ಕಾಸರಗೋಡು ಪಟಾಕಿ ದುರಂತ, 150ಕ್ಕೂ ಹೆಚ್ಚು ಜನರಿಗೆ ಗಾಯ, 10 ಮಂದಿ ಸ್ಥಿತಿ ಗಂಭೀರ; ನಿಯಮ ಉಲ್ಲಂಘನೆಯೇ ಅವಘಡಕ್ಕೆ ಕಾರಣ
Oct 30, 2024 12:59 AM IST
ಕಾಸರಗೋಡು ಪಟಾಕಿ ದುರಂತ, 150ಕ್ಕೂ ಹೆಚ್ಚು ಜನರಿಗೆ ಗಾಯ, 10 ಮಂದಿ ಸ್ಥಿತಿ ಗಂಭೀರ; ನಿಯಮ ಉಲ್ಲಂಘನೆಯೇ ಅವಘಡಕ್ಕೆ ಕಾರಣ
- Anjootambalam Veererkavu Temple: ಕೇರಳದ ಕಾಸರಗೋಡಿನ ಅಂಜುತಂಬಲಂ ವೀರಕಾವ್ ದೇವಸ್ಥಾನದಲ್ಲಿ ತೆಯ್ಯಂ ಆಚರಣೆಯ ವೇಳೆ ಪಟಾಕಿ ದುರಂತ ಸಂಭವ ನಡೆದಿದ್ದು, 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಆದರೆ ಈ ಪಟಾಕಿ ದುರಂತಕ್ಕೆ ಕಾರಣವೇನು? ಇಲ್ಲಿದೆ ವಿವರ.
ಕಾಸರಗೋಡು (ಕೇರಳ): ಜಿಲ್ಲೆಯ ನೀಲೇಶ್ವರದ ಅಂಜುತಂಬಲಂ ವೀರಕಾವ್ ದೇವಸ್ಥಾನದಲ್ಲಿ (Anjootambalam Veererkavu Temple) ನಡೆದ ತೆಯ್ಯಂ ಉತ್ಸವದ (Theyyam festival in Kasaragod) ವೇಳೆ ಸಂಗ್ರಹಿಸಿಟ್ಟಿದ್ದ ಪಟಾಕಿ ಅವಘಡದಲ್ಲಿ 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಆದರೆ 10 ಮಂದಿ ಶೇ 80 ರಷ್ಟು ದೇಹ ಸುಟ್ಟಿದ್ದು, ಅವರ ಪರಿಸ್ಥಿತಿ ಚಿಂತಾಜನಕವಾಗಿದೆ. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಸಂಗ್ರಹಿಸಿಟ್ಟಿದ್ದ ಪಟಾಕಿ ಶೆಡ್ನಲ್ಲಿ ಬೆಂಕಿ ಕಾಣಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದೆ.
ಈ ಉತ್ಸವದಲ್ಲಿ ದೊಡ್ಡ ಮಟ್ಟದಲ್ಲಿ ಪಟಾಕಿ ಸಿಡಿಸುವಂತಿಲ್ಲ ಎಂದು ಆಡಳಿತ ಮಂಡಳಿ ಸೂಚಿಸಿತ್ತು. ಸಂಭವಿಸಿದ ಭಾರಿ ಪಟಾಕಿ ದುರಂತಕ್ಕೆ ದೇವಾಲಯದ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಅಲ್ಲದೆ, ನಂತರ ಕೇರಳ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಜತೆಗೆ ಅಪಘಾತಕ್ಕೆ ಸಂಬಂಧಿಸಿ ವಿಚಾರಣೆಗಾಗಿ ಪೊಲೀಸರು ಇಬ್ಬರು ಅಧಿಕಾರಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಪಟಾಕಿ ಸಿಡಿಸುತ್ತಿದ್ದ ಸ್ಥಳ ಮತ್ತು ಪಟಾಕಿ ಸಂಗ್ರಹ ಮಾಡಿಟ್ಟಿದ್ದ ಜಾಗವು ಕೇವಲ ಮೂರು ಅಡಿಗಳಷ್ಟು ಅಂತರ ಇತ್ತು ಎನ್ನಲಾಗಿದೆ.
ನಿಯಮ ಉಲ್ಲಂಘನೆ
ನಿಯಮದ ಪ್ರಕಾರ ಪಟಾಕಿ ಸಿಡಿಸಿದ್ದ ಜಾಗ ಮತ್ತು ಸಂಗ್ರಹಿಸಿಟ್ಟಿದ್ದ ಸ್ಥಳವು ಕನಿಷ್ಠ 100 ಮೀಟರ್ ಅಂತರದ ಅಗತ್ಯ ಇರಬೇಕಿತ್ತು. ಉತ್ಸವದಲ್ಲಿ ಒಣಗಿದ ತೆಂಗಿನ ಗರಿಗಳಿಂದ ಮಾಡಲಾಗಿದ್ದ ದೀಪಗಳನ್ನು ಬಳಸಲಾಗಿತ್ತು. ಪಟಾಕಿ ಸಿಡಿದ ಕಿಡಿಗಳು ಶೆಡ್ ಮೇಲೆ ಬಿದ್ದಿದ್ದು, ಸ್ಪೋಟಗೊಂಡಿದ್ದು ದೇವಸ್ಥಾನದ ಚಾವಣಿಯೇ ಎಗರಿಹೋಗಿದೆ. ಈ ಬಗ್ಗೆ ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ ಶಿಲ್ಪಾ ತಿಳಿಸಿದ್ದಾರೆ. ಕಾರ್ಯವಿಧಾನದ ಲೋಪಗಳ ವ್ಯಾಪ್ತಿಯನ್ನು ಗುರುತಿಸಲು ತನಿಖೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಕೆ ಇನ್ಬಸೇಕರ್ ಖಚಿತಪಡಿಸಿದ್ದಾರೆ.
ಮಾದರಿ ಸಂಗ್ರಹ
ಉತ್ಸವದ ಅಂತಿಮ ದಿನದಂದು ಸುಮಾರು 25,000 ರೂಪಾಯಿ ಮೌಲ್ಯದ ಹೆಚ್ಚುವರಿ ಪಟಾಕಿಗಳನ್ನು ಸಂಗ್ರಹಿಸಿದ್ದ ಕೋಣೆಗೆ ಪಟಾಕಿಯಿಂದ ಬಂದ ಕಿಡಿಗಳು ಬಿದ್ದಿವೆ ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ. ವಿಧಿವಿಜ್ಞಾನ ತಂಡಗಳು ತನಿಖೆಗೆ ಸಹಾಯ ಮಾಡಲು ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಿವೆ ಮತ್ತು ಸ್ಥಳೀಯ ಅಧಿಕಾರಿಗಳು ಭವಿಷ್ಯದ ಘಟನೆಗಳನ್ನು ತಡೆಗಟ್ಟಲು ಸಮಗ್ರ ಪರಿಶೀಲನೆಗೆ ಭರವಸೆ ನೀಡಿದ್ದಾರೆ.
ಸ್ಥಳೀಯ ಸಿಪಿಐ (ಎಂ) ಶಾಸಕ ಎಂ ರಾಜಗೋಪಾಲ್ ಈ ಘಟನೆಯನ್ನು ತುಂಬಾ ದುರದೃಷ್ಟಕರ ಎಂದು ಕರೆದಿದ್ದಾರೆ. ಕಾಸರಗೋಡು ಸಂಸದ ರಾಜ್ ಮೋಹನ್ ಉನ್ನಿಥಾನ್ ಮಾತನಾಡಿ, ಸುರಕ್ಷತಾ ಪ್ರೋಟೋಕಾಲ್ಗಳನ್ನು ಖಚಿತಪಡಿಸಿಕೊಳ್ಳಲು ವಿಫಲವಾದ ಅಧಿಕಾರಿಗಳ ಕಡೆಯಿಂದ ಗಂಭೀರ ಲೋಪವಾಗಿದೆ ಎಂದು ಹೇಳಿದ್ದಾರೆ. ಗಂಭೀರವಾಗಿ ಗಾಯಗೊಂಡವರಿಗೆ ಶೇಕಡಾ 80 ರಷ್ಟು ಸುಟ್ಟ ಗಾಯಗಳಾಗಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಈ ದುರಂತಕ್ಕೆ ಕಾರಣ ಏನೆಂಬದನ್ನು ಪತ್ತೆ ಹಚ್ಚಲಾಗುತ್ತಿದೆ. ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಪ್ರಕರಣ ದಾಖಲಿಸಲಾಗಿದೆ ಎಂದಿದ್ದಾರೆ. ಪಟಾಕಿ ಸ್ಫೋಟಗೊಳ್ಳುತ್ತಿದ್ದಂತೆ ಬೆಚ್ಚಿಬಿದ್ದ ಸಾವಿರಾರು ಜನರು, ದಿಕ್ಕಾಪಾಲಾಗಿ ಓಡಿದ್ದಾರೆ. ಈ ವೇಳೆ ಕಾಲ್ತುಳಿತವೂ ಸಂಭವಿಸಿತು.