ಗಾರ್ಡನ್‌ನಲ್ಲಿ ಹುಳ, ಕೀಟ ಬಾಧೆ ತಪ್ಪಿಸಲು ಈ ಗಿಡಗಳನ್ನು ನೆಟ್ಟು ನೋಡಿ; ಸಸಿಗಳು ಚಿಗುರುತ್ತಿಲ್ಲ ಎಂದು ದೂರುವ ಪ್ರಮೇಯವೇ ಬರಲ್ಲ
ಕನ್ನಡ ಸುದ್ದಿ  /  ಜೀವನಶೈಲಿ  /  ಗಾರ್ಡನ್‌ನಲ್ಲಿ ಹುಳ, ಕೀಟ ಬಾಧೆ ತಪ್ಪಿಸಲು ಈ ಗಿಡಗಳನ್ನು ನೆಟ್ಟು ನೋಡಿ; ಸಸಿಗಳು ಚಿಗುರುತ್ತಿಲ್ಲ ಎಂದು ದೂರುವ ಪ್ರಮೇಯವೇ ಬರಲ್ಲ

ಗಾರ್ಡನ್‌ನಲ್ಲಿ ಹುಳ, ಕೀಟ ಬಾಧೆ ತಪ್ಪಿಸಲು ಈ ಗಿಡಗಳನ್ನು ನೆಟ್ಟು ನೋಡಿ; ಸಸಿಗಳು ಚಿಗುರುತ್ತಿಲ್ಲ ಎಂದು ದೂರುವ ಪ್ರಮೇಯವೇ ಬರಲ್ಲ

ಗಾರ್ಡನಿಂಗ್ ಮಾಡೋದು ಹಲವರ ನೆಚ್ಚಿನ ಹವ್ಯಾಸ. ಮನೆಯ ಬಳಿ ಚೆಂದದ ಗಿಡಗಳನ್ನು ನೆಡಬೇಕು ಎಂದು ಕನಸು ಕಾಣುತ್ತಾರೆ. ಆದರೆ ಕೀಟಗಳ ಬಾಧೆಯಿಂದ ಗಿಡಗಳು ಚಿಗುರುವುದೇ ಕಷ್ಟವಾಗಿದೆ. ಹಣ್ಣುಗಳು, ಕಾಯಿಗಳನ್ನು ಕೂಡ ಅವು ತಿಂದು ಹಾಳು ಮಾಡುತ್ತವೆ. ನಿಮ್ಮ ಗಾರ್ಡನ್‌ನಲ್ಲೂ ಇದೇ ಕಥೆ ಆದ್ರೆ ಈ ಗಿಡಗಳನ್ನು ತಂದು ನೆಡಿ, ಕ್ರಿಮಿ ಕೀಟಗಳು ಗಾರ್ಡನ್‌ನಲ್ಲಿ ಸುಳಿದಾಡುವುದಿಲ್ಲ.

ಕೀಟ ವಿರೋಧಿ ಸಸ್ಯಗಳು
ಕೀಟ ವಿರೋಧಿ ಸಸ್ಯಗಳು

ಗಾರ್ಡನಿಂಗ್ ಮಾಡೋದ್ರಿಂದ ಮನೆಯ ಅಂದ ಹೆಚ್ಚೋದು ಮಾತ್ರವಲ್ಲ, ಮನಸ್ಸಿಗೂ ಖುಷಿ ಸಿಗುತ್ತದೆ. ಈಗೀಗ ಸ್ವಲ್ಪ ಜಾಗ ಸಿಕ್ಕರೂ ಸಾಕು ಗಾರ್ಡನ್ ಮಾಡುತ್ತಾರೆ. ಪಾಟ್‌ಗಳಲ್ಲೂ ಗಿಡ ನೆಡುವ ಅಭ್ಯಾಸ ರೂಢಿಯಲ್ಲಿದೆ. ಅಲ್ಲದೇ ಹೊರಗಡೆ ತರುವ ತರಕಾರಿಗಿಂತ ಮನೆಯಲ್ಲೇ ಬೆಳೆಯುವುದು ಉತ್ತಮ ಎಂದುಕೊಂಡು ತರಕಾರಿಗಳನ್ನು ಮನೆಯಲ್ಲೇ ಬೆಳೆಸುವ ಮನಸ್ಸು ಮಾಡುತ್ತಿದ್ದಾರೆ. ಆದರೆ ಇದಕ್ಕೆಲ್ಲಾ ಕೀಟಗಳು ಅಡ್ಡಿ ಬರುತ್ತಿವೆ.

ಎಷ್ಟೇ ಗಿಡಗಳನ್ನು ತಂದು ನೆಟ್ಟರೂ ಪದೇ ಪದೇ ಅವುಗಳನ್ನು ಕತ್ತರಿಸಿ ಹಾಳು ಮಾಡುತ್ತಿವೆ. ಪ್ರೀತಿಯಿಂದ ನೆಟ್ಟ ಗಿಡಗಳು ಚಿಗರಲು ಆರಂಭಿಸಿದಾಗ ಕೀಟಗಳು ಬಂದು ಹಾಳು ಮಾಡಿದರೆ ಮನಸ್ಸಿಗೆ ತುಂಬಾನೇ ಬೇಸರವಾಗುತ್ತದೆ. ಹಾಗಂತ ಕೀಟನಾಶಕ ಬಳಸುವುದು ಇಷ್ಟವಿಲ್ಲ, ಆದರೆ ಕೀಟಗಳು ಬಾರದಂತೆ ಮಾಡಬೇಕು ಎಂದರೆ ಏನು ಮಾಡಬೇಕು ಎನ್ನುವವರಿಗಾಗಿ ಈ ಸಲಹೆ. ಈ ಗಿಡಗಳನ್ನು ನೆಟ್ಟರೆ ನಿಮ್ಮ ಕೈದೋಟದಲ್ಲಿ ಕೀಟಗಳು ಸುಳಿದಾಡುವುದಿಲ್ಲ.

ಚೆಂಡು ಹೂವಿನ ಗಿಡ

ಮೊದಲಿನಿಂದಲೂ ರೈತರು ಚೆಂಡು ಹೂವಿನ ಗಿಡವನ್ನು ಕೀಟನಾಶಕವಾಗಿ ಬಳಸುತ್ತಿದ್ದರು. ಅವುಗಳನ್ನು ಹೊಲದ ಮಧ್ಯದಲ್ಲಿ ಒಂದೇ ಸಾಲಿನಲ್ಲಿ ಬೆಳೆಸಲಾಗುತ್ತದೆ. ಆದ್ದರಿಂದ, ಕೀಟಗಳು ಕಡಿಮೆಯಾಗುತ್ತವೆ ಮತ್ತು ಹೂವುಗಳೊಂದಿಗೆ ಹೆಚ್ಚುವರಿ ಆದಾಯವನ್ನು ಸಹ ಪಡೆಯಲಾಗುತ್ತದೆ. ದೊಡ್ಡ ಜಮೀನುಗಳಲ್ಲಷ್ಟೇ ಅಲ್ಲ, ಮನೆಯ ಚಿಕ್ಕ ತೋಟಗಳಲ್ಲೂ ಇವುಗಳನ್ನು ಬೆಳೆಸುವ ಮೂಲಕ ಕೀಟಗಳು ಬಾರದಂತೆ ತಡೆಯಬಹುದು.

ಬೆಳ್ಳುಳ್ಳಿ

ಬೆಳ್ಳುಳ್ಳಿ ಗಿಡವು ಒಂದು ರೀತಿಯ ಕಟುವಾದ ವಾಸನೆಯನ್ನು ಹೊಂದಿರುತ್ತದೆ. ಆದ್ದರಿಂದ, ಕೀಟಗಳು, ಗಿಡಹೇನುಗಳು ಮತ್ತು ಕೆಲವು ರೀತಿಯ ನೊಣಗಳು ಹತ್ತಿರ ಬರಲು ಇಷ್ಟಪಡುವುದಿಲ್ಲ. ಅದರಿಂದ ನಿಮ್ಮ ತೋಟದಲ್ಲಿ ಕೀಟಗಳ ಕಾಟ ಕಡಿಮೆಯಾಗುತ್ತದೆ.

ತುಳಸಿ

ಗಾರ್ಡನ್‌ ಮಧ್ಯೆ ತುಳಸಿ ಗಿಡಗಳನ್ನು ಬೆಳೆಸುವುದರಿಂದ ನೊಣ, ಸೊಳ್ಳೆಗಳು ಬರುವುದಿಲ್ಲ. ಕೆಲವರು ಗೋಡೆಯ ಸುತ್ತಲೂ ಒಂದೇ ಆಕಾರದಲ್ಲಿ ಸಸ್ಯಗಳನ್ನು ಬೆಳೆಸುತ್ತಾರೆ. ಅಂತಹ ಕಡೆ ತುಳಸಿ ಗಿಡಗಳನ್ನು ವ್ಯಾಪಕವಾಗಿ ಬೆಳೆಸುವುದರಿಂದ ಸೊಳ್ಳೆಗಳಂತಹ ಕೀಟ ಬಾಧೆ ಇರುವುದಿಲ್ಲ.

ನಿಂಬೆ ಹುಲ್ಲು

ಎತ್ತರದ ಮತ್ತು ಶಕ್ತಿಯುತವಾದ ಲೆಮೆನ್‌ಗ್ರಾಸ್‌ ಸಸ್ಯವು ಉತ್ತಮ ಕೀಟ ನಿವಾರಕವಾಗಿದೆ. ಇದನ್ನು ಹೆಚ್ಚಾಗಿ ಗಿಡಮೂಲಿಕೆ ಚಹಾಗಳಲ್ಲಿ ಬಳಸಲಾಗುತ್ತದೆ. ಅದರಿಂದ ಎಣ್ಣೆ ತೆಗೆದು ಮಾರುತ್ತಾರೆ. ಇದರ ರಸ ಮೈಗೆ ಹಚ್ಚಿಕೊಂಡು ಮಲಗುವುದರಿಂದ ಸೊಳ್ಳೆಗಳು ನಿಮ್ಮನ್ನು ಹೆಚ್ಚು ಕಚ್ಚುವುದನ್ನು ತಡೆಯುತ್ತದೆ. ಅಲ್ಲದೆ ನಮ್ಮ ತೋಟದಲ್ಲಿ ಅಲ್ಲೊಂದು ಇಲ್ಲೊಂದು ಈ ಹುಲ್ಲನ್ನು ಬೆಳೆಸುವುದರಿಂದ ಕೀಟಗಳು ನಿಮ್ಮ ಕೈದೋಟ ಬಳಿಗೆ ಬರುವುದಿಲ್ಲ.

ದಾಲ್ಚಿನ್ನಿ ಗಿಡ

ತೋಟದಲ್ಲಿ ಅಲ್ಲೊಂದು ದಾಲ್ಚಿನ್ನಿ ಗಿಡ ನೆಟ್ಟರೆ ಇರುವೆ, ಜಿರಳೆ, ನೊಣ ಮುಂತಾದವುಗಳ ಹತ್ತಿರ ಸುಳಿಯುವುದಿಲ್ಲ. ಆದ್ದರಿಂದ ಸುತ್ತಮುತ್ತಲಿನ ಉಳಿದ ಸಸ್ಯಗಳು ಸಹ ಇವುಗಳಿಂದ ರಕ್ಷಿಸಲ್ಪಡುತ್ತವೆ. ಆದರೆ ಇದು ತುಂಬಾ ದೊಡ್ಡ ಬೆಳೆಯುವ ಕಾರಣ ಮನೆಯ ಸಮೀಪ ನೆಡಲು ಸಾಧ್ಯವಿಲ್ಲ.

ಪುದಿನಾ

ಪುದಿನಾ ಕುಲದ ಎಲ್ಲಾ ಸಸ್ಯಗಳು ಒಂದು ರೀತಿಯ ಕಟುವಾದ ವಾಸನೆಯನ್ನು ಹೊಂದಿರುತ್ತವೆ. ಇದರ ವಾಸನೆಗೆ ಕೀಟಗಳು, ಹುಳಗಳು ಹತ್ತಿರ ಬರಲು ಹೆದರುತ್ತವೆ. ಹಾಗಾಗಿ ಪುದಿನ ಸೊಪ್ಪನ್ನು ಅಲ್ಲಲ್ಲಿ ತೋಟ ಅಥವಾ ಹಿತ್ತಲಿನಲ್ಲಿ ಹಾಕಿದರೆ ಕೆಲವು ಕೀಟಗಳು ಅಲ್ಲಿಗೆ ಬರುವುದಿಲ್ಲ.

ನೀವು ಗಾರ್ಡನಿಂಗ್ ಮಾಡುವ ಆಸೆ ಹೊಂದಿದ್ದು, ಕೀಟ, ಹುಳ ಬಾಧೆ ಬೇಸತ್ತಿದ್ದರೆ ಈ ಗಿಡಗಳನ್ನು ಬೆಳೆಸಿ, ಇನ್ನು ಮುಂದೆ ನಿಮ್ಮ ಗಾರ್ಡನ್‌ನಲ್ಲಿ ಇವುಗಳ ಕಾಟವೇ ಇರುವುದಿಲ್ಲ ಗಮನಿಸಿ.

Whats_app_banner