ಚಿನ್ನದ ನಾಣ್ಯ ಖರೀದಿ ಬಲು ಸುಲಭ; ಜನಮನ ಸೆಳೆದಿದೆ ತುಮಕೂರಿನ ಟಿಎಂಸಿಸಿ ಗೋಲ್ಡ್ ಕಾಯಿನ್ ಎಟಿಎಂ
ತುಮಕೂರು ನಗರದಲ್ಲಿ ಚಿನ್ನದ ನಾಣ್ಯ ಖರೀದಿ ಈಗ ಬಹಳ ಸುಲಭ. ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ-ಆಪರೇಟೀವ್ ಸಂಸ್ಥೆಯು ಸ್ಥಾಪಿಸಿದ ಎಟಿಎಂ ಸದ್ಯ ಚರ್ಚೆಯಲ್ಲಿದೆ. ತುಮಕೂರಿನ ಟಿಎಂಸಿಸಿ ಗೋಲ್ಡ್ ಕಾಯಿನ್ ಎಟಿಎಂ ಜನಮನ ಸೆಳೆದಿದ್ದು, ಅದರ ವಿವರ ಇಲ್ಲಿದೆ.
ತುಮಕೂರು: ಚಿನ್ನದ ದರ ಏರಿಕೆಯಾಗುತ್ತಿದ್ದರೂ ಅದರ ಬೇಡಿಕೆ ಕಡಿಮೆಯಾಗಿಲ್ಲ. ಜನರ ಒಲವೂ ಕಡಿಮೆ ಆಗಿಲ್ಲ. ತುಮಕೂರಿನಲ್ಲಿ ಮೊದಲ ಬಾರಿಗೆ ಚಿನ್ನದ ನಾಣ್ಯ ಒದಗಿಸುವ ಎಟಿಎಂ ಶುರುವಾಗಿದ್ದು, ಚಿನ್ನದ ನಾಣ್ಯ ಖರೀದಿಯನ್ನು ಸುಲಭ ಮಾಡಿಕೊಟ್ಟಿದೆ. ತುಮಕೂರಿನ ಬ್ಯಾಂಕಿಂಗ್ ಕ್ಷೇತ್ರದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ-ಆಪರೇಟೀವ್ ಸಂಸ್ಥೆಯು ಎಟಿಎಂ ಮೂಲಕ ಚಿನ್ನದ ನಾಣ್ಯ ಪೂರೈಸುವ ಗೋಲ್ಡ್ ಕಾಯಿನ್ ಎಟಿಎಂ ಅನ್ನು ತಮಕೂರು ನಗರದಲ್ಲಿ ಶುರುಮಾಡಿದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ನಗರದ ಎಂ.ಜಿ.ರಸ್ತೆಯಲ್ಲಿ ಟಿಎಂಸಿಸಿಯ ಗೋಲ್ಡ್ ಕಾಯಿನ್ ಎಟಿಎಂ ಉದ್ಘಾಟಿಸಿದರು.
"ಎಟಿಎಂ ಮೂಲಕ ಚಿನ್ನದ ನಾಣ್ಯ ಪಡೆಯುವ ಪಡೆಯುವ ಗೋಲ್ಡ್ ಕಾಯಿನ್ ಎಟಿಎಂ ಸೇವೆಯನ್ನು ತುಮಕೂರಿನಲ್ಲಿ ಟಿಎಂಸಿಸಿ ಆರಂಭಿಸಿದೆ. ಅಭಿವೃದ್ಧಿ ಹೊಂದುತ್ತಿರುವ ತುಮಕೂರು ನಗರಕ್ಕೆ ಪೂರಕವಾಗಿ ಬ್ಯಾಂಕಿಂಗ್ ಕ್ಷೇತ್ರದ ಈ ವಿಶೇಷ ಸೇವೆಯು ದೊಡ್ಡ ಬ್ರ್ಯಾಂಡ್ ಸೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರಶಂಸಿಸಿದರು.
ತುಮಕೂರಿನಲ್ಲಿ ಗೋಲ್ಡ್ ಕಾಯಿನ್ ಎಟಿಎಂ ಅಚ್ಚರಿ ಎಂದ ಸಚಿವ ಪರಮೇಶ್ವರ್
ಎಟಿಎಂನಲ್ಲಿ ಚಿನ್ನದ ನಾಣ್ಯ ಪಡೆಯುವುದು ಒಂದು ರೀತಿಯ ಅಚ್ಚರಿ ಸಂಭ್ರಮ. ಇದು ವಿಶೇಷ, ವಿಶಿಷ್ಟ ಸೇವೆ. ತಮಕೂರಿನಲ್ಲಿ ಗೋಲ್ಡ್ ಕಾಯಿನ್ ಎಟಿಎಂ ಸೇವೆ ಲಭ್ಯವಾಗುತ್ತಿರುವುದು ಅಚ್ಚರಿ ಉಂಟುಮಾಡಿದೆ. ಅದೇ ರೀತಿ ಆನಂದವೂ ಆಗಿದೆ. ಈ ನಿಟ್ಟಿನಲ್ಲಿ ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ-ಆಪರೇಟೀವ್ ಸೊಸೈಟಿಯ ಕೆಲಸ ಶ್ಲಾಘನೀಯ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕದ ರಾಜಧಾನಿ ಬೆಂಗಳೂರಿನ ಭಾಗವಾಗಿ ತುಮಕೂರು ಬೆಳೆಯುತ್ತಿದೆ. ಬ್ರ್ಯಾಂಡ್ ಬೆಂಗಳೂರು ಯೋಜನೆಯಲ್ಲಿ ತುಮಕೂರು ನಗರವೂ ಭಾಗವಾಗಿರಲಿದೆ. ಈಗ ಅದಕ್ಕೆ ಪೂರಕವಾಗಿ ಸ್ಥಳೀಯವಾಗಿ ಕೂಡ ಉದ್ಯಮಗಳು ತಮ್ಮದೇ ಆದ ಕೊಡುಗೆ ನೀಡುತ್ತಿರುವುದು ವಿಶೇಷ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ ಹೇಳಿದರು.
ಅರ್ಧ ಗ್ರಾಂ ಚಿನ್ನದ ನಾಣ್ಯವೂ ಇದೆ
ಬ್ಯಾಂಕಿಂಗ್ ಕ್ಷೇತ್ರದಲ್ಲಿ ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ-ಆಪರೇಟೀವ್ ಸೊಸೈಟಿಯ ಈ ಪ್ರಯತ್ನ ದೇಶದಲ್ಲಿ ಮೊದಲನೆಯದು ಎಂದು ಹೇಳಿಕೊಂಡ ಸೊಸೈಟಿ ಅಧ್ಯಕ್ಷ ಡಾ.ಎನ್.ಎಸ್.ಜಯಕುಮಾರ್, ಸಾಮಾನ್ಯ ಎಟಿಎಂಗಳಲ್ಲಿ ಹಣ ಪಡೆಯುವಂತೆ ಈ ಗೋಲ್ಡ್ ಎಟಿಎಂ ಮೂಲಕ ಚಿನ್ನದ ನಾಣ್ಯಗಳನ್ನು ಪಡೆಯಬಹುದು. ಈ ಎಟಿಎಂನಲ್ಲಿ, ಅರ್ಧ ಗ್ರಾಂನಿಂದ ಹತ್ತು ಗ್ರಾಂವರೆಗಿನ ಚಿನ್ನದ ನಾಣ್ಯಗಳಿದ್ದು, ಗ್ರಾಹಕರು ಎಟಿಎಂನಲ್ಲಿ ತಮಗೆ ಬೇಕಾದ ತೂಕದ ಚಿನ್ನದ ನಾಣ್ಯಗಳಿಗೆ ಹಣ ಪಾವತಿ ಮಾಡಿ ಅದನ್ನು ಖರೀದಿ ಮಾಡಬಹುದು ಎಂದು ಹೇಳಿದರು.
ಜನಸಾಮಾನ್ಯರೂ ಚಿನ್ನ ಖರೀದಿ ಮಾಡಿ ಉಳಿತಾಯ ಮಾಡುವುದಕ್ಕೆ ಅನುಕೂಲವಾಗುವಂತೆ ಅರ್ಧ ಗ್ರಾಂ ಚಿನ್ನದ ನಾಣ್ಯಗಳನ್ನೂ ಸೇರಿಸಲಾಗಿದೆ. ಆಯಾ ದಿನದ ಮಾರುಕಟ್ಟೆ ದರದಲ್ಲಿ 24 ಕ್ಯಾರೆಟ್ ಚಿನ್ನದ ನಾಣ್ಯವನ್ನು ಗ್ರಾಹಕರು ಖರೀದಿ ಮಾಡಬಹುದಾಗಿದೆ. ಈ ಚಿನ್ನದ ನಾಣ್ಯಕ್ಕೆ ಗ್ಯಾರೆಂಟಿ ಕಾರ್ಡ್, ಖರೀದಿ ಮಾಡಿದ್ದಕ್ಕೆ ರಸೀದಿ ಎಲ್ಲವೂ ಎಟಿಎಂ ಮೂಲಕವೇ ಗ್ರಾಹಕರಿಗೆ ಸಿಗುತ್ತದೆ ಎಂದು ಜಯಕುಮಾರ್ ವಿವರಿಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸದಾ ಅತ್ಯಾಧುನಿಕ ಸೇವೆ ನೀಡುತ್ತಾ ಬಂದಿರುವ ಟಿಎಂಸಿಸಿ ಈಗ ಗೋಲ್ಡ್ ಕಾಯಿನ್ ಎಟಿಎಂ ಸೇವೆ ಆರಂಭಿಸಿದೆ. ಈ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವುದರೊಂದಿಗೆ ಬ್ಯಾಂಕ್ ಬೆಳವಣಿಗೆಯ ಹಾದಿಯಲ್ಲಿ ಮುನ್ನಡೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಗೋಲ್ಡ್ ಕಾಯಿನ್ ಎಟಿಎಂ ಸೇವೆಗೆ ಚಾಲನೆ ನೀಡಿ ಶುಭ ಆಶೀರ್ವಾದ ನೀಡಿದರು. ಮಾಜಿ ಸಚಿವ ಸೊಗಡು ಶಿವಣ್ಣ ಸೇರಿದಂತೆ ಟಿಎಂಸಿಸಿಯ ಆಡಳಿತ ಮಂಡಳಿ ನಿರ್ದೇಶಕರು, ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.