logo
ಕನ್ನಡ ಸುದ್ದಿ  /  ಮನರಂಜನೆ  /  Ilaiyaraaja: ತಮಿಳುನಾಡು ದೇಗುಲ ಗರ್ಭಗುಡಿ ಪ್ರವೇಶ ವಿವಾದ; ಆತ್ಮಗೌರವದ ಪ್ರತಿಕ್ರಿಯೆ ನೀಡಿದ ಸಂಗೀತ ಮಾಂತ್ರಿಕ ಇಳಯರಾಜ

Ilaiyaraaja: ತಮಿಳುನಾಡು ದೇಗುಲ ಗರ್ಭಗುಡಿ ಪ್ರವೇಶ ವಿವಾದ; ಆತ್ಮಗೌರವದ ಪ್ರತಿಕ್ರಿಯೆ ನೀಡಿದ ಸಂಗೀತ ಮಾಂತ್ರಿಕ ಇಳಯರಾಜ

Praveen Chandra B HT Kannada

Dec 17, 2024 09:40 AM IST

google News

Ilaiyaraaja: ತಮಿಳುನಾಡು ದೇಗುಲ ಗರ್ಭಗುಡಿ ಪ್ರವೇಶ ವಿವಾದ

    • Ilaiyaraaja temple controversy: ತಮಿಳುನಾಡಿನ ಶ್ರೀವಿಲ್ಲಿಪುತ್ತೂರ್ ಆಂಡಾಳ್‌ ದೇವಸ್ಥಾನದ ಗರ್ಭಗುಡಿ ಪ್ರವೇಶಿಸಲು ಇಳಯರಾಜರಿಗೆ ದೇಗುಲದ ಅಧಿಕಾರಿಗಳು ನಿರಾಕರಿಸಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಸ್ವತಃ ಸಂಗೀತ ಮಾಂತ್ರಿಕ ಪ್ರತಿಕ್ರಿಯೆ ನೀಡಿದ್ದಾರೆ. ಸುಳ್ಳುಸುದ್ದಿಗಳನ್ನು ನಂಬಬೇಡಿ ಎಂದು ತನ್ನ ಅಭಿಮಾನಿಗಳಿಗೆ ಇಳಯರಾಜ ತಿಳಿಸಿದ್ದಾರೆ.
Ilaiyaraaja: ತಮಿಳುನಾಡು ದೇಗುಲ ಗರ್ಭಗುಡಿ ಪ್ರವೇಶ ವಿವಾದ
Ilaiyaraaja: ತಮಿಳುನಾಡು ದೇಗುಲ ಗರ್ಭಗುಡಿ ಪ್ರವೇಶ ವಿವಾದ

Ilaiyaraaja temple controversy: ತಮಿಳುನಾಡಿನ ಶ್ರೀವಿಲ್ಲಿಪುತೂರ್ ಆಂಡಾಳ್‌ ದೇವಸ್ಥಾನದ ಗರ್ಭಗುಡಿಗೆ ಪ್ರವೇಶಿಸಲು ಇಳಯರಾಜರಿಗೆ ದೇಗುಲದ ಆಡಳಿತಾಧಿಕಾರಿಗಳು ಅನುಮತಿ ನೀಡಿಲ್ಲ ಎಂಬ ವಿವಾದದ ಕುರಿತು ಸ್ವತಃ ಸಂಗೀತ ಮಾಂತ್ರಿಕ ಪ್ರತಿಕ್ರಿಯೆ ನೀಡಿದ್ದಾರೆ. ಸ್ವಾಭಿಮಾನ ಅಥವಾ ಆತ್ಮಗೌರವದ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ವ್ಯಕ್ತಿ ನಾನಲ್ಲ ಎಂದು ಅವರು ಹೇಳಿದ್ದಾರೆ. ಭಾನುವಾರ ಸಂಜೆ ಇವರು ಶ್ರೀವಿಲ್ಲಿಪುತೂರ್ ಆಂಡಾಳ್‌ ದೇವಾಲಯಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಗರ್ಭಗುಡಿಗೆ ಪ್ರವೇಶಿಸಿದಂತೆ ಇವರಿಗೆ ದೇವಾಲಯದ ಆಡಳಿತಾಧಿಕಾರಿಗಳು ಹೇಳಿದ್ದಾರೆ ಎಂಬ ಸುದ್ದಿ ಹರಡಿತ್ತು.

ಆತ್ಮಗೌರವದ ವಿಚಾರದಲ್ಲಿ ರಾಜಿಯಿಲ್ಲ

"ಈಗ ಹರಡಿರುವ ಸುದ್ದಿ ಸುಳ್ಳು. ಕೆಲವರು ನನ್ನ ಬಗ್ಗೆ ಸುಳ್ಳು ವದಂತಿ ಹರಡುತ್ತಿದ್ದಾರೆ. ನಾನು ಯಾವುದೇ ಸಮಯದಲ್ಲಿ ಅಥವಾ ಸ್ಥಳದಲ್ಲಿ ನನ್ನ ಸ್ವಾಭಿಮಾನ ರಾಜಿ ಮಾಡಿಕೊಳ್ಳುವವನಲ್ಲ. ಆತ್ಮಗೌರವದ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಆದರೆ, ಈಗ ಹಬ್ಬಿರುವುದು ಸುಳ್ಳುಸುದ್ದಿ. ಅಭಿಮಾನಿಗಳು ಮತ್ತು ಸಾರ್ವಜನಿಕರು ಈ ವದಂತಿ ನಂಬಬಾರದು" ಎಂದು ಸಂಗೀತ ಮಾಂತ್ರಿಕ ಇಳಯರಾಜ ತಮಿಳಿನಲ್ಲಿ ಬರೆದು ಎಕ್ಸ್‌ನಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಶ್ರೀವಿಲ್ಲಿಪುತ್ತೂರಿನ ಶ್ರೀ ಆಂಡಾಳ್‌ ಜೀಯರ್ ಮಠದ ಶ್ರೀ ತ್ರಿಬಂದಿ ಶ್ರೀಮನ್ನಾರಾಯಣ ರಾಮಾನುಜ ಚಿನ್ನ ಜೀಯರ್ ಅವರೊಂದಿಗೆ ಇಳಯರಾಜ ಇದ್ದರು. ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಇಳಯರಾಜ ತಮ್ಮ ಸಂಯೋಜನೆಯ 'ದಿವ್ಯ ಪಾಸುರಂ' ಅನ್ನು ಬಿಡುಗಡೆ ಮಾಡಲು ದೇವಸ್ಥಾನಕ್ಕೆ ಬಂದಿದ್ದರು. ಈ ಸಮಯದಲ್ಲಿ ಇವರು ಗರ್ಭಗುಡಿ ಪ್ರವೇಶಿಸಲು ಮುಂದಾಗಿದ್ದರು. ಆದರೆ, ಅಲ್ಲಿನವರು ಅದನ್ನು ತಡೆದರು ಎಂದು ಸುದ್ದಿಯಾಗಿತ್ತು.

ಈ ಘಟನೆಗೆ ಸಂಬಂಧಪಟ್ಟಂತೆ ದೇವಾಲಯದ ಅಧಿಕಾರಿಗಳೂ ಪ್ರತಿಕ್ರಿಯೆ ನೀಡಿದ್ದಾರೆ. "ದೇವಸ್ಥಾನಕ್ಕೆ ಆಗಮಿಸಿದ ಇಳಯರಾಜ ಅವರಿಗೆ ಎಲ್ಲಾ ಗೌರವ ನೀಡಲಾಗಿದೆ. ಮಂಟಪದ ಪ್ರವೇಶ ದ್ವಾರದಲ್ಲಿ ನಿಂತ ಇಳಯರಾಜ ಅಲ್ಲಿಂದಲೇ ಪ್ರಾರ್ಥನೆ ಸಲ್ಲಿಸಿದ್ದಾರೆ" ಎಂದು ದೇಗುಲದ ಅಧಿಕಾರಿಯು ಹೇಳಿದ್ದಾರೆ. ಈ ಸಂದರ್ಭದಲ್ಲಿ ಅಧಿಕಾರಿಯ ಬಳಿ ಸದ್ಯ ಎದ್ದಿರುವ ವಿವಾದದ ಕುರಿತು ಪ್ರಶ್ನಿಸಲಾಗಿದೆ.

"ಇಳಯರಾಜ ಅವರಿಗೆ ಮಂಟಪದ ಎದುರಿನಿಂದ ದರ್ಶನ ಪಡೆಯಬಹುದು ಎಂದು ಹೇಳಲಾಯಿತು. ಅದಕ್ಕೆ ಅವರು ಒಪ್ಪಿ ಅಲ್ಲಿಂದಲೇ ದರ್ಶನ ಪಡೆದರು. ಈ ದೇವಾಲಯದ ಪದ್ಧತಿಯ ಪ್ರಕಾರ ಆರ್ಚಕರು ಮತ್ತು ಮಠಾಧೀಶರು ಮಾತ್ರ ಗರ್ಭಗುಡಿ ಪ್ರವೇಶಿಸಬಹುದು. ಈ ಗರ್ಭಗುಡಿಗೆ ಇವರನ್ನು ಹೊರತುಪಡಿಸಿ ಯಾವುದೇ ಭಕ್ತರಿಗೆ ಪ್ರವೇಶಿಸಲು ಅವಕಾಶವಿಲ್ಲ. ಬ್ರಾಹ್ಮಣರು ಸೇರಿದಂತೆ ಇತರೆ ಯಾರಿಗೂ ಪ್ರವೇಶಕ್ಕೆ ಅವಕಾಶ ಇಲ್ಲ" ಎಂದು ದೇವಾಲಯದ ಅಧಿಕಾರಿ ಹೇಳಿದ್ದಾರೆ.

ಇಳಯರಾಜರಿಗೆ ದೇಗುಲದ ಗರ್ಭಗುಡಿಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ ಎಂಬ ಸುದ್ದಿ ಹಬ್ಬಿದಾಗ ಸಾಕಷ್ಟು ಜನರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಭಾರತದಲ್ಲಿ ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆ ಇನ್ನೂ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ