2 ಕಡೆ ಗೆದ್ದು ರಾಯ್‌ಬರೇಲಿ ಉಳಿಸಿಕೊಂಡ ರಾಹುಲ್ ಗಾಂಧಿ; ವಯನಾಡ್‌ನಲ್ಲಿ ಪ್ರಿಯಾಂಕಾ ಗಾಂಧಿ ಸ್ಪರ್ಧೆ ಖಚಿತ -Lok Sabha Election
Jun 17, 2024 09:27 PM IST
2 ಕಡೆ ಗೆದ್ದು ರಾಯ್‌ಬರೇಲಿ ಉಳಿಸಿಕೊಂಡ ರಾಹುಲ್ ಗಾಂಧಿ; ವಯನಾಡ್‌ನಲ್ಲಿ ಪ್ರಿಯಾಂಕಾ ಗಾಂಧಿ ಸ್ಪರ್ಧೆ ಖಚಿತ
- ಜೂನ್ 4 ರಂದು ಪ್ರಕಟವಾದ ಲೋಕಸಭಾ ಚುನಾವಣೆಯ ಫಲಿತಾಂಶದ 14 ದಿನಗಳಲ್ಲಿ ರಾಹುಲ್ ಗಾಂಧಿ ಒಂದು ಕ್ಷೇತ್ರವನ್ನು ಬಿಟ್ಟುಕೊಡಬೇಕಿತ್ತು. ಅದರಂತೆ ರಾಯ್‌ಬರೇಲಿಯನ್ನು ಆಯ್ಕೆ ಮಾಡಿಕೊಂಡು ವಯನಾಡ್ ಎಂಪಿ ಸ್ಥಾನಕ್ಕ ರಾಜೀನಾಮೆ ನೀಡಲಿದ್ದಾರೆ.
ದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಯ್ ಬರೇಲಿ ಲೋಕಸಭಾ ಕ್ಷೇತ್ರವನ್ನು ಉಳಿಸಿಕೊಳ್ಳಲಿದ್ದಾರೆ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧಿಸಲು ವಯನಾಡ್ ಕ್ಷೇತ್ರವನ್ನು ಬಿಟ್ಟುಕೊಡಲಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. ಇಂದು (ಜೂನ್ 17, ಸೋಮವಾರ) ಪಕ್ಷದ ಹಿರಿಯ ನಾಯಕರೊಂದಿಗೆ ಚರ್ಚೆ ನಡೆಸಿದ ಬಳಿಕ ಮಾಹಿತಿ ನೀಡಿರುವ ಖರ್ಗೆ ಅವರು, ರಾಹುಲ್ ಗಾಂಧಿ ರಾಯ್‌ಬರೇಲಿ ಮತ್ತು ವಯನಾಡ್ ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿ ಗೆದ್ದಿದ್ದರು. ಚುನಾವಣಾ ಫಲಿತಾಂಶದ 14 ದಿನಗಳಲ್ಲಿ ಒಂದು ಸ್ಥಾನವನ್ನು ಖಾಲಿ ಮಾಡಬೇಕಿತ್ತು ಹೀಗಾಗಿ ನಾಯಕರ ಜೊತೆಗೆ ಚರ್ಚೆಯ ಬಳಿಕ ರಾಯ್‌ಬರೇಲಿಯನ್ನು ಉಳಿಸಿಕೊಳ್ಳುವ ನಿರ್ಧಾರ ಮಾಡಿದ್ದು, ವಯನಾಡ್ ಎಂಪಿ ಸ್ಥಾನವನ್ನು ತೆರೆವುಗೊಳಿಸಲಿದ್ದಾರೆ ಎಂದು ಹೇಳಿದ್ದಾರೆ.
“ರಾಯ್ ಬರೇಲಿ ಕ್ಷೇತ್ರವು ತಮ್ಮ ಕುಟುಂಬಕ್ಕೆ ಹತ್ತಿರವಾಗಿರುವುದರಿಂದ ಅದನ್ನು ಉಳಿಸಿಕೊಳ್ಳಲು ರಾಹುಲ್ ಗಾಂಧಿ ನಿರ್ಧರಿಸಿದ್ದಾರೆ”. “ಪ್ರಿಯಾಂಕಾ ಗಾಂಧಿ ಅವರು ವಯನಾಡ್‌ನಿಂದ ಸ್ಪರ್ಧಿಸಬೇಕೆಂದು ನಾವು ನಿರ್ಧರಿಸಿದ್ದೇವೆ” ಈ ನಿರ್ಧಾರವನ್ನು ಒಪ್ಪಿಕೊಂಡಿದ್ದಕ್ಕಾಗಿ ಅವರಿಗೆ ಧನ್ಯವಾದಗಳು ಎಂದಿದ್ದಾರೆ. ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸಭೆಯಲ್ಲಿ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು.
ವಯನಾಡ್ ಜನತೆ ಬಹಳ ಕಷ್ಟದ ಸಮಯದಲ್ಲಿ ಹೋರಾಡಲು ಶಕ್ತಿಯನ್ನು ನೀಡಿದರು-ರಾಹುಲ್ ಗಾಂಧಿ
ವಯನಾಡ್ ಸಂಸದರಾಗಿದ್ದ ತಮ್ಮ ಅಧಿಕಾರಾವಧಿಯನ್ನು ನೆನಪಿಸಿಕೊಂಡ ರಾಹುಲ್ ಗಾಂಧಿ, "ನಾನು ರಾಯ್ ಬರೇಲಿ ಮತ್ತು ವಯನಾಡ್ ಜನರೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದೇನೆ. ಸಂಸತ್ ಸದಸ್ಯರಾಗಿ ಕಳೆದ ಐದು ವರ್ಷಗಳು ಅದ್ಭುತ ಅನುಭವವಾಗಿದೆ. ವಯನಾಡಿನ ಜನರು ನನ್ನೊಂದಿಗೆ ನಿಂತರು, ಪ್ರೀತಿ ಮತ್ತು ವಾತ್ಸಲ್ಯವನ್ನು ನೀಡಿದರು. ಬಹಳ ಕಷ್ಟದ ಸಮಯದಲ್ಲಿ ಹೋರಾಡಲು ಶಕ್ತಿಯನ್ನು ನೀಡಿದರು. ಅದನ್ನು ನಾನೆಂದಿಗೂ ಮರೆಯಲಾರೆ ಎಂದು ಹೇಳಿದ್ದಾರೆ.
ವಯನಾಡ್ ನೊಂದಿಗಿನ ತಮ್ಮ ನಿರಂತರ ಸಂಪರ್ಕವನ್ನು ಪುನರುಚ್ಚರಿಸಿದ ಅವರು, “ಪ್ರಿಯಾಂಕಾ ವಯನಾಡ್‌ನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ವಯನಾಡ್‌ನ ಪ್ರತಿಯೊಬ್ಬರೂ ತಿಳಿಯಬೇಕೆಂದು ನಾನು ಬಯಸುತ್ತೇನೆ. ನಾನು ವಯನಾಡ್‌ಗೆ ಆಗಾಗ್ಗೆ ಭೇಟಿ ನೀಡಲಿದ್ದೇನೆ”. ರಾಯ್ ಬರೇಲಿ ಮತ್ತು ವಯನಾಡ್ ಎರಡೂ ಕ್ಷೇತ್ರಗಳಿಗೆ ಇಬ್ಬರು ಸಂಸದರು ಸಿಗಲಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ರಾಹುಲ್ ಗಾಂಧಿ ಅವರನ್ನು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದೆ. ಜೂನ್ 8 ರಂದು ನಡೆದ ಸಿಡಬ್ಲ್ಯೂಸಿ ತನ್ನ ಕೊನೆಯ ಸಭೆಯಲ್ಲಿ ಈ ಬಗ್ಗೆ ನಿರ್ಣಯವನ್ನು ಅಂಗೀಕರಿಸಿದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)