ಬೆಂಗಳೂರು, ದೆಹಲಿಗಳಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದ ಚಿನ್ನದ ದರ, ಬೆಳ್ಳಿ ಬೆಲೆ ಒಂದೇ ದಿನ 5000 ರೂ ಹೆಚ್ಚಳ
Oct 22, 2024 07:44 AM IST
ಚಿನ್ನ-ಬೆಳ್ಳಿ ಧಾರಣೆ: ಬೆಂಗಳೂರು, ದೆಹಲಿಗಳಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಚಿನ್ನದ ದರ ಏರಿದೆ. ಅದೇ ರೀತಿ, ದೆಹಲಿಯಲ್ಲಿ ಬೆಳ್ಳಿ ಬೆಲೆ ಒಂದೇ ದಿನ 5000 ರೂ ಹೆಚ್ಚಳವಾಗಿದೆ. (ಸಾಂಕೇತಿಕ ಚಿತ್ರ)
ಚಿನ್ನ ಬೆಳ್ಳಿ ದರ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದ್ದು, ಹೊಸ ಹೊಸ ದಾಖಲೆ ಬರೆಯುತ್ತ ಮುನ್ನಡೆದಿದೆ. ಬೆಂಗಳೂರು, ದೆಹಲಿಗಳಲ್ಲಿ ಚಿನ್ನದ ದರ ಸೋಮವಾರ ವಹಿವಾಟಿನ ಕೊನೆಗೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದೆ. ದೆಹಲಿಯಲ್ಲಿ ಬೆಳ್ಳಿ ಬೆಲೆ ಒಂದೇ ದಿನ 5000 ರೂ ಹೆಚ್ಚಳವಾಗಿದ್ದು ಹೊಸ ದಾಖಲೆ ಬರೆದಿದೆ. ಬೆಂಗಳೂರಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿದೆ.
ನವದೆಹಲಿ/ ಬೆಂಗಳೂರು: ಚಿನಿವಾರ ಪೇಟೆಯಲ್ಲಿ ಚಿನ್ನದ ದರ ಮತ್ತು ಬೆಳ್ಳಿ ಬೆಲೆ ಏರುಗತಿಯಲ್ಲಿದ್ದು, ವಿವಿಧ ನಗರಗಳಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಸೋಮವಾರ (ಅಕ್ಟೋಬರ್ 21) ವಹಿವಾಟಿನ ಕೊನೆಗೆ ದೆಹಲಿಯಲ್ಲಿ ಚಿನ್ನದ ಬೆಲೆ 750 ರೂಪಾಯಿ ಹೆಚ್ಚಳವಾಗಿ 80,650 ರೂಪಾಯಿ ಮತ್ತು ಬೆಂಗಳೂರು ಚಿನಿವಾರ ಪೇಟೆಯಲ್ಲಿ 10 ಗ್ರಾಂ ಸ್ಟ್ಯಾಂಡರ್ಡ್ (99.5 ಪರಿಶುದ್ಧ) ಚಿನ್ನದ ಬೆಲೆ 82,020 ರೂಪಾಯಿ ತಲುಪಿ ಸಾರ್ವಕಾಲಿಕ ಗರಿಷ್ಠ ಮಟ್ಟದ ಬೆಲೆಯ ಮೈಲಿಗಲ್ಲು ಸ್ಥಾಪಿಸಿದೆ. ಇದೇ ರೀತಿ, ದೆಹಲಿಯಲ್ಲಿ ಬೆಳ್ಳಿಯ ಬೆಲೆ ಒಂದು ಕಿಲೋಗೆ ಒಂದೇ ದಿನ 5000 ರೂಪಾಯಿ ಏರಿಕೆಯಾಗಿ 99,500 ರೂಪಾಯಿ ತಲುಪಿದೆ. ಶುಕ್ರವಾರದ ವಹಿವಾಟಿನಲ್ಲಿ 94,500 ರೂಪಾಯಿ ಇತ್ತು ಎಂದು ಆಲ್ ಇಂಡಿಯಾ ಸರಾಫ ಅಸೋಸಿಯೇಷನ್ ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ. ಬೆಂಗಳೂರಲ್ಲಿ ಬೆಳ್ಳಿಯ ದರ ಒಂದು ಕಿಲೋಗೆ 1,03,000 ರೂಪಾಯಿ ಆಗಿದೆ.
ಬೆಂಗಳೂರು ಮತ್ತು ಪ್ರಮುಖ ನಗರಗಳಲ್ಲಿ ಬೆಳ್ಳಿ ಬಂಗಾರದ ಬೆಲೆ
ದೆಹಲಿಯಲ್ಲಿ ಪರಿಶುದ್ಧ ಚಿನ್ನ (99.5)ದ ಬೆಲೆ 10 ಗ್ರಾಂಗೆ 750 ರೂಪಾಯಿ ಏರಿ 80,250 ರೂಪಾಯಿಗೆ ತಲುಪಿದೆ. ಶುಕ್ರವಾರ 79,900 ರೂಪಾಯಿ ಇತ್ತು. ಗುಡ್ ರಿಟರ್ನ್ಸ್ ತಾಣದ ಮಾಹಿತಿ ಪ್ರಕಾರ 22, 24 ಮತ್ತು 18 ಕ್ಯಾರಟ್ 10 ಗ್ರಾಂ ಚಿನ್ನದ ದರ ಇಂದು (ಅಕ್ಟೋಬರ್ 22) ಹೀಗಿದೆ-
ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ: 22 ಕ್ಯಾರಟ್ ಚಿನ್ನದ ಬೆಲೆ 73,010 ರೂಪಾಯಿ, 24 ಕ್ಯಾರಟ್ ಚಿನ್ನದ ಬೆಲೆ 79,650 ರೂ., 18 ಕ್ಯಾರಟ್ ಚಿನ್ನದ ಬೆಲೆ 59,740 ರೂಪಾಯಿ ಇದೆ.
ಮಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ: 22 ಕ್ಯಾರಟ್ ಚಿನ್ನದ ಬೆಲೆ 73,010 ರೂಪಾಯಿ, 24 ಕ್ಯಾರಟ್ ಚಿನ್ನದ ಬೆಲೆ 79,650 ರೂ., 18 ಕ್ಯಾರಟ್ ಚಿನ್ನದ ಬೆಲೆ 59,740 ರೂಪಾಯಿ ಇದೆ.
ಮೈಸೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ: 22 ಕ್ಯಾರಟ್ ಚಿನ್ನದ ಬೆಲೆ 73,010 ರೂಪಾಯಿ, 24 ಕ್ಯಾರಟ್ ಚಿನ್ನದ ಬೆಲೆ 79,650 ರೂ., 18 ಕ್ಯಾರಟ್ ಚಿನ್ನದ ಬೆಲೆ 59,740 ರೂ. ಇದೆ.
ಬೆಳ್ಳಿ ಬೆಲೆ 1 ಕಿಲೋ: ಬೆಂಗಳೂರು, ಮೈಸೂರು ಮತ್ತು ಮಂಗಳೂರುಗಳಲ್ಲಿ 96,900 ರೂಪಾಯಿ.
ಬೆಳ್ಳಿ ಬಂಗಾರದ ಬೆಲೆ ಹೆಚ್ಚಳಕ್ಕೆ ಕಾರಣ
ಚಿನ್ನದ ಬೆಲೆ ಏರಿಕೆ ಮತ್ತು ಕೈಗಾರಿಕಾ ಬೇಡಿಕೆಗಳ ಕಾರಣಕ್ಕೆ ಬೆಳ್ಳಿಯ ಬೆಲೆ ಏರಿಕೆಯ ಹಾದಿಯಲ್ಲಿದೆ ಎಂದು ಸರಕು ಮಾರುಕಟ್ಟೆ ಪರಿಣತರು ಅಭಿಪ್ರಾಯ ಪಟ್ಟಿದ್ದಾರೆ. ಬೆಳ್ಳಿಯ ಬೆಲೆ ಏರಿಕೆ ಇನ್ನೂ ಒಂದಷ್ಟು ಸಮಯ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ. ಹೂಡಿಕೆದಾರರು ಬೆಳ್ಳಿಯ ಮೇಲೆ ಹೂಡಿಕೆ ಮಾಡುವ ಅವಕಾಶ ಕಡಿಮೆಯಾಗುತ್ತಿರುವುದನ್ನು ಗಮನಿಸಿದ್ದಾರೆ.
ಹಬ್ಬದ ಸೀಸನ್ ಮತ್ತು ಮದುವೆ ಮುಂತಾದ ಶುಭಕಾರ್ಯಗಳಲ್ಲಿ ಬೆಳ್ಳಿ ಆಭರಣಗಳ ಬೇಡಿಕೆ ಹೆಚ್ಚಿರುವುದು, ಸ್ಥಳೀಯ ಆಭರಣ ತಯಾರಕರಿಂದ ಖರೀದಿಯಲ್ಲಿ ಹೆಚ್ಚಳವಾಗಿದೆ. ಈ ಎಲ್ಲ ಕಾರಣಗಳಿಂದಾಗಿ ಬೆಳ್ಳಿ ಬೆಲೆ ಏರಿಕೆಯಾಗಿದೆ ಎಂಬುದು ಮಾರುಕಟ್ಟೆ ತಜ್ಞರ ಅಭಿಪ್ರಾಯ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಏರಿಕೆಯ ಟ್ರೆಂಡ್ ಇದೆ. ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ (ಎಂಸಿಎಕ್ಸ್)ನಲ್ಲಿ ಡಿಸೆಂಬರ್ ಡೆಲಿವರಿಯ ಚಿನ್ನದ ಕಾಂಟ್ರ್ಯಾಕ್ಟ್ 10 ಗ್ರಾಂಗೆ 493 ರೂ ಏರಿದ್ದು 78,242 ರೂ ಆಗಿದೆ. ಸೋಮವಾರದ ವಹಿವಾಟಿನಲ್ಲಿ 10 ಗ್ರಾಂ ಚಿನ್ನದ ದರ 591 ರೂ ಏರಿಕೆಯಾಗಿ 78,340 ರೂ ಆಗಿತ್ತು. ಇನ್ನು ಡಿಸೆಂಬರ್‌ನಲ್ಲಿ ಪೂರೈಸಬೇಕಾದ ಬೆಳ್ಳಿ ದರ ಕಿಲೋಗೆ 2,822 ರೂ ಹೆಚ್ಚಳವಾಗಿ 98,224 ರೂ ತಲುಪಿದೆ.