ಪ್ರಧಾನಿ ಮೋದಿ ಮಧ್ಯಪ್ರವೇಶ, ಕತಾರ್‌ನಲ್ಲಿ ಸಿಲುಕಿದ್ದ 8 ಭಾರತೀಯರಿಗೆ ಬಂಧಮುಕ್ತಿ, ತಾಯ್ನೆಲ ತಲುಪಿದ ನಿವೃತ್ತ ಅಧಿಕಾರಿಗಳು
Feb 12, 2024 10:56 AM IST
ಭಾರತಕ್ಕೆ ಬಂದಿಳಿದ ನಂತರ ಕುಟುಂಬದವರತ್ತ ಕೈ ಬೀಸಿದ ನಿವೃತ್ತ ಅಧಿಕಾರಿಗಳು.
- ಕತಾರ್ ದೇಶದಲ್ಲಿ ಉದ್ಯೋಗ ಅರಸಿ ಹೋಗಿ ಬೇಹುಗಾರಿಕೆ ಅರೋಪಗಳ ಮೇಲೆ ಬಂಧನಕ್ಕೆ ಒಳಗಾಗಿದ್ದ ಎಂಟು ಮಂದಿಯನ್ನು ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆಯಿಂದ ಬಿಡುಗಡೆ ಮಾಡಲಾಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿಶೇಷ ಮುತುವರ್ಜಿ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ರಾಜತಾಂತ್ರಿಕ ಪ್ರಯತ್ನಗಳ ಫಲವಾಗಿ ಕತಾರ್‌ನಲ್ಲಿ ಸಿಲುಕಿದ್ದ ಭಾರತ ಮೂಲದ 8 ಮಂದಿ ನಿವೃತ್ತ ನೌಕಾ ಪಡೆ ಅಧಿಕಾರಿಗಳನ್ನು ಬಿಡುಗಡೆ ಮಾಡಲಾಗಿದೆ. ಅದೂ ಮರಣದಂಡನೆಗೆ ಗುರಿಯಾಗಿದ್ದ ಎಲ್ಲರನ್ನೂ ಭಾರತ ಪಾರು ಮಾಡಿದ್ದು, 7 ಮಂದಿ ತಾಯ್ನಾಡನ್ನು ತಲುಪಿದ್ದಾರೆ. ಒಂದೂವರೆ ವರ್ಷದ ಹಿಂದೆ ಬೇಹುಗಾರಿಕೆ ಆರೋಪದ ಮೇಲೆ 8 ಮಂದಿಯನ್ನು ಬಂಧಿಸಿತ್ತು. ಇಸ್ರೇಲ್ ಪರವಾಗಿ ಅವರು ಬೇಹುಗಾರಿಕೆ ಮಾಡುತ್ತಿದ್ದರು ಎಂಬ ಆರೋಪದಡಿ ಕಳೆದ ಅಕ್ಟೋಬರ್‌ನಲ್ಲಿ ಕತಾರ್ ನ್ಯಾಯಾಲಯವು ಮರಣ ದಂಡನೆ ಶಿಕ್ಷೆ ವಿಧಿಸಿತ್ತುಆದರೆ, ಅವರ ಮೇಲಿನ ಆರೋಪಗಳನ್ನು ಭಾರತ ಮತ್ತು ಕತಾರ್ ಖಚಿತಪಡಿಸಿಲ್ಲ.
ಬಂಧನ, ಬಿಡುಗಡೆ
ಭಾರತೀಯ ನೌಕಾಪಡೆ ಹಾಗೂ ಸೇನಾಪಡೆಯಲ್ಲಿ ಕೆಲಸ ಮಾಡಿದ್ದ ನಿವೃತ್ತ ಅಧಿಕಾರಿಗಳೂ ಸೇರಿ ಎಂಟು ಮಂದಿ ಕೆಲ ವರ್ಷದ ಹಿಂದೆ ಕತಾರ್‌ನ ಖಾಸಗಿ ಕಂಪನಿಯೊಂದರಲ್ಲಿ ಜಲಾಂತರ್ಗಾಮಿ ನೌಕೆಗೆ ಸಂಬಂಧಿಸಿದ ಯೋಜನೆಗಾಗಿ ಕೆಲಸ ಮಾಡುತ್ತಿದ್ದರು. ಅದು ಕೃತಕ ಬುದ್ದಿಮತ್ತೆ( AI) ಸಂಸ್ಥೆತಾಗಿತ್ತು.
ಆದರೆ ಇಸ್ರೇಲ್‌ಗೆ ಅವರು ಕಂಪೆನಿ ಮೂಲಕ ಬೇಹುಗಾರಿಕೆ ಮಾಡುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಅವರನ್ನು 2022ರಲ್ಲಿ ಆಗಸ್ಟ್‌ನಲ್ಲಿ ಬಂಧಿಸಲಾಗಿತ್ತು. ಆನಂತರ ವಿಚಾರಣೆಯೂ ನಡೆದಿತ್ತು.
ಈ ವಿಚಾರ ಭಾರತ ಸರ್ಕಾರದ ಗಮನಕ್ಕೂ ಬಂದು ದ್ವಿಪಕ್ಷೀಯ ಹಂತದಲ್ಲಿ ಮಾತುಕತೆಗಳು ನಡೆದಿದ್ದವು. ಆದರೆ ಕತಾರ್ ಸರ್ಕಾರವೂ ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚಿನ ವಿವರಗಳನ್ನು ನೀಡಿರಲಿಲ್ಲ. ಇವರ ವಿರುದ್ದ ಅಲ್ಲಿನ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು.
ಕಳೆದ ಅಕ್ಟೋಬರ್‌ನಲ್ಲಿ ಕತಾರ್ ನ್ಯಾಯಾಲಯ ಮರಣ ದಂಡನೆ ವಿಧಿಸಿತ್ತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಕತಾರ್‌ನ ಮುಖಸ್ಥರಾದ ಅಮಿರ್ ಶೇಖ್ ತಮೀಮ್ ಬಿನ್ ಹಮದ್ ಅವರೊಂದಿಗೆ ಖುದ್ದು ಮಾತುಕತೆ ನಡೆಸಿದ್ದರು.
ಇದಾದ ಬಳಿಕ ಭದ್ರತಾ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ಸಚಿವ ಎಸ್.ಜೈಶಂಕರ್ ಹಾಗೂ ಅಧಿಕಾರಿಗಳ ಹಂತದಲ್ಲೂ ರಾಜತಾಂತ್ರಿಕ ಮಾತುಕತೆಗಳು ನಡೆದಿದ್ದವು. ಇದಾದ ನಂತರ ಡಿಸೆಂಬರ್‌ನಲ್ಲಿ ಮರಣದಂಡನೆ ರದ್ದುಪಡಿಸಿ ಜೀವಾವಧಿ ಶಿಕ್ಷೆಗೆ ಇಳಿಸಲಾಗಿತ್ತು.
ಈ ಕುರಿತು ನಿರಂತರ ಮಾತುಕತೆ ನಡೆದ ಪರಿಣಾಮವಾಗಿ ಎರಡು ತಿಂಗಳಿನಲ್ಲಿಯೇ ಎಲ್ಲರನ್ನೂ ಬಿಡುಗಡೆ ಮಾಡಲಾಗಿದೆ. ಏಳು ಬಂದಿ ಸೋಮವಾರ ಬೆಳಗಿನ ಜಾವವೇ ಭಾರತಕ್ಕೆ ಬಂದಿಳಿದರು. ಇನೊಬ್ಬರೂ ಆಗಮಿಸಲಿದ್ದಾರೆ.
ಅಲ್ಲಿ ಏನಾಯಿತು ಎನ್ನುವುದು ನಮಗೆ ಗೊತ್ತಾಗಲಿಲ್ಲ. ಬೇಹುಗಾರಿಕೆ ಆರೋಪ ಹೊರಿಸಿ ಬಂಧಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಮಧ್ಯಸ್ಥಕೆ, ಸಚಿವರು, ಅಧಿಕಾರಿಗಳು ಹಾಗೂ ಪ್ರಮುಖರ ಪ್ರಯತ್ನದಿಂದ ನಮ್ಮ ಬಿಡುಗಡೆ ಸಾಧ್ಯವಾಯಿತು. ಕತಾರ್ ನೊಂದಿಗೆ ಪ್ರಧಾನಿ ಮೋದಿ ಅವರಿಗೆ ಉತ್ತಮ ಬಾಂಧವ್ಯವಿದೆ. ಅವರೇ ಖುದ್ದು ಮಾತನಾಡಿದ್ದು, ಸಮಸ್ಯೆ ಬಗೆಹರಿಯಲು ಕಾರಣವಾಯಿತು. ಇಲ್ಲದೇ ಇದ್ದರೆ ನಮ್ಮ ಬಿಡುಗಡೆ ಕಷ್ಟವಿತ್ತು. ನಮ್ಮನ್ನು ಬಿಡುಗಡೆ ಮಾಡಿಸಲು ಶ್ರಮಿಸಿದ ಎಲ್ಲರಿಗೂ ನಾವೂ ಆಭಾರಿ ಎಂದು ತಾಯ್ನೆಲಕ್ಕೆ ಬಂದಿಳಿದ ನಂತರ ಮಾಜಿ ಅಧಿಕಾರಿಯೊಬ್ಬರು ಹೆಮ್ಮೆಯಿಂದಲೇ ಹೇಳಿಕೊಂಡರು.
ಭಾರತೀಯ ನೌಕಾಪಡೆಯ 8 ಮಂದಿ ಯಾರು?
ದೋಹಾ ಮೂಲದ ಅಲ್ ದಹ್ರಾ ಗ್ಲೋಬಲ್ ಟೆಕ್ನಾಲಜೀಸ್ ನಲ್ಲಿ ಕೆಲಸ ಮಾಡುತ್ತಿದ್ದ8 ಮಂದಿಗೆ ಕಳೆದ ವರ್ಷ ಡಿಸೆಂಬರ್ 28ರಂದು ಕತಾರ್‌ನ ಮೇಲ್ಮನವಿ ನ್ಯಾಯಾಲಯವು ಮರಣದಂಡನೆ ಶಿಕ್ಷೆಯನ್ನು ಕಡಿತಗೊಳಿಸಿ ಮೂರು ವರ್ಷದಿಂದ 25 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಿತ್ತು.
ದೋಹಾ ಮೂಲದ ಖಾಸಗಿ ಸಂಸ್ಥೆ ಅಲ್ ದಹ್ರಾ ಗ್ಲೋಬಲ್ ಟೆಕ್ನಾಲಜೀಸ್ ಕತಾರ್ ನ ಸಶಸ್ತ್ರ ಪಡೆಗಳು ಮತ್ತು ಭದ್ರತಾ ಸಂಸ್ಥೆಗಳಿಗೆ ತರಬೇತಿ ಮತ್ತು ಇತರ ಸೇವೆಗಳನ್ನು ಒದಗಿಸುತ್ತಿದೆ ಎಂದು ಪಿಟಿಐ ವರದಿ ಮಾಡಿದೆ.
ನಿವೃತ್ತ ಯೋಧರಾದ ನವತೇಜ್ ಗಿಲ್ ಮತ್ತು ಸೌರಭ್ ವಸಿಷ್ಠ, ಕಮಾಂಡರ್ ಗಳಾದ ಪೂರ್ಣೇಂದು ತಿವಾರಿ, ಅಮಿತ್ ನಾಗ್ಪಾಲ್, ಎಸ್.ಕೆ.ಗುಪ್ತಾ, ಬಿ.ಕೆ.ವರ್ಮಾ ಮತ್ತು ಸುಗುಣಕರ್ ಪಕಾಲ ಮತ್ತು ನಾವಿಕ ರಾಗೇಶ್ ಅವರನ್ನು 2022 ರ ಆಗಸ್ಟ್‌ನಲ್ಲಿ ಅಘೋಷಿತ ಆರೋಪದ ಮೇಲೆ ಬಂಧಿಸಲಾಗಿತ್ತು.
ಎಂಟು ಅನುಭವಿಗಳಲ್ಲಿ, ಕ್ಯಾಪ್ಟನ್ ನವತೇಜ್ ಗಿಲ್ ಅವರು ನೌಕಾ ಅಕಾಡೆಮಿಯಿಂದ ಪದವಿ ಪಡೆದಾಗ ಮತ್ತು ನಂತರ ತಮಿಳುನಾಡಿನ ಊಟಿ ವೆಲ್ಲಿಂಗಟ್ ನಲ್ಲಿರುವ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿನಲ್ಲಿ ಬೋಧಕರಾಗಿ ಸೇವೆ ಸಲ್ಲಿಸಿದಾಗ ಶ್ರೇಷ್ಠತೆಗಾಗಿ ರಾಷ್ಟ್ರಪತಿಗಳ ಚಿನ್ನದ ಪದಕವನ್ನು ನೀಡಲಾಗಿತ್ತು.
ಪೂರ್ಣೇಂದು ತಿವಾರಿ ಅವರಿಗೆ 25 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದ್ದರೆ, ರಾಗೇಶ್‌ಗೆ ಮೂರು ವರ್ಷಗಳ ಜೈಲು ಶಿಕ್ಷೆ, ನೌಕಾಪಡೆಯ ನಾಲ್ವರು ಅಧಿಕಾರಿಗಳಿಗೆ 15 ವರ್ಷ ಜೈಲು ಶಿಕ್ಷೆ ಮತ್ತು ಇತರ ಇಬ್ಬರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಕತಾರ್ ಮತ್ತು ಭಾರತೀಯ ಅಧಿಕಾರಿಗಳು ಅವರ ವಿರುದ್ಧದ ಆರೋಪಗಳ ವಿವರಗಳನ್ನು ಒದಗಿಸದಿದ್ದರೂ, ಇವರ ವಿರುದ್ಧ ಗೂಢಚರ್ಯೆ ಆರೋಪ ಹೊರಿಸಲಾಗಿದೆ. ಆದರೆ ಯಾವ ರೀತಿಯಲ್ಲಿ ಅವರು ಗೂಡಚರ್ಯ ನಡೆಸಿದ್ದರು ಎನ್ನುವುದನ್ನು ಕತಾರ್ ಹೇಳಿರಲಿಲ್ಲ. ಈಗ ಎಲ್ಲರನ್ನೂ ಬಿಡುಗಡೆ ಮಾಡಿದೆ.
8 ಲಕ್ಷಕ್ಕೂ ಅಧಿಕ ಭಾರತೀಯರು ಕತಾರ್‌ನಲ್ಲಿ ಕೆಲಸ ಹಾಗೂ ಇತರೆ ಕಾರಣಕ್ಕಾಗಿ ನೆಲೆಸಿದ್ಧಾರೆ. ಭಾರತಕ್ಕೆ ನೈಸರ್ಗಿಕ ಅನಿಲ ಸರಬರಾಜು ರಾಷ್ಟ್ರಗಳಲ್ಲಿ ಕತಾರ್ ಕೂಡ ಪ್ರಮುಖ ದೇಶವಾಗಿದ್ದು ಉತ್ತಮ ದ್ವಿಪಕ್ಷೀಯ ಸಂಬಂಧಗಳನ್ನು ಹೊಂದಿದೆ.