Mandya News:ಭ್ರೂಣ ಹತ್ಯೆ ಪ್ರಕರಣದ ನಂತರ ಎಚ್ಚೆತ್ತ ಮಂಡ್ಯ ಜಿಲ್ಲಾಡಳಿತ, 3 ಸ್ಕ್ಯಾನಿಂಗ್ ಸೆಂಟರ್ ವಿರುದ್ಧ ಪ್ರಕರಣ
ಮಂಡ್ಯದಲ್ಲಿ ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣದ ಜಾಲ ಬಯಲುಗೊಂಡ ನಂತರ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತದ ತಪಾಸಣೆ ಚುರುಕುಗೊಂಡಿದ್ದು, ಮೂರು ಕೇಂದ್ರಗಳ ಮೇಲೆ ಮೊಕದ್ದಮೆ ದಾಖಲಿಸಲಾಗಿದೆ.
ಮಂಡ್ಯ: ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣದಿಂದ ಗಮನ ಸೆಳೆದಿದ್ದ ಮಂಡ್ಯ ಜಿಲ್ಲೆಯಲ್ಲಿ ಸಾಕಷ್ಟು ಜಾಗೃತಿ ವಹಿಸಿದ ನಂತರವೂ ಅಲ್ಲಲ್ಲಿ ಭ್ರೂಣ ಹತ್ಯೆ ಪ್ರಕರಣಗಳು ವರದಿಯಾಗುತ್ತಲೇ ಇವೆ. ಅದರಲ್ಲೂ ಜಿಲ್ಲಾಡಳಿತ, ಆರೋಗ್ಯ ಇಲಾಖೆ ತಂಡಗಳ ವಿಚಕ್ಷಣೆ ನಡುವೆಯೂ ಪ್ರಕರಣಗಳು ಕಂಡು ಬರುತ್ತಿವೆ. ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಭ್ರೂಣ ಹತ್ಯೆ ಪ್ರಕರಣ ಕುರಿತಂತೆ ಸ್ಕ್ಯಾನಿಂಗ್ ಸೆಂಟರ್ ಗಳನ್ನು ಪರಿಶೀಲಿಸಿದ ಸಂದರ್ಭದಲ್ಲಿ ಕೆ.ಆರ್.ಪೇಟೆ ತಾಲ್ಲೂಕಲ್ಲಿ ಒಂದು ನಾಗಮಂಗಲ ತಾಲ್ಲೂಕಲ್ಲಿ ಎರಡು ಸ್ಕ್ಯಾನಿಂಗ್ ಸೆಂಟರ್ ಗಳಲ್ಲಿ ನಿಯಮ ಉಲ್ಲಂಘನೆ ಕಂಡುಬಂದಿದ್ದು, ಪ್ರಕರಣ ದಾಖಲಿಸಲಾಗಿದೆ.
ಮಂಡ್ಯ ಜಿಲ್ಲೆಯಲ್ಲಿ ಕಣ್ಗಾವಲು
ಕೆಲ ದಿನಗಳ ಹಿಂದೆ ಮಂಡ್ಯ ತಾಲ್ಲೂಕಿನಲ್ಲಿ ಭ್ರೂಣಲಿಂಗಪತ್ತೆ ಹಾಗೂ ಭ್ರೂಣ ಹತ್ಯೆ ಪ್ರಕರಣಗಳು ವರದಿಯಾಗಿದ್ದವು. ಮೈಸೂರು ಹಾಗೂ ಬೆಂಗಳೂರಿನಲ್ಲಿದ್ದುಕೊಂಡು ಮಂಡ್ಯದ ಆಲದ ಮನೆಯೊಂದರಲ್ಲಿ ಸ್ಕ್ಯಾನಿಂಗ್ ಸೆಂಟರ್ ನಡೆಸಲಾಗುತ್ತಿತ್ತು. ಇಲ್ಲಿಯೇ ವಾರಾಂತ್ಯದಲ್ಲಿ ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣ ನಡೆದಿದ್ದು ಪೊಲೀಸರ ತನಿಖೆ ವೇಳೆ ಬಯಲಾಗಿತ್ತು. ಇದೇ ಪ್ರಕರಣದಲ್ಲಿ ಮೈಸೂರಿನ ವೈದ್ಯರೂ ಸೇರಿ 9 ಮಂದಿಯನ್ನು ಬಂಧಿಸಲಾಗಿತ್ತು. ಈ ಪ್ರಕರಣ ಇಡೀ ರಾಜ್ಯದಲ್ಲಿಯೇ ಆರೋಗ್ಯ ಇಲಾಖೆ ಚುರುಕುಗೊಳ್ಳಲು ದಾರಿಯಾಗಿತ್ತು.
ಮಂಡ್ಯ ಜಿಲ್ಲೆಯಲ್ಲಿ ಭ್ರೂಣ ಹತ್ಯೆ ಪ್ರಕರಣಗಳು ಮೊದಲಿನಿಂದಲೂ ಸಕ್ರಿಯವಾಗಿವೆ. ಕೆಲವು ತಾಲ್ಲೂಕುಗಳಲ್ಲಿ ಭ್ರೂಣ ಪತ್ತೆ ತಪಾಸಣೆ ನಡೆಸುವುದು ಅಕ್ರಮವಾಗಿ ಮುಂದುವರಿದಿರುವ ಮಾಹಿತಿ ಹಿನ್ನೆಲೆಯಲ್ಲಿ ನಿರಂತರ ತಪಾಸಣೆ ನಡೆಯುತ್ತಿದೆ. ಅದರಲ್ಲೂ ಸ್ಕ್ಯಾನಿಂಟ್ ಸೆಂಟರ್‌ಗಳ ಮೇಲೆ ನಿಗಾ ವಹಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಅವರ ಸೂಚನೆ ಮೇರೆಗೆ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಕೆಆರ್‌ಪೇಟೆ ಹಾಗೂ ನಾಗಮಂಗಲ ತಾಲ್ಲೂಕಿನಲ್ಲಿ ತಪಾಸಣೆ ನಡೆಸಿತ್ತು. ಈ ವೇಳೆ ಎರಡು ಕಡೆಯಲ್ಲಿ ಭ್ರೂಣಲಿಂಗ ಪತ್ತೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಮೂರು ಸ್ಕ್ಯಾನಿಂಗ್ ಕೇಂದ್ರಗಳನ್ನು ಬಂದ್ ಮಾಡಿಸಿ ಮೊಕದ್ದಮೆ ದಾಖಲಿಸಲಾಗಿದೆ.
55 ಸ್ಕ್ಯಾನಿಂಗ್ ಸೆಂಟರ್
ಮಂಡ್ಯ ಜಿಲ್ಲೆಯಲ್ಲಿಯೇ 55 ಸ್ಕ್ಯಾನಿಂಗ್ ಸೆಂಟರ್ ಗಳು ಕಾರ್ಯನಿರ್ವಹಿಸುತ್ತಿವೆ. ಮಂಡ್ಯದಲ್ಲಿಯೇ ಅಧಿಕವಾಗಿದ್ದು, ನಾಗಮಂಗಲ, ಮದ್ದೂರು, ಕೆಆರ್‌ಪೇಟೆ, ಮಳವಳ್ಳಿ, ಪಾಂಡವಪುರ, ಶ್ರೀರಂಗಪಟ್ಟಣ ತಾಲ್ಲೂಕುಗಳಲ್ಲಿಯೂ ಸೆಂಟರ್‌ಗಳಿವೆ. ಆರೋಗ್ಯ ಇಲಾಖೆಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಲೇಬೇಕು. ಯಾವುದೇ ಹೆಣ್ಣು ಭ್ರೂಣ ಲಿಂಗ ಪತ್ತೆ ಅಥವಾ ಅನಧಿಕೃತ ಕೃತ್ಯ ನಡೆಯುತ್ತಿಲ್ಲ ಎಂಬ ದೃಢೀಕರಣ ಪತ್ರವನ್ನು ಪಡೆಯಬೇಕು. ಹೀಗೆ ಪಡೆಯದ ಕೇಂದ್ರಗಳ ಮೇಲೆ ಕ್ರಮ ಖಚಿತ ಎನ್ನುವುದು ಜಿಲ್ಲಾಧಿಕಾರಿ ನೀಡುವ ವಿವರಣೆ.
ಇದಲ್ಲದೆ ಮಂಡ್ಯ ಜಿಲ್ಲೆಯಲ್ಲಿ 25 ಹಾಸ್ಪಿಟಲ್, 32 ಲ್ಯಾಬ್, 130 ಕ್ಲಿನಿಕ್ ಗಳನ್ನು ಪರಿಶೀಲನೆ ಮಾಡಲಾಗಿದೆ. ಈ ಬಗ್ಗೆ ಜಿಲ್ಲಾಡಳಿತ ರಚಿಸಿರುವ ಅಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳ ತಂಡ ಮಾಹಿತಿ ಪಡೆದಿದೆ. ಅಲ್ಲದೇ ನಿಗಾ ಕೂಡ ವಹಿಸಿದೆ.
ಜಾಗೃತಿಗೂ ಒತ್ತು
ಭ್ರೂಣ ಲಿಂಗ ಪತ್ತೆ ಕುರಿತು ಹೆಣ್ಣುಮಕ್ಕಳು, ಪೋಷಕರಿಗೆ ಅರಿವು ಮೂಡಿಸುವ ಕಾರ್ಯವೂ ಮಂಡ್ಯದಲ್ಲಿ ಚುರುಕುಗೊಂಡಿದೆ. ಈಗಾಗಲೇ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅರಿವು ಕಾರ್ಯಕ್ರಮ ಇನ್ನೂ ಚುರುಕುಗೊಳ್ಳಬೇಕು. ಜಾಗೃತಿ ಕಾರ್ಯಕ್ರಮದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳನ್ನು ಹೆಚ್ಚು ತೊಡಗಿಸಿಕೊಳ್ಳಬೇಕು. ಗ್ರಾಮ ಮತ್ತು ವಾಡ್೯ ಸಭೆಗಳಲ್ಲಿ ಒಬ್ಬರೂ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ನಿಯೋಜಿಸಿ, ಸಭೆಯಲ್ಲಿ ಹೆಣ್ಣು ಭ್ರೂಣ ಹತ್ಯೆಯ ದುಷ್ಪರಿಣಾಮ ಕುರಿತು ಅರಿವು ಮೂಡಿಸಿ ಎನ್ನುವ ಸೂಚನೆಯನ್ನು ನೀಡಲಾಗಿದೆ ಎನ್ನುತ್ತಾರೆ ಡಿಸಿ ಡಾ.ಕುಮಾರ್.
ಮಂಡ್ಯ ಜಿಲ್ಲೆಯಲ್ಲಿ ಈ ವರ್ಷದ ಜನವರಿ ತಿಂಗಳಿನಿಂದ ಇಲ್ಲಿಯವರೆಗೆ 12 ವಾರಕ್ಕೂ ಮೇಲ್ಪಟ್ಟು ಗರ್ಭಪಾತವಾಗಿರುವ ಪ್ರಕರಣಗಳ ಮಾಹಿತಿ ಪಡೆದು ಅವುಗಳನ್ನು ಪರಿಶೀಲಿಸಿ ಅದು ವೈದ್ಯಕೀಯ ಹಿನ್ನಲೆಯಲ್ಲಿ ವೈದ್ಯರ ಅಭಿಪ್ರಾಯದ ಮೇಲೆ ಆಗಿರುವ ಬಗ್ಗೆ ಮಾಹಿತಿ ಪಡೆಯಲಾಗಿದೆ ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್.