ಅಂಬೇಡ್ಕರ್ ವಿವಾದ; ಅಮಿತ್ ಶಾ ಹೇಳಿಕೆ ವಿಚಾರದ ಪ್ರತಿಭಟನೆ ಗದ್ದಲ, ರಾಹುಲ್ ಗಾಂಧಿ ವಿರುದ್ಧ ಕೇಸ್ ದಾಖಲು, ಕೊಲೆ ಯತ್ನದ ಆರೋಪ, 5 ಮುಖ್ಯ ಅಂಶ
Dec 20, 2024 07:50 AM IST
ಅಂಬೇಡ್ಕರ್ ವಿವಾದ; ರಾಜ್ಯಸಭೆಯಲ್ಲಿ ಅಮಿತ್ ಶಾ ಹೇಳಿಕೆ ನಂತರ ಉಂಟಾದ ಪ್ರತಿಭಟನೆ, ಗದ್ದಲದಲ್ಲಿ ಬಿಜೆಪಿ ಸಂಸದರಿಬ್ಬರು ಗಾಯಗೊಂಡಿದ್ದರು. ಈ ಪ್ರಕರಣ ಸಂಬಂಧ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಕೇಸ್ ದಾಖಲಾಗಿದೆ. (ಕಡತ ಚಿತ್ರ)
Ambedkar Row: ಅಮಿತ್ ಶಾ ಹೇಳಿಕೆ ಮೂಲಕ ಉಂಟಾದ ಅಂಬೇಡ್ಕರ್ ವಿವಾದದ ಪ್ರತಿಭಟನೆ ಗದ್ದಲದಲ್ಲಿ ಬಿಜೆಪಿ ಸಂಸದರು ಗಾಯಗೊಂಡರು. ಈ ಸಂಬಂಧ ರಾಹುಲ್ ಗಾಂಧಿ ವಿರುದ್ಧ ಕೇಸ್ ದಾಖಲಾಗಿದ್ದು, ಅವರ ವಿರುದ್ಧ ಬಿಜೆಪಿ ನಾಯಕರು ಕೊಲೆ ಯತ್ನದ ಆರೋಪ ಹೊರಿಸಿದ್ದಾರೆ. ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, 5 ಮುಖ್ಯ ಅಂಶಗಳ ವಿವರ ಇಲ್ಲಿದೆ.
Ambedkar Row: ಸಂಸತ್ ಅಧಿವೇಶನದ ನಡುವೆ ರಾಜ್ಯಸಭೆ ಕಲಾಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ (ಡಿಸೆಂಬರ್ 18) ಡಾ ಬಿ ಆರ್ ಅಂಬೇಡ್ಕರ್ ಅವರ ಬಗ್ಗೆ ಹೇಳಿದ ಮಾತು ವಿವಾದಕ್ಕೀಡಾಗಿದೆ. ಇದರ ವಿರುದ್ಧ ವಿಪಕ್ಷ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ಆರಂಭಿಸಿದ್ದು, ಅದು ನಿನ್ನೆ (ಡಿಸೆಂಬರ್ 19) ವಿಕೋಪಕ್ಕೆ ಹೋಗಿದೆ. ಬಿಜೆಪಿ ಸದಸ್ಯರು ಕೂಡ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಿ, ಡಾ ಅಂಬೇಡ್ಕರ್ ಅವರನ್ನು ನಡೆಸಿಕೊಂಡ ರೀತಿಯನ್ನು ಖಂಡಿಸಿದರು. ಈ ಪ್ರತಿಭಟನೆಯ ನಡುವೆ, ಸಂಸತ್‌ನ ಮಕರ ದ್ವಾರದ ಬಳಿಕ ತಳ್ಳಾಟ ಸಂಭವಿಸಿದ್ದು ಅಲ್ಲಿ ಇಬ್ಬರು ಬಿಜೆಪಿ ಸಂಸದರು ಬಿದ್ದು ಗಾಯಗೊಂಡಿದ್ದರು. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ತಮ್ಮನ್ನು ತಳ್ಳಿದ್ದರಿಂದ ಹೀಗಾಗಿದೆ ಎಂದು ಬಿಜೆಪಿ ಸಂಸದರು ಆರೋಪಿಸಿ ಆಸ್ಪತ್ರೆ ದಾಖಲಾಗಿದ್ದಾರೆ. ಇದಾದ ಬಳಿಕ ರಾಹುಲ್ ಗಾಂಧಿ ವಿರುದ್ಧ ದೂರು ಬಂದ ಕಾರಣ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಅಂಬೇಡ್ಕರ್ ವಿವಾದ; ರಾಹುಲ್ ಗಾಂಧಿ ವಿರುದ್ಧ ಕೇಸ್; 5 ಮುಖ್ಯ ಅಂಶಗಳು
1) ರಾಜ್ಯಸಭೆಯಲ್ಲಿ ಡಿಸೆಂಬರ್ 17 ರಂದು (ಮಂಗಳವಾರ) ಕಲಾಪ ನಡೆಯುತ್ತಿದ್ದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುತ್ತ, ಒಂದು ಫ್ಯಾಶನ್ ಶುರುವಾಗಿದೆ, ಅಂಬೇಡ್ಕರ್ ಅಂಬೇಡ್ಕರ್ ಅಂತ ಹೇಳ್ತಾ ಇರ್ತಾರೆ. ಭಗವಂತ ಹೆಸರು ಅಷ್ಟು ಸಲ ಹೇಳಿದ್ದರೆ ಏಳು ಜನ್ಮಕ್ಕೂ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು ಎಂದು ಹೇಳಿದ್ದ ಬಗ್ಗೆ ಕಾಂಗ್ರೆಸ್ ಪಕ್ಷ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಗೃಹ ಸಚಿವ ಅಮಿತ್ ಶಾ ಅವರು ಸಂವಿಧಾನ ಶಿಲ್ಪಿಯನ್ನು ಅವಮಾನಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದಕ್ಕೆ ಪ್ರತಿಯಾಗಿ, ಕಾಂಗ್ರೆಸ್ ಪಕ್ಷ ಎಡಿಟ್ ಮಾಡಿದ ವಿಡಿಯೋ ಶೇರ್ ಮಾಡ್ತಾ ಇದೆ. ಇದು ಅಗ್ಗದ ರಾಜಕೀಯ ತಂತ್ರ ಎಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಆರೋಪಿಸಿದೆ.
2) ಅಂಬೇಡ್ಕರ್ ವಿವಾದ ಸಂಬಂಧಿಸಿ ರಾಜಕೀಯ ಪ್ರತಿಭಟನೆಯ ಮುಂದುವರಿದ ಭಾಗವಾಗಿ, ಸಂಸತ್‌ನ ಮಕರ ದ್ವಾರದ ಸಮೀಪ ಬಿಜೆಪಿ ಸದಸ್ಯರು ಮತ್ತು ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಮಕರ ದ್ವಾರದಲ್ಲೇ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದರು. ಅಲ್ಲಿ ಕಾಂಗ್ರೆಸ್ ಸದಸ್ಯರು ದ್ವಾರ ಏರಿ ಮೇಲೆ ನಿಂತು ಪ್ರತಿಭಟಿಸಲು ಮುಂದಾದ ವೇಳೆ ತಳ್ಳಾಟ ಸಂಭವಿಸಿದೆ. ಆಗ ಇಬ್ಬರು ಬಿಜೆಪಿ ಸಂಸದರು (ಪ್ರತಾಪ್ ಚಂದ್ರ ಸಾರಂಗಿ, ಮುಕೇಶ್ ರಜಪೂತ್) ಬಿದ್ದು ಗಾಯಗೊಂಡರು. ಅವರನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
3) ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ತಳ್ಳಿದ್ದರಿಂದ ತಾವು ಬಿದ್ದು ಗಾಯಗೊಂಡಿರುವುದಾಗಿ ಬಿಜೆಪಿ ಸಂಸದರಿಬ್ಬರು ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ದೂರು ದಾಖಲಾಗಿದೆ. ದೆಹಲಿ ಪೊಲೀಸರು ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
4) ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 117 (ಸ್ವಯಂಪ್ರೇರಿತವಾಗಿ ಗಂಭೀರ ಗಾಯ ಉಂಟುಮಾಡುವುದು), 125 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ಕ್ರಿಯೆ), 131 ( ಅಪರಾಧ ಬಲ ಪ್ರಯೋಗ), 351 (ಅಪರಾಧಿಕ ಬೆದರಿಕೆ) ಮತ್ತು 3(5) (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ರಾಹುಲ್ ಗಾಂಧಿ ವಿರುದ್ಧದ ಎಫ್‌ಐಆರ್ ಅನ್ನು ದೆಹಲಿ ಪೊಲೀಸರ ಕ್ರೈಂ ಬ್ರಾಂಚ್ ತನಿಖೆ ನಡೆಸುತ್ತದೆ.
5) ಅನುರಾಗ್ ಠಾಕೂರ್ ಮತ್ತು ಬಾನ್ಸುರಿ ಸ್ವರಾಜ್ ಸೇರಿ ಬಿಜೆಪಿ ಸಂಸದರು ರಾಹುಲ್ ಗಾಂಧಿ ವಿರುದ್ಧ ಸಂಸತ್ತಿನ ಆವರಣದಲ್ಲಿ ನಡೆದ ಕಲಾಪದಲ್ಲಿ ದೈಹಿಕ ಹಲ್ಲೆ ಮತ್ತು ಪ್ರಚೋದನೆ ಮತ್ತು ಕೊಲೆ ಯತ್ನ ಮತ್ತು ಇತರ ಆರೋಪಗಳ ಅಡಿಯಲ್ಲಿ ಆರೋಪದಡಿ ದೂರು ದಾಖಲಿಸಿದ್ದಾರೆ. ಸೆಕ್ಷನ್ 109, 115, 117, 125, 131 ಮತ್ತು 351 ಅಡಿಯಲ್ಲಿ ದೂರು ದಾಖಲಾಗಿದೆ. ಸೆಕ್ಷನ್ 109 ಕೊಲೆ ಪ್ರಯತ್ನಕ್ಕೆ ಸಂಬಂಧಿಸಿದ್ದಾಗಿದ್ದು ಪೊಲೀಸರು ಸೆಕ್ಷನ್ ಕೈಬಿಟ್ಟಿದ್ದಾರೆ ಎಂದು ವರದಿ ಹೇಳಿದೆ.