Jairam Mahato: ಯಾರು ಈ ಟೈಗರ್‌ ಜೈರಾಮ್‌ ಮಹತೋ? ಜಾರ್ಖಂಡ್‌ ಚುನಾವಣೆ ವೇಳೆ ಹೀರೋ ಆದ ಯುವ ನಾಯಕ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Jairam Mahato: ಯಾರು ಈ ಟೈಗರ್‌ ಜೈರಾಮ್‌ ಮಹತೋ? ಜಾರ್ಖಂಡ್‌ ಚುನಾವಣೆ ವೇಳೆ ಹೀರೋ ಆದ ಯುವ ನಾಯಕ

Jairam Mahato: ಯಾರು ಈ ಟೈಗರ್‌ ಜೈರಾಮ್‌ ಮಹತೋ? ಜಾರ್ಖಂಡ್‌ ಚುನಾವಣೆ ವೇಳೆ ಹೀರೋ ಆದ ಯುವ ನಾಯಕ

Jairam Mahato: ಜಾರ್ಖಂಡ್ ಚುನಾವಣಾ ಫಲಿತಾಂಶದ ಮತ ಎಣಿಕೆ ಕಾರ್ಯ ಭರದಿಂದ ಸಾಗುತ್ತಿದ್ದು, ಎನ್‌ಡಿಎ ಹಾಗೂ ಇಂಡಿಯಾ ಒಕ್ಕೂಟಗಳ ನಡುವೆ ಭಾರಿ ಪೈಪೋಟಿ ಎದುರಾಗಿದೆ. ಈ ನಡುವೆ ಜೈರಾಮ್ ಮಹತೋ ಹಾಗೂ ಅವರ ಪಕ್ಷದ ಬಗ್ಗೆ ಜಾರ್ಖಂಡ್ ರಾಜಕೀಯ ವಲಯದಲ್ಲಿ ಚರ್ಚೆ ಶುರುವಾಗಿದೆ. ಯಾರು ಈ ಜೈರಾಮ್ ಮಹತೋ, ಅವರ ಪಕ್ಷಕ್ಕೆ ಯಾಕಿಷ್ಟು ಮಹತ್ವ ನೀಡಲಾಗುತ್ತಿದೆ ಎಂಬ ವಿವರ ಇಲ್ಲಿದೆ.

ಟೈಗರ್‌ ಜೈರಾಮ್‌ ಮಹತೋ
ಟೈಗರ್‌ ಜೈರಾಮ್‌ ಮಹತೋ

Jairam Mahato Profile: ಜಾರ್ಖಂಡ್ ವಿಧಾನಸಭಾ ಚುನಾವಣಾ 2024ರ ಫಲಿತಾಂಶ ಇನ್ನೇನು ಕೆಲವು ಕ್ಷಣಗಳಲ್ಲಿ ಹೊರ ಬೀಳಲಿದೆ. ಈ ನಡುವೆ ಜಾರ್ಖಂಡ್ ರಾಜಕೀಯಕ್ಕೆ ಹೊಸದಾಗಿ ಕಾಲಿರಿಸಿದ ಪಕ್ಷ ಒಂದರ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ, ಅಲ್ಲದೇ ಜೈರಾಮ್ ಮಹತೋ ಎಂಬ ವ್ಯಕ್ತಿಯ ಹೆಸರು ಕೂಡ ಭಾರಿ ಸದ್ದು ಮಾಡುತ್ತಿದೆ. ಹಾಗಾದರೆ ಯಾರೀ ಜೈರಾಮ್ ಮಹತೋ, ಅವರ ಪಕ್ಷ ಯಾವುದು, ಜಾರ್ಖಂಡ್ 6ನೇ ವಿಧಾನಸಭಾ ಚುನಾವಣೆಯಲ್ಲಿ ಈ ಪಕ್ಷದ ಮಹತ್ವವೇನು ಎಂಬುದನ್ನು ನೋಡೋಣ.

ಜಾರ್ಖಂಡ್ ಲೋಕತಾಂತ್ರಿಕ ಕ್ರಾಂತಿಕಾರಿ ಮೋರ್ಚಾ (ಜೆಕೆಎಲ್‌ಎಂ) ಈಗಾಗಲೇ ತೀವ್ರ ಚುನಾವಣಾ ಕದನದಲ್ಲಿ ಸ್ಪರ್ಧಿಸಿದ್ದು, ಪ್ರಬಲ ಪಕ್ಷಗಳಿಗೆ ಸೆಡ್ಡು ಹೊಡಿದಿದೆ. ಜೆಕೆಎಲ್‌ಎಂ ಜಾರ್ಖಂಡ್‌ನ 81 ವಿಧಾನಸಭಾ ಕ್ಷೇತ್ರಗಳ ಪೈಕಿ 73 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಸ್ವತಃ ಜೈರಾಮ್ ಮಹತೋ ಡುಮ್ರಿ ಮತ್ತು ಬರ್ಮೊ ಈ ಎರಡು ಪ್ರಮುಖ ಸ್ಥಾನಗಳಿಂದ ಸ್ಪರ್ಧಿಸುತ್ತಿದ್ದಾರೆ.

30 ವರ್ಷದ ಜೈರಾಮ್ ಮಹತೋ ನೇತೃತ್ವದ ಜೆಕೆಎಲ್‌ಎಂ ಪಕ್ಷವು ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನೇತೃತ್ವದ ಸ್ಥಾಪಿತ ಇಂಡಿಯಾ ಬ್ಲಾಕ್ ಮತ್ತು ಭಾರತೀಯ ಜನತಾ ಪಾರ್ಟಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ (ಎನ್‌ಡಿಎ)ಗೆ ಸವಾಲು ಹಾಕುತ್ತಿದೆ.

ಯಾರು ಈ ಟೈಗರ್ ಜೈರಾಮ್, ಹಿನ್ನೆಲೆಯೇನು?

ಬೆಂಗಲಿಗರು ಟೈಗರ್ ಜೈರಾಮ್ ಎಂದೇ ಕರೆಯುವ ಜೈರಾಮ್ ಮಹತೋ 1995 ರಲ್ಲಿ ಧನ್ಬಾದ್ ಜಿಲ್ಲೆಯ ಮಾಂತಂಡ್ ಗ್ರಾಮದಲ್ಲಿ ಜನಿಸಿದರು.

ಮಹತೋ ಜಾರ್ಖಂಡ್‌ನ ರಾಜ್ಯತ್ವ ಚಳವಳಿಯಲ್ಲಿ ಆಳವಾದ ಬೇರುಗಳನ್ನು ಹೊಂದಿರುವ ಕುಟುಂಬದಿಂದ ಬಂದವರು ಈ ಜೈರಾಮ್‌. 2022ರಲ್ಲಿ 11 ಜಿಲ್ಲೆಗಳಲ್ಲಿ ರಾಜ್ಯ ಮಟ್ಟದ ಪರೀಕ್ಷೆಗಳಲ್ಲಿ ಭೋಜ್‌ಪುರಿ, ಮಾಗಾಹಿ ಮತ್ತು ಅಂಗಿಕಾದಂತಹ ಭಾಷೆಗಳನ್ನು ಸೇರಿಸುವುದರ ವಿರುದ್ಧ ನಡೆದ ಪ್ರತಿಭಟನೆಯ ನೇತೃತ್ವ ವಹಿಸುವ ಮೂಲಕ ಇವರು ಗಮನ ಸೆಳೆಯುತ್ತಾರೆ. ಅವರ ವಾದವು ಜಾರ್ಖಂಡಿ ಭಾಷೆಗಳನ್ನು ಉತ್ತೇಜಿಸುವುದು ಮತ್ತು ರಾಜ್ಯದ ಸ್ಥಳೀಯ ಜನಸಂಖ್ಯೆಗೆ ಸ್ಥಳೀಯ ಉದ್ಯೋಗವನ್ನು ನೀಡಬೇಕು ಎಂಬುದಾಗಿತ್ತು.

ಜೂನ್ 2023ರಲ್ಲಿ, ಮಹತೋ ಮತ್ತು ಇತರ ವಿದ್ಯಾರ್ಥಿ ಮುಖಂಡರು ಜಾರ್ಖಂಡಿ ಭಾಷಾ ಸಂಘರ್ಷ್ ಖಾಟಿಯಾನ್ ಸಮಿತಿಯನ್ನು ರಚಿಸಿದರು, ಇದು ಸ್ಥಳೀಯ ನಿವಾಸಿಗಳಿಗೆ ಅನುಕೂಲಕರವಾದ ನೀತಿಗಳನ್ನು ರೂಪಿಸಲು ಒತ್ತಾಯಿಸಿತು. ಅವರ ಅಭಿಯಾನವು ಮೂರು ಜಿಲ್ಲೆಗಳಲ್ಲಿ ಭಾಷಾ ನೀತಿಯನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಯಿತು.

ಜೆಕೆಎಲ್‌ಎಂ ಪಕ್ಷ ಸ್ಥಾಪನೆ

ಆಗಸ್ಟ್ 2024ರಲ್ಲಿ ಚುನಾವಣೆಗೆ ಕೇವಲ ಮೂರು ತಿಂಗಳ ಮೊದಲು ಭಾರತೀಯ ಚುನಾವಣಾ ಆಯೋಗವು ಅಧಿಕೃತವಾಗಿ ಜೆಕೆಎಲ್‌ಎಂ ಅನ್ನು ರಾಜಕೀಯ ಪಕ್ಷವಾಗಿ ನೋಂದಾಯಿಸಿತು. ಮಹತೋ ಅವರ ಸಂಘಟನೆಯು ಸ್ಥಳೀಯ ಹೆಮ್ಮೆ ಮತ್ತು ಜಾರ್ಖಂಡಿ ಗುರುತಿನ ಸುತ್ತ ತನ್ನ ಕಾರ್ಯಸೂಚಿಯನ್ನು ನಿರ್ಮಿಸಿತು.ಈ ಪಕ್ಷದ ನಾಯಕರು ಅಧಿಕಾರಕ್ಕೆ ಬಂದರೆ ತಮ್ಮ ಸಂಬಳದಿಂದ ಶೇ 75ರಷ್ಟು ಸಾರ್ವಜನಿಕ ಕಲ್ಯಾಣಕ್ಕೆ ನೀಡುವುದಾಗಿ ಭರವಸೆ ನೀಡಿದೆ.

ಜಿಲ್ಲಾ ಮತ್ತು ಬ್ಲಾಕ್ ಮಟ್ಟದಲ್ಲಿ ಭ್ರಷ್ಟಾಚಾರ ವಿರೋಧಿ ಬ್ಯೂರೋಗಳನ್ನು ಸ್ಥಾಪಿಸಲು, ನಿವಾಸ ಆಧಾರಿತ ಉದ್ಯೋಗ ನೀತಿಯನ್ನು ಜಾರಿಗೆ ತರಲು ಮತ್ತು ರಾಜ್ಯದ ಜನಸಂಖ್ಯೆಯ 15 ಪ್ರತಿಶತವನ್ನು ಒಳಗೊಂಡಿರುವ ಕುಡ್ಮಿ ಮಹ್ತೋ ಸಮುದಾಯದ ಹಿತಾಸಕ್ತಿಗಳನ್ನು ರಕ್ಷಿಸಲು ಪಕ್ಷವು ಬದ್ಧವಾಗಿದೆ.

2024ರ ಜಾರ್ಖಂಡ್ ಚುನಾವಣೆಯಲ್ಲಿ ಜೆಕೆಎಲ್‌ಎಂ ಅಭ್ಯರ್ಥಿಗಳು 

ಜೆಕೆಎಲ್‌ಎಂ ಪಕ್ಷಕ್ಕೆ ಇದು ಚೊಚ್ಚಲ ವಿಧಾನಸಭಾ ಚುನಾವಣೆ ಆಗಿದ್ದು, ಈ ಬಾರಿ ಚುನಾವಣೆಯಲ್ಲಿ 81 ಕ್ಷೇತ್ರಗಳಲ್ಲಿ 73 ರಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಜೈರಾಮ್ ಮಹತೋ ಸ್ವತಃ ಎರಡು ಪ್ರಮುಖ ಸ್ಥಾನಗಳಿಂದ ಸ್ಪರ್ಧಿಸುತ್ತಿದ್ದಾರೆ.

ಇದು ಜೈರಾಮ್ ಮಹತೋ ಅವರ ಮೊದಲ ಚುನಾವಣಾ ಹೋರಾಟವಲ್ಲ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ, JKLM ಇನ್ನೂ ನೋಂದಣಿಯಾಗದ ಕಾರಣ ಅವರು ಮತ್ತ ಪಕ್ಷದ ಇತರ ಸದಸ್ಯರು 8 ಸ್ಥಾನಗಳಲ್ಲಿ ಸ್ವತಂತ್ರರಾಗಿ ಸ್ಪರ್ಧಿಸಿದ್ದರು. ಯಾವುದೇ ಅಭ್ಯರ್ಥಿಗಳು ಗೆಲ್ಲದಿದ್ದರೂ, ಅವರು ಗಣನೀಯ ಬೆಂಬಲವನ್ನು ಗಳಿಸಿದರು. ಮಹತೋ ಸ್ವತಃ ಗಿರಿದಿಹ್‌ನಲ್ಲಿ 347,322 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದ್ದರು. 

ಇದೀಗ ಜಾರ್ಖಂಡ್ ವಿಧಾನಸಭಾ ಚುನಾವಣೆ 2024ರ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದು ಜೈರಾಮ್ ಮಹತೋ ಅವರ ಪಕ್ಷದ ಅಭ್ಯರ್ಥಿಗಳ ಭವಿಷ್ಯ ಹೇಗಿದೆ ಎಂದು ಎದುರು ನೋಡುತ್ತಿದ್ದಾರೆ. 

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.