ಮಹಾರಾಷ್ಟ್ರ ಚುನಾವಣಾ ಫಲಿತಾಂಶ: ಕಾಂಗ್ರೆಸ್ ಅಧಿಪತ್ಯ ಕೊನೆಗೊಳಿಸಿದ ಸಮ್ಮಿಶ್ರ ಸರ್ಕಾರ, 34 ವರ್ಷದ ಇತಿಹಾಸ, ಈ ಬಾರಿ ಮಹಾಯುತಿಗೆ ಅಧಿಕಾರ
Maharashtra election results: ಮಹಾರಾಷ್ಟ್ರ ಚುನಾವಣಾ ಫಲಿತಾಂಶ ನಿಚ್ಚಳವಾಗಿದೆ. ಈ ಬಾರಿ ಮಹಾಯುತಿಗೆ ಅಧಿಕಾರ ನೀಡಿ ಜನಾದೇಶವೂ ಆಗಿದೆ. ಮಹಾರಾಷ್ಟ್ರಕ್ಕೆ ಸಮ್ಮಿಶ್ರ ಸರ್ಕಾರ ಹೊಸದಲ್ಲ. ಕಾಂಗ್ರೆಸ್ ಅಧಿಪತ್ಯ ಕೊನೆಗೊಳಿಸಿದ ಸಮ್ಮಿಶ್ರ ಸರ್ಕಾರದ ಪರಂಪರೆಗೆ 34 ವರ್ಷದ ಇತಿಹಾಸವಿದೆ. ಅದರ ಕಡೆಗೊಂದು ನೋಟ ಇಲ್ಲಿದೆ.
Maharashtra election results: ಮಹಾರಾಷ್ಟ್ರ ಚುನಾವಣಾ ಫಲಿತಾಂಶ ಗಮನಿಸಿದರೆ ಕಳೆದ 34 ವರ್ಷಗಳ ಅವಧಿಯಲ್ಲಿ ಯಾವುದೆ ಒಂದು ಪಕ್ಷ ಮಹಾರಾಷ್ಟ್ರದ ಆಡಳಿತ ನಡೆಸಿಲ್ಲ. ಸರಳವಾಗಿ ಹೇಳಬೇಕು ಎಂದರೆ ಯಾವುದೆ ಒಂದು ಪಕ್ಷಕ್ಕೆ ಸರ್ಕಾರ ರಚಿಸುವುದಕ್ಕೆ ಬೇಕಾದ ಮ್ಯಾಜಿಕ್ ನಂಬರ್ ಅನ್ನು ಮತದಾರರು ಜನಾದೇಶವಾಗಿ ಕೊಟ್ಟಿಲ್ಲ. 1995ರಲ್ಲಿ ಶುರುವಾದ ಈ ಪರಂಪರೆಯನ್ನು ಮತದಾರರು ಈ ಬಾರಿಯೂ ಮುಂದುವರಿಸುವ ಸೂಚನೆ ನೀಡಿದ್ದಾರೆ. ಈ ಬಾರಿ ಕೂಡ ಮಹಾಯುತಿ ಮೈತ್ರಿಯನ್ನೇ ಜನರು ಮೆಚ್ಚಿಕೊಂಡಿದ್ದು, ಮತ್ತೊಮ್ಮೆ ಸಮ್ಮಿಶ್ರ ಸರ್ಕಾರದ ಆಡಳಿತಕ್ಕೆ ರಾಜ್ಯವನ್ನು ಒಪ್ಪಿಸಿದ್ದಾರೆ. ಮಹಾ ವಿಕಾಸ್ ಅಘಾಡಿ ಕೂಡ ಸರ್ಕಾರ ರಚನೆಯ ಆಶಯ ಹೊತ್ತುಕೊಂಡಿತ್ತಾದರೂ ಈ ಬಾರಿ ಅದಕ್ಕೆ ಆಡಳಿತ ಚುಕ್ಕಾಣಿ ಸಿಗುವುದು ಕಷ್ಟ. ಈಗಾಗಲೇ ಫಲಿತಾಂಶದ ಸ್ಪಷ್ಟ ಚಿತ್ರಣ ಸಿಕ್ಕಿದ್ದು, ಬಿಜೆಪಿ, ಶಿವ ಸೇನಾ, ಎನ್‌ಸಿಪಿಗಳ ಮಹಾಯುತಿ ಬಳಿಯೇ ಆಡಳಿತ ಚುಕ್ಕಾಣಿ ಉಳಿಯಲಿದೆ. ಇದೇ ವೇಳೆ ಕಳೆದ ಚುನಾವಣೆ (2019)ಯಲ್ಲಿ ಮಹಾ ವಿಕಾಸ ಅಘಾಡಿ ಮೈತ್ರಿ ರಚಿಸಿದ್ದ ಶಿವ ಸೇನಾ (ಯುಬಿಟಿ), ಎನ್‌ಸಿಪಿ ( ಶರದ್ ಪವಾರ್) ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಈ ಬಾರಿ ಮುಖಭಂಗವಾಗಿದೆ. ಈಗ ಚಾಲ್ತಿಯಲ್ಲಿರುವ ಮೈತ್ರಿ ಪರಂಪರೆಗೆ 34 ವರ್ಷಗಳ ಇತಿಹಾಸ.
ಕಾಂಗ್ರೆಸ್ ಅಧಿಪತ್ಯ ಕೊನೆಗೊಳಿಸಿದ ಮೈತ್ರಿ ಪರಂಪರೆಗೆ 34 ವರ್ಷದ ಇತಿಹಾಸ
ಮಹಾರಾಷ್ಟ್ರದ ಚುನಾವಣಾ ಫಲಿತಾಂಶ ಗಮನಿಸಿದರೆ, 1960ರಲ್ಲಿ ಮಹಾರಾಷ್ಟ್ರ ರಾಜ್ಯ ರಚನೆಯ ನಂತರ 1962ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ 264 ಸ್ಥಾನಗಳಲ್ಲಿ 215 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಿತ್ತು. 1972ರಲ್ಲಿ 270 ಸ್ಥಾನಗಳ ಪೈಕಿ 222ರಲ್ಲಿ ಗೆಲುವು ಸಾಧಿಸಿತ್ತು. 1972 ರ ಚುನಾವಣೆಯಲ್ಲಿ ಬಾಳಾ ಠಾಕ್ರೆ ಸ್ಥಾಪಿಸಿದ ಶಿವ ಸೇನಾ ಒಂದು ಸ್ಥಾನ ಗೆದ್ದು ವಿಧಾನ ಸಭೆಯಲ್ಲಿ ಪ್ರಾತಿನಿಧ್ಯ ಶುರುಮಾಡಿತ್ತು. 1978ರಲ್ಲಿ ವಿಧಾನಸಭೆಯ ಸದಸ್ಯ ಬಲವನ್ನು 288ಕ್ಕೆ ಏರಿಸಲಾಯಿತು. ತುರ್ತು ಪರಿಸ್ಥಿತಿ ಕೊನೆಗೊಂಡ ಬಳಿಕ ನಡೆದ ಮಹಾರಾಷ್ಟ್ರ ಚುನಾವಣೆಯಲ್ಲಿ ಕಾಂಗ್ರೆಸ್ ಇಬ್ಭಾಗವಾಗಿತ್ತು. ಅವರೆಡೂ ಚುನಾವಣೆಯನ್ನು ಎದುರಿಸಿದ್ದವು. ನಂತರ ಜೊತೆಗೆ ಸಮ್ಮಿಶ್ರ ಸರ್ಕಾರ ರಚಿಸಿದ್ದವು. ಅಂದು ಒಂದು ಬಣಕ್ಕೆ ಶರದ್ ಪವಾರ್ ನಾಯಕರಾಗಿದ್ದರು. 1980ರ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್ 186 ಸ್ಥಾನಗಳಲ್ಲಿ ಗೆದ್ದು ಸರ್ಕಾರ ರಚಿಸಿತ್ತು. 1990ರ ತನಕವೂ ಮಹಾರಾಷ್ಟ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆಯೇ ಆಗಿತ್ತು. ನಂತರ ಅದರ ಪ್ರಭಾವ ಕ್ಷೀಣಿಸತೊಡಗಿತು. ಮೈತ್ರಿ ಪರಂಪರೆಗೆ ಸಂಬಂಧಿಸಿ ಗಮನಿಸಬೇಕಾದ ಮುಖ್ಯ ಅಂಶಗಳಿವು
ಮಹಾರಾಷ್ಟ್ರ ರಾಜಕಾರಣದ ಸಮ್ಮಿಶ್ರ ಸರ್ಕಾರ ಪರಂಪರೆಯ 5 ಮುಖ್ಯ ಅಂಶಗಳು
1) 1990ರಲ್ಲಿ ಚುನಾವಣೆ ನಡೆದಾಗ 288 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಕ್ಷಕ್ಕೆ 141 ಸ್ಥಾನ ಸಿಕ್ಕಿತ್ತು. ಆದರೆ ಬಹುಮತ ಇರಲಿಲ್ಲ. ಅಂದು ಬಿಜೆಪಿಗೆ 42, ಶಿವ ಸೇನಾಕ್ಕೆ 52 ಸ್ಥಾನಗಳು ಸಿಕ್ಕಿದ್ದವು. ಮಿತ್ರರನ್ನು ಸೇರಿಸಿಕೊಂಡು ಕಾಂಗ್ರೆಸ್ ಸರ್ಕಾರ ರಚಿಸಿತ್ತು. ಮೈತ್ರಿ ಪರಂಪರೆ ಶುರುವಾಗಿದ್ದು ಹೀಗೆ.
2) ಅದಾದ ನಂತರ 1995ರಲ್ಲಿ ಶಿವ ಸೇನಾ ಬಿಜೆಪಿ ಮೈತ್ರಿ ಕಾಂಗ್ರೆಸ್ ಪಾರಮ್ಯವನ್ನು ಕೊನೆಗೊಳಿಸಿ, ಮೈತ್ರಿ ಸರ್ಕಾರ ರಚಿಸಿತು. ಅಂದು ಶಿವ ಸೇನಾ, ಬಿಜೆಪಿ ಮೈತ್ರಿ ಆಡಳಿತಕ್ಕೆ ಕಾಂಗ್ರೆಸ್ ಪಕ್ಷದಿಂದ ಹೊರ ಬಂದ 45 ಶಾಸಕರು ಮತ್ತು ಕೆಲವು ಸ್ವತಂತ್ರ ಶಾಸಕರು ಬೆಂಬಲ ಕೊಟ್ಟರು. 1999ರ ಚುನಾವಣೆಗೆ ಮೊದಲು ಕಾಂಗ್ರೆಸ್ ಪಕ್ಷ ಮತ್ತೆ ವಿಭಜನೆಯಾಯಿತು, ಶರದ್ ಪವಾರ್ ನೇತೃತ್ವದ ಗುಂಪು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ)ಯನ್ನು ರಚಿಸಿತು.
3) 1999ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 75 ಸ್ಥಾನ ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಎನ್‌ಸಿಪಿಗೆ 58 ಸ್ಥಾನ ಸಿಕ್ಕಿದ್ದವು. ಶಿವ ಸೇನಾ 69, ಬಿಜೆಪಿ 56 ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದವು. ಕಾಂಗ್ರೆಸ್ ಮತ್ತು ಎನ್‌ಸಿಪಿ ಪ್ರತ್ಯೇಕವಾಗಿ ಚುನಾವಣೆ ಎದುರಿಸಿದ್ದರೂ ಒಟ್ಟಾಗಿ ಸರ್ಕಾರ ರಚನೆ ಮಾಡಿದವು. ಈ ಮೈತ್ರಿ ಸರ್ಕಾರ ಮುಂದಿನ 15 ವರ್ಷ ಆಡಳಿತ ನಡೆಸಿದ್ದು ಇತಿಹಾಸ.
4) 2014ರ ಚುನಾವಣೆ ಸಂದರ್ಭದಲ್ಲಿ ದೇಶದ ಉದ್ದಗಲಕ್ಕೂ ಬಿಜೆಪಿ ಪ್ರಭಾವ ಹೆಚ್ಚಾಗಿತ್ತು. ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿದಿತ್ತು. ಮಹಾರಾಷ್ಟ್ರದಲ್ಲಿ ಕೂಡ ಇದು ಪ್ರಭಾವ ಬೀರಿದ್ದು, ಬಿಜೆಪಿ 122 ಸ್ಥಾನಗಳಲ್ಲಿ, ಶಿವ ಸೇನಾ 63 ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದವು. ಕಾಂಗ್ರೆಸ್ 42, ಎನ್‌ಸಿಪಿ 41ರಲ್ಲಿ ಗೆಲುವು ಪಡೆದಿದ್ದವು. ಸರ್ಕಾರ ರಚನೆಯಾಗಿ ಒಂದು ತಿಂಗಳ ಬಳಿಕ ಶಿವ ಸೇನಾ ಬಿಜೆಪಿ ನೇತೃತ್ವದ ಸರ್ಕಾರದ ಜೊತೆ ಕೈಜೋಡಿಸಿತು.
5) ಮುಂದೆ 2019ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವ ಸೇನಾ ಎರಡೂ ಒಟ್ಟಾಗಿ ಚುನಾವಣೆಗೆ ಸ್ಪರ್ಧಿಸಿದವು. ಬಿಜೆಪಿ 105, ಶಿವ ಸೇನಾ 56 ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದವು. ಇನ್ನೇನು ಸರ್ಕಾರ ರಚನೆಯಾಗಬೇಕು ಎನ್ನುವಾಗ ಉದ್ಧವ್ ಠಾಕ್ರೆ ನೇತೃತ್ವದ ಶಿವ ಸೇನಾ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪಟ್ಟು ಹಿಡಿಯಿತು. ಬಿಜೆಪಿ ಒಪ್ಪದೇ ಇದ್ದಾಗ ಮೈತ್ರಿ ಕಡಿದುಕೊಂಡು ಹೊರ ಬಂದು ಕಾಂಗ್ರೆಸ್, ಎನ್‌ಸಿಪಿ ಜತೆ ಸೇರಿ ಮಹಾ ವಿಕಾಸ್ ಅಘಾಡಿ ರಚನೆ ಮಾಡಿ ಸರ್ಕಾರ ರಚಿಸಿತು. ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾದರು. ಆದರೆ, ಇದು 2022ರ ಜೂನ್ ವರೆಗೆ ಉಳಿಯಿತು. ನಂತರ ಏಕನಾಥ ಶಿಂಧೆ ಮತ್ತು ಅವರ ಬೆಂಬಲಿಗರು ಉದ್ಧವ್ ಠಾಕ್ರೆ ನಡೆಯನ್ನು ಖಂಡಿಸಿ ಹೊರಬಂದರು. ಇನ್ನೊಂದೆಡೆ ಅಜಿತ್ ಪವಾರ್ ಮತ್ತು ಅವರ ಬೆಂಬಲಿಗರು ಎನ್‌ಸಿಪಿಯಿಂದ ಹೊರಬಂದರು. ಬಿಜೆಪಿ ಜತೆ ಸೇರಿ ಮಹಾಯುತಿ ಸರ್ಕಾರ ರಚನೆಗೆ ಕಾರಣವಾದರು.
ಪ್ರಸ್ತುತ ಮಹಾಯುತಿಯಲ್ಲಿ ಬಿಜೆಪಿ, ಶಿವ ಸೇನಾ, ಎನ್‌ಸಿಪಿಗಳಿದ್ದರೆ, ಮಹಾ ವಿಕಾಸ್ ಅಘಾಡಿಯಲ್ಲಿ ಕಾಂಗ್ರೆಸ್, ಶಿವ ಸೇನಾ (ಯುಬಿಟಿ), ಎನ್‌ಸಿಪಿ (ಎಸ್‌ಪಿ) ಹೀಗೆ ಒಟ್ಟು ಆರು ಪಕ್ಷಗಳು ಮಹಾರಾಷ್ಟ್ರದ ಸಮ್ಮಿಶ್ರ ಸರ್ಕಾರ ರಾಜಕಾರಣದಲ್ಲಿ ಗಮನಸೆಳೆಯುತ್ತಿವೆ.
- ಉಮೇಶ್ ಕುಮಾರ್ ಶಿಮ್ಲಡ್ಕ, ಸುದ್ದಿ ಸಂಪಾದಕ, ಹಿಂದೂಸ್ತಾನ್ ಟೈಮ್ಸ್ ಕನ್ನಡ