logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Loksabha Elections 2024: ಉತ್ತರ ಪ್ರದೇಶ ಕಣಕ್ಕೆ ಪ್ರಿಯಾಂಕಾ ಗಾಂಧಿ, ರಾಯ್‌ಬರೇಲಿಯಿಂದ ಸ್ಪರ್ಧೆ ಸಾಧ್ಯತೆ, ರಾಹುಲ್‌ ಸ್ಪರ್ಧೆ ಎಲ್ಲಿ?

Loksabha Elections 2024: ಉತ್ತರ ಪ್ರದೇಶ ಕಣಕ್ಕೆ ಪ್ರಿಯಾಂಕಾ ಗಾಂಧಿ, ರಾಯ್‌ಬರೇಲಿಯಿಂದ ಸ್ಪರ್ಧೆ ಸಾಧ್ಯತೆ, ರಾಹುಲ್‌ ಸ್ಪರ್ಧೆ ಎಲ್ಲಿ?

Umesha Bhatta P H HT Kannada

Feb 13, 2024 05:32 PM IST

google News

ಈ ಬಾರಿ ಸೋನಿಯಾ ಬದಲು ಪ್ರಿಯಾಂಕಗಾಂಧಿ ರಾಯಬರೇಲಿಯಿಂದ ಲೋಕಸಭೆ ಚುನಾವಣೆಗೆ ಕಣಕ್ಕಿಳಿಯುವ ಚರ್ಚೆಗಳು ಜೋರಾಗಿವೆ.

    • Gandhi Family ಲೋಕಸಭೆ ಚುನಾವಣೆಗೂ ಗಾಂಧಿ ಕುಟುಂಬಕ್ಕೂ ಬಿಡಿಸಲಾಗದ ನಂಟು. ಈವರೆಗೂ ಒಬ್ಬರಿಲ್ಲೊಬ್ಬರು ಲೋಕಸಭೆಗೆ ಈ ಕುಟುಂಬದಿಂದ ಆಯ್ಕೆಯಾಗುತ್ತಲೇ ಇದ್ದಾರೆ. ಈ ಬಾರಿ ಪ್ರಿಯಾಂಕಗಾಂಧಿ ಸ್ಪರ್ಧಿಸುವ ಸಾಧ್ಯತೆಗಳು ಹೆಚ್ಚಿವೆ. 
ಈ ಬಾರಿ ಸೋನಿಯಾ ಬದಲು ಪ್ರಿಯಾಂಕಗಾಂಧಿ ರಾಯಬರೇಲಿಯಿಂದ ಲೋಕಸಭೆ ಚುನಾವಣೆಗೆ ಕಣಕ್ಕಿಳಿಯುವ ಚರ್ಚೆಗಳು ಜೋರಾಗಿವೆ.
ಈ ಬಾರಿ ಸೋನಿಯಾ ಬದಲು ಪ್ರಿಯಾಂಕಗಾಂಧಿ ರಾಯಬರೇಲಿಯಿಂದ ಲೋಕಸಭೆ ಚುನಾವಣೆಗೆ ಕಣಕ್ಕಿಳಿಯುವ ಚರ್ಚೆಗಳು ಜೋರಾಗಿವೆ.

ದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ಸ್ಪರ್ಧಿಸುವ ಸಾಧ್ಯತೆ ಕಡಿಮೆ. ವಯಸ್ಸು ಹಾಗೂ ಆರೋಗ್ಯದ ಕಾರಣದಿಂದ ಅವರು ತಮ್ಮ ಕುಟುಂಬದ ಕ್ಷೇತ್ರದ ಉತ್ತರ ಪ್ರದೇಶದ ರಾಯಬರೇಲಿಯಿಂದ ಕಣಕ್ಕೆ ಇಳಿಯುವುದಿಲ್ಲ. ಬದಲಿಗೆ ಅವರ ಪುತ್ರಿ,. ಉತ್ತರ ಪ್ರದೇಶ ಕಾಂಗ್ರೆಸ್‌ ಉಸ್ತುವಾರಿ ಹೊತ್ತ ಪ್ರಿಯಾಂಕಗಾಂಧಿ ವಾದ್ರಾ ಅವರು ಸ್ಪರ್ಧಿಸುವ ಸಾಧ್ಯತೆ ಹೆಚ್ಚುತ್ತಿವೆ. ನಾಲ್ಕೈದು ಚುನಾವಣೆಯಿಂದಲೂ ಪ್ರಿಯಾಂಕಗಾಂಧಿ ಅವರ ಹೆಸರು ಪ್ರಸ್ತಾಪವಾಗುತ್ತಾ ಬಂದಿದ್ದರೂ ಸೋನಿಯಾಗಾಂಧಿ ಹಾಗೂ ರಾಹುಲ್‌ ಗಾಂಧಿ ಸ್ಪರ್ಧೆ ಕಾರಣಕ್ಕೆ ಕೊನೆಗೆ ಹಿಂದೆ ಸರಿಯುತ್ತಿತ್ತು.

ಪ್ರಿಯಾಂಕ ಮೇಲೆ ಕಣ್ಣು

ಉತ್ತರ ಪ್ರದೇಶದ ಅಮೇಥಿ ಹಾಗೂ ರಾಯ್‌ ಬರೇಲಿ ಲೋಕಸಭಾ ಕ್ಷೇತ್ರಗಳಲ್ಲಿ ಗಾಂಧಿ ಕುಟುಂಬ ಹೆಚ್ಚಿನ ಅವಧಿ ಹಿಡಿತ ಹೊಂದಿದೆ. ಈ ಕ್ಷೇತ್ರಗಳಲ್ಲಿ ಗಾಂಧಿ ಕುಟುಂಬದ ಬಹುತೇಕರು ಗೆದ್ದಿದ್ದಾರೆ. ಇದರಲ್ಲಿ ಫಿರೋಜ್‌ ಗಾಂಧಿ, ಇಂದಿರಾಗಾಂಧಿ, ಸಂಜಯ್‌ಗಾಂಧಿ, ರಾಜೀವ್‌ ಗಾಂಧಿ, ಸೋನಿಯಾಗಾಂಧಿ, ರಾಹುಲ್‌ ಗಾಂಧಿ ಗೆದ್ದ ಇತಿಹಾಸವಿದೆ. ರಾಜೀವ್‌ ಹಾಗೂ ಸೋನಿಯಾ ಅವರು ಅಮೇಥಿ ಹಾಗೂ ರಾಯ್‌ ಬರೇಲಿಯಲ್ಲಿ ಅತಿ ಹೆಚ್ಚು ಬಾರಿ ಗೆದ್ದ ಇತಿಹಾಸವಿದೆ. ಅಪ್ಪನ ದಾಖಲೆ ಮುರಿಯಲು ರಾಹುಲ್‌ ಗಾಂಧಿ ಕಳೆದ ಬಾರಿ ಅಣಿಯಾಗಿದ್ದರೂ ಅವರಿಗೆ ಸೋಲಾಗಿತ್ತು.

ಇದರ ನಡುವೆ ಗಾಂಧಿ ಕುಟುಂಬದ ಮತ್ತೊಬ್ಬ ಸದಸ್ಯೆ, ಕಾಂಗ್ರೆಸ್‌ ರಾಜಕಾರಣದಲ್ಲಿ ಹಲವಾರು ವರ್ಷಗಳಿಂದ ಸಕ್ರಿಯರಾಗಿರುವ ಪ್ರಿಯಾಂಕಗಾಂಧಿ ಅವರು ಕಳೆದ ಬಾರಿಯೇ ಹರಿಯಾಣದಲ್ಲಿ ಸ್ಪರ್ಧಿಸಬಹುದು ಎನ್ನುವ ಚರ್ಚೆಗಳಿದ್ದವು. ಕೊನೆ ಕ್ಷಣದಲ್ಲಿ ಅಮ್ಮನ ಬದಲು ಪ್ರಿಯಾಂಕ ರಾಯಬರೇಲಿಯಿಂದ ಕಣಕ್ಕಿಳಿಯಬಹುದು ಎನ್ನುವ ಅಭಿಪ್ರಾಯಗಳೂ ವ್ಯಕ್ತವಾಗಿದ್ದವು. ಕೊನೆ ಕ್ಷಣದಲ್ಲಿ ರಾಯ್‌ ಬರೇಲಿಯಲ್ಲಿ ಸೋನಿಯಾಗಾಂಧಿ ಅವರೇ ಕಣಕ್ಕಿಳಿದಿದ್ದರು. ಹಿಂದಿನ ವರ್ಷ ಅಮೇಥಿಯಲ್ಲಿ ರಾಹುಲ್‌ ಸೋತರೆ, ಸೋನಿಯಾಗಾಂಧಿ ಮಾತ್ರ ರಾಯ್‌ ಬರೇಲಿಯಲ್ಲಿ ಜಯಶಾಲಿಯಾಗಿದ್ದರು.

ಪಕ್ಷದಲ್ಲೂ ಹೆಚ್ಚಿನ ಒತ್ತಡ

ಈ ಬಾರಿ ಪ್ರಿಯಾಂಕ ಅವರನ್ನು ಕಣಕ್ಕಿಳಿಸಬೇಕು ಎನ್ನುವ ಒತ್ತಡ ಪಕ್ಷದ ವಲಯದಲ್ಲಿಯೇ ಜೋರಾಗಿದೆ. ಹಲವು ರಾಜ್ಯಗಳಲ್ಲಿ ಚುನಾವಣೆ ಪ್ರಚಾರ ಕೈಗೊಂಡು ಅನುಭವ ಪಡೆದಿರುವ ಪ್ರಿಯಾಂಕ ಕಣಕ್ಕೆ ಇಳಿದರೆ ಉತ್ತರ ಪ್ರದೇಶ ಮಾತ್ರವಲ್ಲದೇ ಇತರೆಡೆಯೂ ಪಕ್ಷಕ್ಕೆ ಲಾಭವಾಗಬಹುದು ಎನ್ನುವ ಚರ್ಚೆಗಳು ಪಕ್ಷದ ಹಂತದಲ್ಲಿ ನಡೆದಿವೆ. ಇದರಿಂದ ಅವರು ಈ ಬಾರಿ ತಮ್ಮ ಕುಟುಂಬದ ಪ್ರೀತಿಯ ಕ್ಷೇತ್ರ ರಾಯ್‌ ಬರೇಲಿಯಿಂದ ಕಣಕ್ಕೆ ಇಳಿಯಬಹುದು ಎನ್ನಲಾಗುತ್ತಿದೆ.

ಸೋನಿಯಾಗಾಂಧಿ ಅವರು ನೇರ ಚುನಾವಣೆ ರಾಜಕೀಯದಿಂದ ಹಿಂದೆ ಸರಿದು ರಾಜಸ್ತಾನದಿಂದ ರಾಜ್ಯಸಭೆಗೆ ಆಯ್ಕೆಯಾಬಹುದು. ಸದ್ಯವೇ ಅವರ ಹೆಸರು ರಾಜ್ಯ ಸಭೆ ಚುನಾವಣೆಗೆ ಪ್ರಕಟವಾಗಬಹುದು ಎನ್ನುವ ಅಭಿಪ್ರಾಯ ಕೇಳಿ ಬಂದಿವೆ.

ಅಮೇಥಿಯಲ್ಲಿ ರಾಹುಲ್‌

ಈ ನಡುವೆ ಕಳೆದ ಬಾರಿ ಅಮೇಥಿಯಲ್ಲಿ ಸೋತು ಕೇರಳದ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಗೆದ್ದಿದ್ದ ರಾಹುಲ್‌ ಗಾಂಧಿ ಅವರು ಈ ಬಾರಿಯೂ ಎರಡು ಕ್ಷೇತ್ರದಲ್ಲಿ ಕಣಕ್ಕಿಳಿಯಬಹುದು ಎನ್ನುವ ಚರ್ಚೆಗಳು ನಡೆದಿವೆ. ಅಮೇಥಿ ತಮ್ಮ ಕುಟುಂಬದ ಸಾಂಪ್ರದಾಯಿಕ ಕ್ಷೇತ್ರ. ಇಲ್ಲಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಕಳೆದ ಬಾರಿ ಗೆಲ್ಲಿಸಿ ನನಗೆ ಶಕ್ತಿ ತುಂಬಿದ ವಯನಾಡು ಕ್ಷೇತ್ರವನ್ನು ಈಗ ಬಿಟ್ಟು ಹೋದರೆ ತಪ್ಪು ಸಂದೇಶ ರವಾನೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಎರಡೂ ಕಡೆ ಕಣಕ್ಕೆ ಇಳಿಯುವ ಸೂಚನೆಯನ್ನು ರಾಹುಲ್‌ ನೀಡಿದ್ಧಾರೆ. ಇದರಿಂದ ಎರಡೂ ಕಡೆಯು ರಾಹುಲ್‌ ಪ್ರಚಾರಕ್ಕೆ ಸಿದ್ದತೆ ನಡೆದಿದೆ.

ಅಮೇಥಿ, ರಾಯಬರೇಲಿ ನಂಟು

ನೆಹರು-ಇಂದಿರಾಗಾಂಧಿ ಕುಟುಂಬಕ್ಕೂ ಉತ್ತರ ಪ್ರದೇಶದ ಅಮೇಥಿ ಹಾಗೂ ರಾಯಬರೇಲಿ ಲೋಕಸಭಾ ಕ್ಷೇತ್ರಗಳಿಗೂ ಬಿಡಿಸಲಾಗದ ನಂಟು. ಈ ಹಿಂದಿನಿಂದಲೂ ಒಂದಿಲ್ಲೊಬ್ಬರು ಇಲ್ಲಿಂದ ಗೆಲ್ಲುತ್ತಾ ಬಂದಿದ್ದಾರೆ. ಅಮೇಥಿಯಿಂದ ಸಂಜಯ್‌ ಗಾಂಧಿ ಒಮ್ಮೆ, ರಾಜೀವ್‌ಗಾಂಧೀ ಐದು ಬಾರಿ ಗೆದ್ದರೆ, ಸೋನಿಯಾಗಾಂಧಿ ಒಮ್ಮೆ ಹಾಗೂ ರಾಹುಲ್‌ ಗಾಂಧಿ ನಾಲ್ಕು ಬಾರಿ ಇಲ್ಲಿಂದ ಸಂಸದರು. ಕಳೆದ ಬಾರಿ ರಾಹುಲ್‌ ಗಾಂಧಿ ಅಮೇಥಿಯಲ್ಲಿ ಸೋತು ಸ್ಮೃತಿ ಇರಾನಿ ಗೆದ್ದಿದ್ದರು.

ರಾಯ್‌ಬರೇಲಿಯಲ್ಲಿ ಫಿರೋಜ್‌ ಗಾಂಧಿ ಎರಡು ಬಾರಿ, ಇಂದಿರಾಗಾಂಧಿ ಮೂರು ಬಾರಿ, ಸೋನಿಯಾಗಾಂಧಿ ಐದು ಬಾರಿ ಗೆದ್ದಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ