Ganesha Festival; ಮುಂಬಯಿಯ ಜಿಎಸ್‌ಬಿ ಸೇವಾ ಮಂಡಲದ ಗಣೇಶೋತ್ಸವಕ್ಕೆ ಭರ್ಜರಿ ಸಿದ್ಧತೆ, ವಿಮಾ ರಕ್ಷಣೆ ಪಡೆಯುವಲ್ಲೂ ದಾಖಲೆ
Aug 27, 2024 02:51 PM IST
ಮುಂಬಯಿ ಜಿಎಸ್‌ಬಿ ಸೇವಾ ಮಂಡಲದ ಗಣೇಶೋತ್ಸವಕ್ಕೆ ಭಾರಿ ಮೊತ್ತದ ವಿಮಾ ರಕ್ಷಣೆ (ಸಾಂಕೇತಿಕ ಚಿತ್ರ)
Ganesh habba; ದೇಶದ ಉದ್ದಗಲಕ್ಕೂ ಗೌರಿ ಗಣೇಶ ಹಬ್ಬಕ್ಕೆ ಸಿದ್ಧತೆ ನಡೆದಿದೆ. ಗಣೇಶೋತ್ಸವ ಎಂದ ಕೂಡಲೇ ನೆನಪಾಗುವುದು ಮುಂಬಯಿ. ಮಹಾರಾಷ್ಟ್ರದ ರಾಜಧಾನಿಯ ಪೆಂಡಾಲ್‌ಗಳಲ್ಲಿ ಗಣೇಶನನ್ನು ಕೂರಿಸಿ ಪೂಜಿಸಲಾಗುತ್ತದೆ. ಈ ಪೈಕಿ ಜಿಎಸ್‌ಬಿ ಸೇವಾ ಮಂಡಲದ ಗಣೇಶೋತ್ಸವ ಮುಖ್ಯವಾದುದು. ಇದಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ವಿಮಾ ರಕ್ಷಣೆ ಪಡೆಯುವಲ್ಲೂ ದಾಖಲೆ ನಿರ್ಮಿಸಿದೆ.
ಮುಂಬಯಿ: ಪ್ರತಿ ವರ್ಷದಂತೆ ಈ ವರ್ಷವೂ ಅದ್ದೂರಿ ಗಣೇಶ ಹಬ್ಬಕ್ಕೆ ಮುಂಬಯಿ ಸಿದ್ಧವಾಗುತ್ತಿದೆ. ಮಹಾರಾಷ್ಟ್ರದ ರಾಜಧಾನಿ ಮುಂಬಯಿಯಲ್ಲಿ ಜಿಎಸ್‌ಬಿ ಸೇವಾ ಮಂಡಲದ ಗಣಪತಿಗೆ ವಿಶೇಷ ಗೌರವ. ಬಹುಮುಖ್ಯ, ಪ್ರಸಿದ್ಧ, ಜನಪ್ರಿಯವಾಗಿರುವ ಗಣಪತಿಯೂ ಹೌದು.
ಜಿಎಸ್‌ಬಿ ಸೇವಾ ಮಂಡಲ ಎಂದು ಸರಳವಾಗಿ ಕರೆಯಿಸಿಕೊಳ್ಳುವ ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಮಂಡಲದ ಗಣಪತಿಯನ್ನು ಮುಂಬಯಿಯ ಕಿಂಗ್ಸ್ ಸರ್ಕಲ್‌ನಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಈ ವರ್ಷ ಸೆಪ್ಟೆಂಬರ್ 7 ರಿಂದ 11 ರ ತನಕ ನಡೆಯಲಿರುವ ಗಣೇಶೋತ್ಸವಕ್ಕೆ ಜಿಎಸ್‌ಬಿ ಸೇವಾ ಮಂಡಲ ದಾಖಲೆಯ 400.58 ಕೋಟಿ ರೂಪಾಯಿ ಮೌಲ್ಯದ ವಿಮೆ ಮಾಡಿಸಿದೆ.
ಜಿಎಸ್‌ಬಿ ಸೇವಾ ಮಂಡಲದ ಗಣೇಶೋತ್ಸವಕ್ಕೆ 400 ಕೋಟಿ ರೂಪಾಯಿ ವಿಮೆ!
ಮುಂಬಯಿ ಗಣೇಶ ಪೆಂಡಾಲ್‌ಗಳ ಪೈಕಿ ಕಿಂಗ್ಸ್ ಸರ್ಕಲ್‌ನ ಜಿಎಸ್‌ಬಿ ಸೇವಾ ಮಂಡಲ ಗಣೇಶೋತ್ಸವ ಪ್ರತಿ ವರ್ಷವೂ ಅದ್ದೂರಿ, ವಿಜೃಂಭಣೆಯ ಕಾರಣಕ್ಕೆ ಗಮನಸೆಳೆಯುವಂಥದ್ದು. ಇದೇ ಕಾರಣಕ್ಕೆ ಈ ಗಣೇಶೋತ್ಸವ ಪೆಂಡಾಲ್ ದೊಡ್ಡ ಮೊತ್ತದ ವಿಮೆ ರಕ್ಷಣೆಯನ್ನೂ ಪಡೆಯುತ್ತಿದೆ. ಈ ಬಾರಿ ದಾಖಲೆಯ 400.58 ಕೋಟಿ ರೂಪಾಯಿ ವಿಮೆ ಮಾಡಿಸಿಕೊಂಡು ಸುದ್ದಿಯಾಗಿದೆ.
ಈ ವಿಮೆಯಲ್ಲಿ ವೈಯಕ್ತಿಕ ಅಪಘಾತ ರಕ್ಷಣೆ, ಚಿನ್ನ ಮತ್ತು ಬೆಳ್ಳಿ ಆಭರಣಗಳಿಗೆ, ಬೆಂಕಿ ಅನಾಹು ಸೇರಿ ಎಲ್ಲ ಅನಾಹುತಗಳ ವಿರುದ್ಧ ಮತ್ತು ಸಾರ್ವಜನಿಕ ಬಾಧ್ಯತೆಯ ವಿಮಾ ರಕ್ಷಣೆ ಒಳಗೊಂಡಿದೆ. ಜಿಎಸ್‌ಬಿ ಸೇವಾ ಮಂಡಲವು 2022ರಲ್ಲಿ 316.40 ಕೋಟಿ ರೂಪಾಯಿ, 2023ರಲ್ಲಿ 360.40 ಕೋಟಿ ರೂಪಾಯಿ ವಿಮೆ ಮಾಡಿಸಿತ್ತು.
ವಿಮೆ ಕುರಿತು ಮಾತನಾಡಿದ ಜಿಎಸ್‌ಬಿ ಸೇವಾ ಮಂಡಲದ ಅಧ್ಯಕ್ಷ ಅಮಿತ್ ದಿನೇಶ್ ಪೈ, ‘ಪ್ರತಿ ವರ್ಷದಂತೆ ಈ ಬಾರಿಯೂ ಗಣೇಶ ಚತುರ್ಥಿ ಆಚರಿಸುತ್ತೇವೆ. ಇದು ಐದು ದಿನಗಳ ಸಂಭ್ರಮ... ಈ ಬಾರಿ ಒಟ್ಟು 400.58 ಕೋಟಿ ರೂಪಾಯಿ ವಿಮೆ ಮಾಡಿಸಿದ್ದೇವೆ. ಕಳೆದ ವರ್ಷ ಸುಮಾರು 300.60 ಕೋಟಿ ರೂ. ವಿಮೆ ಮಾಡಿಲಾಗಿದೆ...ಒಂದು ಖಾಸಗಿ ಏಜೆನ್ಸಿಯು ನಮಗೆ ಭದ್ರತೆಗೆ ಸಹಾಯ ಮಾಡುತ್ತದೆ. 875 ಜನ ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಾರೆ, ಮುಖ ಗುರುತಿಸುವಿಕೆ ಕ್ಯಾಮೆರಾಗಳನ್ನು ಸ್ಥಾಪಿಸಲಾಗಿದೆ ಮತ್ತು ಮೆಟಲ್ ಡಿಟೆಕ್ಟರ್ ಗೇಟ್‌ಗಳನ್ನು ಬಳಸಲಾಗುವುದು.." ಎಂದು ಹೇಳಿದ್ದಾಗಿ ಎಎನ್‌ಐ ವರದಿ ಮಾಡಿದೆ.
ಜಿಎಸ್‌ಬಿ ಸೇವಾ ಮಂಡಲದ ವೇದಿಕೆಯಲ್ಲಿ ಪರಿಸರಸ್ನೇಹಿ ಗಣಪತಿ
ಟ್ರಸ್ಟ್‌ನ ಪರಿಸರ ಕಾಳಜಿಯನ್ನು ಉಲ್ಲೇಖಿಸಿದ ದಿನೇಶ್ ಪೈ ಅವರು ಪರಿಸರ ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ಪರಿಸರ ಸ್ನೇಹಿ ಗಣಪತಿಯನ್ನು ಕೂರಿಸಿ ಪೂಜಿಸಲಾಗುತ್ತದೆ. ಈ ಬಗ್ಗೆ ಹೆಚ್ಚು ನಿಗಾವಹಿಸಲಾಗುತ್ತದೆ ಎಂದು ಹೇಳಿದರು.
"ನಾವು ಪರಿಸರದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸುತ್ತಿದ್ದೇವೆ. ನಿವ್ವಳ ಇಂಗಾಲದ ಹೊರಸೂಸುವಿಕೆಯನ್ನು ಶೂನ್ಯ ಮಾಡುವ ಗುರಿಯೊಂದಿಗೆ ಮಾಲಿನ್ಯವನ್ನು ತಡೆಯಲು ಪ್ರಯತ್ನಿಸುತ್ತಿದ್ದೇವೆ. ನಮ್ಮ ಎಲ್ಲಾ ತ್ಯಾಜ್ಯವು ಜೈವಿಕ ವಿಘಟನೀಯವಾಗಿದೆ, ಈ ವರ್ಷ ನಾವು ಫ್ಲೆಕ್ಸ್ ಬ್ಯಾನರ್‌ಗಳ ಬಳಕೆಯನ್ನು ಕಡಿಮೆ ಮಾಡುತ್ತೇವೆ ಮತ್ತು ಎಲ್‌ಇಡಿ ಹೋರ್ಡಿಂಗ್‌ಗಳನ್ನು ಬಳಸುತ್ತೇವೆ" ಎಂದು ದಿನೇಶ್ ಪೈ ವಿವರಿಸಿದ್ದಾಗಿ ಎಎನ್‌ಐ ವರದಿ ಮಾಡಿದೆ.
ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ದಿನವನ್ನು ಗಣೇಶ ಚತುರ್ಥಿ ಎಂದು ಆಚರಿಸಲಾಗುತ್ತದೆ. ಇದುವೇ ಗಣಪತಿ ದೇವರ ಜನ್ಮದಿನ. ಈ ಹಬ್ಬವನ್ನು ಮುಂಬಯಿ ಮತ್ತಿತರ ಪ್ರದೇಶಗಳಲ್ಲಿ 10 ದಿನ ಆಚರಿಸುತ್ತಾರೆ. ಇದು ಅತ್ಯಂತ ಜನಪ್ರಿಯವಾಗಿರುವ ಹಿಂದೂ ಹಬ್ಬಗಳ ಪೈಕಿ ಒಂದು. ಗಣೇಶನು ತನ್ನ ತಾಯಿ ಗೌರಿಯೊಂದಿಗೆ ಭೂಮಿಗೆ ಬಂದು ಜನರಿಗೆ ಪೂಜೆ, ಪುನಸ್ಕಾರ ಸ್ವೀಕರಿಸುವ ಕಾರಣ ವಿವಿಧೆಡೆ ಗೌರಿ ಗಣೇಶ ಹಬ್ಬವನ್ನು ಆಚರಿಸಲಾಗುತ್ತದೆ.