Ekadanta Sankashti Chaturthi: ಇಂದು ಏಕದಂತ ಸಂಕಷ್ಟಹರ ಚತುರ್ಥಿ, ಚಂದ್ರೋದಯದ ಸಮಯವೇನು?; ಮುಹೂರ್ತ, ಪೂಜಾ ವಿಧಾನದ ಮಾಹಿತಿ ಇಲ್ಲಿದೆ
ಇಂದು (ಮೇ 26, ಭಾನುವಾರ( ಸಂಕಷ್ಟಹರ ಚತುರ್ಥಿಯನ್ನು ಆಚರಿಸಲಾಗುತ್ತಿದೆ. ಏಕದಂತ ಸಂಕಷ್ಟ ಚತುರ್ಥಿಯ ಪೂಜಾ ಸಮಯ, ಶುಭ ಮುಹೂರ್ತ, ಚಂದ್ರೋದಯ ಹಾಗೂ ಗಣೇಶ ಆರತಿ ಬಗ್ಗೆ ಇಲ್ಲಿ ವಿವರವಿದೆ.
ಪ್ರತಿ ತಿಂಗಳು ಹುಣ್ಣಿಮೆಯಾದ ನಾಲ್ಕನೇ ದಿನದಂದು ಸಂಕಷ್ಟಹರ ಚತುರ್ಥಿ ಬರುತ್ತದೆ. ಈ ದಿನ ಭಕ್ತರು ವಿಘ್ನ ನಿವಾರಕ ಗಣೇಶನನ್ನು ಪೂಜಿಸುತ್ತಾರೆ. ವಿನಾಯಕನನ್ನು ಪ್ರಥಮ ಪೂಜೆಗೆ ಅಧಿಪತಿ ಎಂದು ಕರೆಯಲಾಗುತ್ತದೆ. ಇಂಥ ಏಕದಂತನ ಪೂಜೆ ಮಾಡಿದರೆ ಎಲ್ಲಾ ಕಷ್ಟಗಳು ನಿವಾರಣೆ ಆಗುತ್ತದೆ ಎಂಬ ನಂಬಿಕೆ ಇದೆ.
ಈ ಬಾರಿ ಮೇ 26, ಭಾನುವಾರ ಸಂಕಷ್ಟ ಚತುರ್ಥಿಯನ್ನು ಆಚರಿಸಲಾಗುತ್ತಿದೆ. ಮೇ ತಿಂಗಳ ಈ ಚತುರ್ಥಿಯನ್ನು ಏಕದಂತ ಸಂಕಷ್ಟ ಚತುರ್ಥಿ ಎಂದು ಕರೆಯಲಾಗುವುದು. ತಾಯಂದಿರು ತಮ್ಮ ಮಕ್ಕಳ ದೀರ್ಘಾಯುಷ್ಯಕ್ಕಾಗಿ, ಮತ್ತು ಸಂತಾನ ಪ್ರಾಪ್ತಿಗಾಗಿ ಈ ವ್ರತವನ್ನು ಆಚರಿಸುತ್ತಾರೆ. ಹಿರಿಯರು, ಕಿರಿಯರು ಎನ್ನದೆ ಸಂಕಷ್ಟಹರ ಚತುರ್ಥಿಯನ್ನು ತಮ್ಮ ಇಷ್ಟಾರ್ಥಸಿದ್ದಿಗಾಗಿ ಎಲ್ಲರೂ ಆಚರಿಸುತ್ತಾರೆ. ಈ ದಿನ ಶ್ರೀ ಗಣೇಶ ಮತ್ತು ಚಂದ್ರನನ್ನು ಪೂಜಿಸಲಾಗುತ್ತದೆ. ಏಕದಂತ ಸಂಕಷ್ಟಹರ ಚತುರ್ಥಿ ಪೂಜೆ, ತಿಥಿ, ಮಂತ್ರ, ಶುಭ ಮುಹೂರ್ತ, ಚಂದ್ರೋದಯದ ಸಮಯ ಮತ್ತು ಆರತಿಯ ವಿಧಾನದ ಬಗ್ಗೆ ಇಲ್ಲಿದೆ ಮಾಹಿತಿ.
ಏಕದಂತ ಸಂಕಷ್ಟಹರ ಚತುರ್ಥಿಯ ಶುಭ ಸಮಯ
ಸಂಕಷ್ಟ ಚತುರ್ಥಿ ತಿಥಿಯು 26 ಮೇ 26 ಭಾನುವಾರ ಸಂಜೆ 06:06 ಕ್ಕೆ ಪ್ರಾರಂಭವಾಗುತ್ತದೆ, ಮರುದಿನ, ಅಂದರೆ ಮೇ 27 ಸಂಜೆ 04:53 ಕ್ಕೆ ಕೊನೆಗೊಳ್ಳುತ್ತದೆ. ದೃಕ್ ಪಂಚಾಂಗದ ಪ್ರಕಾರ, ಭಾನುವಾರ ರಾತ್ರಿ ಚಂದ್ರೋದಯವು ಮೇ 26 ರಂದು ರಾತ್ರಿ 10:13 ಕ್ಕೆ ಸಂಭವಿಸುತ್ತದೆ. ಆದರೆ ವಿವಿಧ ನಗರಗಳಲ್ಲಿ
ಚಂದ್ರೋದಯದ ಸಮಯದಲ್ಲಿ ಸ್ವಲ್ಪ ವ್ಯತ್ಯಾಸವಿರಬಹುದು. ಚಂದ್ರನ ದರ್ಶನ ಮತ್ತು ಪೂಜೆಯ ನಂತರವೇ ಉಪವಾಸ ಮುರಿಯಬೇಕು. ಆಗ ಮಾತ್ರ ನಿಮಗೆ ವ್ರತದ ಸಂಪೂರ್ಣ ಪ್ರಯೋಜನ ದೊರೆಯುತ್ತದೆ.
ಗಣೇಶನನ್ನು ಯಾವ ರೀತಿ ಪೂಜಿಸಬೇಕು?
ಆ ದಿನ ಮಡಿಯುಟ್ಟು ಮನೆ, ದೇವರಗುಡಿಯನ್ನು ಸ್ವಚ್ಛಗೊಳಿಸಿ. ಗಣೇಶನಿಗೆ ಜಲಾಭಿಷೇಕ ಮಾಡಿ. ಗಣೇಶನಿಗೆ ಹಳದಿ ಚಂದನವನ್ನು ಲೇಪಿಸಿ ಹೂಗಳನ್ನು ಅರ್ಪಿಸಿ. ಗರಿಕೆ, ಬಿಳಿ ಎಕ್ಕದ ಹೂವಿನ ಹಾರ ಹಾಕಿ ನೈವೇದ್ಯ ಇಟ್ಟು ಧೂಪ, ದೀಪ, ಆರತಿ ಬೆಳಗಿ ಬೆಳಗಿನ ಪೂಜೆಯನ್ನು ಮುಗಿಸಿ. ಸಾಧ್ಯವಾದರೆ ಎಳ್ಳಿನ ಉಂಡೆ ಅಥವಾ, ಮೋದಕವನ್ನು ಗಣೇಶನಿಗೆ ನೈವೇದ್ಯವನ್ನಾಗಿ ಅರ್ಪಿಸಿ. ಸಂಜೆ ಮತ್ತೆ ಶುಭ್ರರಾಗಿ ಗಣೇಶನ ಮುಂದೆ ದೀಪ ಹಚ್ಚಿ ಆರತಿ ಬೆಳಗಿ. ಓಂ ಗಂ ಗಣಪತಯೇ ಎಂಬ ಮಂತ್ರವನ್ನು ಪಠಿಸಿ. ಏಕದಂತೆ ಸಂಕಷ್ಟಹರ ಚತುರ್ಥಿಯನ್ನು ಪಠಿಸಿ. ಗಣೇಶನಿಗೆ ಆರತಿ ಮಾಡಿ, ಚಂದ್ರೋದಯವಾದ ನಂತರ ಚಂದ್ರನನ್ನು ನೋಡಿ ಆರತಿ ಬೆಳಗಿ. ಲಘು ಉಪಹಾರ ಮಾಡುವ ಮೂಲಕ ಉಪವಾಸ ತ್ಯಜಿಸಿ.
ಗಣೇಶ ಆರತಿ ಮಂತ್ರ
ಗಣೇಶನಿಗೆ ಆರತಿ ಮಾಡುವಾಗ ಈ ಸ್ತೋತ್ರ ಹೇಳಿ
ಜಯವೆನ್ನಿರಿ ಜಯವೆನ್ನಿರಿ ಮಂಗಳ ಮೂರುತಿಗೆ, ಮೋದಕ ಹಸ್ತನಿಗೆ
ಜಯವೆನ್ನಿರಿ ಶಿವನಂದನ ಸಿದ್ದಗಣೇಶನಿಗೆ ಜಯವೆನ್ನಿರಿ ಜಯವೆನ್ನಿರಿ
ಮೂಸಿಕವಾಹನ ಗಜಮುಖಿ ಗೌರಿಸುತ ಗಣಪ ಗಣನಾಯಕ ಠೊಣಪ
ಧನಕನಕವ ದಯಪಾಲಿಸೋ ಹೇರಂಭ ಬೆನಕ ಜಯವೆನ್ನಿರಿ ಜಯವೆನ್ನಿರಿ
ಅಷ್ಟವಿನಾಯಕ ಕರಿಮುಖ ಲಂಬೋದರ ದೇವಾ ಪೀತಾಂಬರ ದೇಹ
ಇಷ್ಟ ನೆರವೇರಿಸೋ ಸಂಕಷ್ಟಹರಗೇ ಜಯವೆನ್ನಿರಿ ಜಯವೆನ್ನಿರಿ
ಗುರುಪೂಜಿತ ಸುರವಂತಿತ ವಿಘ್ನಹರ ಗಣಪಾ, ಮನ್ನಿಸಿಬಿಡು ತಪ್ಪಾ
ಶರಣೆಂಬುವು ಕರುಣೆಯ ತೋರೋ ಗಣಪತಿ ಬಪ್ಪಾ ಜಯವೆನ್ನಿರಿ ಜಯವೆನ್ನಿರಿ
ಜಯವೆನ್ನಿರಿ ಜಯವೆನ್ನಿರಿ ಮಂಗಳ ಮೂರುತಿಗೆ, ಮೋದಕ ಹಸ್ತನಿಗೆ
ಜಯವೆನ್ನಿರಿ ಶಿವನಂದನ ಸಿದ್ದಗಣೇಶನಿಗೆ ಜಯವೆನ್ನಿರಿ ಜಯವೆನ್ನಿರಿ
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)