Kuwait Fire: ಕುವೈತ್ ನಲ್ಲಿ ಭಾರೀ ಅಗ್ನಿ ಅವಘಡ, 40 ಭಾರತೀಯರ ದುರ್ಮರಣ, ಹಲವರ ಸ್ಥಿತಿ ಗಂಭೀರ
Jun 12, 2024 06:56 PM IST
ಕುವೈತ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಬೃಹತ್ ಕಟ್ಟಡ.
- Kuwait Incident ಕುವೈತ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾರತೀಯರೇ ಜೀವ ಕಳೆದುಕೊಂಡಿದ್ದಾರೆ.
ಕುವೈತ್: ದಕ್ಷಿಣ ಕುವೈತ್ ನ ಕಟ್ಟಡವೊಂದರಲ್ಲಿ ಬುಧವಾರ ಸಂಭವಿಸಿದ ಭೀಕರ ಬೆಂಕಿಯಲ್ಲಿ ಕನಿಷ್ಠ 40 ಭಾರತೀಯರು ಸಾವನ್ನಪ್ಪಿದ್ದು, ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ. ಕುವೈತ್‌ನ ಕಾರ್ಮಿಕರು ತಂಗುವ ನಿವಾಸವಾದ ಅಲ್-ಮಂಗಾಫ್ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಿದ್ರೆಯಲ್ಲಿದ್ದವರು ಏಳಲಾಗದೇ ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದಾರೆ. ಕೆಲವರು ತಪ್ಪಿಸಿಕೊಂಡು ಬಂದರೂ ಸುಟ್ಟ ಗಾಯಗಳಿಂದ ನರಳುತ್ತಿದ್ದರು.ಕುವೈತ್ ನ ಆಂತರಿಕ ಸಚಿವ ಶೇಖ್ ಫಹಾದ್ ಅಲ್-ಯೂಸುಫ್ ಅಲ್-ಸಬಾಹ್ ಅವರು ಅಲ್-ಮಂಗಾಫ್ ಕಟ್ಟಡದ ಮಾಲೀಕ ಮತ್ತು ಕಾವಲುಗಾರರನ್ನು ಬಂಧಿಸುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ.
ದುರ್ಘಟನೆಯಲ್ಲಿ 40 ಭಾರತೀಯರು ಸಾವನ್ನಪ್ಪಿದ್ದಾರೆ ಮತ್ತು 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ದೃಢಪಡಿಸಿದ್ದಾರೆ. ಮೃತರು ಮತ್ತು ಗಾಯಗೊಂಡವರನ್ನು ಹಲವಾರು ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದ್ದು, ಸಾವುನೋವುಗಳ ಬಗ್ಗೆ ವಿವರಗಳನ್ನು ಇನ್ನೂ ಸಂಗ್ರಹಿಸಲಾಗುತ್ತಿದೆ. ಬೆಂಕಿ ನಂದಿಸುವ ಕೆಲಸವೂ ನಡೆದಿದ್ದು. ಬಹುತೇಕ ತಹಬದಿಗೆ ಬಂದಿದೆ.
ಗಾಯಗೊಂಡ ಹನ್ನೊಂದು ಭಾರತೀಯರನ್ನು ಮುಬಾರಕ್ ಅಲ್-ಕಬೀರ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರಲ್ಲಿ 10 ಮಂದಿಯನ್ನು ನಂತರ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಗಾಯಗೊಂಡ ಇನ್ನೂ ಆರು ಜನರನ್ನು ಫರ್ವಾನಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಅವರಲ್ಲಿ ನಾಲ್ವರನ್ನು ನಂತರ ಬಿಡುಗಡೆ ಮಾಡಲಾಯಿತು, ಒಬ್ಬರನ್ನು ಜಹ್ರಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಗಾಯಗೊಂಡ 30 ಕ್ಕೂ ಹೆಚ್ಚು ಭಾರತೀಯರನ್ನು ಅಲ್-ಅದಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರಲ್ಲಿ ಹೆಚ್ಚಿನವರ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಂಜಿನಿಯರಿಂಗ್ ಮತ್ತು ನಿರ್ಮಾಣ ಸಂಸ್ಥೆಯಾದ ಎನ್ಬಿಟಿಸಿ ಗ್ರೂಪ್ 195 ಕ್ಕೂ ಹೆಚ್ಚು ಕಾರ್ಮಿಕರನ್ನು ಇರಿಸಲು ಕಟ್ಟಡವನ್ನು ಬಾಡಿಗೆಗೆ ತೆಗೆದುಕೊಂಡಿತ್ತು. ಈ ಕಟ್ಟಡದಲ್ಲಿ ತಂಗಿದ್ದಾಗಿ ಅಗ್ನಿ ದುರಂತ ಸಂಭವಿಸಿದೆ. ಮೃತಪಟ್ಟರಲ್ಲಿ ಹೆಚ್ಚಿನವರು ಕೇರಳ, ತಮಿಳುನಾಡು ಮತ್ತು ಉತ್ತರ ರಾಜ್ಯಗಳ ಭಾರತೀಯರು. ಮೃತಪಟ್ಟವರು 20 ರಿಂದ 50 ವರ್ಷದೊಳಗಿನವರು ಎಂದು ವರದಿಗಳು ತಿಳಿಸಿವೆ.
ಕುವೈತ್ ಮುನ್ಸಿಪಾಲಿಟಿಯ ಮಹಾನಿರ್ದೇಶಕ ಸೌದ್ ಅಲ್-ಡಬ್ಬೌಸ್ ಅವರು ಅಲ್-ಅಹ್ಮದಿ ಗವರ್ನರೇಟ್ನ ಉಪ ಮಹಾನಿರ್ದೇಶಕರು, ಅಲ್-ಅಹ್ಮದಿ ಪುರಸಭೆಯ ಹಂಗಾಮಿ ನಿರ್ದೇಶಕರು, ಲೆಕ್ಕಪರಿಶೋಧನೆ ಮತ್ತು ಎಂಜಿನಿಯರಿಂಗ್ ವಿಭಾಗದ ನಿರ್ದೇಶಕರು ಸೇರಿದಂತೆ ಹಲವಾರು ಅಧಿಕಾರಿಗಳನ್ನು ಅಮಾನತುಗೊಳಿಸಲು ಆದೇಶ ಹೊರಡಿಸಿದ್ದಾರೆ.
ಅಲ್ಲದೇ ಒಂದು ವಸತಿ ಕಟ್ಟಡದಲ್ಲಿ ಹೆಚ್ಚಿನ ಸಂಖ್ಯೆಯ ಕಾರ್ಮಿಕರನ್ನು ಇಟ್ಟುಕೊಂಡು ಕಾನೂನು ಉಲ್ಲಂಘನೆ ಮಾಡುತ್ತಿರುವವರ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕು. ಇಡೀ ಕುವೈತ್‌ನಲ್ಲಿ ಇದೇ ರೀತಿಯ ಘಟನೆಗಳನ್ನು ತಡೆಗಟ್ಟಲು ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಅಲ್-ಸಬಾಹ್ ಕುವೈತ್ ಪುರಸಭೆಗೆ ಸೂಚಿಸಲಾಗಿದೆ.
ಗಾಯಗೊಂಡವರನ್ನು ಕರೆದೊಯ್ಯಲಾದ ಮೂರು ಆಸ್ಪತ್ರೆಗಳಿಗೆ ಸ್ವೈಕಾ ಭೇಟಿ ನೀಡಿದರು ಮತ್ತು ಭಾರತೀಯ ಅಧಿಕಾರಿಗಳ ಸಂಪೂರ್ಣ ಬೆಂಬಲದ ಭರವಸೆ ನೀಡಿದರು ಎಂದು ಭಾರತೀಯ ರಾಯಭಾರ ಕಚೇರಿಯ ಎಕ್ಸ್ ಪೋಸ್ಟ್‌ಗಳು ತಿಳಿಸಿವೆ.
ಕುವೈತ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಸಂತ್ರಸ್ತರಿಗೆ ಸಹಾಯ ಮಾಡಲು ಅಲ್ಲಿನ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. "ಕುವೈತ್ ನಗರದಲ್ಲಿ ಸಂಭವಿಸಿದ ಅಗ್ನಿ ದುರಂತವು ದುಃಖಕರವಾಗಿದೆ. ತಮ್ಮ ಹತ್ತಿರದ ಮತ್ತು ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲರೊಂದಿಗೂ ನನ್ನ ಸಂತಾಪಗಳಿಗೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕುವೈತ್ ನಲ್ಲಿ ಸಂಭವಿಸಿದ ಅಗ್ನಿ ದುರಂತದ ಸುದ್ದಿಯಿಂದ ತೀವ್ರ ಆಘಾತಕ್ಕೊಳಗಾಗಿದ್ದೇನೆ. 40 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ ಮತ್ತು 50 ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತೊಂದು ಪೋಸ್ಟ್ನಲ್ಲಿ ತಿಳಿಸಿದ್ದಾರೆ.