ಆದಾಯ ತೆರಿಗೆ ಲೆಕ್ಕಾಚಾರ; 5 ಲಕ್ಷ ರೂಪಾಯಿ ಆದಾಯಕ್ಕೆ ಎಷ್ಟು ತೆರಿಗೆ ಕಟ್ಟಬೇಕು, ಪೂರ್ಣ ವಿನಾಯಿತಿ ಸಿಗಬಹುದಾ, ಇಲ್ಲಿದೆ ವಿವರ
Jul 24, 2024 03:19 PM IST
ಆದಾಯ ತೆರಿಗೆ ಲೆಕ್ಕಾಚಾರ; 5 ಲಕ್ಷ ರೂಪಾಯಿ ಆದಾಯಕ್ಕೆ ಎಷ್ಟು ತೆರಿಗೆ ಕಟ್ಟಬೇಕು, ಪೂರ್ಣ ವಿನಾಯಿತಿ ಸಿಗಬಹುದಾ ಎಂಬುದರ ವಿವರ.
ಕೇಂದ್ರ ಬಜೆಟ್ 2024 25 ಮಂಡನೆಯಾದ ಬಳಿಕ, ಹೊಸ ತೆರಿಗೆ ವ್ಯವಸ್ಥೆಯ ಆದಾಯ ತೆರಿಗೆ ಸ್ಲ್ಯಾಬ್‌ಗಳು ಚರ್ಚೆಗೆ ಒಳಗಾಗಿವೆ. ಆದಾಯ ತೆರಿಗೆ ಲೆಕ್ಕಾಚಾರ ಪ್ರಕಾರ, 5 ಲಕ್ಷ ರೂಪಾಯಿ ಆದಾಯಕ್ಕೆ ಎಷ್ಟು ತೆರಿಗೆ ಕಟ್ಟಬೇಕು, ಪೂರ್ಣ ವಿನಾಯಿತಿ ಸಿಗಬಹುದಾ, ಇಲ್ಲಿದೆ ಅದಕ್ಕೆ ಸಂಬಂಧಿಸಿದ ವಿವರ.
ನವದೆಹಲಿ: ಮೋದಿ 3.0 ಆಡಳಿತದ ಮೊದಲ ಪೂರ್ಣ ಪ್ರಮಾಣದ ಬಜೆಟ್ ನಿನ್ನೆ (ಜುಲೈ 23) ಮಂಡನೆಯಾಗಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸತತ 7ನೇ ಬಜೆಟ್ ಮಂಡಿಸಿದರು. ಈ ಬಜೆಟ್ ಘೋಷಣೆಗಳು ಕೂಡಲೇ ಅನ್ವಯವಾಗುತ್ತಿದ್ದು, ಹೊಸ ಆದಾಯ ತೆರಿಗೆ ವ್ಯವಸ್ಥೆಗೆ ಸೇರ್ಪಡೆಯಾದವರಿಗೆ ಈ ಬಾರಿ ಕೆಲ ಅನುಕೂಲಗಳು ಘೋಷಣೆಯಾಗಿವೆ. ಹಳೆಯ ಆದಾಯ ತೆರಿಗೆ ಪದ್ಧತಿಯ ಆದಾಯ ತೆರಿಗೆ ದರಗಳಲ್ಲಿ ಬದಲಾವಣೆ ಇಲ್ಲ. ಆದರೆ, ಹೊಸ ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ಪ್ರಮುಖ ಬದಲಾವಣೆಗಳಾಗಿವೆ.
ಹೊಸ ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಈ ವರ್ಷದಿಂದ ವಾರ್ಷಿಕ 3 ಲಕ್ಷ ರೂಪಾಯಿ ಆದಾಯ ಹೊಂದಿದವರಿಗೆ ತೆರಿಗೆ ಇಲ್ಲ. 3 ಲಕ್ಷ ರೂಪಾಯಿಯಿಂದ 7 ಲಕ್ಷ ರೂಪಾಯಿ ತನಕದ ವಾರ್ಷಿಕ ಆದಾಯಕ್ಕೆ 5%, 7 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿ ವಾರ್ಷಿಕ ಆದಾಯಕ್ಕೆ 10%, 10 ಲಕ್ಷ ರೂಪಾಯಿಯಿಂದ 12 ಲಕ್ಷ ರೂಪಾಯಿ ವಾರ್ಷಿಕ ಆದಾಯಕ್ಕೆ 15 %, 12 ಲಕ್ಷ ರೂಪಾಯಿಯಿಂದ 15 ಲಕ್ಷ ರೂಪಾಯಿ ಆದಾಯಕ್ಕೆ 20 % ಮತ್ತು 15 ಲಕ್ಷ ರೂಪಾಯಿ ಮೇಲ್ಪಟ್ಟು ಆದಾಯಕ್ಕೆ 30% ತೆರಿಗೆ ದರ ವಿಧಿಸಲಾಗುತ್ತದೆ.
ನಿಮ್ಮ ಆದಾಯ 5 ಲಕ್ಷ ರೂಪಾಯಿ ಆದರೆ ತೆರಿಗೆ ಎಷ್ಟು ಪಾವತಿಸಬೇಕು?
ಹಿಂದೂಸ್ತಾನ್ ಟೈಮ್ಸ್ ಕನ್ನಡದ ಸೋದರ ತಾಣ ಲೈವ್ ಮಿಂಟ್‌ಗೆ ವಿಭವನಂಗಲ್ ಅನುಕುಲಂಕರ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕ ಸಿದ್ಧಾರ್ಥ್ ಮೌರ್ಯ ವಿವರಿಸಿದ ಪ್ರಕಾರ, 5 ಲಕ್ಷ ರೂಪಾಯಿ ವಾರ್ಷಿಕ ಆದಾಯ ಇರುವಂಥವರು ಈಗ 10,000 ರೂಪಾಯಿ ತೆರಿಗೆ ಪಾವತಿಸಬೇಕಾಗುತ್ತದೆ.
ಈ ಪ್ರಗತಿಪರ ತೆರಿಗೆ ರಚನೆಯು ಕಡಿಮೆ ಆದಾಯದ ಹೊಂದಿರುವವರು ಕಡಿಮೆ ತೆರಿಗೆಯನ್ನು ಪಾವತಿಸುವುದು ಸಾಧ್ಯವಾಗುವಂತೆ ಮಾಡಿದೆ ಎಂದು ಮೌರ್ಯ ವಿವರಿಸಿದ್ದಾರೆ.
ತೆರಿಗೆ ಸ್ಲ್ಯಾಬ್‌ಗಳನ್ನು ಬದಲಾಯಿಸುವುದರ ಹೊರತಾಗಿ ಸರ್ಕಾರವು ಹಿಂದೆ ಇದ್ದ 50,000 ರೂಪಾಯಿ ಪ್ರಮಾಣಿತ ಕಡಿತ (ಸ್ಟ್ಯಾಂಡರ್ಡ್ ಡಿಡಕ್ಷನ್) ವನ್ನು 75,000 ರೂಪಾಯಿಗೆ ಏರಿಸಿದೆ. ಸ್ಟ್ಯಾಂಡರ್ಡ್ ಡಿಡಕ್ಷನ್ ಎನ್ನುವುದು ಅವರ ತೆರಿಗೆಯ ಆದಾಯಕ್ಕೆ ಬರುವ ಮೊದಲು ಸಂಬಳ ಪಡೆಯುವ ವ್ಯಕ್ತಿಗಳು ಮತ್ತು ಪಿಂಚಣಿದಾರರ ಒಟ್ಟು ಆದಾಯದಿಂದ ನಿಗದಿತ ಮೊತ್ತವನ್ನು ಕಡಿತಗೊಳಿಸುವುದಾಗಿದೆ.
ಆದಾಗ್ಯೂ, ಹೊಸ ತೆರಿಗೆ ಪದ್ಧತಿಯಲ್ಲಿ ಆದಾಯ ತೆರಿಗೆ ರಿಯಾಯಿತಿ ಮಿತಿಯನ್ನು 5 ಲಕ್ಷದಿಂದ 7 ಲಕ್ಷಕ್ಕೆ ಏರಿಸಲಾಗಿದೆ. ಇದಲ್ಲದೆ, 50,000 ರೂಪಾಯಿ ಸ್ಟ್ಯಾಂಡರ್ಡ್ ಡಿಡಕ್ಷನ್ 75,000 ರೂಪಾಯಿಗೆ ಏರಿದೆ. ಪರಿಣಾಮ, 5 ಲಕ್ಷ ರೂಪಾಯಿ ಆದಾಯ ಹೊಂದಿದವರು ತೆರಿಗೆ ಪಾವತಿಸಬೇಕಾಗಿ ಬರುವುದಿಲ್ಲ.
ವಾರ್ಷಿಕ ಆದಾಯ: 5 ಲಕ್ಷ ರೂಪಾಯಿ
ಪ್ರಮಾಣಿತ ಕಡಿತ: 75,000 ರೂಪಾಯಿ
ಒಟ್ಟು ತೆರಿಗೆಯ ಆದಾಯ: 4.25 ಲಕ್ಷ ರೂ.
3 ಲಕ್ಷ ರೂಪಾಯಿ ತನಕದ ಆದಾಯಕ್ಕೆ ತೆರಿಗೆ ಇಲ್ಲ
3,00,001 ರೂಪಾಯಿಯಿಂದ 7,00,000 ರೂಪಾಯಿ ಆದಾಯಕ್ಕೆ ಶೇಕಡ 5 ತೆರಿಗೆ ಅಥವಾ 20,000 ರೂಪಾಯಿ ತೆರಿಗೆ
ಸೆಕ್ಷನ್ 87 ಎ ಅಡಿಯಲ್ಲಿ ರಿಯಾಯಿತಿ - 25,000 ರೂಪಾಯಿ ಲಭ್ಯವಿದೆ.
ಇದರ ಅರ್ಥ ತೆರಿಗೆ ರಿಯಾಯಿತಿಯ ಮೊತ್ತವು ತೆರಿಗೆಗಿಂತ ಹೆಚ್ಚಿದೆ. ಅಂದರೆ ಐಟಿ ರಿಟರ್ನ್ಸ್ ಸಲ್ಲಿಕೆ ಮಾಡಿದರೆ ರೀಫಂಡ್ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ.
ಹೊಸ ಆದಾಯ ತೆರಿಗೆ ವ್ಯವಸ್ಥೆಯಲ್ಲಿ 17,500 ರೂಪಾಯಿ ಉಳಿತಾಯ ಹೇಗೆ?
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣದಲ್ಲಿ ಪರಿಷ್ಕೃತ ಆದಾಯ ತೆರಿಗೆ ಸ್ಲ್ಯಾಬ್ ಕಾರಣ ತೆರಿಗೆದಾರರು ವಿಶೇಷವಾಗಿ ವೇತನದಾರರಿಗೆ 17,500 ರೂಪಾಯಿ ಉಳಿತಾಯವಾಗಲಿದೆ ಎಂದು ಹೇಳಿದ್ದರು. ಆದರೆ, ಆದಾಯ ತೆರಿಗೆ ಹೊಸ ವ್ಯವಸ್ಥೆಯಲ್ಲಿ 17,500 ರೂಪಾಯಿ ಉಳಿತಾಯ ಹೇಗೆ ಇಲ್ಲಿದೆ ಆ ಲೆಕ್ಕಾಚಾರ.
ಕುಟುಂಬ ಪಿಂಚಣಿಯಲ್ಲಿನ ಕಡಿತವನ್ನು ಪಿಂಚಣಿದಾರರಿಗೆ 15,000 ರೂಪಾಯಿಯಿಂದ 25,000 ರೂಪಾಯಿಗೆ ಹೆಚ್ಚಿಸಲು ಸರ್ಕಾರ ಮುಂದಾಗಿದೆ. ಪ್ರಸ್ತಾವಿತ ಬದಲಾವಣೆಯ ಉದ್ದೇಶವು ಉತ್ತಮ ನಿವೃತ್ತಿಯ ನಂತರದ ಆರ್ಥಿಕ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಕುಟುಂಬ ಪಿಂಚಣಿಯನ್ನು ಪಡೆಯುವ ವ್ಯಕ್ತಿಗಳಿಗೆ ಮುಕ್ತಿ ನೀಡುವುದಾಗಿದೆ. ಆದಾಯ ತೆರಿಗೆ ಪದ್ಧತಿಯಲ್ಲಿನ ಬದಲಾವಣೆಗಳಿಂದಾಗಿ ಸರ್ಕಾರವು 7,000 ಕೋಟಿ ರೂಪಾಯಿ ಆದಾಯವನ್ನು ಬಿಟ್ಟುಬಿಡುತ್ತದೆ ಎಂದು ಹಣಕಾಸು ಸಚಿವರು ಹೇಳಿದರು.
(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆ ಎಚ್‌ಟಿ ಕನ್ನಡ ಬೆಸ್ಟ್. ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿ ರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲು kannada.hindustantimes.com/nation-and-world ಕ್ಕೆ ಭೇಟಿ ನೀಡಿ.)