ಮನೆಯಲ್ಲೇ ಮಗ ಸತ್ತರೂ ಅಂಧ ದಂಪತಿಗೆ ಗೊತ್ತೇ ಆಗಿಲ್ಲ, ಊಟ ತರ್ತಾನೆ ಅಂತ 4 ದಿನದಿಂದ ಕಾಯ್ತಿದ್ರು! ಪರಿಸ್ಥಿತಿ ನೋಡಿ ಪೊಲೀಸರಿಗೂ ಕಣ್ಣೀರು
ಅಂಧ ವೃದ್ಧ ದಂಪತಿಗಳು 4 ದಿನಗಳ ಕಾಲ ಮಗನ ಕೊಳೆತ ದೇಹದೊಂದಿಗೆ ವಾಸಿಸಿರುವ ಹೃದಯ ವಿದ್ರಾವಕ ಘಟನೆ ತೆಲಂಗಾಣದ ಹೈದಾರಾಬಾದ್ನ ನಾಗೋಲ್ ಎಂಬಲ್ಲಿ ನಡೆದಿದೆ. ತಮ್ಮ ಮಗ ಮನೆಯಲ್ಲೇ ಸತ್ತಿದ್ದಾರೆಂದು ಅವರಿಗೆ ತಿಳಿದಿರಲಿಲ್ಲ.
ಹೈದರಾಬಾದ್: ತಮ್ಮ ಮಗ ಬರುತ್ತಾನೆ, ಊಟ ಕೊಡುತ್ತಾನೆ ಎಂದು ಅಂಧ ವೃದ್ಧ ದಂಪತಿ ಕಾಯುತ್ತಿದ್ದಾರೆ. ಆದರೆ, ಮೂರು ದಿನಗಳಾದರೂ ಬರಲಿಲ್ಲ. ಅಕ್ಕಪಕ್ಕದ ಮನೆಯವರಿಗೂ ಅಂಧ ಪೋಷಕರ ಹಸಿವಿನ ಕೂಗು ಕೇಳಿಸಲಿಲ್ಲ! ಆದರೆ ಆಗಿದ್ದೇ ಬೇರೆ. ತಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ ಮಗ ಮನೆಯಲ್ಲೇ ಸತ್ತು 3 ದಿನಗಳಾದರೂ ತಿಳಿಯದ ಅಂಧ ದಂಪತಿ, ಶವದೊಂದಿಗೆ ವಾಸಿಸಿದ್ದಾರೆ. ಪೊಲೀಸರೇ ಕಣ್ಣೀರಿಟ್ಟ ಹೃದಯವಿದ್ರಾವಕ ಘಟನೆ ಹೈದರಾಬಾದ್ ನಗರದ ನಾಗೋಲ್ ಎಂಬಲ್ಲಿ ನಡೆದಿದೆ.
ಹೌದು, ಮನೆಯಲ್ಲೇ ಮಗನ ಸತ್ತರೂ, ವಿಷಯ ತಿಳಿಯದ ಅಂಧ ವೃದ್ಧ ದಂಪತಿ ಮೂರು ದಿನ ದೂಡಿ ಊಟ-ನೀರಿಲ್ಲದೆ ಅಸ್ವಸ್ಥರಾಗಿರುವ ದಾರುಣ ಘಟನೆಗೆ ನಡೆದಿದೆ. ನಾಗೋಲ್ ವಿಭಾಗ ವ್ಯಾಪ್ತಿಯ ಜೈಪುರ ಕಾಲೋನಿಯ ಅಂಧರ ಕಾಲೋನಿಯಲ್ಲಿ ರಮಣ (65) ಮತ್ತು ಶಾಂತಕುಮಾರಿ (60) ವೃದ್ಧ ದಂಪತಿ, ತಮ್ಮ ಕಿರಿಯ ಮಗನೊಂದಿಗೆ ವಾಸವಿದ್ದರು. ಅಸ್ವಸ್ಥರಾಗಿದ್ದ ವೃದ್ಧ ದಂಪತಿಯನ್ನು ಪೊಲೀಸರು ರಕ್ಷಿಸಿದ್ದಾರೆ. ಪ್ರಮೋದ್ ಮೃತ ವ್ಯಕ್ತಿ. ಅವರು ಕುಡಿತದ ಚಟಕ್ಕೆ ಒಳಗಾಗಿದ್ದರು.
ಕುಡಿತದ ಚಟವಿದ್ದರೂ ಪೋಷಕನ್ನು ಚೆನ್ನಾಗಿ ನೋಡಿಕೊಳ್ತಿದ್ದ
ಮಗನ ಶವದೊಂದಿಗೆ 3 ದಿನಗಳ ವಾಸವಾಗಿದ್ದ ಅಂಧ ದಂಪತಿಗೆ ಇಬ್ಬರು ಮಕ್ಕಳು. ಹಿರಿಯ ಮಗ ಪ್ರದೀಪ್ ತನ್ನ ಕುಟುಂಬ ಸದಸ್ಯರೊಂದಿಗೆ ಬೇರೆಡೆ ವಾಸಿಸುತ್ತಿದ್ದಾರೆ. ಕಿರಿಯ ಮಗ ಪ್ರಮೋದ್ (30) ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದ. ಪ್ರಮೋದ್ಗೂ ಮದುವೆಯಾಗಿತ್ತು. ಆದರೆ, ಕಾರಣಾಂತರಗಳಿಂದ ಪತ್ನಿ ಬಿಟ್ಟು ಹೋಗಿದ್ದಳು. ಆ ಕಾರಣಕ್ಕೆ ಕುಡಿತದ ಚಟಕ್ಕೆ ಬಿದ್ದಿದ್ದ. ಆದರೂ ತನ್ನ ಅಂಧ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಆದರೆ ಅತಿಯಾದ ಮದ್ಯ ಸೇವನೆಯಿಂದ ಆತನ ಆರೋಗ್ಯವೂ ಸಂಪೂರ್ಣ ಹದಗೆಟ್ಟಿತ್ತು.
ಪೇಂಟರ್ ಕೆಲಸ ಮಾಡುತ್ತಿದ್ದ ಪ್ರಮೋದ್, 3 ದಿನಗಳ ಹಿಂದೆ ಮದ್ಯದ ಅಮಲಿನಲ್ಲಿ ಸಾವನ್ನಪ್ಪಿದ್ದರು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ದುರಂತವೆಂದರೆ, ಮನೆಯಲ್ಲಿದ್ದ ಅಂಧ ಪೋಷಕರಿಗೆ ತಮ್ಮ ಮಗ ಸತ್ತಿರುವುದನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಎಷ್ಟೇ ಕರೆದರೂ ಯಾರೂ ಉತ್ತರ ನೀಡಲಿಲ್ಲ. ಹಸಿವಾಗುತ್ತಿದೆ ಊಟ-ನೀರು ಬೇಕು ಎಂದು ಕೇಳಿದ್ದಾರೆ. ಆದರೆ ಯಾರೂ ಮಾತನಾಡಿಲ್ಲ. ವೃದ್ಧಾಪ್ಯದ ಹಂತದಲ್ಲಿದ್ದವರಿಗೆ ದೃಷ್ಟಿ ಇಲ್ಲದ ಕಾರಣ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿದ್ದರು. ಕನಿಷ್ಠ ಪಕ್ಷ ಅಕ್ಕಪಕ್ಕದ ಮನೆಯವರು ಯಾರೂ ಗಮನಿಸದಿರುವುದು ಬೇಸರದ ಸಂಗತಿ.
ಒಂದೆಡೆ ವಾಸನೆ, ಮತ್ತೊಂದೆಡೆ ಹಸಿವು, ಪೊಲೀಸರ ಮಾನವೀಯತೆ
ಆದರೆ ಸತ್ತು ಮೂರು ದಿನ ಕಳೆದ ಕಾರಣ ಮೃತದೇಹ ಕೊಳೆತು ಮನೆಯಿಂದ ದುರ್ವಾಸನೆ ಬರುತ್ತಿತ್ತು. ದುರ್ವಾಸನೆ ಹೆಚ್ಚಾದ ಬಳಿಕ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಾಗೋಲ್ ಸಿಐಎ ಸೂರ್ಯ ನಾಯ್ಕ್, ಎಸ್‌ಎಸ್‌ಐ ಶಿವ ನಾಗಪ್ರಸಾದ್ ತಂಡದೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಅಸಲಿ ವಿಷಯ ಹೊರಬಿತ್ತು. ಕೂಡಲೇ ಮನೆಯ ಬಾಗಿಲು ತೆಗೆದು ಒಂದೆಡೆ ಹಸಿವು, ಇನ್ನೊಂದೆಡೆ ಅಸಹನೀಯ ದುರ್ವಾಸನೆಯಿಂದ ಕಂಗಾಲಾಗಿದ್ದ ವೃದ್ಧ ದಂಪತಿಯನ್ನು ಹೊರತಂದು ರಕ್ಷಿಸಿದರು. ಅಲ್ಲದೆ, ಪೊಲೀಸರೇ ವೃದ್ಧ ದಂಪತಿಗಳಿಗೆ ಸ್ನಾನ ಮಾಡಿಸಿ ಊಟದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದರು.
ಬಳಿಕ ತಮ್ಮ ಕಿರಿಯ ಪುತ್ರ ಪ್ರಮೋದ್ ಮೃತಪಟ್ಟಿರುವ ವಿಷಯವನ್ನು ಪೋಷಕರಿಗೆ ತಿಳಿಸಿದರು. ಮೂರು ದಿನಗಳ ಹಿಂದೆ ಪ್ರಮೋದ್ ತನ್ನ ಪೋಷಕರಿಗೆ ಊಟ ಬಡಿಸಿ ನಿದ್ರೆಗೆ ಜಾರಿದ್ದರು. ಆ ಬಳಿಕ ಎಷ್ಟೇ ಕೂಗಿದರೂ ಯಾರೂ ಪ್ರತಿಕ್ರಿಯಿಸಲಿಲ್ಲ ಎಂದು ದಂಪತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಪ್ರಮೋದ್ ನಿದ್ರೆಯಲ್ಲೇ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಪ್ರಮೋದ್ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ಕಾರಣ ತಿಳಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಮತ್ತೊಬ್ಬ ಮಗ ಪ್ರದೀಪ ಅವರನ್ನು ಕರೆಸಿ, ಅವರಿಗೆ ವೃದ್ಧ ದಂಪತಿಯನ್ನು ಒಪ್ಪಿಸಲಾಯಿತು. ಕಿರಿಯ ಮಗನಿಗೆ ಪಿಟ್ಸ್ ಇದೆ ಎಂದು ಹೇಳಲಾಗಿದೆ. ಅಂದು ಕುಡಿದು ಬಂದಿದ್ದ ಪ್ರಮೋದ್, ಪೋಷಕರಿಗೆ ಊಟ ಬಡಿಸಿದ ಬಳಿಕ ಪಿಟ್ಸ್ ಬಂದಿರಬಹುದು. ಇದರಿಂದಲೂ ನಿಧನರಾಗಿರಬಹುದು ಎಂದು ಹೇಳಲಾಗುತ್ತಿದೆ. ಆದರೆ ಮೂರು ದಿನಗಳಿಂದ ಅಂಧ ದಂಪತಿ ತಮ್ಮ ಮಗ ಬರುತ್ತಾನೆ, ಊಟ ಕೊಡುತ್ತಾನೆ ಎಂದು ಕಾಯುತ್ತಿದ್ದರು. ಆದರೆ ಹೀಗಾಗಿರುತ್ತದೆ ಎಂದು ಅವರು ಊಹಿಸಿರಲಿಲ್ಲ.