ಕನ್ನಡ ಸುದ್ದಿ  /  ಕರ್ನಾಟಕ  /  Chikkodi Result: ಚಿಕ್ಕೋಡಿಯಲ್ಲಿ ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ‌ಗೆ ಸೋಲು; ಕಾಂಗ್ರೆಸ್‌ನ ಪ್ರಿಯಾಂಕಾ ಜಾರಕಿಹೊಳಿ ಜಯಭೇರಿ

Chikkodi Result: ಚಿಕ್ಕೋಡಿಯಲ್ಲಿ ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ‌ಗೆ ಸೋಲು; ಕಾಂಗ್ರೆಸ್‌ನ ಪ್ರಿಯಾಂಕಾ ಜಾರಕಿಹೊಳಿ ಜಯಭೇರಿ

ಚಿಕ್ಕೋಡಿ ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶ 2024: ಬೆಳಗಾವಿ ಜಿಲ್ಲೆಯ ವ್ಯಾಪ್ತಿಗೆ ಬರುವ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಹಾಲಿ ಸಂಸದ ಬಿಜೆಪಿಯ ಅಣ್ಣಾಸಾಹೇಬ್ ಜೊಲ್ಲೆ ಅಚ್ಚರಿಯ ಸೋಲು ಕಂಡಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಜಯ ಸಾಧಿಸಿದ್ದಾರೆ. Chikkodi Lok Sabha Elections Result.

ಚಿಕ್ಕೋಡಿ ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶ 2024
ಚಿಕ್ಕೋಡಿ ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶ 2024

ಲೋಕಸಭಾ ಚುನಾವಣೆ 2024ರ ಮತಎಣಿಕೆ ಪೂರ್ಣಗೊಂಡಿದ್ದು, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ (Chikkodi Lok Sabha MP Election 2024 Result) ಹೊರಬಿದ್ದಿದೆ. ‌ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆಗೆ ಅಚ್ಚರಿಯ ಸೋಲುಣಿಸಿರುವ ಯುವ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ 90834 ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕೂಡಾ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ನೇರ ಪೈಪೋಟಿ ಏರ್ಪಟ್ಟಿತ್ತು. ಬಿಜೆಪಿಯಿಂದ ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ (Annasaheb Jolle) ಸತತ ಎರಡನೇ ಅವಧಿಗೆ ಕಣಕ್ಕಿಳಿದರೆ, ಕಾಂಗ್ರೆಸ್‌ನಿಂದ ರಾಜ್ಯ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ (Priyanka Jarkiholi) ಸ್ಪರ್ಧಿಸಿದ್ದರು. ಉಭಯ ಸ್ಪರ್ಧಿಗಳಿಗೂ ಈ ಕಣ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಬೆಳಗಾವಿ ಜಿಲ್ಲೆಯ ಉತ್ತರ ಭಾಗವನ್ನು ಒಳಗೊಂಡ, ಮಹಾರಾಷ್ಟ್ರದೊಂದಿಗೆ ಹೆಚ್ಚಿನ ಗಡಿಭಾಗ ಹಂಚಿಕೊಂಡ ಚಿಕ್ಕೋಡಿ ಕ್ಷೇತ್ರ ಘಟಾನುಘಟಿ ನಾಯಕರನ್ನು ಗೆಲ್ಲಿಸಿದ ಹಿರಿಮೆ ಹೊಂದಿದೆ. ಮರಾಠಿ ಪ್ರಭಾವವಿರುವ ಚಿಕ್ಕೋಡಿ ರಾಜಕಾರಣವೇ ವಿಭಿನ್ನ. ಒಂದೇ ಸತತ ಗೆಲುವು ಕಂಡು ದಾಖಲೆ ನಿರ್ಮಿಸಿದ್ದ ಈ ಕ್ಷೇತ್ರವು, ಈ ಬಾರಿ ಕುಟುಂಬ ರಾಜಕಾರಣದ ಸ್ಪರ್ಧೆಯ ಕಣವಾಗಿ ಬದಲಾಗಿತ್ತು.

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಫಲಿತಾಂಶ‌

 

ಲೋಕಸಭಾ ಕ್ಷೇತ್ರದ ಹೆಸರು: ಚಿಕ್ಕೋಡಿ ಲೋಕಸಭಾ ಕ್ಷೇತ್ರ

  • ಪ್ರಿಯಾಂಕಾ ಜಾರಕಿಹೊಳಿ (ಕಾಂಗ್ರೆಸ್‌): 713461 ಮತಗಳು
  • ಅಣ್ಣಾಸಾಹೇಬ್ ಜೊಲ್ಲೆ(ಬಿಜೆಪಿ): 622627 ಮತಗಳು
  • ಗೆಲುವಿನ ಅಂತರ: 90834

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಗೆದ್ದ ಪ್ರಿಯಾಂಕಾ ಜಾರಕಿಹೊಳಿ ಪರಿಚಯ

ಚಿಕ್ಕೋಡಿ ಭಾಗದಲ್ಲಿ ಪ್ರಭಾವ ಹೊಂದಿರುವ ಜಾರಕಿಹೊಳಿ ಕುಟುಂಬದ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ. ಕಾಂಗ್ರೆಸ್ ಪಕ್ಷವು ಒಮ್ಮತದಿಂದ ಹೊಸ ಮುಖವನ್ನು ಕಣಕ್ಕಿಳಿಸಿತ್ತು. ಪ್ರಿಯಾಂಕಾ ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸಿ, ಕೌಟುಂಬಿಕ ಹಿನ್ನೆಲೆ ಹಾಗೂ ಪ್ರಾಬಲ್ಯದೊಂದಿಗೆ ಜಯ ಸಾಧಿಸಿದ್ದಾರೆ. ಹಾಲಿ ಸಂಸದರ ವಿರುದ್ಧ ಯಾವುದೇ ರಾಜಕೀಯ ಅನುಭವವಿಲ್ಲದೆ ಗೆದ್ದು ಅಚ್ಚರಿ ಮೂಡಿಸಿದ್ದಾರೆ. ಎಂಬಿಎ ಪದವೀಧರೆಯಾಗಿರುವ 26 ವರ್ಷದ ಪ್ರಿಯಾಂಕಾ, ಈ ಗೆಲುವಿನೊಂದಿಗೆ ಸಂಸತ್‌ ಪ್ರವೇಶಿಸಲಿರುವ ಅತ್ಯಂತ ಕಿರಿಯ ಸಂಸದರಲ್ಲಿ ಒಬ್ಬರಾಗಿದ್ದಾರೆ. ಇವರ ರಾಜಕೀಯ ಜೀವನ ಸಂಸತ್‌ ಸದಸ್ಯೆಯಾಗುವ ಮೂಲಕ ಆರಂಭವಾಗುತ್ತಿದೆ.

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಪರಿಚಯ

ಚಿಕ್ಕೋಡಿ-ಸದಲಗಾ, ನಿಪ್ಪಾಣಿ, ರಾಯಭಾಗ, ಯಮಕನಮರಡಿ, ಅಥಣಿ, ಹುಕ್ಕೇರಿ, ಕಾಗವಾಡ ಹಾಗೂ ಕುಡುಚಿ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಚಿಕ್ಕೋಡಿ ಲೋಕಸಭಾ ಕ್ಷೇತ್ರವು ಮೊದಲು ಬೆಳಗಾವಿ ಉತ್ತರ ಕ್ಷೇತ್ರವಾಗಿತ್ತು. ಆ ಬಳಿಕ ಚಿಕ್ಕೋಡಿ ಕ್ಷೇತ್ರವಾಗಿ ಮರುನಾಮಕರಣಗೊಂಡಿತು. ಈವರೆಗೂ ಇಲ್ಲಿಂದ ಎಂಟು ಸಂಸದರು ಆಯ್ಕೆಯಾಗಿದ್ದರೆ, ಬಿ ಶಂಕರಾನಂದ ಅವರು ದಾಖಲೆಯ ಸಂಖ್ಯೆಯಲ್ಲಿ ಗೆದ್ದಿದ್ದಾರೆ. ಈ ಕ್ಷೇತ್ರದಿಂದ ಸತತ 9 ಬಾರಿ ಗೆದ್ದು ಇತಿಹಾಸ ನಿರ್ಮಿಸಿದವರು ಕಾಂಗ್ರೆಸ್‌ ಹಿರಿಯ ನಾಯಕರಾಗಿದ್ದ ಶಂಕರಾನಂದ. ಸತತ 29 ವರ್ಷ ಕಾಲ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಇಂದಿರಾಗಾಂಧಿ, ರಾಜೀವ್‌ಗಾಂಧಿ ಹಾಗೂ ನರಸಿಂಹರಾವ್‌ ಅವರ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದರು. ಹಿರಿಯ ನಾಯಕ ವಿಎಲ್ ಪಾಟೀಲ್‌ ಕೂಡ ಈ ಕ್ಷೇತ್ರವನ್ನು ಒಮ್ಮೆ ಪ್ರತಿನಿಧಿಸಿ ಸಚಿವರಾಗಿದ್ದವರು.

ಹಿರಿಯ ರಾಜಕಾರಣಿ ಜಿಗಜಿಣಗಿ ಚಿಕ್ಕೋಡಿಯಿಂದ ಲೋಕಶಕ್ತಿ ಪಕ್ಷದಿಂದ ಕಣಕ್ಕಿಳಿದು ಗೆದ್ದಿದ್ದರು. ಮರು ಚುನಾವಣೆಯಲ್ಲಿ ಸಂಯುಕ್ತ ಜನತಾದಳದಿಂದ ಸ್ಪರ್ಧಿಸಿದರೆ, ನಂತರ ಬಿಜೆಪಿಯಿಂದಲೂ ಸಂಸದರಾಗಿ ಆಯ್ಕೆಯಾಗಿದ್ದರು. ಹೀಗೆ ವಿಭಿನ್ನ ಪಕ್ಷದಿಂದ ಮೂರು ಬಾರಿ ಚಿಕ್ಕೋಡಿಯಲ್ಲಿ ಗೆದ್ದ ದಾಖಲೆ ಅವರದ್ದು. ಇಲ್ಲಿ ಪ್ರಕಾಶ್‌ ಹುಕ್ಕೇರಿ ಹಾಗೂ ರಮೇಶ್‌ ಕತ್ತಿ ನಡುವೆ ಸ್ಪರ್ಧೆ ನಡೆಯುತ್ತಲೇ ಬಂದಿದೆ. ಇಬ್ಬರೂ ತಲಾ ಒಮ್ಮೆಇಲ್ಲಿ ಗೆದ್ದಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಅಣ್ಣಾಸಾಹೇಬ್‌ ಜೊಲ್ಲೆ, ಕಳೆದ ಬಾರಿಯ ಲೋಕಸಮರದಲ್ಲಿ 1,18,877 ಮತಗಳ ಅಂತರದಿಂದ ಕಾಂಗ್ರೆಸ್‌ನ ಪ್ರಕಾಶ್‌ ಹುಕ್ಕೇರಿ ಮಣಿಸಿದ್ದರು. ಅದಕ್ಕೂ ಹಿಂದೆ 2014ರಲ್ಲಿ ಪ್ರಕಾಶ್ ಹುಕ್ಕೇರಿ ಅವರು ಬಿಜೆಪಿಯ ರಮೇಶ್‌ ಕತ್ತಿ ವಿರುದ್ಧ ಕೇವಲ 3,003 ಮತಗಳ ಅತಿ ಕಡಿಮೆ ಅಂತರದಿಂದ ಗೆದ್ದಿದ್ದರು.

Disclaimer: ಗಮನಿಸಿ; ಇದು ಮತ ಎಣಿಕೆ ಕೇಂದ್ರಗಳಲ್ಲಿ ಲಭ್ಯವಿರುವ ಮಾಹಿತಿ ಆಧರಿಸಿ ಪ್ರಕಟಿಸಿದ ಬರಹ. ಚುನಾವಣಾ ಆಯೋಗವು ಅಧಿಕೃತವಾಗಿ ಅಂಕಿಅಂಶಗಳನ್ನು ಪ್ರಕಟಿಸಿದ ನಂತರ ಮತಗಳ ಸಂಖ್ಯೆ ಏರುಪೇರಾಗಬಹುದು. ಅಂತಿಮ ಫಲಿತಾಂಶದ ವಿವರವನ್ನು ಇದೇ ಬರಹದಲ್ಲಿ ಅಪ್‌ಡೇಟ್ ಮಾಡಲಾಗುವುದು.

ಲೋಕಸಭಾ ಚುನಾವಣೆ 2024ರ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಟಿ20 ವರ್ಲ್ಡ್‌ಕಪ್ 2024