ಅಮೆರಿಕ ರಾಜಕಾರಣದಲ್ಲಿ ಹಿಂಸಾಚಾರದ ಕರಿನೆರಳು: ಡೊನಾಲ್ಡ್‌ ಟ್ರಂಪ್‌ ಮೇಲೆ ಮಾತ್ರವೇ ಅಲ್ಲ, ಹಲವು ರಾಜಕೀಯ ಮುಖಂಡರನ್ನೂ ಕಾಡಿದೆ ಹಿಂಸೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಅಮೆರಿಕ ರಾಜಕಾರಣದಲ್ಲಿ ಹಿಂಸಾಚಾರದ ಕರಿನೆರಳು: ಡೊನಾಲ್ಡ್‌ ಟ್ರಂಪ್‌ ಮೇಲೆ ಮಾತ್ರವೇ ಅಲ್ಲ, ಹಲವು ರಾಜಕೀಯ ಮುಖಂಡರನ್ನೂ ಕಾಡಿದೆ ಹಿಂಸೆ

ಅಮೆರಿಕ ರಾಜಕಾರಣದಲ್ಲಿ ಹಿಂಸಾಚಾರದ ಕರಿನೆರಳು: ಡೊನಾಲ್ಡ್‌ ಟ್ರಂಪ್‌ ಮೇಲೆ ಮಾತ್ರವೇ ಅಲ್ಲ, ಹಲವು ರಾಜಕೀಯ ಮುಖಂಡರನ್ನೂ ಕಾಡಿದೆ ಹಿಂಸೆ

ಅಮೆರಿಕಾದ ಇತಿಹಾಸವನ್ನು ಒಂದು ಬಾರಿ ಅವಲೋಕಿಸಿದರೆ, ನಿರಂತರ ದಾಳಿ, ಹಿಂಸಾಚಾರಗಳು ಅಲ್ಲಿನ ಭದ್ರತಾ ಕ್ರಮಗಳನ್ನು ಬದಲಾಯಿಸುವಂತೆ ಮಾಡಿವೆ.

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಅಮೆರಿಕಾದ ಪೆನ್ಸಿಲ್ವೇನಿಯಾದ ಬಟ್ಲರ್ ಪ್ರದೇಶದಲ್ಲಿ ಜೂನ್ 13, ಭಾನುವಾರದಂದು ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ವೇಳೆ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಗುಂಡು ಹಾರಿತು. ಆ ಗುಂಡು ಟ್ರಂಪ್ ಅವರನ್ನು ಸವರಿದಂತೆ ಸಾಗಿತು. ಗುಂಡಿನ ದಾಳಿಯ ಘಟನೆಯ ಬಳಿಕ, ಟ್ರಂಪ್ ತಾನು ಕ್ಷೇಮವಾಗಿದ್ದೇನೆ ಎಂದು ಎಲ್ಲರಿಗೂ ಖಾತ್ರಿಪಡಿಸಿದರು. ಅಮೆರಿಕಾದ ಸೀಕ್ರೆಟ್ ಸರ್ವಿಸ್ ಏಜೆಂಟ್‌ಗಳು ಟ್ರಂಪ್ ಮೇಲೆ ದಾಳಿ ನಡೆಸಿದ ವ್ಯಕ್ತಿಯನ್ನು ಸ್ಥಳದಲ್ಲೇ ಹತ್ಯೆ ಮಾಡಿದ್ದಾರೆ. ಸಮಾರಂಭದಲ್ಲಿ ಭಾಗವಹಿಸಿದ್ದ ಓರ್ವ ನಾಗರಿಕನೂ ಈ ದಾಳಿಯ ವೇಳೆ ಸಾವಿಗೀಡಾಗಿದ್ದಾನೆ. ಅಧಿಕಾರಿಗಳು ಈ ಘಟನೆಯನ್ನು ಹತ್ಯಾ ಪ್ರಯತ್ನ ಎಂದೇ ಪರಿಗಣಿಸಿದ್ದಾರೆ.

ಅಮೆರಿಕಾದ ಇತಿಹಾಸವನ್ನು ಒಂದು ಬಾರಿ ಅವಲೋಕಿಸಿದರೆ, ನಿರಂತರ ದಾಳಿ, ಹಿಂಸಾಚಾರಗಳು ಅಲ್ಲಿನ ಭದ್ರತಾ ಕ್ರಮಗಳನ್ನು ಬದಲಾಯಿಸುವಂತೆ ಮಾಡಿವೆ. ಅಮೆರಿಕಾದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್, ಜೇಮ್ಸ್ ಗ್ಯಾರಿಫೀಲ್ಡ್ ಮತ್ತು ವಿಲಿಯಂ ಮೆಕ್‌ಕಿನ್ಲೀ ಅವರ ಹತ್ಯೆಗಳ ಪರಿಣಾಮವಾಗಿ, ಸೀಕ್ರೆಟ್ ಸರ್ವಿಸ್ ತಂಡ ಅಧ್ಯಕ್ಷರಿಗೆ ರಕ್ಷಣೆ ನೀಡುವುದು ಆರಂಭವಾಯಿತು. ಅಧ್ಯಕ್ಷರಾದ ಜಾನ್ ಎಫ್ ಕೆನಡಿ ಅವರ ಆಘಾತಕಾರಿ ಹತ್ಯೆಯ ಬಳಿಕ, ಅಧ್ಯಕ್ಷರ ಭದ್ರತೆ ಇನ್ನೂ ಹೆಚ್ಚಾಯಿತು.

ಅಮೆರಿಕಾದ ಮಾಜಿ ಅಧ್ಯಕ್ಷ ಗೆರಾಲ್ಡ್ ಫೋರ್ಡ್ ಅವರ ಮೇಲೆ ಕೇವಲ 18 ದಿನಗಳ ಅಂತರದಲ್ಲಿ ಎರಡು ಬಾರಿ ಹತ್ಯೆಯ ಪ್ರಯತ್ನಗಳು ನಡೆದವು. ರೊನಾಲ್ಡ್ ರೇಗನ್ ಅವರ ಅಧ್ಯಕ್ಷೀಯ ಅವಧಿಯ ಆರಂಭದಲ್ಲಿ, ಅಂದರೆ, 1981ರಲ್ಲಿ ಅವರ ಮೇಲೆ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿ, ಗಂಭೀರವಾಗಿ ಗಾಯಗೊಳಿಸಿದ್ದ. ಅಮೆರಿಕಾದ ಆಧುನಿಕ ಅಧ್ಯಕ್ಷರಲ್ಲಿ ಬಹುಪಾಲು ಜನರ ಮೇಲೆ ಹತ್ಯಾ ಪ್ರಯತ್ನಗಳು ನಡೆದಿವೆ. ಆದರೆ, ಸೀಕ್ರೆಟ್ ಸರ್ವೀಸ್ ಸಿಬ್ಬಂದಿಗಳು ಅಂತಹ ಪ್ರಯತ್ನಗಳನ್ನು ವಿಫಲಗೊಳಿಸಿದ್ದಾರೆ. ಕೆಲವೊಂದು ಬಾರಿ ಇಂತಹ ಹತ್ಯಾ ಪ್ರಯತ್ನದಲ್ಲಿ ಅಧ್ಯಕ್ಷರಿಗೆ ಗಾಯಗಳಾಗಿವೆ.

ಕಳೆದ ಜುಲೈ 13 ರ ಶನಿವಾರದಂದು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಗುಂಡಿನ ದಾಳಿ ಆಗುವ ಮುನ್ನವೇ ಬಹಳಷ್ಟು ಸಾರ್ವಜನಿಕರು ಈ ವರ್ಷದ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಸಂಭವಿಸಬಲ್ಲ ಹಿಂಸಾಚಾರಗಳ ಕುರಿತು ಆತಂಕ ವ್ಯಕ್ತಪಡಿಸಿದ್ದರು. ಬ್ಲೂಮ್‌ಬರ್ಗ್ ನ್ಯೂಸ್ ಮತ್ತು ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆಗಳು ಮೇ ತಿಂಗಳಲ್ಲಿ ರಾಜಕೀಯ ಹಿಂಸಾಚಾರದ ಕುರಿತು ಜನರ ಅಭಿಪ್ರಾಯ ಕೋರಿದ್ದವು. ಪ್ರತಿಕ್ರಿಯೆ ನೀಡಿದವರಲ್ಲಿ ಅರ್ಧದಷ್ಟು ಜನರು ಹಿಂಸಾಚಾರದ ಆತಂಕ ವ್ಯಕ್ತಪಡಿಸಿದ್ದರು. ಡೆಮಾಕ್ರಾಟ್ ಬೆಂಬಲಿಗರು ಮತ್ತು ರಿಪಬ್ಲಿಕನ್ ಬೆಂಬಲಿಗರು ಸಮಾನವಾಗಿ ಕಳವಳ ವ್ಯಕ್ತಪಡಿಸಿದ್ದರೆ, ಸ್ವತಂತ್ರ ಅಭ್ಯರ್ಥಿಗಳ ಬೆಂಬಲಿಗರು ಇನ್ನೂ ಹೆಚ್ಚಿನ ಆತಂಕ ಹೊಂದಿದ್ದರು.

ಅಮೆರಿಕಾದ ಅಧ್ಯಕ್ಷರು ಮತ್ತು ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿಗಳ‌ ಮೇಲೆ ನಡೆದ ದಾಳಿಗಳ ಕೆಲವು ಉದಾಹರಣೆಗಳು ಇಲ್ಲಿವೆ:

1) ಡೊನಾಲ್ಡ್ ಟ್ರಂಪ್: 2016ರಲ್ಲಿ ಡೊನಾಲ್ಡ್ ಟ್ರಂಪ್ ಅವರ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಸಂದರ್ಭದಲ್ಲಿ, 20 ವರ್ಷ ವಯಸ್ಸಿನ ಓರ್ವ ಬ್ರಿಟಿಷ್ ಯುವಕ ಲಾಸ್ ವೇಗಾಸ್‌ನಲ್ಲಿನ ಪ್ರಚಾರದ ವೇಳೆ ಓರ್ವ ಪೊಲೀಸ್ ಅಧಿಕಾರಿಯಿಂದ ಬಂದೂಕು ಕಸಿದುಕೊಳ್ಳಲು ಪ್ರಯತ್ನ ನಡೆಸಿದ್ದ. ಬಳಿಕ ವಿಚಾರಣೆಯ ಸಂದರ್ಭದಲ್ಲಿ, ಆತ ಅಧಿಕಾರಿಗಳ ಬಳಿ ತಾನು ಟ್ರಂಪ್ ಅವರನ್ನು ಹತ್ಯೆ ಮಾಡುವ ಉದ್ದೇಶ ಹೊಂದಿದ್ದೆ ಎಂದು ಒಪ್ಪಿಕೊಂಡಿದ್ದ. ಆ ಬಳಿಕ, ತನ್ನ ಮೇಲೆ ವಿಧಿಸಿದ್ದ ಫೆಡರಲ್ ಆರೋಪಗಳಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡು, ಆಯುಧಗಳ ಅಪರಾಧ ಮತ್ತು ಸಮಾರಂಭವೊಂದರಲ್ಲಿ ಅಪಾಯ ಅಡಚಣೆ ಉಂಟುಮಾಡುತ್ತಿದ್ದ ಆರೋಪವನ್ನು ಒಪ್ಪಿಕೊಂಡಿದ್ದ.

2) ರೇಗನ್ ಮೇಲೆ ಜಾನ್ ಹಿನ್‌ಕ್ಲೀ ದಾಳಿ: ಮಾರ್ಚ್ 30, 1981ರಂದು, ಜಾನ್ ಹಿನ್‌ಕ್ಲೀ ಜ್ಯೂನಿಯರ್ ಎಂಬ ವ್ಯಕ್ತಿ ಅಮೆರಿಕಾ ಅಧ್ಯಕ್ಷ ರೊನಾಲ್ಡ್ ರೇಗನ್ ಮೇಲೆ ಆರು ಸುತ್ತು ಗುಂಡು ಹಾರಿಸಿದ್ದ. ವಾಷಿಂಗ್‌ಟನ್‌ನಲ್ಲಿ ನಡೆದ ಈ ದಾಳಿಯಲ್ಲಿ ಅಧ್ಯಕ್ಷ ರೇಗನ್ ಮತ್ತು ಇತರ ಮೂವರು ಗಾಯಗೊಂಡಿದ್ದರು. ತುರ್ತಾಗಿ ಶಸ್ತ್ರಚಿಕಿತ್ಸೆ ನಡೆಸಿದ ಕಾರಣ ಗಂಭೀರವಾಗಿ ಗಾಯಗೊಂಡಿದ್ದ ರೇಗನ್ ಅಪಾಯದಿಂದ ಪಾರಾದರು. ದಾಳಿ ನಡೆಸಿದ್ದ ಹಿನ್‌ಕ್ಲೀಯನ್ನು ಪೊಲೀಸರು ಕ್ಷಿಪ್ರವಾಗಿ ಬಂಧಿಸಿದ್ದರು. ಆತ 2016ರ ತನಕ, ಅಂದರೆ ರೇಗನ್ ಮೃತಪಟ್ಟ ಸುಮಾರು 12 ವರ್ಷಗಳ ನಂತರವೂ ಮಾನಸಿಕ ಚಿಕಿತ್ಸಾ ಆಸ್ಪತ್ರೆಯಲ್ಲೇ ಇದ್ದ.

3) ಗೆರಾಲ್ಡ್ ಫೋರ್ಡ್ ಹತ್ಯೆಗೆ ಎರಡು ಪ್ರಯತ್ನಗಳು: ಸೆಪ್ಟೆಂಬರ್ 5, 1975ರಂದು, ಲಿನೆಟ್ಟ್ 'ಸ್ಕ್ವೀಕಿ' ಫ್ರಾಮ್ಮ್ ಎಂಬ ಮಹಿಳೆ ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೋದಲ್ಲಿ ಅಧ್ಯಕ್ಷ ಗೆರಾಲ್ಡ್ ಫೋರ್ಡ್ ಮೇಲೆ ಗುಂಡಿನ ದಾಳಿ ನಡೆಸಲು ಪ್ರಯತ್ನ ನಡೆಸಿದಳು. ಆಕೆ ಚಾರ್ಲ್ಸ್ ಮ್ಯಾನ್ಸನ್ ಎಂಬ ಓರ್ವ ಧರ್ಮಪಂಥದ (ಕಲ್ಟ್) ಮುಖಂಡನ ಅನುಯಾಯಿಯಾಗಿದ್ದಳು. ಈ ಚಾರ್ಲ್ಸ್ ಮ್ಯಾನ್ಸನ್ ಮ್ಯಾನ್ಸನ್ ಫ್ಯಾಮಿಲಿ ಕಲ್ಟ್‌ನ ಕುಖ್ಯಾತ ನಾಯಕನಾಗಿದ್ದ. ಆತ 1960ರ ದಶಕದ ಕೊನೆಯ ಭಾಗದಲ್ಲಿ ಹಲವಾರು ಭೀಕರ ಹತ್ಯೆಗಳನ್ನು ನಡೆಸಿ ಪ್ರಸಿದ್ಧನಾಗಿದ್ದ. ಫ್ರಾಮ್ಮೆ ನಡೆಸಿದ ಹತ್ಯಾ ಪ್ರಯತ್ನದ ಕೇವಲ ಮೂರು ವಾರಗಳ ಬಳಿಕ, ಸಾರಾ ಜೇನ್ ಮೂರ್ ಎಂಬ ಇನ್ನೋರ್ವ ಮಹಿಳೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಅಧ್ಯಕ್ಷ ಗೆರಾಲ್ಡ್ ಫೋರ್ಡ್ ಮೇಲೆ ಗುಂಡು ಹಾರಿಸಿದ್ದಳು. ಇವೆರಡು ಘಟನೆಗಳು ಫ್ರಾಮ್ಮೆ ಮತ್ತು ಮೂರ್ ಇಬ್ಬರೂ ಅಮೆರಿಕಾದ ಇತಿಹಾಸದಲ್ಲಿ ಮಹಿಳಾ ಹಂತಕಿಯರಾಗುವವರು ಎಂದು ಪ್ರಸಿದ್ಧರಾಗುವಂತೆ ಮಾಡಿತು.

4) ಅಧ್ಯಕ್ಷ ಜಾನ್ ಎಫ್ ಕೆನಡಿ ಹತ್ಯೆ: ನವೆಂಬರ್ 22, 1963ರಂದು ಲೀ ಹಾರ್ವೀ ಆಸ್ವಾಲ್ಡ್ ಎಂಬಾತ ಡಲ್ಲಾಸ್‌ನಲ್ಲಿ ಅಮೆರಿಕದ ಅಧ್ಯಕ್ಷ ಜಾನ್ ಎಫ್ ಕೆನೆಡಿಯವರನ್ನು ಗುಂಡಿಕ್ಕಿ ಹತ್ಯೆಗೈದ. ಈ ಘಟನೆಯ ಕುರಿತು ಇಂದಿಗೂ ಓಸ್ವಾಲ್ಡ್ ಒಬ್ಬನೇ ಈ ಹತ್ಯೆ ನಡೆಸಿದ್ದನೇ ಅಥವಾ ಅವನೊಡನೆ ಇನ್ನಷ್ಟು ಸಹಚರರು ನೆರವು ನೀಡಿದ್ದರೆ ಎಂಬ ಚರ್ಚೆಗಳು ನಡೆಯುತ್ತಿವೆ. ಕೆನೆಡಿ ಹತ್ಯೆಯ ಎರಡು ದಿನಗಳ ಬಳಿಕ, ಓಸ್ವಾಲ್ಡ್‌ನನ್ನು ಜ್ಯಾಕ್ ರೂಬಿ ಎಂಬ ಹೆಸರಿನ ನೈಟ್ ಕ್ಲಬ್ ಒಂದರಲ್ಲಿ ಹತ್ಯೆಗೈಯಲಾಯಿತು.

5) ರಾಬರ್ಟ್ ಎಫ್ ಕೆನೆಡಿ ಕೊಲೆ: ಜೂನ್ 5, 1968ರಂದು ಸಿರ್ಹಾನ್ ಎಂಬಾತ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿದ್ದ ರಾಬರ್ಟ್ ಎಫ್ ಕೆನೆಡಿಯವರನ್ನು ಲಾಸ್ ಏಂಜಲೀಸ್‌ನಲ್ಲಿ ಗುಂಡು ಹಾರಿಸಿ ಕೊಲೆ ಮಾಡಿದ್ದ. ಈ ಘಟನೆ, ರಾಬರ್ಟ್ ಎಫ್ ಕೆನೆಡಿಯವರ ಅಣ್ಣ, ಜಾನ್ ಎಫ್ ಕೆನೆಡಿಯವರ ಹತ್ಯೆ ನಡೆದ ಐದು ವರ್ಷಗಳಿಗೂ ಕಡಿಮೆ ಅವಧಿಯಲ್ಲಿ ನಡೆದಿತ್ತು. ಕೊಲೆಗಾರ ಸಿರ್ಹಾನ್ ಜೀವಾವಧಿ ಜೈಲು ಶಿಕ್ಷೆಗೆ ಗುರಿಯಾದ. ರಾಬರ್ಟ್ ಎಫ್ ಕೆನೆಡಿಯವರ ಮಗ, ರಾಬರ್ಟ್ ಎಫ್ ಕೆನೆಡಿ ಜ್ಯೂನಿಯರ್ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

6) ಥಿಯೋಡರ್ ರೂಸ್‌ವೆಲ್ಟ್ ಹತ್ಯಾ ಪ್ರಯತ್ನ: ಅಕ್ಟೋಬರ್ 14, 1912ರಂದು ಮಾಜಿ ಅಧ್ಯಕ್ಷ ಥಿಯೋಡರ್ ರೂಸ್‌ವೆಲ್ಟ್ ಅವರು ಮರಳಿ ಅಧ್ಯಕ್ಷರಾಗಿ ಶ್ವೇತ ಭವನಕ್ಕೆ ಬರುವ ಉದ್ದೇಶದಿಂದ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದರು. ಅವರು ಮಿಲ್ವಾವುಕೀ ಎಂಬಲ್ಲಿ ಚುನಾವಣಾ ಪ್ರಚಾರ ಭಾಷಣ ನಡೆಸುತ್ತಿದ್ದಾಗ ಅವರ ಮೇಲೆ ಗುಂಡು ಹಾರಿಸಲಾಯಿತು. ಆದರೆ ಆ ಗುಂಡು ರೂಸ್‌ವೆಲ್ಟ್ ಹಿಡಿದಿದ್ದ 50 ಪುಟಗಳ ಭಾಷಣದ ಪ್ರತಿಯನ್ನು ತೂರಿಕೊಂಡು, ಬಳಿಕ ಅವರ ಜೇಬಿನಲ್ಲಿದ್ದ ಕನ್ನಡಕದ ಪೆಟ್ಟಿಗೆಗೆ ಅಪ್ಪಳಿಸಿ, ರೂಸ್‌ವೆಲ್ಟ್ ಅವರಿಗೆ ತಗುಲಿತು. ಗಾಯಗೊಂಡರೂ ರೂಸ್‌ವೆಲ್ಟ್ ತನ್ನ ಭಾಷಣ ಮುಂದುವರಿಸಿದರು. ಬಳಿಕ ಚಿಕಿತ್ಸೆ ಪಡೆದು ಗಾಯದಿಂದ ಚೇತರಿಸಿಕೊಂಡರು. ಬಳಿಕ ನಡೆದ ಚುನಾವಣೆಯಲ್ಲಿ ರೂಸ್‌ವೆಲ್ಟ್ ಅವರು ವುಡ್ರೋ ವಿಲ್ಸನ್ ಅವರೆದುರು ಸೋಲು ಅನುಭವಿಸಿದರು. ರೂಸ್‌ವೆಲ್ಟ್ ಮೇಲೆ ಗುಂಡಿನ ದಾಳಿ ನಡೆಸಿದ ಜಾನ್ ಶ್ರಾಂಕ್ ಎಂಬ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದು, ಆತನನ್ನು ಆತನ ಸಾವಿನ ತನಕವೂ ಆಸ್ಪತ್ರೆಯಲ್ಲಿ ಇಡಲಾಗಿತ್ತು.

7) ಅಧ್ಯಕ್ಷ ಮೆಕ್‌ಕಿನ್ಲೀ ಹತ್ಯೆ: ಸೆಪ್ಟೆಂಬರ್ 6, 1901ರಂದು, ಅಮೆರಿಕಾ ಅಧ್ಯಕ್ಷರಾಗಿದ್ದ ವಿಲಿಯಂ ಮೆಕ್‌ಕಿನ್ಲೀ ಅವರ ಮೇಲೆ ನ್ಯೂಯಾರ್ಕ್‌ನ ಬಫೆಲೋ ಎಂಬಲ್ಲಿ ಗುಂಡಿನ ದಾಳಿ ನಡೆಯಿತು. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೆಕ್‌ಕಿನ್ಲೀ ಅವರು ಬಳಿಕ ಸಾವಿಗೀಡಾದರು. ಅವರ ಸಾವಿನ ಬಳಿಕ, ಉಪಾಧ್ಯಕ್ಷರಾಗಿದ್ದ ಥಿಯೋಡರ್ ರೂಸ್‌ವೆಲ್ಟ್ ಅವರು ಅಮೆರಿಕಾದ ಅಧ್ಯಕ್ಷರಾದರು. ಕೊಲೆಗಾರ ಲಿಯಾನ್ ಜೋಲ್ಗೋಸ್ ಅಪರಾಧಿ ಎಂದು ಸಾಬೀತಾಗಿ, ಮರಣದಂಡನೆಗೆ ಗುರಿಯಾದ.

8) ಅಧ್ಯಕ್ಷ ಗಾರ್‌ಫೀಲ್ಡ್ ಹತ್ಯೆ: ಜುಲೈ 2, 1881ರಂದು ಅಮೆರಿಕಾದ ಅಧ್ಯಕ್ಷ ಜೇಮ್ಸ್ ಎ ಗಾರ್‌ಫೀಲ್ಡ್ ಮೇಲೆ ವಾಷಿಂಗ್ಟನ್ ಡಿಸಿಯಲ್ಲಿ ಗುಂಡಿನ ದಾಳಿ ನಡೆಯಿತು. ಗಂಭೀರವಾಗಿ ಗಾಯಗೊಂಡಿದ್ದ ಗಾರ್‌ಫೀಲ್ಡ್ ಅವರು ಎರಡು ತಿಂಗಳ ಬಳಿಕ ಸಾವನ್ನಪ್ಪಿದರು. ಗಾರ್‌ಫೀಲ್ಡ್ ಅವರ ಮೇಲೆ ದಾಳಿ ನಡೆಸಿದ ಚಾರ್ಲ್ಸ್‌ ಗೈಟೀ ಎಂಬಾತ ಓರ್ವ ಬರಹಗಾರ, ಮತ್ತು ವಕೀಲನಾಗಿದ್ದ. ಆತ ಅಪರಾಧಿ ಎಂದು ಸಾಬೀತಾದ ಬಳಿಕ, ಮರಣದಂಡನೆ ಶಿಕ್ಷೆಗೆ ಗುರಿಯಾದ.

9) ಅಧ್ಯಕ್ಷ ಅಬ್ರಹಾಂ ಲಿಂಕನ್ ಹತ್ಯೆ: ಎಪ್ರಿಲ್ 14, 1865ರಂದು, ಅಮೆರಿಕಾ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರನ್ನು ವಾಷಿಂಗ್ಟನ್ ಡಿಸಿಯಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಯಿತು. ಲಿಂಕನ್‌ರನ್ನು ಪ್ರಸಿದ್ಧ ನಟ, ಕಾನ್ಫೆಡರೇಟ್ ಬೆಂಬಲಿಗ, ಜಾನ್ ವಿಲ್ಕ್ಸ್ ಬೂತ್ ಎಂಬಾತ ಕೊಲೆಗೈದಿದ್ದ. ಎರಡು ವಾರಗಳ ತೀವ್ರ ಶೋಧದ ಬಳಿಕ, ಬೂತ್‌ನನ್ನು ಹತ್ಯೆ ಮಾಡಲಾಯಿತು.

ಬರಹ: ಗಿರೀಶ್ ಲಿಂಗಣ್ಣ, ರಕ್ಷಣಾ ಮತ್ತು ಬಾಹ್ಯಾಕಾಶ ವಿಶ್ಲೇಶಕರು

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.