ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ, ಕಂಬಳಿಯನ್ನ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ? ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೀಗಂದ್ರು
Nov 28, 2024 01:09 PM IST
ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ, ಕಂಬಳಿಯನ್ನ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ?
Indian Railway blankets Wash: ರೈಲು ಪ್ರಯಾಣಿಕರಿಗೆ ನೀಡುವ ಬ್ಲಾಂಕೆಟ್ (ರಗ್ಗು, ಕಂಬಳಿ, ಬೆಡ್‌ಶಿಟ್ ಇತ್ಯಾದಿ)ಗಳನ್ನು ತಿಂಗಳಿಗೆ ಒಮ್ಮೆ ಅಥವಾ ಎರಡು ಬಾರಿ ತೊಳೆಯುವುದಾಗಿ ಕೇಂದ್ರ ರೈಲ್ವೆ ಮಂತ್ರಿ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
Indian Railway blankets Wash: ರೈಲು ಪ್ರಯಾಣಿಕರಿಗೆ ನೀಡುವ ಬ್ಲಾಂಕೆಟ್ (ರಗ್ಗು, ಕಂಬಳಿ, ಬೆಡ್‌ಶಿಟ್ ಇತ್ಯಾದಿ)ಗಳನ್ನು ತಿಂಗಳಿಗೆ ಒಮ್ಮೆ ಅಥವಾ ಎರಡು ಬಾರಿ ತೊಳೆಯುವುದಾಗಿ ಕೇಂದ್ರ ರೈಲ್ವೆ ಮಂತ್ರಿ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಬುಧವಾರ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಕುಲದೀಪ್ ಇಂದೋರಾ ಕೇಳಿದ ಪ್ರಶ್ನೆಗೆ ರೈಲ್ವೆ ಸಚಿವ ಉತ್ತರಿಸಿದ್ದಾರೆ. ಭಾರತೀಯ ರೈಲ್ವೆಯು ತಿಂಗಳಿಗೊಮ್ಮೆಯಾದರೂ ರೈಲು ಪ್ರಯಾಣಿಕರಿಗೆ ಒದಗಿಸುವ ಹೊದಿಕೆಗಳನ್ನು ತೊಳೆಯುತ್ತದೆ. ಬೆಡ್‌ರೋಲ್ ಕಿಟ್‌ನಲ್ಲಿ ಹೆಚ್ಚುವರಿ ಬೆಡ್‌ಶೀಟ್ ಅನ್ನು ಕವರ್ ಆಗಿ ಬಳಸಲು ಒದಗಿಸಲಾಗಿದೆ ಎಂದು ಅವರು ಲೋಕಸಭೆಯಲ್ಲಿ ತಿಳಿಸಿದ್ದಾರೆ.
ಮೂಲ ನೈರ್ಮಲ್ಯ ಮಾನದಂಡಗಳನ್ನು ಪೂರೈಸುವ ಹಾಸಿಗೆಗಳಿಗೆ ಪ್ರಯಾಣಿಕರು ಹಣ ನೀಡಿದರೂ ರೈಲ್ವೆಯು ಉಣ್ಣೆ ಹೊದಿಕೆಗಳನ್ನು ತಿಂಗಳಿಗೊಮ್ಮೆ ಮಾತ್ರ ತೊಳೆಯುತ್ತದೆಯೇ ಎಂದು ಕಾಂಗ್ರೆಸ್ ಸಂಸದ ಕುಲದೀಪ್ ಇಂದೋರಾ ಪ್ರಶ್ನಿಸಿದ್ದಾರೆ. "ಭಾರತೀಯ ರೈಲ್ವೇಯಲ್ಲಿ ಬಳಸಲಾಗುವ ಕಂಬಳಿಗಳು ಹಗುರವಾಗಿದ್ದು, ತೊಳೆಯಲು ಸುಲಭವಾಗಿದೆ ಜತೆಗೆ ಪ್ರಯಾಣಿಕರಿಗೂ ಆರಾಮದಾಯಕವಾಗಿದೆ" ಎಂದು ರೈಲ್ವೆ ಸಚಿವರು ಲಿಖಿತ ರೂಪದಲ್ಲಿ ಉತ್ತರಿಸಿದ್ದಾರೆ.
"ರೈಲ್ವೆಯು ನೀಡುವ ಹೊದಿಕೆಗಳ ಉತ್ತಮ ಗುಣಮಟ್ಟ ಖಚಿತಪಡಿಸಲು ಬಿಐಎಸ್ ವಿಶೇಷತೆಗಳನ್ನು ಹೊಂದಿರುವ ಹೊಸ ಲೆನಿನ್ ಸೆಟ್‌ಗಳನ್ನು ಕಾಲಕಾಲಕ್ಕೆ ಖರೀದಿಸಲಾಗುತ್ತದೆ. ಯಾಂತ್ರೀಕೃತ ಲ್ಯಾಂಡ್ರಿಗಳು ಇವೆ. ಲೆನಿನ್ ಬಟ್ಟೆಗಳನ್ನು ತೊಳೆಯಲು ನಿರ್ದಿಷ್ಟ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಪ್ರಯಾಣಿಕರ ಸೌಕರ್ಯ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಾಗಿದೆ" ಎಂದು ಅವರು ಹೇಳಿದ್ದಾರೆ.
"ತೊಳೆದ ಲಿನಿನ್ ವಸ್ತುಗಳ ಗುಣಮಟ್ಟವನ್ನು ಪರೀಕ್ಷಿಸಲು ವೈಟೊ-ಮೀಟರ್‌ಗಳನ್ನು ಬಳಸಲಾಗುತ್ತದೆ. ರೈಲ್‌ಮದದ್ ಪೋರ್ಟಲ್‌ನಲ್ಲಿ ದಾಖಲಾಗಿರುವ ದೂರುಗಳನ್ನು ಮೇಲ್ವಿಚಾರಣೆ ಮಾಡಲು ರೈಲ್ವೆ ವಲಯ ಪ್ರಧಾನ ಕಛೇರಿ ಮತ್ತು ವಿಭಾಗೀಯ ಮಟ್ಟದಲ್ಲಿ 'ವಾರ್ ರೂಮ್'ಗಳನ್ನು ಸ್ಥಾಪಿಸಲಾಗಿದೆ. ಈ ಪೋರ್ಟಲ್‌ನಲ್ಲಿ ಪ್ರಯಾಣಿಕರಿಗೆ ಒದಗಿಸಲಾದ ಲಿನಿನ್ ಮತ್ತು ಬೆಡ್‌ರೋಲ್‌ಗಳ ಮೇಲಿನ ದೂರುಗಳ ಮೇಲ್ವಿಚಾರಣೆ ಮಾಡಲಾಗುತ್ತದೆ. ಅಂತಹ ಎಲ್ಲಾ ದೂರುಗಳ ಮೇಲೆ ತ್ವರಿತ ಕ್ರಮ ತೆಗೆದುಕೊಳ್ಳಲಾಗುತ್ತದೆ" ಎಂದು ಅವರು ಹೇಳಿದ್ದಾರೆ.
ಈ ಅಂಶಗಳನ್ನು ಗಮನಿಸಿ
ನೀವು ರೈಲುಗಳಲ್ಲಿ ಏಸಿ ಕ್ಲಾಸ್ ಇತ್ಯಾದಿಗಳಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಅಲ್ಲಿ ನೀಡಿರುವ ಬ್ಲಾಂಕೆಟ್‌ಗಳನ್ನು ಪರಿಶೀಲಿಸಿ. ಕ್ಲೀನ್ ಇಲ್ಲ ಎಂದೆನಿಸಿದರೆ ಸಂಬಂಧಪಟ್ಟವರಿಗೆ ಹೇಳಿ ತಕ್ಷಣ ಬದಲಾಯಿಸಿಕೊಳ್ಳಬಹುದು.
ರೈಲುಗಳಲ್ಲಿ ಒಬ್ಬರು ಬಳಸಿದ ಬ್ಲಾಂಕೆಟ್ ಬಳಸಲು ನೀವು ಇಷ್ಟಪಡದೆ ಇದ್ದಲ್ಲಿ, ರೈಲು ಪ್ರಯಾಣಕ್ಕಾಗಿ ಮನೆಯಿಂದಲೇ ನಿಮ್ಮ ಸ್ವಂತ ಬೆಡ್ ಶೀಟ್ ಕೊಂಡೊಯ್ಯುವುದು ಉತ್ತಮ. ಸಾಕಷ್ಟು ಜನರು ಈ ವಿಧಾನವನ್ನು ಅನುಸರಿಸುತ್ತಾರೆ.