ವಯನಾಡ್ನಲ್ಲಿ ಅಣ್ಣನ ದಾಖಲೆ ಮುರಿದು ಭಾರಿ ಮತಗಳೊಂದಿಗೆ ಪ್ರಿಯಾಂಕಾ ಗಾಂಧಿ ವಿಜಯೋತ್ಸವ; ಇಂದಿರಾ ಗಾಂಧಿ ಮೊಮ್ಮಗಳು ಸಂಸತ್ ಪ್ರವೇಶ
Nov 23, 2024 07:33 PM IST
ವಯನಾಡ್ ಉಪಚುನಾವಣೆ: ಚೊಚ್ಚಲ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿಗೆ ಘನ ವಿಜಯೋತ್ಸವ; ಸಂಸತ್ ಪ್ರವೇಶಿಸಿದ ಇಂದಿರಾ ಗಾಂಧಿ ಮೊಮ್ಮಗಳು
- Priyanka Gandhi Election Result 2024: ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅಣ್ಣ ರಾಹುಲ್ ಗಾಂಧಿ ಅವರ ದಾಖಲೆ ಮುರಿದು ಭಾರಿ ಮತಗಳೊಂದಿಗೆ ಪ್ರಿಯಾಂಕಾ ಗಾಂಧಿ ಬಹುತೇಕ ಗೆಲುವು ಸಾಧಿಸಿದ್ದಾರೆ.
ವಯನಾಡು: ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಸ್ಪರ್ಧಿಸಿದ್ದ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಸುನಾಮಿ ಎಬ್ಬಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಅಣ್ಣ ಪಡೆದಿದ್ದ ಮತಗಳ ದಾಖಲೆಯನ್ನೇ ಮುರಿದ ಪ್ರಿಯಾಂಕಾ, 4 ಲಕ್ಷಕ್ಕೂ ಹೆಚ್ಚು ಮತಗಳಿಂದ ಬಹುತೇಕ ಗೆಲುವು ಸಾಧಿಸಿದ್ದಾರೆ. ಪ್ರಿಯಾಂಕಾ, ತಮ್ಮ ಚೊಚ್ಚಲ ಚುನಾವಣೆ ಕದನದಲ್ಲೇ ದೊಡ್ಡ ಜಯದ ನಗೆ ಬೀರುವ ಮೂಲಕ ಸಂಸತ್ತು ಪ್ರವೇಶಿಸಿದ್ದಾರೆ. ಕಳೆದ 2 ಲೋಕಸಭಾ ಚುನಾವಣೆಗಳು ಮತ್ತು ಉಪಚುನಾವಣೆಯಲ್ಲೂ ನೆಹರು ಕುಟುಂಬಕ್ಕೆ ವಯನಾಡು ಕ್ಷೇತ್ರದ ಜನತೆ ಬೆಂಬಲ ನೀಡಿದ್ದಾರೆ.
ಪ್ರಿಯಾಂಕಾ 6,22,338 ಮತ, ಪಡೆದು ಗೆಲುವು ಸಾಧಿಸಿದ್ದಾರೆ. ಸಿಪಿಐ(ಎಂ) ಅಭ್ಯರ್ಥಿ ಸತ್ಯನ್ ಮೊಕೆರಿ 2,11,407 ಮತಗಳನ್ನು ಪಡೆದರು. ಬಿಜೆಪಿ ಅಭ್ಯರ್ಥಿ ನವ್ಯಾ ಹರಿದಾಸ್ ಮೂರನೇ ಸ್ಥಾನ ಪಡೆದರು. 4.1 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆದ್ದು ಬೀಗಿದರು.
2024ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ, ಇದೇ ಕ್ಷೇತ್ರದಿಂದ 3.5 ಲಕ್ಷ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು. ಆರಂಭಿಕ ಸುತ್ತಿನಿಂದಲೇ ಮುನ್ನಡೆ ಕಾಯ್ದುಕೊಂಡ ಪ್ರಿಯಾಂಕಾ ಅವರು ಮತ ಎಣಿಕೆ ಮುಗಿಯುವ ತನಕ ಬೃಹತ್ ಅಂತರದ ಮತಗಳ ಮುನ್ನಡೆ ಕಾಯ್ದುಕೊಂಡರು. ನೋಡ ನೋಡುತ್ತಿದ್ದಂತೆ 1 ಲಕ್ಷ, 2 ಲಕ್ಷ, 3 ಲಕ್ಷ, 4 ಲಕ್ಷಗಳ ಅಂತರ ಕಾಯ್ದುಕೊಂಡರು. ಪ್ರತಿಸ್ಪರ್ಧಿಗಳಾದ ಎಲ್‌ಡಿಎಫ್‌ನ ಸತ್ಯನ್ ಮೊಕೇರಿ ಮತ್ತು ಬಿಜೆಪಿಯ ನೇವಿ ಹರಿದಾಸ್ ಯಾವುದೇ ಹಂತದಲ್ಲೂ ಪ್ರತಿರೋಧ ತೋರಲಿಲ್ಲ.
2024ರಲ್ಲಿ ಲೋಕಸಭಾ ಚುನಾವಣೆಯಲ್ಲಿ ರಾಯ್ಬರೇಲಿ ಜೊತೆಗೆ ವಯನಾಡಿನಲ್ಲಿದ್ದ ಸ್ಪರ್ಧಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎರಡೂ ಕ್ಷೇತ್ರಗಳಲ್ಲೂ ಭರ್ಜರಿ ಗೆಲುವು ಸಾಧಿಸಿದ್ದರು. ಆದರೆ ರಾಯ್ಬರೇಲಿ ಕ್ಷೇತ್ರದ ಸಂಸದರಾಗುವುದಾಗಿ ಆಯ್ಕೆ ಮಾಡಿಕೊಂಡ ಕಾರಣ ವಯನಾಡು ಕ್ಷೇತ್ರವನ್ನು ಬಿಟ್ಟುಕೊಡಲಿದ್ದಾರೆ. ಬಳಿಕ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಅವರನ್ನು ಕಣಕ್ಕಿಳಿಸಿದರು. ಪ್ರಿಯಾಂಕಾ ಗಾಂಧಿ ಅವರ ಪರ ಸಹೋದರ ರಾಹುಲ್ ಗಾಂಧಿ, ತಾಯಿ ಸೋನಿಯಾ ಗಾಂಧಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
2024ರ ಲೋಕಸಭಾ ಚುನಾವಣೆಯಲ್ಲಿ ವಯನಾಡು ಕ್ಷೇತ್ರ
ರಾಹುಲ್ ಗಾಂಧಿ (ಕಾಂಗ್ರೆಸ್) - 647,445 ಮತ (ಶೇ 59.69)
ಅನ್ನಿ ರಾಜ (ಸಿಪಿಐ ಪಕ್ಷ) - 283,023 ಮತ (ಶೇ 25.24)
ಕೆ ಸುರೇಂದ್ರನ್ (ಬಿಜೆಪಿ) - 141,045 (ಶೇ 13)
2019ರ ಲೋಕಸಭಾ ಚುನಾವಣೆಯಲ್ಲಿ ವಯನಾಡು ಕ್ಷೇತ್ರ
ರಾಹುಲ್ ಗಾಂಧಿ (ಕಾಂಗ್ರೆಸ್) - 706,367 ಮತ (ಶೇ 64.94)
ಪಿಪಿ ಸುನೀರ್ (ಸಿಪಿಐ ಪಕ್ಷ) - 274,597 ಮತ (ಶೇ 25.24)
ತುಷಾರ್ ವೆಲ್ಲಪಲ್ಲಿ (ಬಿಡಿಜೆಎಸ್) - 78,816 (ಶೇ 7.25)
ರಾಹುಲ್ ಗಾಂಧಿ ಕೈಹಿಡಿದಿದ್ದ ಕ್ಷೇತ್ರ ಇದು
ರಾಹುಲ್ ಗಾಂಧಿ ಅವರಿಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದ ಕೇರಳದ ವಯನಾಡ್ ಕ್ಷೇತ್ರದ ಮೂಲಕ ಇದೀಗ ಪ್ರಿಯಾಂಕಾ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದಾರೆ. 2019ರಲ್ಲಿ ರಾಹುಲ್ ಗಾಂಧಿ ಅಮೇಠಿಯಿಂದ ಸೋತಿದ್ದರು. ಆದರೆ ವಯನಾಡ್ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಲೋಕಸಭಾ ಸದಸ್ಯತ್ವ ಉಳಿಸಿಕೊಂಡಿದ್ದರು. 2024ರಲ್ಲೂ ರಾಹುಲ್ ವಯನಾಡ್ ಮತ್ತು ರಾಯ್ಬರೇಲಿ ಎರಡೂ ಕ್ಷೇತ್ರಗಳಿಂದ ಚುನಾವಣೆಗೆ ಸ್ಪರ್ಧಿಸಿ ಎರಡೂ ಸ್ಥಾನಗಳನ್ನು ಜಯಿಸಿದ್ದರು. ಆದರೆ ಅವರು ರಾಯ್ಬರೇಲಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದ ಕಾರಣ ರಾಹುಲ್ ಗಾಂಧಿ ಸಹೋದರಿ ಪ್ರಿಯಾಂಕಾ ಗಾಂಧಿ ಅಣ್ಣನ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ. ಭೂಕುಸಿತ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದ ಪ್ರಿಯಾಂಕಾ ತಳಮಟ್ಟದಲ್ಲಿ ಕೆಲಸ ಮಾಡುತ್ತಿದ್ದರು.