನು, ವಿವಾದ ಹೇಗೆ ಶುರುವಾಯಿತು 5 ಮುಖ್ಯ ಅಂಶಗಳು
Dec 19, 2024 01:22 PM IST
ಅಂಬೇಡ್ಕರ್ ವಿವಾದ; ಸಂಸತ್‌ನಲ್ಲಿ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ (ಮಧ್ಯ ಚಿತ್ರ) ಕುರಿತಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ (ಎಡ ಚಿತ್ರ) ಹೇಳಿಕೆ ವಿಚಾರದಲ್ಲಿ ಹೈಡ್ರಾಮಾ ನಡೆದಿದೆ. ಇದನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (ಬಲ ಚಿತ್ರ ಸೇರಿ ಕಾಂಗ್ರೆಸ್ ನಾಯಕರು ಖಂಡಿಸಿದರು. (ಕಡತ ಚಿತ್ರ)
Ambedkar row: ಸಂಸತ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಕಾಂಗ್ರೆಸ್ ಪಕ್ಷದ ಸದಸ್ಯರು, ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರನ್ನು ನಡೆಸಿಕೊಂಡ ರೀತಿಯನ್ನು ಖಂಡಿಸಿ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಸಂಸತ್ ಆವರಣದಲ್ಲಿ ಹೈಡ್ರಾಮಾ ನಡೆದಿದೆ. ಇಷ್ಟಕ್ಕೂ ಅಮಿತ್ ಶಾ ಹೇಳಿದ್ದಾದರೂ ಏನು, ಹೇಗೆ ಶುರುವಾಯಿತು ವಿವಾದ, 5 ಮುಖ್ಯ ಅಂಶ ಹೀಗಿದೆ
Ambedkar row: ಡಾ. ಬಿ ಆರ್ ಅಂಬೇಡ್ಕರ್ ಅವರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ವರು ಸಂಸತ್‌ನಲ್ಲಿ ನೀಡಿದ ಹೇಳಿಕೆ ವಿರೋಧಿಸಿ ಕಾಂಗ್ರೆಸ್ ಸದಸ್ಯರು ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ದಶಕಗಳ ಹಿಂದೆ ಅಂಬೇಡ್ಕರ್ ಅವರನ್ನು ನಡೆಸಿಕೊಂಡ ರೀತಿಯನ್ನು ಖಂಡಿಸಿ ಬಿಜೆಪಿ ಸದಸ್ಯರು ಗುರುವಾರ ಏಕಕಾಲದಲ್ಲಿ ಪ್ರತಿಭಟನೆ ನಡೆಸಿದರು. ಸಂಸತ್ ಆವರಣದಲ್ಲೇ ನಡೆದ ಈ ಪ್ರತಿಭಟನೆ ಕಾರಣ ಸ್ಥಳದಲ್ಲಿ ರಾಜಕಾರಣಕ್ಕೆ ಸಂಬಂಧಿಸಿದಂತ ಹೈವೋಲ್ಟೇಜ್ ನಾಟಕೀಯ ವಿದ್ಯಮಾನಗಳು ನಡೆದಿವೆ. ಎರಡೂ ಪಕ್ಷಗಳ ಸಂಸದರು ಅಂಬೇಡ್ಕರ್ ಅವರ ಚಿತ್ರವಿರುವ ಫಲಕ ಹಿಡಿದು ಪ್ರತಿಭಟಿಸಿ ಗಮನಸೆಳೆದರು. ಈ ವಿವಾದ ಶುರುವಾದುದು ಹೇಗೆ, ಗೃಹ ಸಚಿವ ಅಮಿತ್ ಶಾ ಹೇಳಿದ್ದೇನು, ಕಾಂಗ್ರೆಸ್ ಪಕ್ಷ ಯಾಕೆ ಆಕ್ಷೇಪ ವ್ಯಕ್ತಪಡಿಸಿತು, ಬಿಜೆಪಿಯವರ ಆಕ್ಷೇಪವೇನು, ಮುಂದೇನಾಯಿತು ಎಂಬುದರ ಕಿರು ವಿವರ ಇಲ್ಲಿದೆ.
ಡಾ ಬಿಆರ್ ಅಂಬೇಡ್ಕರ್‌ಗೆ ಅವಮಾನ ವಿವಾದ; ಶುರುವಾದುದು ಹೀಗೆ
1) ರಾಜ್ಯಸಭೆಯಲ್ಲಿ ಡಿಸೆಂಬರ್ 17 ರಂದು (ಮಂಗಳವಾರ) ಕಲಾಪ ನಡೆಯುತ್ತಿದ್ದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುತ್ತ, ಡಾ ಬಿಆರ್ ಅಂಬೇಡ್ಕರ್ ಅವರ ಬಗ್ಗೆ ಮಾಡಿದ ಹೇಳಿಕೆಗೆ ರಾಜಕೀಯ ಆಕ್ಷೇಪಣೆ ವ್ಯಕ್ತವಾಗಿದೆ. ಗೃಹ ಸಚಿವ ಅಮಿತ್ ಶಾ ಅವರು ಸಂವಿಧಾನ ಶಿಲ್ಪಿಯನ್ನು ಅವಮಾನಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದಕ್ಕೆ ಪ್ರತಿಯಾಗಿ, ವಿರೋಧ ಪಕ್ಷಗಳು ಎಡಿಟ್ ಮಾಡಿದ ವಿಡಿಯೋಗಳನ್ನು ಪ್ರಸಾರ ಮಾಡುತ್ತಿವೆ. ಇದು ಅಗ್ಗದ ರಾಜಕೀಯ ತಂತ್ರ ಎಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಆರೋಪಿಸಿದೆ.
2) ರಾಜ್ಯಸಭೆಯಲ್ಲಿ ಅಮಿತ್ ಶಾ ಭಾಷಣದ 11 ಸೆಕೆಂಡ್ ವಿಡಿಯೋ ತುಣುಕನ್ನು ಕಾಂಗ್ರೆಸ್ ನಾಯಕರು ಶೇರ್ ಮಾಡಿದ್ದಾರೆ. ಅದರಲ್ಲಿ, “ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎಂದು ಹೇಳುತ್ತಾ ಇದ್ದಾರೆ. ಇಷ್ಟು ಸಲ ದೇವರ ನಾಮಸ್ಮರಣೆ ಮಾಡಿದ್ದರೆ ಏಳು ಜನ್ಮಗಳಲ್ಲೂ ಸ್ವರ್ಗ ಪ್ರಾಪ್ತಿಯಾಗಬಹುದು” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿರುವ ದೃಶ್ಯವಿದೆ. ಇದನ್ನು ಕಾಂಗ್ರೆಸ್ ನಾಯಕರು ಖಂಡಿಸಿದ್ದಾರೆ.
3) ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಅಂತ ನೂರು ಸಲ ಹೇಳುತ್ತಿದ್ದೀರಿ, ಅದೇ 100 ಸಲ ಭಗವಂತನ ನಾಮಸ್ಮರಣೆ ಮಾಡಿದ್ದರೆ ನಿಮಗೆ ಏಳು ಜನ್ಮದಲ್ಲೂ ಸ್ವರ್ಗ ಪ್ರಾಪ್ತಿಯಾದೀತು ಎಂದು ಹೇಳಿದ್ದಾರೆ. ಅವರು ಹೀಗೆ ಹೇಳಿದಾಗ ನಾನು ಕೈ ಮೇಲೆತ್ತಿದ್ದೆ. ಆಗ ನನಗೆ ಮಾತನಾಡಲು ಅವಕಾಶ ನೀಡಲಿಲ್ಲ. ಇದರ ಅರ್ಥ ಇಷ್ಟೆ. ನಾವು ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರು ಪ್ರಸ್ತಾಪಿಸುವುದು ಅಪರಾಧ ಎಂದು ಅವರು ಹೇಳುತ್ತಿದ್ದಾರೆ. ಅವರು ಸಂವಿಧಾನ ವಿರೋಧಿಗಳು ಎಂಬುದನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತಿದ್ದಾರೆ. ನಾವು ಬಾಬಾ ಸಾಹೇಬ್ ಅವರ ಸಂವಿಧಾನದ ಕುರಿತು ಚರ್ಚೆ ಮಾಡಲು ಬಯಸುತ್ತೇವೆ. ಗೃಹ ಸಚಿವ ಅಮಿತ್ ಶಾ ಅವರು ರಾಜೀನಾಮೆ ನೀಡಬೇಕು ಎಂದು ಎಐಸಿಸಿಐ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.
4) ರಾಜ್ಯಸಭೆಯಲ್ಲಿ ಅಮಿತ್ ಶಾ ಏನು ಹೇಳಿದ್ರು?: ರಾಜ್ಯಸಭೆಯಲ್ಲಿ ಅಮಿತ್ ಶಾ ಅವರು ಮಾಡಿದ ಭಾಷಣದ ಸಂದರ್ಭವನ್ನು ಉಲ್ಲೇಖಿಸದೇ ಕೇವಲ ಆಯ್ದ ಮಾತುಗಳನ್ನುಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಅಪಪ್ರಚಾರ ಮಾಡುತ್ತಿದೆ ಎಂದು ಬಿಜೆಪಿ ನಾಯಕರು ಪ್ರತ್ಯಾರೋಪ ಮಾಡಿದ್ದಾರೆ. ಕೇಂದ್ರ ಸರ್ಕಾರ ಕೂಡ ಸುಳ್ಳು ಸುದ್ದಿ ಹರಡುತ್ತಿರುವ ಬಗ್ಗೆ ಪಿಐಬಿ ಮೂಲಕ ಪ್ಯಾಕ್ಟ್‌ಚೆಕ್ ಪೋಸ್ಟ್ ಪ್ರಕಟಿಸಿದೆ. ಅದರಲ್ಲಿ ಅಮಿತ್ ಶಾ ಅವರ ಭಾಷಣದ ವಿಡಿಯೋ ಇದೆ.
5) ಶಾ ಬೆಂಬಲಕ್ಕೆ ನಿಂತ ಮೋದಿ: ಪ್ರಧಾನಿ ನರೇಂದ್ರ ಮೋದಿಯವರು ಕೂಡ ಅಮಿತ್ ಶಾ ಬೆನ್ನಿಗೆ ನಿಂತಿದ್ದು, "ಅಂಬೇಡ್ಕರ್ ಅವರನ್ನು ಅವಮಾನಿಸುವ ಮತ್ತು ಎಸ್‌ಸಿ/ಎಸ್‌ಟಿ ಸಮುದಾಯಗಳನ್ನು ಕಡೆಗಣಿಸಿದ ಕಾಂಗ್ರೆಸ್‌ನ ಕರಾಳ ಇತಿಹಾಸವನ್ನು ಸಂಸತ್ತಿನಲ್ಲಿ ಅಮಿತ್ ಶಾ ಅವರು ಬಹಿರಂಗಪಡಿಸಿದರು. ಅವರು ಪ್ರಸ್ತುತಪಡಿಸಿದ ಸತ್ಯಗಳ ಮೂಲಕ ಸ್ಪಷ್ಟವಾಗಿ ಕಾಂಗ್ರೆಸ್ ನಾಯಕರನ್ನು ಕುಟುಕಿದ್ದಾರೆ. ಈ ಬೆಳವಣಿಗೆಯಿಂದ ಕಾಂಗ್ರಸ್ ನಾಯಕರು ದಿಗ್ಭ್ರಮೆಗೊಂಡಿದ್ದಾರೆ. ಅದಕ್ಕಾಗಿಯೇ ಅವರು ಈಗ ಈ ನಾಟಕದಲ್ಲಿ ತೊಡಗಿದ್ದಾರೆ! ಅವರಿಗೆ, ಜನರಿಗೆ ಸತ್ಯ ಏನೆಂಬುದು ತಿಳಿದಿದೆ. ಆದರೆ, ಅವರು ಹೇಗೆ ಬೇಕೋ ಹಾಗೆ ವರ್ತಿಸಬಹುದು. ಆದರೆ ಎಸ್‌ಸಿ/ಎಸ್‌ಟಿ ಸಮುದಾಯಗಳ ವಿರುದ್ಧ ಅತ್ಯಂತ ಕೆಟ್ಟ ಹತ್ಯಾಕಾಂಡಗಳು ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ನಡೆದಿವೆ ಎಂಬುದನ್ನು ಅವರು ನಿರಾಕರಿಸಲು ಸಾಧ್ಯವಿಲ್ಲ. ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳ ಸಬಲೀಕರಣ ಮಾಡಿರುವುದಕ್ಕೆ ಯಾವುದೇ ಆಧಾರವಿಲ್ಲ ಎಂದು ಪ್ರಧಾನಿ ಮೋದಿ ಟ್ವೀಟ್ ಮೂಲಕ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಅಮಿತ್ ಶಾ ಹೇಳಿದ್ದೇನು
ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯವೈಖರಿಯನ್ನು ಟೀಕಿಸುತ್ತ, ಡಾ ಬಿ.ಆರ್.ಅಂಬೇಡ್ಕರ್ ಅವರ ಹೆಸರನ್ನು ಪ್ರಸ್ತಾಪಿಸಿದ ವೇಳೆ ಹೇಳಿದ್ದಿಷ್ಟು. ಒಂದು ಫ್ಯಾಷನ್ ಇದೆ - ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಜೀವನದ ಕೊನೆಯವರೆಗೂ ದೇವರ ಹೆಸರು ಸ್ವರ್ಗವನ್ನು ತಲುಪಿದರೆ. ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎಂದು ಹೇಳುವುದೇ ಒಂದು ಫ್ಯಾಷನ್ ಆಗಿದ್ದು, ಇಷ್ಟು ಬಾರಿ ದೇವರ ನಾಮಸ್ಮರಣೆ ಮಾಡಿದ್ದರೆ ಅವರಿಗೆ ಸ್ವರ್ಗದಲ್ಲಿ ಸ್ಥಾನ ಸಿಗುತ್ತಿತ್ತು. ಒಳ್ಳೆಯ ಮಾತು. ಇನ್ನೂ 100 ಸಲ ಹೇಳಿ. ನನಗೇನೂ ಅಭ್ಯಂತರವಿಲ್ಲ. ನಾನು ಹೇಳುವುದನ್ನು ಪೂರ್ತಿ ಕೇಳಿ. ಭಾರತದ ಮೊದಲ ಕ್ಯಾಬಿನೆಟ್‌ನಿಂದ ಅಂಬೇಡ್ಕರ್ ಅವರ ರಾಜೀನಾಮೆ ಪಡೆದು ಹೊರ ಹಾಕಿದ್ದು ಯಾಕೆ? ಅವರು ಬಹಳ ಸ್ಪಷ್ಟವಾಗಿ ಹೇಳಿದ್ದರು ಎಸ್‌ಸಿ ಮತ್ತು ಎಸ್‌ಟಿ ಸಮುದಾಯದವರನ್ನು ನಡೆಸಿಕೊಂಡ ರೀತಿ ಬಗ್ಗೆ ಅಸಮಾಧಾನವಿದೆ. ಸರ್ಕಾರದ ನಿಲುವಿನ ಬಗ್ಗೆ ಆರ್ಟಿಕಲ್ 370ರ ಬಗ್ಗೆಯೂ ಅಸಮಾಧಾನವಿದೆ ಎಂದು ಅಂಬೇಡ್ಕರ್ ಹೇಳಿದ್ದರು ಎಂಬುದನ್ನು ಅಮಿತ್ ಶಾ ಹೇಳಿದ್ದರು.