ಮಹಾರಾಷ್ಟ್ರ ಫಲಿತಾಂಶ: ಎನ್‌ಸಿಪಿ ಯಶಸ್ಸಿನ ಹಿಂದಿರುವ ನರೇಶ್ ಅರೋರಾ ಯಾರು? ಕರ್ನಾಟಕ ಚುನಾವಣೆಯಲ್ಲೂ ಇತ್ತು ಇವರ 'ಕೈ'ವಾಡ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮಹಾರಾಷ್ಟ್ರ ಫಲಿತಾಂಶ: ಎನ್‌ಸಿಪಿ ಯಶಸ್ಸಿನ ಹಿಂದಿರುವ ನರೇಶ್ ಅರೋರಾ ಯಾರು? ಕರ್ನಾಟಕ ಚುನಾವಣೆಯಲ್ಲೂ ಇತ್ತು ಇವರ 'ಕೈ'ವಾಡ

ಮಹಾರಾಷ್ಟ್ರ ಫಲಿತಾಂಶ: ಎನ್‌ಸಿಪಿ ಯಶಸ್ಸಿನ ಹಿಂದಿರುವ ನರೇಶ್ ಅರೋರಾ ಯಾರು? ಕರ್ನಾಟಕ ಚುನಾವಣೆಯಲ್ಲೂ ಇತ್ತು ಇವರ 'ಕೈ'ವಾಡ

ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಅಜಿತ್ ಪವಾರ್, ಚುನಾವಣಾ ಕಾರ್ಯತಂತ್ರ ನಿಪುಣ ನರೇಶ್ ಅರೋರಾ ಅವರನ್ನು ಪ್ರಚಾರ ನಿರ್ವಹಣೆಗೆ ಆಯ್ಕೆ ಮಾಡಿದ್ದರು. ರಾಜಕೀಯ ಪ್ರಚಾರ ನಿರ್ವಹಣಾ ಕಂಪನಿ ಡಿಸೈನ್‌ಬಾಕ್ಸ್ಡ್‌ನ ಸಹ-ಸಂಸ್ಥಾಪಕರಾಗಿರುವ ಅರೋರಾ, ಇದೀಗ ತಮ್ಮ ಕಾರ್ಯತಂತ್ರದಲ್ಲಿ ಯಶಸ್ವಿಯಾಗಿದ್ದಾರೆ.

ಮಹಾರಾಷ್ಟ್ರ ಫಲಿತಾಂಶ: ಎನ್‌ಸಿಪಿ ಯಶಸ್ಸಿನ ಹಿಂದಿರುವ ನರೇಶ್ ಅರೋರಾ ಯಾರು?
ಮಹಾರಾಷ್ಟ್ರ ಫಲಿತಾಂಶ: ಎನ್‌ಸಿಪಿ ಯಶಸ್ಸಿನ ಹಿಂದಿರುವ ನರೇಶ್ ಅರೋರಾ ಯಾರು?

ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವಿನತ್ತ ಮುನ್ನಡೆಯುತ್ತಿದ್ದು, ಮಹಾಯುತಿ ಮೈತ್ರಿಕೂಟವು ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಸಿದ್ಧತೆ ಆರಂಭಿಸಿದೆ. ಬಿಜೆಪಿ, ಶಿವಸೇನಾ ಹಾಗೂ ಎನ್‌ಸಿಪಿ ಪಕ್ಷಗಳ ಮೈತ್ರಿ ಇದಾಗಿದ್ದು; ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಅಧಿಪತ್ಯ ಕೊನೆಗೊಳಿಸಿದೆ. ಈ ಬಾರಿ ಬಿಜೆಪಿ ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ಮಂಕಾಗಿದ್ದ NCP ಕೂಡಾ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಂಡಿದೆ.

ವಿಧಾನಸಭಾ ಚುನಾವಣೆಯ ಆರಂಭಕ್ಕೂ ಮುನ್ನವೇ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಜಿತ್ ಪವಾರ್, ರಾಜ್ಯದ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಚುನಾವಣಾ ಕಾರ್ಯತಂತ್ರ ನಿಪುಣ (strategist) ನರೇಶ್ ಅರೋರಾ ಎಂಬ ವ್ಯಕ್ತಿಯನ್ನು ಆಯ್ಕೆ ಮಾಡಿದ್ದರು. ರಾಜಕೀಯ ಪ್ರಚಾರ ನಿರ್ವಹಣಾ ಕಂಪನಿ ಡಿಸೈನ್‌ಬಾಕ್ಸ್ಡ್‌ನ ಸಹ-ಸಂಸ್ಥಾಪಕರಾಗಿರುವ ಅರೋರಾ, ಇದೀಗ ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಮಹಾರಾಷ್ಟ್ರ ಚುನಾವಣೆಗೂ ಮುನ್ನ ರಾಜಸ್ಥಾನ ಮತ್ತು ಕರ್ನಾಟಕದಲ್ಲೂ ಕಾಂಗ್ರೆಸ್ ಪರ ಚುನಾವಣಾ ಪ್ರಚಾರಗಳನ್ನು ನಿರ್ವಹಿಸಿದ್ದ ಅರೋರಾ ಯಶಸ್ಸು.

ಈ ಹಿಂದೆ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲಿನ ನಂತರ, ಅಜಿತ್ ಪವಾರ್ ಅವರು ಗುಲಾಬಿ ಜಾಕೆಟ್ ಮತ್ತು ಇದೇ ಬಣ್ಣದ ಥೀಮ್‌ನೊಂದಿಗೆ ಪ್ರಚಾರ ಆರಂಭಿಸಿದರು. ಇದು ಮಹಿಳಾ ಮತದಾರರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ. ಇಂದು ಫಲಿತಾಂಶದ ಟ್ರೆಂಡ್‌ ತಮ್ಮ ಪರ ಕಾಣಿಸುತ್ತಿದ್ದಂತೆಯೇ ಅಜಿತ್ ಪವಾರ್ ಟ್ವೀಟ್‌ ಮಾಡಿದ್ದು, ‘Mharashtra Choses Pink’ ಎಂದು ಬರೆದುಕೊಂಡಿದ್ದಾರೆ. ಇದರ ಹಿಂದಿರುವ ಕೈ ಕೂಡಾ ನರೇಶ್ ಅವರದ್ದೇ.

ನರೇಶ್ ಅರೋರಾ ಯಾರು?

ಮಹಾರಾಷ್ಟ್ರ ಚುನಾವಣೆಯಲ್ಲಿ ಎನ್‌ಸಿಪಿ ಯಶಸ್ಸಿನ ಹಿಂದಿರುವ ಪ್ರಮುಖ ವ್ಯಕ್ತಿಯೇ ನರೇಶ್ ಅರೋರಾ. ಇವರ ನೇತೃತ್ವದ ಡಿಸೈನ್ ಬಾಕ್ಸ್ಡ್ ಎಂಬ ರಾಜಕೀಯ ಸಲಹಾ ಸಂಸ್ಥೆಯು ಎನ್‌ಸಿಪಿಗೆ ಚುನಾವಣಾ ತಂತ್ರವನ್ನು ಒದಗಿಸಿದೆ. ನರೇಶ್‌ ಇದೇ ಮೊದಲ ಬಾರಿಗೆ ಚುನಾವಣೆ ಪ್ರಚಾರ ನಿಭಾಯಿಸಿದ್ದಲ್ಲ. ಈ ಹಿಂದೆ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೊತೆಗೂಡಿ, ರಾಜ್ಯದ ವಿಧಾನಸಭಾ ಚುನಾವಣೆಗೂ‌ ಪ್ರಚಾರ ತಂತ್ರ ರೂಪಿಸಿದ್ದರು. ಇದೇ ವೇಳೆ ಅಶೋಕ್ ಗೆಹ್ಲೋಟ್ ಅವರೊಂದಿಗೂ ಕೆಲಸ ಮಾಡಿದ್ದರು. ಅದರ ಮುಂದುವರೆದ ಭಾಗವಾಗಿ ಎನ್‌ಸಿಪಿ ಮುಖ್ಯಸ್ಥ ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಜೊತೆಗೂಡಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯನ್ನು ಎದುರಿಸಿದ್ದಾರೆ.

ಚುನಾವಣೆ ಎದುರಿಸುವಲ್ಲಿ ಅಜಿತ್ ಪವಾರ್ ಅವರ ವಿಧಾನದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ನರೇಶ್ ಅರೋರಾ ಸಲಹೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ. ಎನ್‌ಸಿಪಿ ವಿಭಜನೆಯಾಗುವವರೆಗೂ ಅಜಿತ್ ಪವಾರ್ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದರು. ಅಲ್ಲದೆ ಪಕ್ಷದ ಕಾರ್ಯಕರ್ತರು ಮತ್ತು ಚುನಾಯಿತ ಪ್ರತಿನಿಧಿಗಳೊಂದಿಗೆ ಉತ್ತಮ ಸಂಪರ್ಕ ಇಟ್ಟುಕೊಂಡಿದ್ದರು. ಹೀಗಿದ್ದರೂ, ಮಹಾರಾಷ್ಟ್ರ ಚುನಾವಣೆಗೂ ಮುನ್ನ ಸಾರ್ವಜನಿಕರೊಂದಿಗೆ ಉತ್ತಮ ಸಂಪರ್ಕ ಸಾಧಿಸಲು ಮೃದು, ಸ್ನೇಹಪರ ಮತ್ತು ಸಕಾರಾತ್ಮಕ ವಿಧಾನವನ್ನು ಅಳವಡಿಸಿಕೊಳ್ಳುವಂತೆ ಚುನಾವಣಾ ತಂತ್ರಜ್ಞರು ಸಲಹೆ ನೀಡಿದ್ದರು.

ಪಿಂಕ್‌ ಥೀಮ್‌

ಚುನಾವಣೆಗಾಗಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯು ಭಿನ್ನ ಬಣ್ಣದ ಥೀಮ್‌ ಹೊಂದುವಂತೆಯೂ ಅರೋರಾ ಸಲಹೆ ನೀಡಿದ್ದರು. ಶಿವಸೇನೆಯ ಕಿತ್ತಳೆ, ಬಿಜೆಪಿಯ ಕೇಸರಿ, ಶರದ್ ಪವಾರ್ ನೇತೃತ್ವದ ಎನ್‌ಸಿಪಿಯ ಬಿಳಿ ಮತ್ತು ಕಾಂಗ್ರೆಸ್‌ನ ಬಿಳಿ ಬಣ್ಣಗಳಿಗಿಂತ ವಿಭಿನ್ನವಾದ ಬಣ್ಣವನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ಇತ್ತು. ಅದರಂತೆಯೇ ಡಿಸೈನ್ ಬಾಕ್ಸ್ಡ್ ಗುಲಾಬಿ ಬಣ್ಣವನ್ನು ಶಿಫಾರಸು ಮಾಡಿದೆ.

ಸದ್ಯ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಆಡಳಿತ ಕೊನೆಗೊಂಡು, ಮಹಾಯುತಿ ಮೈತ್ರಿಯು ಸಮ್ಮಿಶ್ರ ಸರ್ಕಾರ ರಚನೆಗೆ ಸಿದ್ಧತೆ ಆರಂಭಿಸಿದೆ. ನವೆಂಬರ್ 25ರಂದು ಬಿಜೆಪಿ ಮಹಾರಾಷ್ಟ್ರ ಶಾಸಕಾಂಗ ಪಕ್ಷದ ಸಭೆ ನಡೆಸುವ ಸಾಧ್ಯತೆ ಇದೆ. ಆ ಬಳಿಕ ನವೆಂಬರ್ 26ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಸಬಹುದು ಎಂದು ಮೂಲಗಳು ಶನಿವಾರ ತಿಳಿಸಿವೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.