ಮಹಾರಾಷ್ಟ್ರ ಕಾಂಗ್ರೆಸ್ ಸೋಲಿನ ಬಳಿಕ ಸಚಿವ ಸಂತೋಷ್ ಲಾಡ್‌ಗೆ ಮತಯಂತ್ರಗಳ ಮೇಲೆ ಅನುಮಾನ: ಫಲಿತಾಂಶ ಸಮರ್ಥಿಸಿಕೊಂಡ ದೇವೇಂದ್ರ ಫಡಣವೀಸ್
Nov 23, 2024 03:26 PM IST
ಮಹಾರಾಷ್ಟ್ರ ಕಾಂಗ್ರೆಸ್ ಸೋಲಿನ ಬಳಿಕ ಸಚಿವ ಸಂತೋಷ್ ಲಾಡ್‌ಗೆ ಮತಯಂತ್ರಗಳ ಮೇಲೆ ಅನುಮಾನ
- ಮಹಾರಾಷ್ಟ್ರ ಚುನಾವಣಾ ಫಲಿತಾಂಶದ ಅಂತಿಮ ಹಂತಕ್ಕೆ ತಲುಪಿದ್ದು ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ 228 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಈ ಸಂದರ್ಭ ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವ ಸಂತೋಷ್ ಲಾಡ್ ನೀಡಿರುವ ಹೇಳಿಕೆ ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿದೆ. ‘ಮತಯಂತ್ರಗಳನ್ನು ತಿರುಚಿರಬಹುದು‘ ಎನ್ನುವ ಅನುಮಾನವನ್ನು ಸಂತೋಷ್ ಲಾಡ್ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಇಡೀ ದೇಶದ ಗಮನ ಸೆಳೆದಿದ್ದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು (ನ 23, ಶನಿವಾರ) ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ನಿಚ್ಚಳವಾಗಿದೆ. 228 ಕ್ಷೇತ್ರಗಳಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ ನೇತೃತ್ವದ ಮಹಾವಿಕಾಸ ಅಘಾಡಿ ಕೇವಲ 52 ಕ್ಷೇತ್ರಗಳಲ್ಲಿ ಮುನ್ನಡೆ ದಾಖಲಿಸಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತವಾಗಿದ್ದು, ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್ ಈಗಾಗಲೇ ಜನರಿಗೆ ಕೃತಜ್ಞತೆ ಅರ್ಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನೂ ದೇವೇಂದ್ರ ಫಡಣವೀಸ್ ವಿಜಯ ಸಂದೇಶದ ವೇಳೆ ನೆನಪಿಸಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವ ಸಂತೋಷ್ ಲಾಡ್ ನೀಡಿರುವ ಹೇಳಿಕೆ ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿದೆ. "ಮತಯಂತ್ರಗಳನ್ನು ತಿರುಚಿರಬಹುದು" ಎನ್ನುವ ಅನುಮಾನವನ್ನು ಸಂತೋಷ್ ಲಾಡ್ ವ್ಯಕ್ತಪಡಿಸಿದ್ದಾರೆ. 'ಇಂಡಿಯಾ ಟುಡೇ' ಸುದ್ದಿ ವಾಹಿನಿಗೆ ವಿಶೇಷ ಸಂದರ್ಶನ ನೀಡಿದ್ದ ಸಚಿವರು, ಬಿಜೆಪಿ ಗೆಲುವಿನ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಅವರ ಹೇಳಿಕೆ ಅತಿಮುಖ್ಯ ಅಂಶಗಳು ಇಲ್ಲಿವೆ.
1) ಮಹಾರಾಷ್ಟ್ರದ ಫಲಿತಾಂಶವು ಎಲ್ಲ ವಿಶ್ಲೇಷಕರಿಗೂ ಅಚ್ಚರಿ ತಂದಿದೆ. ಏಕೆ ಹೀಗಾಯ್ತು ಎನ್ನುವುದು ನನಗೂ ಗೊತ್ತಾಗುತ್ತಿಲ್ಲ. ಮಧ್ಯ ಪ್ರದೇಶದಲ್ಲಿ ಇತ್ತೀಚೆಗೆ ನಡೆದಿದ್ದ ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷದ ಮತಗಳಿಕೆ ಪ್ರಮಾಣ ಶೇ 8 ರಷ್ಟು ಹೆಚ್ಚಾಗಿತ್ತು. ಅದಕ್ಕೇನು ಕಾರಣ? ಕಾಂಗ್ರೆಸ್ ಪಕ್ಷವೇ ಹೀಗೆ ಮತಗಳಿಕೆ ಹೆಚ್ಚಿಸಿಕೊಂಡರೆ ಏನು ಕಾರಣ ಇರಬಹುದು ತಿಳಿಯೋಣ ಎನ್ನಿಸುತ್ತದೆ ನನಗೆ.
2) ನಾನು ಆರೋಪ ಮಾಡುತ್ತಿಲ್ಲ. ಬದಲಿಗೆ ಮತಯಂತ್ರಗಳ ವಿಚಾರದಲ್ಲಿ ಅನುಮಾನ ವ್ಯಕ್ತಪಡಿಸುತ್ತಿದ್ದೇನೆ ಅಷ್ಟೇ. ಸಂಸತ್ ಚುನಾವಣೆಯಲ್ಲಿ ಮೋದಿ ಅವರೇ ಬಂದು ಪ್ರಚಾರ ಮಾಡಿದ್ದರೂ ಅವರಿಗೆ ಹೆಚ್ಚು ಲಾಭವಾಗಲಿಲ್ಲ. ಮಹಾರಾಷ್ಟ್ರದಲ್ಲಿ ಆಗ ಇದ್ದ ಸರ್ಕಾರವೇ ಈಗಲೂ ಇದೆ. ಆದರೆ ಕೇವಲ 6 ತಿಂಗಳ ಅಂತರದಲ್ಲಿ ಅದೇ (ಪಕ್ಷಕ್ಕೆ) ಸರ್ಕಾರಕ್ಕೆ ಮತ್ತೊಮ್ಮೆ ದೊಡ್ಡಮಟ್ಟದ ಸ್ಥಾನಗಳು ಸಿಗುತ್ತವೆ ಎಂದರೆ ಅನುಮಾನ ಬರುವುದಿಲ್ಲವೇ?
3) ಕಾಂಗ್ರೆಸ್ ಅಧಿಕಾರದಲ್ಲಿದ್ದು, ಅದೂ ಮತ್ತೊಮ್ಮೆ ಈ ಪ್ರಮಾಣದಲ್ಲಿ ಗೆದ್ದಿದ್ದರೂ ಗೆಲುವಿಗೆ ಏನು ಕಾರಣ ಎನ್ನುವ ಪ್ರಶ್ನೆ ಖಂಡಿತ ಬರುತ್ತಿತ್ತು. ಮಹಾರಾಷ್ಟ್ರದಲ್ಲಿ ನಿರುದ್ಯೋಗದ ಸಮಸ್ಯೆ ಬೃಹದಾಕಾರ ತಳೆದಿದೆ. ಮುಂಬೈ ನಗರದಲ್ಲಿಯೂ ಕೆಲಸಗಳಿಲ್ಲ. ರೈತರ ಆತ್ಮಹತ್ಯೆ ಪ್ರಮಾಣವೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿಯೇ ಬಿಜೆಪಿ ಮೈತ್ರಿಯ ವಿಜಯದ ಬಗ್ಗೆ ನನಗೆ ಅನುಮಾನಗಳು ಮೂಡುತ್ತಿವೆ.
4) ನನ್ನ ಮಾತನ್ನು ಒಂದು ರಾಜಕೀಯ ಆರೋಪ ಎಂದೇ ಪರಿಗಣಿಸಿ. ನನಗೇನೂ ಸಮಸ್ಯೆಯಿಲ್ಲ. ಜನರು ನಿಮಗೇಕೆ ಮತ ಹಾಕಿದರು ಎಂದೇ ನಾನು ನನ್ನ ಬಿಜೆಪಿ ಗೆಳೆಯರನ್ನು ಕೇಳಲು ಬಯಸುತ್ತೇನೆ. ಈಗಲಾದರೂ ಬಿಜೆಪಿ ನಾಯಕರು ಮುಕ್ತವಾಗಿ ಮಾತನಾಡಬೇಕು. ಅವರಿಗೆ ಏಕೆ ಇಷ್ಟು ಸ್ಥಾನಗಳು ಬಂದವು ಎಂದು ಹೇಳಬೇಕು.
5) ಇಂಥ ಗೆಲುವು ಸಿಗುತ್ತಿತ್ತು ಎನ್ನುವ ನಿರೀಕ್ಷೆ ಬಿಜೆಪಿ ನಾಯಕರಿಗೆ ಮೊದಲೇ ಇತ್ತು ಎಂದು ಎದೆಮುಟ್ಟಿಕೊಂಡು ಹೇಳುತ್ತಾರಾ? ಚುನಾವಣಾ ಕಣದಲ್ಲಿದ್ದ ಯಾರಿಗೂ ಇಂಥ ಬಹುಮತ ಬಿಜೆಪಿಗೆ ಸಿಗಬಹುದು ಎನ್ನುವ ಅಂದಾಜು ಇರಲಿಲ್ಲ.
6) ಮಧ್ಯಪ್ರದೇಶದಲ್ಲಿದ್ದ ಮತಯಂತ್ರಗಳನ್ನೇ ಮಹಾರಾಷ್ಟ್ರದಲ್ಲಿಯೂ ಬಳಸಿದ್ದಾರೆ ಎನ್ನುವುದು ನನ್ನ ಅನುಮಾನ. ಇಲ್ಲದಿದ್ದರೆ ನನ್ನ ಲೆಕ್ಕಾಚಾರದ ಆಚೆಗೆ ಏನೋ ನಡೆದಿರಬೇಕು.
7) ಇತ್ತೀಚಿನ ದಿನಗಳಲ್ಲಿ ಯಾವುದೇ ರಾಜ್ಯದಲ್ಲಿ ಒಂದು ರಾಜಕೀಯ ಪಕ್ಷ ಸತತ 10 ವರ್ಷ ಅಧಿಕಾರ ನಡೆಸಿದ ನಂತರ ಮತ್ತೊಂದು ಅವಧಿಗೆ ಅಧಿಕಾರ ನಡೆಸಲು ಅವಕಾಶ ಪಡೆದಿಲ್ಲ. ಈ ಅಂಶವೂ ನನ್ನ ಅನುಮಾನವನ್ನು ಪುಷ್ಟೀಕರಿಸುತ್ತದೆ.
8) ಜಾರ್ಖಂಡ್‌ನಲ್ಲಿ ಬಿಜೆಪಿ ಗೆದ್ದಿಲ್ಲ. ಅಲ್ಲಿ ಬಳಕೆಯಾದ ಇವಿಎಂಗಳ ಬಗ್ಗೆ ನಿಮಗೇಕೆ ಅನುಮಾನ ಇಲ್ಲವೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಗೆಲುವಿನ ವಿಚಾರದಲ್ಲಿ ಬಿಜೆಪಿಯು ಎಲ್ಲಿ ಜಯಗಳಿಸಬೇಕು ಎನ್ನುವುದನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಜಾರ್ಖಂಡ್ ಒಂದು ಪುಟ್ಟ ರಾಜ್ಯ. ಹೀಗಾಗಿಯೇ ಬಿಜೆಪಿ ಮಹಾರಾಷ್ಟ್ರವನ್ನು ಆರಿಸಿಕೊಂಡಿದೆ ಎಂದು ಉತ್ತರಿಸಿದರು.
9) ಜಾರ್ಖಂಡ್ ಮುಖ್ಯಮಂತ್ರಿಯನ್ನು ಭ್ರಷ್ಟಾಚಾರ ನಡೆಸಿದ ಕಾರಣಕ್ಕೆ ಜೈಲಿಗೆ ಹಾಕಲಾಗಿತ್ತು. ಆದರೂ ಅಲ್ಲಿ ಜೆಎಂಎಂ (ಕಾಂಗ್ರೆಸ್ ಮೈತ್ರಿ) ಜಯಗಳಿಸಿತು. ಬಿಜೆಪಿ ಏಕೆ ಅಲ್ಲಿ ಜಯಗಳಿಸಲಿಲ್ಲ?
ಚರ್ಚೆ ಹುಟ್ಟುಹಾಕಿದ ಪ್ರತಿಕ್ರಿಯೆ
ಫಲಿತಾಂಶ ಪ್ರಕಟವಾದ ನಂತರ ಮತಯಂತ್ರಗಳನ್ನು ಅನುಮಾನಿಸಿರುವ ಮಾತಿನ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ಚರ್ಚೆ ಆರಂಭವಾಗಿದೆ. ಮಹಾರಾಷ್ಟ್ರದ ಮುಂಚೂಣಿ ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್ ಮತಯಂತ್ರಗಳನ್ನು ತಿರುಚಲಾಗಿತ್ತು ಎನ್ನುವ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಇದು ಪ್ರಜಾತಂತ್ರದ ವಿಜಯ, ಯಾವುದೇ ಅನುಮಾನಗಳ ಅಗತ್ಯವಿಲ್ಲ ಎಂದು ಹೇಳಿದ್ದಾರೆ.