logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಲೋಕಸಭೆ ಫಲಿತಾಂಶದಲ್ಲಿ ಶತಕ ಸಮೀಪಿಸಿದ ಕಾಂಗ್ರೆಸ್; 250 ದಾಟಿದ ಇಂಡಿಯಾ ಒಕ್ಕೂಟ, ಮೋದಿ ಅಲೆ ನಡುವೆ ದಶಕದಲ್ಲೇ ಅತ್ಯುತ್ತಮ ಸಾಧನೆ

ಲೋಕಸಭೆ ಫಲಿತಾಂಶದಲ್ಲಿ ಶತಕ ಸಮೀಪಿಸಿದ ಕಾಂಗ್ರೆಸ್; 250 ದಾಟಿದ ಇಂಡಿಯಾ ಒಕ್ಕೂಟ, ಮೋದಿ ಅಲೆ ನಡುವೆ ದಶಕದಲ್ಲೇ ಅತ್ಯುತ್ತಮ ಸಾಧನೆ

Jayaraj HT Kannada

Jun 04, 2024 03:26 PM IST

google News

ಲೋಕಸಭೆ ಫಲಿತಾಂಶದಲ್ಲಿ ಶತಕ ಸಮೀಪ ಕಾಂಗ್ರೆಸ್; ಮೋದಿ ಅಲೆ ನಡುವೆ ದಶಕದಲ್ಲೇ ಅತ್ಯುತ್ತಮ ಸಾಧನೆ

    • Lok Sabha Election 2024 Results: ಸ್ವಂತಬಲದಿಂದ ಸುಲಭವಾಗಿ ಬಹುಮತ ಸಾಬೀತುಪಡಿಸುವ ಗುರಿ ಹಾಕಿಕೊಂಡಿದ್ದ ಬಿಜೆಪಿಗೆ, ಕಾಂಗ್ರೆಸ್‌ ಸ್ವಲ್ಪ ಮಟ್ಟಿಗೆ ಕಠಿಣ ಪೈಪೋಟಿ ನೀಡಿದೆ. ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಹೆಚ್ಚುಕಮ್ಮಿ 100 ಕ್ಷೇತ್ರಗಳಲ್ಲಿ ಕೈ ಪಕ್ಷ ಮುನ್ನಡೆ ಸಾಧಿಸಿದೆ. ಹಾಗಂತ ಇದು ಸಣ್ಣ ಸಾಧನೆಯಲ್ಲ.
ಲೋಕಸಭೆ ಫಲಿತಾಂಶದಲ್ಲಿ ಶತಕ ಸಮೀಪ ಕಾಂಗ್ರೆಸ್; ಮೋದಿ ಅಲೆ ನಡುವೆ ದಶಕದಲ್ಲೇ ಅತ್ಯುತ್ತಮ ಸಾಧನೆ
ಲೋಕಸಭೆ ಫಲಿತಾಂಶದಲ್ಲಿ ಶತಕ ಸಮೀಪ ಕಾಂಗ್ರೆಸ್; ಮೋದಿ ಅಲೆ ನಡುವೆ ದಶಕದಲ್ಲೇ ಅತ್ಯುತ್ತಮ ಸಾಧನೆ (PTI)

ಲೋಕಸಭೆ ಚುನಾವಣೆ 2024ರ ಮತಎಣಿಕೆ ಸಾಗುತ್ತಿದೆ. ಈವರೆಗಿನ (ಜೂನ್ 4, 3:30) ಮಾಹಿತಿ ಪ್ರಕಾರ ಬಿಜೆಪಿ ನೇತೃತ್ವದ ಎನ್‌ಡಿಎ ಮುನ್ನಡೆ ಕಾಯ್ದುಕೊಂಡಿದೆ. ಸತತ ಮೂರನೇ ಅವಧಿಗೆ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ರಚನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ನಡುವೆ ಕಾಂಗ್ರೆಸ್ ಪಕ್ಷ ಕೂಡ ಸುಮಾರು 100 ಸ್ಥಾನಗಳನ್ನು ಗೆಲ್ಲುವ ಹಾದಿಯಲ್ಲಿದೆ. ಕಳೆದೆರಡು ಚುನಾವಣೆಯಲ್ಲಿ ಹಲವು ಕ್ಷೇತ್ರಗಳನ್ನು ಕಳೆದುಕೊಂಡಿದ್ದ ಕೈ ಪಕ್ಷ, ಈ ಬಾರಿ ಹೆಚ್ಚುವರಿ ಕ್ಷೇತ್ರಗಳಲ್ಲಿ ಗೆಲುವು ಒಲಿಸಿಕೊಳ್ಳುವ ಸುಳಿವು ನೀಡಿದೆ. 2014ರ ಲೋಕಸಭಾ ಚುನಾವಣೆಯ ನಂತರ, ಈ ಬಾರಿ ಪಕ್ಷದ ಅತ್ಯುತ್ತಮ ಸಾಧನೆ ಕಾಣಿಸುತ್ತಿದೆ. ದೇಶದ ಅತ್ಯಂತ ಹಳೆಯ ಪಕ್ಷ, ಹತ್ತು ವರ್ಷಗಳ ಹಿಂದೆ ಕೇವಲ 44 ಸ್ಥಾನಗಳಿಗೆ ಕುಸಿದಿತ್ತು. ಆ ಬಳಿಕ 2019ರ ಚುನಾವಣೆ ವೇಳೆಗೆ 8 ಕ್ಷೇತ್ರಗಳನ್ನು ಹೆಚ್ಚಿಸಿ 52 ಸ್ಥಾನ ಗೆದ್ದಿತ್ತು. ಈ ಬಾರಿ ಪಕ್ಷದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿಕೊಂಡಿದೆ.

ಕಳೆದ ಒಂದು ದಶಕದಿಂದ ದೇಶದಲ್ಲಿ ಮೋದಿ ಅಲೆ ಹೆಚ್ಚಾಗಿರುವುದರಿಂದ, ಭಾರತದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷದ ಪ್ರಭಾವ ಅಂತ್ಯವಾಗುತ್ತಾ ಎಂಬ ಪ್ರಶ್ನೆಗಳು ಎದ್ದಿದ್ದವು. ಕಾಂಗ್ರೆಸ್ ಮುಕ್ತ ಭಾರತ ನಿಜಕ್ಕೂ ನಿರ್ಮಾಣವಾಗುತ್ತಾ ಎಂಬ ಪ್ರಶ್ನೆಯನ್ನು ಮತದಾರರು ಕೇಳುತ್ತಿದ್ದರು. ಆದರ, ಮತ ಎಣಿಕೆ ಸಾಗುತ್ತಿದ್ದಂತೆ, ಕಾಂಗ್ರೆಸ್‌ ತುಸು ನಿಟ್ಟುಸಿರು ಬಿಟ್ಟಿದೆ. ಭಾರತದಲ್ಲಿ ತನ್ನ ಅಸ್ತಿತ್ವ ಇನ್ನೂ ಎದೆ ಎಂಬುದನ್ನು ಹಳೆಯ ಪಕ್ಷ ಸಾಬೀತುಪಡಿಸಿದೆ.

2024ರ ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಹೋಲಿಸಿದರೆ, ಕಾಂಗ್ರೆಸ್‌ ತನ್ನ ಮುನ್ನಡೆಯನ್ನು ಡಬಲ್‌ ಮಾಡಿಕೊಂಡಿದೆ. ಇಂದಿನ ಆರಂಭಿಕ ಟ್ರೆಂಡ್ ಪ್ರಕಾರ, ಇಂಡಿಯಾ ಮೈತ್ರಿಕೂಟ ಎಕ್ಸಿಟ್ ಪೋಲ್ ಫಲಿತಾಂಶವನ್ನು ಮೀರಿಸಿ ಮುನ್ನಡೆ ಸಾಧಿಸಿದೆ. ಕೈ ನೇತೃತ್ವದಲ್ಲಿ ಇಂಡಿಯಾ 223 ಸ್ಥಾನಗಳಲ್ಲಿ ಮೇಲುಗೈ ಸಾಧಿಸಿದರೆ, ಎನ್‌ಡಿಎ 292 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.

ಹಾಗಿದ್ದರೆ, 2019 ಮತ್ತು 2014ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಕಾಂಗ್ರೆಸ್ ತನ್ನ ವೈಯಕ್ತಿಕ ಸಾಧನೆಯಲ್ಲಿ ಹೇಗೆ ಸುಧಾರಿಸಿದೆ ಎಂಬುದನ್ನು ನೋಡೋಣ.

ಇಂಡಿಯಾ ಮೈತ್ರಿಕೂಟ

ಚುನಾವಣಾ ಆಯೋಗದ ಅಂಕಿ-ಅಂಶಗಳ ಪ್ರಕಾರ, ಕಾಂಗ್ರೆಸ್ ಇದುವರೆಗೆ 97 ಕ್ಷೇತ್ರಗಳಲ್ಲಿ ಗೆಲುವಿನ ಸಮೀಪ ಬಂದಿದ್ದಾರೆ. ಒಟ್ಟಾರೆ 100ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆಯಿದೆ. ಇದೇ ವೇಳೆ INDIA ಅಲಯನ್ಸ್ ಭಾಗವಾಗಿರುವ ಹಲವು ಪಕ್ಷಗಳು ಗೆಲುವು ಸಾಧಿಸಿದೆ. ಹೀಗಾಗಿ ಕಾಂಗ್ರೆಸ್‌ ಮೈತ್ರಿಕೂಟವು ಹಲವು ಕ್ಷೇತ್ರಗಳನ್ನು ಕೈವಶ ಮಾಡುವ ಸಾಧ್ಯತೆ ಇದೆ. ಇಂಡಿಯಾ ಒಕ್ಕೂಟವರು ಸುಮಾರು 231 ಕ್ಷೇತ್ರಗಳಲ್ಲಿ ಮುನ್ನಡೆ ದಾಖಲಿಸಿವೆ.

ಈ ಬಾರಿಯ ಎಕ್ಸಿಟ್ ಪೋಲ್‌ಗಳು, ಈ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಿಲ್ಲ ಎಂದು ಭವಿಷ್ಯ ನುಡಿದಿದ್ದವು. ಆದರೆ, ಕಾಂಗ್ರೆಸ್‌ ಪಾಲಿಗೆ ಕಳೆದ ಮೂರು ಸಾರ್ವತ್ರಿಕ ಚುನಾವಣೆಗಳಿಗಿಂತ ಇದು ಉತ್ತಮ ಸಾಧನೆಯಾಗಿದೆ.

2019 ರಲ್ಲಿ ಕಾಂಗ್ರೆಸ್‌ ಸಾಧನೆ

2019ರಲ್ಲಿ ಕಾಂಗ್ರೆಸ್ ಪಕ್ಷವು ಸ್ವಂತ ಬಲದಿಂದ 52 ಸ್ಥಾನಗಳನ್ನು ಗಳಿಸಿತ್ತು. ಅತ್ತ ಬಿಜೆಪಿ ತನ್ನದೇ ಸಾಮರ್ಥ್ಯದಿಂದ 303 ಕ್ಷೇತ್ರಗಳಲ್ಲಿ ಗೆದ್ದರೆ, ಮಿತ್ರಪಕ್ಷಗಳೊಂದಿಗೆ 353 ಕ್ಷೇತ್ರಗಳಲ್ಲಿ ಗೆದ್ದು ಬೀಗಿತ್ತು. ಹಿಂದಿ ಪ್ರಾಬಲ್ಯವಿರುವ ರಾಜ್ಯಗಳಲ್ಲಿ ಪಕ್ಷ ವಿಸ್ತರಸಲು ಕಾಂಗ್ರೆಸ್‌ಗೆ ಸಾಧ್ಯವಾಗಿರಲಿಲ್ಲ. ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶ ರಾಜ್ಯಗಳಿಂದ ಕೇವಲ ಆರು ಸ್ಥಾನಗಳನ್ನು ಗಳಿಸಿತ್ತು. ಇದೇ ಪ್ರದೇಶದಿಂದ ಬಿಜೆಪಿ 141 ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸಿತ್ತು. ಅಚ್ಚರಿಯೆಂದರೆ, ಅಮೇಥಿಯಿಂದ ಕಣಕ್ಕಿಳಿದಿದ್ದ ಪ್ರಧಾನಿ ಅಭ್ಯರ್ಥಿ ರಾಹುಲ್‌ ಗಾಂಧಿ; ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿದ್ದರು. ದಾಖಲೆಯ 55,120 ಮತಗಳ ಅಂತರದಿಂದ ಬಿಜೆಪಿ ನಾಯಕಿ ಗೆದ್ದು ಬೀಗಿದ್ದರು. ಪರಿಣಾಮ, ಈ ಬಾರಿ ರಾಹುಲ್‌ ರಾಯ್‌ಬರೇಲಿಯಿಂದ ಕಣಕ್ಕಿಳಿದಿದ್ದರು.

2014ರಲ್ಲಿ ಭಾರಿ ಹಿನ್ನಡೆ

ಮೋದಿ ಅಲೆಯ ಆರಂಭಿಕ ಚುನಾವಣೆಯಾಗಿದ್ದ 2014ರಲ್ಲಿ, ಕಾಂಗ್ರೆಸ್ ತೀರಾ ಕಳಪೆ ಫಲಿತಾಂಶ ಪಡೆಯಿತು. ಕೇವಲ 44 ಸ್ಥಾನಗಳಷ್ಟೇ ಕೈಗೆ ಒಲಿಯಿತು. ಬರೋಬ್ಬರಿ 162 ಸ್ಥಾನಗಳನ್ನು ಕಳೆದುಕೊಂಡ ಪಕ್ಷ, ದೇಶದಲ್ಲಿ ನಶಿಸಿ ಹೋಗಲಿದೆ ಎಂದೇ ಹೇಳಲಾಯ್ತು. ಮೋದಿ ಹಾಗೂ ಹಿಂದುತ್ವದ ಅಲೆ ದೇಶವನ್ನು ಆವರಿಸಿತ್ತು. ಯುಪಿಯಲ್ಲಿ ಎನ್‌ಡಿಎ ಮೈತ್ರಿಯು 73, ಮಹಾರಾಷ್ಟ್ರದಲ್ಲಿ 41, ಬಿಹಾರದಲ್ಲಿ 31 ಮತ್ತು ಮಧ್ಯಪ್ರದೇಶದಲ್ಲಿ 27 ಕ್ಷೇತ್ರಗಳಲ್ಲಿ ಗೆದ್ದಿತ್ತು. ಇದೇ ವೇಳೆ ಗುಜರಾತ್‌ನ 26, ರಾಜಸ್ಥಾನದ 25 ಕ್ಷೇತ್ರಗಳನ್ನು ವಶಪಡಿಸಿಕೊಂಡಿತು. ಕಾಂಗ್ರೆಸ್‌ ಪಕ್ಷವು ಯುಪಿಯಲ್ಲಿ ಕೇವಲ ಎರಡು (ಅಮೇಥಿ ಮತ್ತು ರಾಯ್ ಬರೇಲಿ) ಸ್ಥಾನಗಳನ್ನು ಗಳಿಸಲು ಸಾಧ್ಯವಾಯಿತು.

ಈ ಬಾರಿ ಕಾಂಗ್ರೆಸ್‌ ಶತಕ ಸಾಧನೆಯ ಅರ್ಥವೇನು?

ರಾಜಕೀಯ ವಿಶ್ಲೇಷಕರ ಪ್ರಕಾರ, ಕಾಂಗ್ರೆಸ್‌ ಪಕ್ಷವು 100 ಸ್ಥಾನಗಳಲ್ಲಿ ಗೆದ್ದರೂ ಅದು ರಾಷ್ಟ ರಾಜಕೀಯವನ್ನು ಅಲ್ಲಾಡಿಸಬಹುದು. ಕಾಂಗ್ರೆಸ್ ಪಕ್ಷ 90 ಸೀಟ್‌ ಗೆದ್ದರೂ, ಆಗ ಬಿಜೆಪಿ ಏಕಾಂಗಿಯಾಗಿ ಬಹುಮತ ಸಾಧಿಸಲು ಅಸಾಧ್ಯವಾಗುತ್ತದೆ. ಆಗ ಮೈತ್ರಿಯನ್ನು ನೆಚ್ಚಿಕೊಂಡು ಸರ್ಕಾರ ರಚನೆಗೆ ಮುಂದಾಗಬೇಕಾಗುತ್ತದೆ. ಆದರೆ, ಚುನಾವಣೆಗೂ ಮುನ್ನ ಹಿಡಿದ ಮೈತ್ರಿಪಕ್ಷಗಳು ಚುನಾವಣೆ ಬಳಿಕ ಕೈಕೊಡುವ ಸಾಧ್ಯತೆ ಇದೆ. ಹೀಗಾಗಿ ರಾಷ್ಟ್ರ ರಾಜಕಾರಣದ ಚಿತ್ರಣ ಬದಲಾದರೂ ಅಚ್ಚರಿ ಇಲ್ಲ.

ಲೋಕಸಭಾ ಚುನಾವಣೆ 2024ರ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ