ಮಹಾರಾಷ್ಟ್ರ ಚುನಾವಣಾ ಫಲಿತಾಂಶ: ತೆಲಂಗಾಣದಂತೆ ಕೈ ಹಿಡಿಯಲಿಲ್ಲ ಕಾಂಗ್ರೆಸ್‌ನ ಕರ್ನಾಟಕ ಗ್ಯಾರಂಟಿ ಮ್ಯಾಜಿಕ್; ಬಿಜೆಪಿಯ ಕೈ ಹಿಡಿದುದೇನು
Nov 23, 2024 03:58 PM IST
ಮಹಾರಾಷ್ಟ್ರ ಚುನಾವಣಾ ಫಲಿತಾಂಶ: ತೆಲಂಗಾಣದಂತೆ ಕೈ ಹಿಡಿಯಲಿಲ್ಲ ಕಾಂಗ್ರೆಸ್‌ನ ಕರ್ನಾಟಕ ಗ್ಯಾರೆಂಟಿ ಮ್ಯಾಜಿಕ್. ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ, ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (ಎಡ ಚಿತ್ರ) ಮತ್ತು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಾರಾಷ್ಟ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಸಂದರ್ಭದಲ್ಲಿ ಚಿತ್ರಗಳನ್ನು ಸಾಂದರ್ಭಿಕವಾಗಿ ಬಳಸಲಾಗಿದೆ.
Maharashtra Election Results: ಮಹಾರಾಷ್ಟ್ರದ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಪೋಸ್ಟ್ ಮಾರ್ಟಂ ಕೆಲಸ ಶುರುವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾದುದು ಯಾಕೆ,
ತೆಲಂಗಾಣದಂತೆ ಕರ್ನಾಟಕ ಗ್ಯಾರಂಟಿ ಮ್ಯಾಜಿಕ್ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ನ ಕೈ ಹಿಡಿಯಲಿಲ್ಲ. ಇದೇ ವೇಳೆ ಬಿಜೆಪಿಯ ಕೈ ಹಿಡಿದುದೇನು ಎಂಬಿತ್ಯಾದಿ ವಿವರ ಇಲ್ಲಿದೆ.
Maharashtra Election Results: ತೆಲಂಗಾಣದ ಮಾದರಿಯಲ್ಲೇ ಮಹಾರಾಷ್ಟ್ರದಲ್ಲೂ ಕರ್ನಾಟಕದ ಫಾರ್ಮುಲಾವನ್ನು ಜಾರಿಗೊಳಿಸಲು ಕಾಂಗ್ರೆಸ್ ಪಕ್ಷ ಮುಂದಾಗಿತ್ತು. ಆದರೆ, ಮಹಾರಾಷ್ಟ್ರ ಚುನಾವಣಾ ಫಲಿತಾಂಶ ಗಮನಿಸಿದರೆ, ತೆಲಂಗಾಣದಂತೆ ಕರ್ನಾಟಕ ಗ್ಯಾರಂಟಿ ಮ್ಯಾಜಿಕ್ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ನ ಕೈ ಹಿಡಿಯಲಿಲ್ಲ ಎಂಬುದು ಮನದಟ್ಟಾಗಿದೆ. ಇನ್ನೊಂದೆಡೆ, ಮಧ್ಯ ಪ್ರದೇಶದ 'ಲಾಡ್ಲಿ ಬೆಹನಾ ಯೋಜನೆ' ಯೋಜನೆಯನ್ನು ಬಿಜೆಪಿ ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್ ಯೋಜನೆ ರೂಪದಲ್ಲಿ ಜಾರಿಗೊಳಿಸಿ ಗಮನಸೆಳೆದಿತ್ತು. ಇದಲ್ಲದೆ, ಕರ್ನಾಟಕದ ಗ್ಯಾರಂಟಿ ಯೋಜನೆ ಜಾರಿಗೊಳಿಸಲು ಸರ್ಕಾರದ ಬೊಕ್ಕಸ ಖಾಲಿಯಾಗಿದೆ ಎಂಬರ್ಥದ ಜಾಹೀರಾತನ್ನೂ ಪ್ರಕಟಿಸಿ ಬಿಜೆಪಿ ತನ್ನ ಮುನ್ನಡೆಯನ್ನು ಖಾತ್ರಿ ಪಡಿಸಿಕೊಂಡಿದ್ದು ಫಲಿತಾಂಶ ಎತ್ತಿ ತೋರಿಸಿದೆ. ಮತದಾನ ಪ್ರಮಾಣ ಗಮನಿಸಿದರೆ ಮಹಿಳೆಯರ ಮತದಾನ ಪ್ರಮಾಣವೂ ಹೆಚ್ಚಾಗಿತ್ತು ಎಂಬ ಅಂಶ ಗಮನಸೆಳೆಯುತ್ತದೆ. ಸರಳವಾಗಿ ಹೇಳಬೇಕು ಎಂದರೆ ಉಚಿತ ಮತ್ತು ಹಣಕಾಸಿನ ನೆರವು ಒದಗಿಸುವ ಯೋಜನೆಗಳು ಗ್ಯಾರೆಂಟಿ ಯೋಜನೆಗಳಿಗಿಂತ ಹೆಚ್ಚು ಪರಿಣಾಮ ಬೀರಿದೆ ಎಂಬುದು ಮನದಟ್ಟಾಗುತ್ತದೆ.
ಮಹಾರಾಷ್ಟ್ರ ಫಲಿತಾಂಶ: ಕಾಂಗ್ರೆಸ್ ಗ್ಯಾರಂಟಿ, ಕರ್ನಾಟಕ ಫಾರ್ಮುಲಾ ಕೈ ಹಿಡಿಯಲಿಲ್ಲ
ಮಹಾರಾಷ್ಟ್ರ ಚುನಾವಣೆ ಘೋಷಣೆಯಾದ ಬಳಿಕ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಪಕ್ಷ ತನ್ನ ಕರ್ನಾಟಕ ಫಾರ್ಮುಲಾವನ್ನು ಪರೀಕ್ಷಿಸಲು ಮುಂದಾಗಿತ್ತು. ತೆಲಂಗಾಣದಲ್ಲಿ ಯಶಸ್ಸು ಕಂಡ ಕಾಂಗ್ರೆಸ್ ಗ್ಯಾರಂಟಿ ಫಾರ್ಮುಲಾ ಮಹಾರಾಷ್ಟ್ರದಲ್ಲೂ ಯಶಸ್ಸು ತಂದುಕೊಡಬಹುದು ಎಂಬ ಅಂದಾಜಿನಲ್ಲಿದ್ದರು ಕಾಂಗ್ರೆಸ್ ನಾಯಕರು. ಕಾಂಗ್ರೆಸ್ ಪಕ್ಷ ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ನಾಯಕತ್ವವಹಿಸಿದ್ದು, ಜತೆಗೆ ಶಿವಸೇನಾ (ಯುಬಿಟಿ), ಎನ್‌ಸಿಪಿ (ಶರದ್ ಪವಾರ್) ಅವರನ್ನೂ ಸೇರಿಸಿಕೊಂಡು ಚುನಾವಣೆ ಎದುರಿಸಿತ್ತು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ ಘೋಷಿಸಿದ 5 ಗ್ಯಾರಂಟಿ ಯೋಜನೆಗಳಿವು -
1) ಕರ್ನಾಟಕದ ಗೃಹಲಕ್ಷ್ಮಿ ಯೋಜನೆಯ ಮಾದರಿಯಲ್ಲೇ ಮಹಾರಾಷ್ಟ್ರದಲ್ಲಿ ಪ್ರತಿ ತಿಂಗಳೂ ಮಹಿಳೆಯರಿಗೆ 3000 ರೂಪಾಯಿ ಹಣಕಾಸಿನ ನೆರವು
2) ಕರ್ನಾಟಕದ ಶಕ್ತಿ ಯೋಜನೆಯಂತೆ ಮಹಾರಾಷ್ಟ್ರದಲ್ಲೂ ಮಹಿಳೆಯರಿಗೆ ಉಚಿತವಾಗಿ ಬಸ್ ಪ್ರಯಾಣ
3) ಎಲ್ಲ ಕೃಷಿಕರ 3 ಲಕ್ಷ ರೂಪಾಯಿವರೆಗಿನ ಸಾಲ ಮನ್ನಾ
4) ನಿಯತವಾಗಿ ಸಾಲ ಮರುಪಾವತಿ ಮಾಡುತ್ತಿರುವ ರೈತರಿಗೆ ಪ್ರೋತ್ಸಾಹಧನವಾಗಿ 50,000 ರೂಪಾಯಿ
5) ನಿರುದ್ಯೋಗಿ ಯುವಜನರಿಗೆ ತಿಂಗಳಿಗೆ 4,000 ರೂಪಾಯಿ ನೆರವು
ಮಹಾರಾಷ್ಟ್ರದ ಮತದಾರರ ಮನವೊಲಿಸುವುದಕ್ಕಾಗಿ ಈ ಗ್ಯಾರಂಟಿ ಯೋಜನೆಗಳನ್ನು ಮೊದಲು ಜಾರಿಗೊಳಿಸಿ ಕರ್ನಾಟಕವನ್ನು ಮಾದರಿಯನ್ನಾಗಿ ಮುಂದಿಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಚುನಾವಣಾ ಪ್ರಚಾರಕ್ಕೆ ಹೋಗಿದ್ದರು. ಇದಲ್ಲದೇ, ಕರ್ನಾಟಕ ಫಾರ್ಮುಲಾ ಬಳಸಿ ಯಶಸ್ವಿಯಾದ ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಕೂಡ ಪ್ರಚಾರಕ್ಕೆ ಹೋಗಿದ್ದರು.
ಇದೇ ವೇಳೆ, ಬಿಜೆಪಿ ನಾಯಕರು ಕರ್ನಾಟಕದ ಬೊಕ್ಕಸದಲ್ಲಿ ಗ್ಯಾರಂಟಿ ಸ್ಕೀಮ್ ಜಾರಿಗೊಳಿಸಲು ದುಡ್ಡಿಲ್ಲ ಎಂದು ಪ್ರಚಾರ ಮಾಡಿದ್ದರು. ಜಾಹೀರಾತು ಕೂಡ ಕೊಟ್ಟಿದ್ದರು.
ಬಿಜೆಪಿ ನೇತೃತ್ವದ ಮಹಾಯುತಿ ಚುನಾವಣೆ ಎದುರಿಸಿದ್ದು ಹೀಗೆ
ಮಹಾರಾಷ್ಟ್ರದ ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿ, ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ 'ಲಾಡ್ಲಿ ಬೆಹನಾ ಯೋಜನೆ' ಯೋಜನೆಯನ್ನು ಈಗಾಗಲೇ ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್ ಯೋಜನೆಯಾಗಿ ಜಾರಿಗೊಳಿಸಿತ್ತು. ಇದರಲ್ಲಿ, ತಿಂಗಳಿಗೆ 1500 ರೂಪಾಯಿ ಹಣಕಾಸು ನೆರವು ನೀಡುವ ಯೋಜನೆಯನ್ನು ಪರಿಷ್ಕರಿಸುವುದಾಗಿ ಭರವಸೆ ನೀಡಿತು. ಅಧಿಕಾರಕ್ಕೆ ಬಂದರೆ ಫಲಾನುಭವಿಗಳಿಗೆ 2,100 ರೂಪಾಯಿ ನೀಡುವುದಾಗಿ ಘೋಷಿಸಿತು. ಇದಲ್ಲದೆ, 'ಲಡ್ಕಾ ಭಾವು ಯೋಜನೆ' ಮತ್ತು ಉಚಿತ ಎಲ್‌ಪಿಜಿ ಸಿಲಿಂಡರ್ ನೀಡುವ ಭರವಸೆಯನ್ನೂ ನೀಡಿತು. ಇವೆಲ್ಲವೂ ಮತದಾರರ ಮೇಲೆ ಪರಿಣಾಮ ಬೀರಿದೆ. ಇದಲ್ಲದೆ ಜಾತಿ ಲೆಕ್ಕಾಚಾರದ ನಡೆಗಳು, ಉತ್ತರ ಪ್ರದೇಶದಲ್ಲಿ ಘೋಷಿಸಿದ್ದ ಬಟೇಂಗೆ ತೊ ಕಟೇಂಗೆ (ಒಡೆದು ಹೋದರೆ ಸೋಲುತ್ತೇವೆ) ಘೋಷಣೆ, ಮರಾಠವಾಡ, ವಿದರ್ಭ ಜನರ ಬೇಡಿಕೆಗಳಿಗೆ ಸ್ಪಂದಿಸಿದ್ದು, ಕೇಂದ್ರ ಸರ್ಕಾರ ಕೂಡ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿರುವುದು ಕೆಲಸ ಮಾಡಿದೆ. ಇದಲ್ಲದೆ, ವ್ಯವಸ್ಥಿತ ಪ್ರಚಾರ ನಡೆಸಿ ಮಿತ್ರ ಪಕ್ಷಗಳೂ ಹೆಚ್ಚು ಸ್ಥಾನಗಳನ್ನು ಗೆಲ್ಲುವಂತೆ ಮಾಡಿರುವುದು ಪ್ಲಸ್ ಪಾಯಿಂಟ್ ಆಗಿದೆ.
ಎಲ್ಲದಕ್ಕೂ ಮಿಗಿಲಾಗಿ, ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ ತನ್ನ ಕರ್ನಾಟಕ, ತೆಲಂಗಾಣದ ಕಾಂಗ್ರೆಸ್ ಗ್ಯಾರಂಟಿ ಮಾದರಿಗಳನ್ನು ಮುಂದಿಟ್ಟು ಪ್ರಚಾರ ಮಾಡುತ್ತಿರುವಾಗ ಅವೆಲ್ಲ ಸುಳ್ಳು. ಮಾಧ್ಯಮ ವರದಿಗಳನ್ನು ಗಮನಿಸಿ, ಅಲ್ಲಿ ಅವುಗಳನ್ನು ಜಾರಿಗೊಳಿಸುವುದಕ್ಕೆ ಬೊಕ್ಕಸದಲ್ಲಿ ಹಣ ಇಲ್ಲ ಎಂಬ ಜಾಹೀರಾತುಗಳನ್ನು ನೀಡಿದ ಬಿಜೆಪಿ, ಮತದಾರರ ಗಮನ ಅದರ ಮೇಲೆ ಕೇಂದ್ರೀಕೃತವಾಗದಂತೆ ನೋಡಿಕೊಂಡಿತು.
ಈ ವಿದ್ಯಮಾನದಿಂದ ತೀವ್ರ ಅಸಮಾಧಾನಗೊಂಡ ಕಾಂಗ್ರೆಸ್ ನಾಯಕರು ವಿಶೇಷವಾಗಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಮತ ಪಡೆಯುವ ಸಲುವಾಗಿ ಮಹಾರಾಷ್ಟ್ರದ ಜನರನ್ನು ದಾರಿ ತಪ್ಪಿಸುವುದು ಮಾತ್ರ. ಅವರು (ಪ್ರಧಾನಿ) ಸುಳ್ಳು ಹೇಳುತ್ತಿದ್ದಾರೆ, ಮಹಾರಾಷ್ಟ್ರ ಸರ್ಕಾರವು ಸುಳ್ಳು ಜಾಹೀರಾತು ನೀಡುತ್ತಿದೆ. ಇದರ ವಿರುದ್ಧ ಕಾನೂನು ಕ್ರಮ ಜರುಗಿಸುವುದಕ್ಕೆ ಚಿಂತನೆ ನಡೆಸಲಾಗಿದೆ’ ಎಂದು ಕರ್ನಾಟಕ ಸರ್ಕಾರದ ಖಾತರಿ ಯೋಜನೆಗಳನ್ನು ಗುರಿಯಾಗಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಶ್ನೆಗೆ ಸಿದ್ದರಾಮಯ್ಯ ನವೆಂಬರ್ 18ರಂದು ಪ್ರತಿಕ್ರಿಯಿಸಿದ್ದರು. ಅಲ್ಲಿಗೆ ಮತದಾನಕ್ಕೂ ಮೊದಲೇ ಕರ್ನಾಟಕ ಫಾರ್ಮುಲಾದ ಮ್ಯಾಜಿಕ್ ನಡೆಯೋದಿಲ್ಲ ಎಂಬುದು ಅವರಿಗೆ ಮನದಟ್ಟಾಗಿತ್ತಾ ಎಂಬ ಪ್ರಶ್ನೆ ರಾಜಕೀಯ ಚಾವಡಿಯಲ್ಲಿ ಚರ್ಚೆಯಾಗಿದೆ.
- ಉಮೇಶ್ ಕುಮಾರ್ ಶಿಮ್ಲಡ್ಕ, ಸುದ್ದಿ ಸಂಪಾದಕ, ಹಿಂದೂಸ್ತಾನ್ ಟೈಮ್ಸ್ ಕನ್ನಡ