BSNL New Logo: ಬಿಎಸ್‌ಎನ್‌ಎಲ್ ಲೋಗೋ ಬದಲು; ಬಂತು ಕೇಸರಿಯೊಂದಿಗೆ ತ್ರಿವರ್ಣ, ಹೊಸ ಮನ್ವಂತರಕ್ಕೆ ಅಣಿಯಾದ ಭಾರತದ ಟೆಲಿಕಾಂ ಸಂಸ್ಥೆ
Oct 24, 2024 10:45 AM IST
ಬಿಎಸ್‌ಎನ್‌ಎಲ್ ಲೋಗೋವನ್ನು ಬದಲಾಯಿಸಲಾಗಿದ್ದು. ಹೊಸ ಸ್ಪರ್ಧೆಗೆ ಭಾರತದ ದೈತ್ಯ ಟೆಲಿಕಾಂ ಸಂಸ್ಥೆ ಅಣಿಯಾಗಿದೆ.
- ಬಿಎಸ್‌ಎನ್‌ಎಲ್ ಒಂದು ಕಾಲಕ್ಕೆ ಭಾರತದ ಜನರ ಸಂಗಾತಿ. ಖಾಸಗಿ ಸ್ಪರ್ಧೆಯಿಂದಾಗಿ ಮುಚ್ಚುವ ಹಂತಕ್ಕೂ ಹೋಗಿರುವ ಬಿಎಸ್‌ಎನ್‌ಎಲ್‌ಗೆ ಹೊಸ ಶಕ್ತಿ ತುಂಬುವ ಕೆಲಸ ಶುರುವಾಗಿದೆ.
ದೆಹಲಿ: ಭಾರತದ ಸಾಂಪ್ರದಾಯಿಕ ಟೆಲಿಕಾಂ ಸಂಗಾತಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಬಿಎಸ್‌ಎನ್‌ಎಲ್ ಹೊಸ ರೂಪದಿಂದ ಮತ್ತೆ ಗ್ರಾಹಕರ ಎದುರು ಬಂದಿದೆ. ಒಂದು ದಶಕದಿಂದಲೂ ಖಾಸಗಿ ಪ್ರಭಾವದ ಜತೆಗೆ ಹಲವಾರು ನೀತಿಗಳಿಂದ ನಲುಗಿ ಮುಚ್ಚುವ ಹಂತಕ್ಕೂ ಹೋಗಿರುವ ಬಿಎಸ್‌ಎನ್‌ಎಲ್‌ಗೆ ಹೊಸ ರೂಪ ನೀಡುವ ಪ್ರಯತ್ನ ಶುರುವಾಗಿದೆ. ಇದರ ಮೊದಲ ಹಂತವಾಗಿ ಬಿಎಸ್‌ಎನ್‌ಎಲ್ ಲೋಗೋ ಬದಲಾಗಿದೆ. ನೀಲಿ- ಬಿಳಿ ಬಣ್ಣದಲ್ಲಿದ್ದ ಲೋಗೋ ಈಗ ಕೇಸರಿ ಬಣ್ಣವನ್ನು ಬದಲಿಸಿಕೊಂಡಿದೆ. ಈ ಮೂಲಕ ಹೊಸ ಮನ್ವಂತರಕ್ಕೆ ಅಣಿಯಾಗುತ್ತಿದೆ. ಇದರೊಟ್ಟಿಗೆ ಹೊಸ ಹೊಸ ಪ್ಲಾನ್‌ಗಳನ್ನು ರೂಪಿಸಿ ಬಿಎಸ್‌ಎನ್‌ಎಲ್ ಸಿಮ್ ಹಾಗೂ ನೆಟ್ ವರ್ಕ್ ಅನ್ನು ಜನ ಬಳಕೆ ಮಾಡುವಂತೆ ಪ್ರೇರೇಪಿಸುತ್ತಿದೆ.
ದಶಕಗಳಿಗೂ ಕಾಲ ಏಕಸ್ವಾಮ್ಯದೊಂದಿಗೆ ಮೆರೆದ ಬಿಎಸ್‌ಎನ್‌ಎಲ್ ಲ್ಯಾಂಡ್ ಲೈನ್ ನಂತರ ಮೊಬೈಲ್ ಹಾಗೂ ಇತರೆ ನೆಟ್‌ವರ್ಕ್‌ಗಳ ಮೂಲಕ ಸ್ಪರ್ಧೆ ನೀಡಿತ್ತು. ಇತ್ತೀಚಿನ ದಶಕದಲ್ಲಿ ಖಾಸಗಿ ಟೆಲಿಕಾಂ ಸಂಸ್ಥೆಗಳ ತುರುಸಿನ ಸ್ಪರ್ಧೆಯಿಂದ ಬಿಎಸ್‌ಎನ್‌ಎಲ್ ಶಕ್ತಿ ಕಳೆದುಕೊಂಡಿತ್ತು. ಸರ್ಕಾರವೂ ನೌಕರರ ಕಡಿತ, ಕಚೇರಿಗಳನ್ನು ಮುಚ್ಚುವುದು ಸೇರಿದಂತೆ ಹಲವಾರು ಸುಧಾರಣೆ ಕ್ರಮ ಕೈಗೊಂಡಿದ್ದರಿಂದ ಬಿಎಸ್‌ಎನ್‌ಎಲ್ ಗಣನೀಯವಾಗಿ ಮಾರುಕಟ್ಟೆ ಪ್ರಮಾಣ ಕಡಿತವಾಗಿತ್ತು. ಈಗ ಬಿಎಸ್‌ಎನ್‌ಎಲ್‌ಗೆ ಮತ್ತಷ್ಟು ಮೆರಗು ನೀಡುವ ಪ್ರಯತ್ನ ಶುರುವಾಗಿದೆ.
ದೇಶದಲ್ಲಿ ಮೊದಲ ಬಾರಿಗೆ ಖಾಸಗಿ ಸಂಸ್ಥೆಗಳಿಗೆ ತುರುಸಿನ ಸ್ಪರ್ಧೆ ಕೊಡುವ ನಿಟ್ಟಿನಲ್ಲಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಹೊಸ ಆಕರ್ಷಣೆಯಲ್ಲಿ ಭಾರತದ ಗ್ರಾಹಕರ ಮುಂದೆ ಬಂದಿದೆ. ಈ ಹೊಸ ಅವತಾರದಲ್ಲಿ ಗಮನ ಸೆಳೆಯುತ್ತಿರುವ ಬಿಎಸ್‌ಎನ್‌ಎಲ್ ಸಂಸ್ಥೆಯು ಜಿಯೋ, ಏರ್‌ಟೆಲ್, ವೋಡಾಫೋನ್‌ಗಿಂತಲೂ ಅತ್ಯುತ್ತಮ ಯೋಜನೆಗಳನ್ನು ಜನರಿಗೆ ತಂದಿದೆ. ಜನರಿಗೆ ಫೀಲ್ ಗುಡ್ ಫ್ಯಾಕ್ಟರ್ ಅಡಿ ಹೊಸ ಲೋಗೊವನ್ನೂ ಅನಾವರಣಗೊಳಿಸಿದೆ.
ಹೊಸ ಲೋಗೋ ಹೇಗಿದೆ
ಹಿಂದೆ ನೀಲಿ ಹಾಗೂ ಬಿಳಿ ಬಣ್ಣದ ಹಿನ್ನೆಲೆಯೊಂದಿಗೆ ಲೋಗೋ ಇತ್ತು. ಈಗ ಅದನ್ನು ಕೇಸರಿ ಬಣ್ಣಕ್ಕೆ ಬದಲಾಯಿಸಲಾಗಿದೆ. ಜತೆಗೆ ಬಿಳಿ, ಹಸಿರು ಕೂಡ ಇದೆ.
ಹೊಸ ಲೋಗೋದಲ್ಲಿ ದೇಶ ಐಕ್ಯತೆ ಸಾರುವ ಭಾರತದ ತ್ರಿವರ್ಣ ಧ್ವಜದ ಮೂರು ಬಣ್ಣಗಳಿರುವುದು ವಿಶೇಷ. ನೀಲಿ ಬಣ್ಣದ ಅಕ್ಷರಗಳೂ ಇವೆ. ಬಿಎಸ್‌ಎನ್‌ಎಲ್ ಕನೆಕ್ಟಿಂಗ್ ಪೀಪಲ್ ಎನ್ನುವ ಟ್ಯಾಗ್ ಲೈನ್ ಬದಲಾಗಿಲ್ಲ.. ಅದರೊಂದಿಗೆ 'ಸುರಕ್ಷಿತ, ವಿಶ್ವಾಸಾರ್ಹ, ಕೈಗೆಟುಕುವ' ಘೋಷವಾಕ್ಯದೊಂದಿಗೆ ಹೊಸ ವಿನ್ಯಾಸದಲ್ಲಿ ಗಮನ ಸೆಳೆಯುತ್ತಿದೆ.
ಇದರೊಟ್ಟಿಗೆ ವೃತ್ತಾಕಾರದ ಕೇಸರಿ ಬಣ್ಣದಲ್ಲಿ ಭಾರತದ ನಕಾಶೆ ಇದೆ. ಟಿಲಿಕಾಂ ತರಂಗಗಳು ಸುತ್ತುವರಿದಿರುವಂತೆ ಎರಡು ಬಾಣದ ಗುರುತುಗಳಿದ್ದು, ಅದರಲ್ಲಿ ಒಂದು ಬಿಳಿ ಬಣ್ಣ, ಮತ್ತೊಂದು ಹಸಿರು ಬಣ್ಣದಲ್ಲಿದೆ. ಈ ಮೂರು ಬಣ್ಣಗಳು ರಾಷ್ಟ್ರಧ್ವಜವನ್ನು ಪ್ರತಿನಿಧಿಸುವಂತೆ ಲೋಗೋ ವಿನ್ಯಾಸ ಮಾಡಿರುವುದು ಗಮನ ಸೆಳೆಯುತ್ತಿದೆ.
ಲೋಗೋದಲ್ಲಿ ಕೇಸರಿ ಬಣ್ಣ ಸೇರಿಸಿರುವುದಕ್ಕೆ ಕೆಲವು ಕಡೆಗಳಲ್ಲಿ ಆಕ್ಷೇಪವೂ ಬಂದಿದೆ. ಕೇಸರಿ ಬಣ್ಣ ಹಾಕುವ ಮೂಲಕ ಬಿಜೆಪಿ ಜನರ ಭಾವನೆಗಳೊಂದಿಗೆ ಲಾಭ ಪಡೆಯುವ ಪ್ರಯತ್ನ ಮಾಡಿದೆ ಎಂದು ಕೆಲ ಸಂಘಟನೆಗಳು ವಿರೋಧ ಸೂಚಿಸಿವೆ.
ಭಿನ್ನ ಪ್ಲಾನ್‌ಗಳು ಲಭ್ಯ
ಬಿಎಸ್‌ಎನ್‌ಎಲ್ ಟೆಲಿಕಾಂ ಸಂಸ್ಥೆಯು ತನ್ನ ಲೋಗೋ ಅನ್ನು ಬದಲಾಯಿಸಿಕೊಂಡು, ಹೊಸ ಚೈತನ್ಯದೊಂದಿಗೆ ಗ್ರಾಹಕರ ಎದುರು ಮತ್ತೊಮ್ಮೆ ಮೈ ಕೊಡವಿ ನಿಂತಿದೆ. ಬಳಕೆದಾರ ಸ್ನೇಹಿ ಮೊಬೈಲ್ ರಿಚಾರ್ಜ್ ಪ್ಲಾನ್‌ಗಳನ್ನು ಘೋಷಿಸುತ್ತಿರುವ ಬಿಎಸ್‌ಎನ್‌ಎಲ್ ಗ್ರಾಹಕರನ್ನು ಆಕರ್ಷಿಸುವತ್ತ ಹೆಜ್ಜೆ ಇಟ್ಟು ತನ್ನ ವೈಭವ ಮರಳಿ ಪಡೆಯಲು ಯತ್ನಿಸುತ್ತಿದೆ. ತನ್ನ ಗ್ರಾಹಕರಿಗೆ ಏಳು ಹೊಸ ವೈಶಿಷ್ಯತೆಗಳನ್ನು ಘೋಷಿಸಿದೆ.
ಜಿಯೋ, ಏರ್‌ಟೆಲ್ ಇನ್ನಿತರ ಖಾಸಗಿ ಟೆಲಿಕಾಂ ಸಂಸ್ಥೆಗಳು ಮೊಬೈಲ್ ರಿಚಾರ್ಜ್ ದರಗಳನ್ನು ದುಬಾರಿ ಮಾಡಿಕೊಂಡಿವೆ. ಆದರೆ ಬಿಎಸ್‌ಎನ್‌ಎಲ್ 1ದಿನ, 28, 85, 365 ದಿನಗಳ ಮೊಬೈಲ್ ರಿಚಾರ್ಜ್ ಪ್ಲಾನ್‌ಗಳು ಇತರ ಕಂಪನಿಗಳ ಪ್ಲಾನ್‌ಗಿಂತ ದರ ಕೊಂಚ ಕಡಿಮೆಯೇ ಇದೆ.
91 ರೂಪಾಯಿ ರಿಚಾರ್ಜ್ ಪ್ಲಾನ್, 147 ರೂ.ಗೆ 30 ದಿನದ ಪ್ಲಾನ್, 187 ರೂ.ಗೆ 28 ದಿನಗಳ ಪ್ಲಾನ್, 247 ರೂ.ಗೆ 30 ದಿನ ಪ್ಲಾನ್ ಇದೆ. ಇಂಟರ್‌ನೆಟ್ ಸೇವೆ ಆಧಾರದಲ್ಲಿ ಹಣದಲ್ಲಿ ವ್ಯತ್ಯಾಸ ಕಾರಣಬಹುದು. ಕೇವಲ 1515 ರೂಪಾಯಿಗೆ ಒಂದು ವರ್ಷದ ಮೊಬೈಲ್ ರಿಚಾರ್ಜ್ ಪ್ಲಾನ್ ಸೇರಿದಂತೆ ಹಲವು ಯೋಜನೆ ಪ್ರಕಟಿಸಿದೆ.
ಟಾಟಾದೊಂದಿಗೆ ನಂಟು
ಟಾಟಾ ಸಮೂಹದ ಜೊತೆಗೆ 1500 ಕೋಟಿ ರೂಪಾಯಿ ಒಪ್ಪಂದದ ಬಳಿಕ ಬಿಎಸ್‌ಎನ್‌ಎಲ್ ಶರವೇಗದಲ್ಲಿ ಮೇಲ್ದರ್ಜೆಗೆ ಬರುತ್ತಿದೆ. ಈಗಾಗಲೇ ಸಾವಿರಾರು ಟವರ್‌ಗಳನ್ನು ಹಾಕುತ್ತಿರುವ ಬಿಎಸ್‌ಎನ್‌ಎಲ್, 4ಜಿ ಜೊತೆ ಜೊತೆಗೆ 5ಜಿ ಇಂಟರ್‌ನೆಟ್ ಸೇವೆ ಒದಗಿಸುತ್ತಿದೆ. ಹೊಸ ಒಪ್ಪಂದಿಂದ ಬಿಎಸ್‌ಎನ್‌ಎಲ್‌ಗೆ ಚೈತನ್ಯ ಬಂದಿದೆ ಎಂದು ಬಿಎಸ್‌ಎನ್‌ಎಲ್ ಅಧಿಕಾರಿಗಳು ಹೇಳುತ್ತಾರೆ.
ವಿಭಾಗ