ಪ್ರಮಾಣಿತ ಕಡಿತ ಎಂದರೇನು, 25000 ರೂಪಾಯಿ ಹೆಚ್ಚಳ ಯಾರಿಗೆ ಹೇಗೆ ಅನ್ವಯ- ಇಲ್ಲಿದೆ ಸರಳ ಲೆಕ್ಕಾಚಾರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಪ್ರಮಾಣಿತ ಕಡಿತ ಎಂದರೇನು, 25000 ರೂಪಾಯಿ ಹೆಚ್ಚಳ ಯಾರಿಗೆ ಹೇಗೆ ಅನ್ವಯ- ಇಲ್ಲಿದೆ ಸರಳ ಲೆಕ್ಕಾಚಾರ

ಪ್ರಮಾಣಿತ ಕಡಿತ ಎಂದರೇನು, 25000 ರೂಪಾಯಿ ಹೆಚ್ಚಳ ಯಾರಿಗೆ ಹೇಗೆ ಅನ್ವಯ- ಇಲ್ಲಿದೆ ಸರಳ ಲೆಕ್ಕಾಚಾರ

ಕೇಂದ್ರ ಬಜೆಟ್‌ 2024ರಲ್ಲಿ ಪ್ರಮಾಣಿತ ಕಡಿತ (ಸ್ಟ್ಯಾಂಡರ್ಡ್‌ ಡಿಡಕ್ಷನ್‌) ಮಿತಿಯನ್ನು 25000 ರೂಪಾಯಿ ಹೆಚ್ಚಳ ಮಾಡಲಾಗಿದೆ. ಹೊಸ ತೆರಿಗೆ ಪದ್ಧತಿ ಅನುಸರಿಸುವವರಿಗೆ ಇದು ಅನ್ವಯ. ಹಾಗಾದರೆ, ಪ್ರಮಾಣಿತ ಕಡಿತ ಎಂದರೇನು, 25000 ರೂಪಾಯಿ ಹೆಚ್ಚಳ ಯಾರಿಗೆ ಹೇಗೆ ಅನ್ವಯ ಎಂಬುದರ ಸರಳ ಲೆಕ್ಕಾಚಾರ ಇಲ್ಲಿದೆ.

ಪ್ರಮಾಣಿತ ಕಡಿತ ಎಂದರೇನು, 25000 ರೂಪಾಯಿ ಹೆಚ್ಚಳ ಯಾರಿಗೆ ಹೇಗೆ ಅನ್ವಯ- ಇಲ್ಲಿದೆ ಸರಳ ಲೆಕ್ಕಾಚಾರ. (ಸಾಂಕೇತಿಕ ಚಿತ್ರ)
ಪ್ರಮಾಣಿತ ಕಡಿತ ಎಂದರೇನು, 25000 ರೂಪಾಯಿ ಹೆಚ್ಚಳ ಯಾರಿಗೆ ಹೇಗೆ ಅನ್ವಯ- ಇಲ್ಲಿದೆ ಸರಳ ಲೆಕ್ಕಾಚಾರ. (ಸಾಂಕೇತಿಕ ಚಿತ್ರ)

ನವದೆಹಲಿ: ಲೋಕಸಭೆಯಲ್ಲಿ ಮಂಗಳವಾರ (ಜುಲೈ 23) ಪ್ರಸಕ್ತ ವರ್ಷದ ಅಂದರೆ 2024-25ರ ಪೂರ್ಣ ಬಜೆಟ್ ಅನ್ನು ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಹೊಸ ಆದಾಯ ತೆರಿಗೆ ವ್ಯವಸ್ಥೆಯಲ್ಲಿ ವೇತನದಾರರ ಉದ್ಯೋಗಿಗಳಿಗೆ ಪ್ರಮಾಣಿತ ಕಡಿತ (ಸ್ಟ್ಯಾಂಡರ್ಡ್ ಡಿಡಕ್ಷನ್) ಅನ್ನು 50,000 ರೂಪಾಯಿಗಳಿಂದ 75,000 ರೂಪಾಯಿಗಳಿಗೆ ಹೆಚ್ಚಿಸಲಾಗುವುದು ಎಂದು ಹೇಳಿದರು. ಇದು ಈ ವರ್ಷದಿಂದಲೇ ಅನ್ವಯವಾಗುತ್ತಿದೆ.

ಹೀಗಾಗಿ ಪ್ರಮಾಣಿತ ಕಡಿತ (ಸ್ಟ್ಯಾಂಡರ್ಡ್ ಡಿಡಕ್ಷನ್) ಈಗ ತೆರಿಗೆದಾರರ ನಡುವೆ ಬಹುಚರ್ಚೆಯ ವಿಚಾರ. ಇದು ಯಾರಿಗೆ ಅನ್ವಯ, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಇದನ್ನು ಹೇಗೆ ಕ್ಲೈಮ್ ಮಾಡುವುದು ಎಂಬಿತ್ಯಾದಿ ವಿಚಾರಗಳು ಚರ್ಚೆಯಾಗುತ್ತಿವೆ.

ವಿತ್ತ ಸಚಿವರು ಬಜೆಟ್ ಭಾಷಣದಲ್ಲಿ ಹೇಳಿದ್ದು

ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡುವವರಿಗೆ ಮಾಡಲು ಎರಡು ಪ್ರಕಟಣೆಗಳು. ಮೊದಲನೆಯದಾಗಿ, ಸಂಬಳದ ಉದ್ಯೋಗಿಗಳಿಗೆ ಪ್ರಮಾಣಿತ ಕಡಿತವನ್ನು ಈಗ ಇರುವ 50,000 ರೂಪಾಯಿಯಿಂದ 75,000 ರೂಪಾಯಿಗೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ಅದೇ ರೀತಿ, ಪಿಂಚಣಿದಾರರಿಗೆ ಕುಟುಂಬ ಪಿಂಚಣಿ ಮೇಲಿನ ಕಡಿತವನ್ನು 15,000 ರೂಪಾಯಿಯಿಂದ 25,000 ರೂಪಾಯಿಗೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ಇದು ಸುಮಾರು ನಾಲ್ಕು ಕೋಟಿ ವೇತನದಾರರು ಮತ್ತು ಪಿಂಚಣಿದಾರರಿಗೆ ಪರಿಹಾರವನ್ನು ನೀಡುತ್ತದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ತಿಳಿಸಿದ್ದರು.

ಸ್ಟ್ಯಾಂಡರ್ಡ್ ಡಿಡಕ್ಷನ್ ಅಥವಾ ಪ್ರಮಾಣಿತ ಕಡಿತ ಎಂದರೇನು?;

ಹೊಸ ತೆರಿಗೆ ಪದ್ಧತಿಯಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯ ಕುರಿತು ಕಿಂಗ್ ಸ್ಟಬ್ & ಕಾಸಿವ್ ಅಡ್ವೋಕೇಟ್ಸ್ & ಅಡ್ವೋಕೇಟ್ಸ್‌ನ ವ್ಯವಸ್ಥಾಪಕ ಪಾಲುದಾರ ಜಿದೇಶ್ ಕುಮಾರ್, “ಕೇಂದ್ರ ಸರ್ಕಾರದ ಈ ನಿರ್ಧಾರವು ಕಾರ್ಮಿಕ ವರ್ಗ, ವೇತನದಾರ ಉದ್ಯೋಗಿಗಳಿಗೆ ಬೆಂಬಲ ಸೂಚಿಸುವ ನಿರ್ಣಾಯಕ ಪರಿಹಾರ ಕ್ರಮವಾಗಿದೆ. ಕಷ್ಟಪಟ್ಟು ದುಡಿಯುವ ವ್ಯಕ್ತಿಗಳನ್ನು ಬೆಂಬಲಿಸಲು ಬಲವಾದ ಬದ್ಧತೆಯನ್ನು ತೋರಿಸುತ್ತವೆ. ಒಟ್ಟಾರೆಯಾಗಿ ಕಾರ್ಮಿಕ ವರ್ಗ, ಮಹಿಳೆಯರು, ಉದ್ಯಮಿಗಳು ಮತ್ತು ಎಂಎಸ್‌ಎಂಇಗಳಿಗೆ ಬಜೆಟ್ ಪ್ರಯೋಜನಗಳನ್ನು ಪ್ರಶಂಸಿಸುತ್ತೇನೆ" ಎಂದು ಹೇಳಿದ್ದಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡದ ಸೋದರ ತಾಣ ಲೈವ್ ಮಿಂಟ್‌ ಉಲ್ಲೇಖಿಸಿದೆ.

ಪ್ರಮಾಣಿತ ಕಡಿತ (ಸ್ಟ್ರ್ಯಾಂಡರ್ಡ್‌ ಡಿಡಕ್ಷನ್‌) ಎಂದರೆ, “ವೇತನಗಳು (Salaries)” ಎಂಬ ವಿಭಾಗದಲ್ಲಿ ವರ್ಗೀಕರಿಸಲಾದ ಯಾವುದೇ ತೆರಿಗೆ ಆದಾಯದ ಮೇಲೆ ವೇತನ ಪಡೆಯು ಉದ್ಯೋಗಿಗಳು ಆಯಾ ಆರ್ಥಿಕ ವರ್ಷದಲ್ಲಿ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡುವಾಗ ಯಾವುದೇ ದಾಖಲೆಗಳನ್ನು ಒದಗಿಸದೆ ಘೋಷಿಸಬಹುದಾದ ಮೊತ್ತವನ್ನು ಪ್ರಮಾಣಿತ ಕಡಿತ ಎನ್ನುತ್ತಾರೆ. ಆದಾಯ ತೆರಿಗೆ ಕಾಯಿದೆಯ ಇತರ ವಿಭಾಗಗಳ ಅಡಿಯಲ್ಲಿ ಕಡಿತಗಳಿಗೆ ಅರ್ಹವಲ್ಲದ ವೆಚ್ಚಗಳನ್ನು ಸರಿದೂಗಿಸಲು ಇದನ್ನು ಒದಗಿಸಲಾಗಿದೆ.

ಉದಾಹರಣೆಗೆ, ಹಳೆಯ ತೆರಿಗೆ ಪದ್ಧತಿಯಲ್ಲಿ ಶೇಕಡ 30ರ ತೆರಿಗೆ ಪಾವತಿಸುವವರಿಗೆ ಈಗ ಚಾಲ್ತಿಯಲ್ಲಿರುವ 50,000 ರೂಪಾಯಿ ಸ್ಟ್ಯಾಂಡರ್ಡ್ ಡಿಡಕ್ಷನ್ ಅಥವಾ ಪ್ರಮಾಣಿತ ಕಡಿತವು ತೆರಿಗೆಯಲ್ಲಿ 15,000 ರೂಪಾಯಿ ತನಕ ಉಳಿತಾಯ ಮಾಡಲು ನೆರವಾಗುತ್ತದೆ.

ಪ್ರಮಾಣಿತ ಕಡಿತ (ಸ್ಟ್ಯಾಂಡರ್ಡ್ ಡಿಡಕ್ಷನ್) ಹೇಗಿರುತ್ತದೆ ಎಂಬುದಕ್ಕೆ ಉದಾಹರಣೆ ಇದು

ಆದಾಯ ತೆರಿಗೆ ಲೆಕ್ಕಾಚಾರದ ವಿಷಯಮೊತ್ತ
ಒಟ್ಟು ವೇತನ ಆದಾಯ 8 ಲಕ್ಷ ರೂಪಾಯಿ
ಕಳೆಯ ಬೇಕಾದ್ದು - ಪ್ರಮಾಣಿತ ಕಡಿತ (ಸ್ಟ್ಯಾಂಡರ್ಡ್ ಡಿಡಕ್ಷನ್)50,000 ರೂಪಾಯಿ
ನಿವ್ವಳ ವೇತನ ಅಥವಾ ತೆರಿಗೆ ಆದಾಯ 7.5 ಲಕ್ಷ ರೂಪಾಯಿ
ಕಳೆಯ ಬೇಕಾದ್ದು - ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಪ್ರಕಾರ1.5 ಲಕ್ಷ ರೂಪಾಯಿ
ನಿವ್ವಳ ತೆರಿಗೆ ಆದಾಯ6 ಲಕ್ಷ ರೂಪಾಯಿ

ಅರುಣ್ ಜೇಟ್ಲಿ ಅವರು ವಿತ್ತ ಸಚಿವರಾಗಿದ್ದ ಸಂದರ್ಭದಲ್ಲಿ ಅಂದರೆ 2018 ರ ಬಜೆಟ್‌ನಲ್ಲಿ ಪ್ರಮಾಣಿತ ಕಡಿತ (ಸ್ಟ್ಯಾಂಡರ್ಡ್ ಡಿಡಕ್ಷನ್) ಅನ್ನು ಮೊದಲು ಪರಿಚಯಿಸಲಾಗಿತ್ತು. ಅಂದು ಈ ಮೊತ್ತ 40,000 ರೂಪಾಯಿ ಇತ್ತು. 2019 ರ ಬಜೆಟ್‌ನಲ್ಲಿ 50,000 ರೂಪಾಯಿಗೆ ಏರಿಸಲಾಗಿತ್ತು.

(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆ ಎಚ್‌ಟಿ ಕನ್ನಡ ಬೆಸ್ಟ್‌. ತಾಜಾ ವಿದ್ಯಮಾನ ಮತ್ತು ಬಜೆಟ್‌ ವಿವರಣೆ, ರಾಜಕೀಯ ವಿಶ್ಲೇಷಣೆಗಳಿಗಾಗಿ kannada.hindustantimes.com/nation-and-world ಕ್ಕೆ ಭೇಟಿ ನೀಡಿ.)

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.