ಏಕನಾಥ್ ಶಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿ ಆಗದೇ ಇದ್ದರೆ, ಮರಾಠ ಸಮುದಾಯ ಬಿಜೆಪಿ ವಿರುದ್ಧ ತಿರುಗಿ ಬೀಳುತ್ತಾ, ಉದ್ಧವ್ ಠಾಕ್ರೆ ಲಾಭ ಆಗುತ್ತಾ
Nov 28, 2024 03:27 PM IST
ಏಕನಾಥ್ ಶಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿ ಆಗದೇ ಇದ್ದರೆ, ಮರಾಠ ಸಮುದಾಯ ಬಿಜೆಪಿ ವಿರುದ್ಧ ತಿರುಗಿ ಬೀಳುತ್ತಾ, ಉದ್ಧವ್ ಠಾಕ್ರೆ ಲಾಭ ಆಗುತ್ತಾ ಎಂಬ ಕುತೂಹಲ ಹೆಚ್ಚಾಗಿದೆ.
Maharashtra CM: ಮಹಾರಾಷ್ಟ್ರ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಆದರೆ ರಾಜಕೀಯ ಲೆಕ್ಕಾಚಾರಗಳು ಮುಂದುವರಿದಿವೆ. ಏಕನಾಥ್ ಶಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿ ಆಗದೇ ಇದ್ದರೆ, ಮರಾಠ ಸಮುದಾಯ ಬಿಜೆಪಿ ವಿರುದ್ಧ ತಿರುಗಿ ಬೀಳುತ್ತಾ, ಉದ್ಧವ್ ಠಾಕ್ರೆ ಲಾಭ ಆಗುತ್ತಾ ಎಂಬುದು ಸದ್ಯದ ಲೆಕ್ಕಾಚಾರ. ಅದರ ವಿವರ ಇಲ್ಲಿದೆ.
Maharashtra CM: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿ ಸರ್ಕಾರದ ಪುನರಾಗಮನವನ್ನು ದೃಢಪಡಿಸಿದೆ. ಆದರೆ, ಮುಖ್ಯಮಂತ್ರಿ ಹುದ್ದೆಯ ಕುರಿತಾದ ಗೊಂದಲ ಇನ್ನೂ ಮುಂದುವರೆದಿದೆ. ಚುನಾವಣೆಗೂ ಮುನ್ನ ರಾಜ್ಯ ಉಸ್ತುವಾರಿ ವಹಿಸಿಕೊಂಡಿದ್ದ ಏಕನಾಥ್ ಶಿಂಧೆ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿ ಎಂದು ಪರಿಗಣಿಸಲಾಗಿದೆ. ಆದರೂ, ಬಿಜೆಪಿ ಮುಖ್ಯಮಂತ್ರಿಯಾಗಲು ನನ್ನ ಅಭ್ಯಂತರವಿಲ್ಲ ಎಂದು ಇತ್ತೀಚೆಗೆ ಅವರು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು. ಶಿಂಧೆಯವರ ಈ ಹೇಳಿಕೆ ರಾಜಕೀಯ ಸಂಚಲನವನ್ನು ಹೆಚ್ಚಿಸಿದ್ದು, ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗಿರುವುದರಿಂದ ಮರಾಠ ಸಮುದಾಯವು ಮಹಾಯುತಿಯ ಮೇಲೆ ಕೋಪಗೊಳ್ಳಬಹುದೇ ಎಂಬ ಊಹಾಪೋಹಗಳು ಹರಿದಾಡಿವೆ. ಅದೇ ವೇಳೆ, ಏಕನಾಥ್ ಶಿಂಧೆ ಅವರ ಈ 'ತ್ಯಾಗ'ದಿಂದ ಉದ್ಧವ್ ಠಾಕ್ರೆಗೆ ಲಾಭವಾಗುತ್ತದೆಯೇ ಮತ್ತು ಮಹಾಯುತಿಗೆ ಹಾನಿಯಾಗುತ್ತದೆಯೇ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಇದಲ್ಲದೇ ಏಕನಾಥ್ ಶಿಂಧೆಯವರು ಮುಖ್ಯಮಂತ್ರಿಯಾಗದಿದ್ದರೆ ಶಿವಸೇನೆಯ ಬೆಂಬಲಿಗರ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬುದು ಕೂಡ ಚರ್ಚೆಗೆ ಒಳಗಾಗಿದೆ.
ಮರಾಠ ನಾಯಕ ಏಕನಾಥ ಶಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿ ಆಗದಿದ್ದರೆ ಪರಿಣಾಮ ಏನಾಗಬಹುದು
ಹಂಗಾಮಿ ಮುಖ್ಯಮಂತ್ರಿ ಏಕನಾಥ ಶಿಂಧೆ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು ಎಂಬುದು ಶಿವಸೇನಾ ನಾಯಕರೆಲ್ಲರ ಆಗ್ರಹ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕಾದ ಅನಿವಾರ್ಯತೆ. ಏಕನಾಥ್ ಶಿಂಧೆ ಈಗಾಗಲೇ ನಿರ್ಧಾರ ಬಿಜೆಪಿಗೆ ಬಿಟ್ಟದ್ದು ಎಂದು ಹೇಳಿದ್ದಾಗಿದೆ. ಇದೇ ವೇಳೆ, ಬಿಜೆಪಿಯೂ ಸ್ವತಂತ್ರವಾಗಿ ಸರ್ಕಾರ ರಚಿಸುವ ಸ್ಥಿತಿಯಲ್ಲಿ ಇಲ್ಲದ ಕಾರಣ, ಮುಖ್ಯಮಂತ್ರಿ ಸ್ಥಾನಕ್ಕೆ ದೇವೇಂದ್ರ ಫಡ್ನವಿಸ್ ಅವರನ್ನು ಕೂರಿಸುತ್ತಾ ಎಂಬುದು ಪ್ರಶ್ನೆ. ಅವರು ಬ್ರಾಹ್ಮಣ. ಮರಾಠರನ್ನು ಕಡೆಗಣಿಸಿದರೆ ಆ ಸಮುದಾಯದ ವಿಶ್ವಾಸ ಗಳಿಸಬೇಕು ಎನ್ನುವ ಬಿಜೆಪಿ ಪ್ರಯತ್ನಕ್ಕೆ ಹಿನ್ನಡೆಯಾಗಬಹುದು. ಹಾಗಾಗಿ ಈ ಪರಿಸ್ಥಿತಿಯಲ್ಲಿ ಬಿಜೆಪಿ ತೆಗೆದುಕೊಳ್ಳುವ ನಿರ್ಧಾರ ಏನು ಎಂಬುದರ ಮೇಲೆ ಉಳಿದೆಲ್ಲ ರಾಜಕೀಯ ವಿದ್ಯಮಾನಗಳೂ ನಡೆಯಲಿವೆ.
ಉದ್ಧವ್ ಠಾಕ್ರೆ ಅವರಿಗೆ ರಾಜಕೀಯ ಲಾಭವಾಗುವುದೇ
ಮಹಾಯುತಿ ಮೈತ್ರಿಯಲ್ಲಿ ಬಿಜೆಪಿ ಮತ್ತು ಶಿವಸೇನಾ, ಎನ್‌ಸಿಪಿ ಪಕ್ಷಗಳ ನಡುವೆ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಕಂಡುಕೊಳ್ಳುವುದು ಸಾಧ್ಯವಾಗಿಲ್ಲ. 2019ರ ವಿಧಾನಸಭಾ ಚುನಾವಣೆ ಬಳಿಕ ಬಿಜೆಪಿ ಜತೆಗಿನ ಮೈತ್ರಿ ಕಡಿದುಕೊಂಡಿದ್ದ ಉದ್ಧವ್ ಠಾಕ್ರೆ ಶಿವಸೇನಾ ಬಳಿಕ ಕೈ ಜೋಡಿಸಿದ್ದು ಸೈದ್ಧಾಂತಿಕ ವಿರೋಧಿ ಕಾಂಗ್ರೆಸ್ ಮತ್ತು ಎನ್‌ಸಿಪಿಗಳ ಜತೆಗೆ. ಆದರೆ ಈ ಮೈತ್ರಿ ಬಹುಕಾಲ ಮುಂದುವರಿಯಲ್ಲಿಲ್ಲ. ಶಿವಸೇನಾ ತನ್ನ ಮೂಲ ಹಿಂದೂವಾದದಿಂದ ಜಾತ್ಯತೀತ ವಾದದ ಕಡೆಗೆ ಹೊರಳಿತು. ಏಕನಾಥ್ ಶಿಂಧೆ ನಾಯಕತ್ವದಲ್ಲಿ ಬಹಳಷ್ಟು ಶಾಸಕರು ಒಂದಾದರು. ಪಕ್ಷ ವಿಭಜನೆಯಾಯಿತು. ಚುನಾವಣಾ ಆಯೋಗ ಪಕ್ಷದ ಚಿಹ್ನೆಯನ್ನು ಶಿಂಧೆ ಅವರ ಶಿವಸೇನಾಗೆ ನೀಡಿತು. ಅದುವೇ ಅಧಿಕೃತ ಶಿವಸೇನಾ ಎಂದು ಹೇಳಿತು. ಇದರೊಂದಿಗೆ ಉದ್ಧವ್ ಠಾಕ್ರೆ ನಾಯಕತ್ವ ದುರ್ಬಲವಾಯಿತು. ಈಗ ನಡೆಯುತ್ತಿರುವ ವಿದ್ಯಮಾನವು ಮರಾಠ ಸಮುದಾಯದ ನಡುವೆ ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಉದ್ಧವ್ ಠಾಕ್ರೆಗೆ ಅವಕಾಶ ನೀಡಿದ್ದು, ಅದನ್ನು ಅವರು ಬಳಸುತ್ತಾರೆಯೇ ಎಂಬ ಕುತೂಹಲವಿದೆ.
ಬೃಹನ್ಮುಂಬೈ ಮಹಾನಗರ ಪಾಲಿಕೆ ಚುನಾವಣೆ ಕಡೆಗೆ ನೋಟ
ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯಲ್ಲಿ ಶಿವಸೇನೆ ಮತ್ತು ಶಿವಸೇನೆ ನಡುವೆ ಘರ್ಷಣೆ ನಡೆಯಲಿದ್ದು, ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆ ಶಿವಸೇನೆಗೆ ಮಹತ್ವದ ತಿರುವು ನೀಡಲಿದೆ. ಶಿಂಧೆ ಮತ್ತು ಠಾಕ್ರೆ ಇಬ್ಬರಿಗೂ, ಈ ಚುನಾವಣೆಯು ಕೇವಲ ಸ್ಥಳೀಯ ಹೋರಾಟವಲ್ಲ ಆದರೆ, ಶಿವಸೇನೆಯ ಪರಂಪರೆ ಮತ್ತು ಗುರುತಿನ ನಿರ್ಣಾಯಕ ಹೋರಾಟವಾಗಿದೆ. ಅಧಿಕಾರದಲ್ಲಿರುವುದರ ಅನುಕೂಲ ಶಿಂಧೆಯವರ ಪರವಾಗಿ ಹೋಗಬಹುದಾದರೂ, ಮುಖ್ಯಮಂತ್ರಿಯಾಗದೇ ಇದ್ದಲ್ಲಿ ಈ ಅನುಕೂಲ ದುರ್ಬಲವಾಗಬಹುದು ಎಂಬ ಲೆಕ್ಕಾಚಾರವೂ ಇದೆ.
ಇನ್ನೊಂದೆಡೆ ರಾಜ್ ಠಾಕ್ರೆ ಅವರ ನಾಯಕತ್ವವೂ ದುರ್ಬಲವಾಗಿದೆ. ಹೀಗಾಗಿ ಮಹಾರಾಷ್ಟ್ರ ನವನಿರ್ಮಾಣ್ ಸೇನೆ ಬಿಎಂಸಿ ಚುನಾವಣೆಯಲ್ಲಿ ಮಹತ್ವದ ಗೆಲುವು ದಾಖಲಿಸಬಹುದು ಎಂಬ ನಿರೀಕ್ಷೆಯೂ ಇಲ್ಲ. ಒಂದೊಮ್ಮೆ, ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗದೇ ಇದ್ದರೆ ಶಿವಸೇನಾ ಪಕ್ಷವು ಬಿಜೆಪಿಯ ನೆರಳಲ್ಲಿಯೇ ಮುಂದುವರಿಯಬೇಕಾಗಬಹುದು ಎನ್ನುವ ಮಾತು ರಾಜಕೀಯ ವಲಯದಲ್ಲಿ ಕೇಳಿಬಂದಿದೆ.