logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮಧುರೈ: ಸಾರ್ಥಕ ಜೀವಕ್ಕೆ ಸತ್ತ ಮೇಲೂ ಸಂದ ಗೌರವ; ಕುಣಿದು ಕುಪ್ಪಳಿಸಿ 96ರ ಅಜ್ಜಿಗೆ ಅಂತಿಮ ವಿದಾಯ ಹೇಳಿದ ಕುಟುಂಬಸ್ಥರು

ಮಧುರೈ: ಸಾರ್ಥಕ ಜೀವಕ್ಕೆ ಸತ್ತ ಮೇಲೂ ಸಂದ ಗೌರವ; ಕುಣಿದು ಕುಪ್ಪಳಿಸಿ 96ರ ಅಜ್ಜಿಗೆ ಅಂತಿಮ ವಿದಾಯ ಹೇಳಿದ ಕುಟುಂಬಸ್ಥರು

Umesh Kumar S HT Kannada

Dec 20, 2024 12:22 PM IST

google News

ಮಧುರೈ ಜಿಲ್ಲೆಯಲ್ಲಿ ಸಾರ್ಥಕ ಜೀವಕ್ಕೆ ಸತ್ತಮೇಲೂ ಸಂದ ಗೌರವ ಸಂದಿದೆ. 96ರ ಅಜ್ಜಿಗೆ ಅವರ ಅಂತಿಮ ಆಸೆಯಂತೆ ಕುಟುಂಬಸ್ಥರು ಕುಣಿದು ಕುಪ್ಪಳಿಸಿ ಅಂತಿಮ ವಿದಾಯ ಹೇಳಿದರು. ಮೊದಲ ಚಿತ್ರದಲ್ಲಿ ಅಜ್ಜಿಯ ನಿಧನಕ್ಕೆ ಸಂಬಂಧಿಸಿದ ಪೋಸ್ಟರ್‌, ಅಜ್ಜಿಗೆ ಅಂತಿಮ ನಮನದ ದೃಶ್ಯ ಮಧ್ಯದ ಚಿತ್ರದಲ್ಲಿ. ಕೊನೆಯ ಚಿತ್ರದಲ್ಲಿ ಬ್ಯಾಂಡ್ ಬಾಜಾ, ಹಾಡು ನೃತ್ಯದ ದೃಶ್ಯ.

  • ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ಕಲ್ಯಾಣ ಸಾವು ಬಯಸಿದ 96 ವರ್ಷದ ವೃದ್ಧೆಯೊಬ್ಬರ ಅಂತಿಮ ಆಸೆಯನ್ನು ಅವರ ಮಕ್ಕಳು ಮತ್ತು 78ಕ್ಕೂ ಹೆಚ್ಚು ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು ನೆರವೇರಿಸಿದ್ದಾರೆ. ಹೇಗೆ ಅಂತೀರಾ, ಕುಣಿದು ಕುಪ್ಪಳಿಸಿ ಸಾರ್ಥಕ ಜೀವಕ್ಕೆ ಸತ್ತಮೇಲೂ ಗೌರವ ಸಲ್ಲಿಸಿದ್ದಾರೆ. ಈ ವಿಲಕ್ಷಣ ಘಟನೆಯ ವಿವರ ಇಲ್ಲಿದೆ.

ಮಧುರೈ ಜಿಲ್ಲೆಯಲ್ಲಿ ಸಾರ್ಥಕ ಜೀವಕ್ಕೆ ಸತ್ತಮೇಲೂ ಸಂದ ಗೌರವ ಸಂದಿದೆ. 96ರ ಅಜ್ಜಿಗೆ ಅವರ ಅಂತಿಮ ಆಸೆಯಂತೆ ಕುಟುಂಬಸ್ಥರು ಕುಣಿದು ಕುಪ್ಪಳಿಸಿ ಅಂತಿಮ ವಿದಾಯ ಹೇಳಿದರು. ಮೊದಲ ಚಿತ್ರದಲ್ಲಿ ಅಜ್ಜಿಯ ನಿಧನಕ್ಕೆ ಸಂಬಂಧಿಸಿದ ಪೋಸ್ಟರ್‌, ಅಜ್ಜಿಗೆ ಅಂತಿಮ ನಮನದ ದೃಶ್ಯ ಮಧ್ಯದ ಚಿತ್ರದಲ್ಲಿ. ಕೊನೆಯ ಚಿತ್ರದಲ್ಲಿ ಬ್ಯಾಂಡ್ ಬಾಜಾ, ಹಾಡು ನೃತ್ಯದ ದೃಶ್ಯ.
ಮಧುರೈ ಜಿಲ್ಲೆಯಲ್ಲಿ ಸಾರ್ಥಕ ಜೀವಕ್ಕೆ ಸತ್ತಮೇಲೂ ಸಂದ ಗೌರವ ಸಂದಿದೆ. 96ರ ಅಜ್ಜಿಗೆ ಅವರ ಅಂತಿಮ ಆಸೆಯಂತೆ ಕುಟುಂಬಸ್ಥರು ಕುಣಿದು ಕುಪ್ಪಳಿಸಿ ಅಂತಿಮ ವಿದಾಯ ಹೇಳಿದರು. ಮೊದಲ ಚಿತ್ರದಲ್ಲಿ ಅಜ್ಜಿಯ ನಿಧನಕ್ಕೆ ಸಂಬಂಧಿಸಿದ ಪೋಸ್ಟರ್‌, ಅಜ್ಜಿಗೆ ಅಂತಿಮ ನಮನದ ದೃಶ್ಯ ಮಧ್ಯದ ಚಿತ್ರದಲ್ಲಿ. ಕೊನೆಯ ಚಿತ್ರದಲ್ಲಿ ಬ್ಯಾಂಡ್ ಬಾಜಾ, ಹಾಡು ನೃತ್ಯದ ದೃಶ್ಯ. (HT Tamil)

ಮಧುರೈ: ಸಾಮಾನ್ಯವಾಗಿ ಸಾವು ಸಂಭವಿಸಿದಾಗ ಕುಟುಂಬಸ್ಥರು, ಬಂಧು ಬಳಗ ಎಲ್ಲ ದುಃಖತಪ್ತರಾಗಿರುವುದು ಸಾಮಾನ್ಯ. ಆದರೆ, ತಮಿಳುನಾಡಿನ ಕೆಲವು ಪ್ರದೇಶಗಳಲ್ಲಿ ಕೆಲವರು ಕಲ್ಯಾಣ ಸಾವು ಬಯಸುತ್ತಾರೆ. ಕಲ್ಯಾಣ ಸಾವು ಅಂದರೆ ಬೇರೇನೂ ಅಲ್ಲ. ಸತ್ತ ಬಳಿಕ ಯಾರೂ ದುಃಖಿಸಬಾರದು. ಮೃತರನ್ನು ಸಂತೋಷದಿಂದಲೇ ಕಳುಹಿಸಿಕೊಡಬೇಕು ಎಂಬ ಆಸೆ ಕೆಲವರದ್ದು. ಹಾಗೆಯೇ ತಮಿಳುನಾಡಿನ ಮಧುರೈ ಜಿಲ್ಲೆಯ 96 ವರ್ಷ ಅಜ್ಜಿಯೊಬ್ಬರು ಕಲ್ಯಾಣ ಸಾವು ಬಯಸಿದ್ದರು. ಅಜ್ಜಿಯ ಅಂತಿಮ ಆಸೆಯನ್ನು ಅವರ ಮಕ್ಕಳು ಮತ್ತು 78ಕ್ಕೂ ಹೆಚ್ಚು ಮೊಮ್ಮಕ್ಕಳು ನೆರವೇರಿಸಿದ್ದಾರೆ. ಹೇಗೆ ಅಂತೀರಾ, ವಿಶೇಷವಾಗಿ ಬ್ಯಾಂಡ್ ಬಾಜಾ, ಬಾಜಾ ಭಜಂತ್ರಿ ಆಯೋಜಿಸಿ ಬಹಳ ಅದ್ದೂರಿಯಾಗಿ 96ರ ಅಜ್ಜಿಗೆ ಅಂತಿಮ ವಿದಾಯ ಹೇಳಿದರು. ದೇವರ ಪಾದ ಸೇರಿದ ಅಜ್ಜಿಯ ಹೆಸರು ನಾಗಮ್ಮಾಳ್‌. ಮಧುರೈ ಜಿಲ್ಲೆಯ ಉಸಿಲಾಂಪಟ್ಟಿ ಸಮೀಪದ ಚಿನ್ನಪ್ಪಲರ್‌ಪಟ್ಟಿ ಗ್ರಾಮದವರು.

ಕಲ್ಯಾಣ ಸಾವು ಬಯಸಿದ ನಾಗಮ್ಮಾಳ್‌; ನಿನ್ನೆ ನಡೆಯಿತು ಬಾಜಾ ಭಜಂತ್ರಿ ಸಹಿತ ಅಂತಿಮ ಯಾತ್ರೆ

ಉಸಿಲಾಂಪಟ್ಟಿ ಸಮೀಪದ ಚಿನ್ನಪ್ಪಲರ್‌ಪಟ್ಟಿ ಗ್ರಾಮದ ಅಜ್ಜಿ ನಾಗಮ್ಮಾಳ್ (96) ಅವರ ಅಂತ್ಯ ಸಂಸ್ಕಾರ ನಿನ್ನೆ (ಡಿಸೆಂಬರ್ 19) ಸಂಜೆ ನಡೆಯಿತು. ಈ ಅಜ್ಜಿಯ ಪತಿ ಪರಮತೇವರ್‌. ಅವರು 15 ವರ್ಷ ಹಿಂದೆ ಮೃತಪಟ್ಟಿದ್ದಾರೆ. ನಾಗಮ್ಮಾಳ್ ವಯೋಸಹಜ ಅನಾರೋಗ್ಯದ ಬಳಿಕ 96ನೇ ವಯಸ್ಸಿನಲ್ಲಿ ನಿಧನರಾದರು. ಅವರಿಗೆ 2 ಗಂಡು ಮತ್ತು 4 ಹೆಣ್ಣು ಮಕ್ಕಳು. ಮೂರು ತಲೆಮಾರು ಕಂಡ ಅಜ್ಜಿಗೆ 78 ಮೊಮ್ಮಕ್ಕಳು, ಮರಿ ಮೊಮ್ಮಕ್ಕಳಿದ್ದಾರೆ. ಎಲ್ಲರೂ ಅಜ್ಜಿಯ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದರು.

ಅಜ್ಜಿ ನಾಗಮ್ಮಾಳ್ ಮೃತರಾಗುವ ಮೊದಲು ಕುಟುಂಬ ಸದಸ್ಯರ ಬಳಿ ತನಗೆ ಕಲ್ಯಾಣ ಸಾವು ಬೇಕು ಎಂದು ಕೊನೆಯಾಸೆ ವ್ಯಕ್ತಪಡಿಸಿದ್ದರು. ಕಲ್ಯಾಣ ಸಾವು ಎಂಬುದು ತಮಿಳು ನಾಡು ಭಾಗದಲ್ಲಿ ಚಾಲ್ತಿಯಲ್ಲಿರುವ ಒಂದು ಸಂಪ್ರದಾಯ. ಮೃತರ ಕೋರಿಕೆ ಪ್ರಕಾರ, ಅಂತ್ಯ ಸಂಸ್ಕಾರ ನಡೆಸುವಾಗ ಕುಟುಂಬಸ್ಥರು ಯಾರೂ ಕಣ್ಣೀರು ಹಾಕಲ್ಲ. ಆದರೆ ನಾಗಮ್ಮಾಳ್ ವಿಚಾರದಲ್ಲಿ ಹಾಗಾಗಲಿಲ್ಲ. ಕುಟುಂಬಸ್ಥರು ಬಹಳ ಅದ್ದೂರಿಯಾಗಿ ಅಜ್ಜಿಯ ಸಾವನ್ನು ಕೂಡ ಒಂದು ಶುಭಕಾರ್ಯದಂತೆ ಸಂಭ್ರಮಿಸಿದರು ಎಂದು ಹಿಂದೂಸ್ತಾನ್ ಟೈಮ್ಸ್ ತಮಿಳು ಸುದ್ದಿತಾಣದ ಸಂಪಾದಕ ಸ್ಟಾಲಿನ್ ನವನೀತ್ ಕೃಷ್ಣನ್ ವಿವರಿಸಿದರು.

ಪಟಾಕಿ ಸಿಡಿಸಿ ಅಂತಿಮ ಯಾತ್ರೆ, ಅತಿಥಿಗಳಿಗೆ ಮಟನ್ ಊಟ

ಮಧುರೈ ಗ್ರಾಮೀಣ ಭಾಗದಲ್ಲಿ ಜನ ಆಟ್ಟಂ ಪಾಟ್ಟಂ (ಹಾಡು ನೃತ್ಯ) ಆಚರಣೆ ಸಾಮಾನ್ಯ. ಗ್ರಾಮೀಣ ಸಂಸ್ಕೃತಿ ವಿಶೇಷವಾಗಿದ್ದು, ಈ ಅಜ್ಜಿ ನಾಗಮ್ಮಾಳ್‌ ಅಂತ್ಯ ಸಂಸ್ಕಾರದಲ್ಲಿ ಅದು ತುಸು ಹೆಚ್ಚೇ ಕಂಡುಬಂತು. ಊರ ಹೊರಗೆ ದೊಡ್ಡದೊಂದು ಫ್ಲೆಕ್ಸ್, ಮನೆ ಎದುರು ವೇದಿಕೆ, ವೃತ್ತಿಪರ ಹಾಡುಗಾರ, ನೃತ್ಯಗಾತಿಯರನ್ನು ಕರೆಯಿಸಿ ಪ್ರದರ್ಶನ ನೀಡಿದರು. ಈ ಸಂದರ್ಭದಲ್ಲಿ ಮಕ್ಕಳು ಮತ್ತು ಮೊಮ್ಮಕ್ಕಳು ಕೂಡ ನೃತ್ಯ ಮಾಡಿದರು. ಅಜ್ಜಿ, ಅಮ್ಮನ ಸೆಂಟಿಮೆಂಟ್ ಹಾಡು, ನೃತ್ಯ ಪ್ರದರ್ಶನ ಕೊಟ್ಟರು. ಅಜ್ಜಿಯ ಕೊನೆಯಾಸೆಯನ್ನು ಈ ರೀತಿ ನೆರವೇರಿಸಿದರು.

ಅಜ್ಜಿಗೆ ಅಂತಿಮ ವಿದಾಯ ಹೇಳುವ ಈ ಕಾರ್ಯಕ್ರಮ ಮನೆ ಮಂದಿಗಷ್ಟೇ ಅಲ್ಲ, ಗ್ರಾಮಸ್ಥರಿಗೂ ಒಂದು ಹಬ್ಬದಂತೆ ಭಾಸವಾಗಿದೆ. ಮನೆಯನ್ನು ಕೂಡ ಮದುವೆ ಮನೆಯಂತೆ ಸಿಂಗರಿಸಲಾಗಿತ್ತು. ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು ಇಂದು ನೃತ್ಯಗೀತೆ ಕಾರ್ಯಕ್ರಮ, ರೇಡಿಯೋ, ಕುಟುಂಬದ ಮಹಿಳೆಯರಿಂದ ಕುಮ್ಮಿಯಾಟಂ ಹಾಗೂ ಬಾಲಕ-ಬಾಲಕಿಯರಿಂದ ಕುಮ್ಮಿಯಾಟಂ, ಗ್ರಾಮೀಣ ಕಲಾ ಪ್ರದರ್ಶನ ಕಾರ್ಯಕ್ರಮದೊಂದಿಗೆ ಸಂಭ್ರಮಾಚರಣೆ ನಡೆಸಿ ಅಂತಿಮ ನಮನ ಸಲ್ಲಿಸಿದರು.

ಇನ್ನು, ಒಪ್ಪಾರಿ (ಹಣೆ ಚಚ್ಚಿ ಅಳುವುದು, ಬಾಯಿ ಬಡಿದುಕೊಳ್ಳುವುದು) ನೆರವೇರಿಸುವಾಗ ಕೂಡ ಯಾರೂ ಅಳಲಿಲ್ಲ. ದುಃಖವನ್ನು ಮರೆಮಾಚಿ ಮುದುಕಿಯ ಆಸೆಯನ್ನು ಈಡೇರಿಸುವ ಕುಟುಂಬಸ್ಥರ ಪ್ರಯತ್ನವನ್ನು ಅನೇಕರು ಪ್ರಶಂಸಿಸಿದ್ದಾರೆ. ಕೊನೆಗೆ ಪಟಾಕಿ ಸಿಡಿಸಿ ಅಜ್ಜಿಯ ಅಂತಿಮ ಸಂಸ್ಕಾರ ನೆರವೇರಿಸಲಾಯಿತು ಎಂದು ಸ್ಟಾಲಿನ್ ನವನೀತ್ ಕೃಷ್ಣನ್ ವಿವರಿಸಿದರು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ