Rajasthan Polls: ರಾಜಸ್ಥಾನ ವಿಧಾನಸಭೆ ಚುನಾವಣೆ; 199 ಕ್ಷೇತ್ರಗಳಲ್ಲಿ ಚುರುಕಿನಿಂದ ಸಾಗಿದ ಮತದಾನ
Nov 25, 2023 04:27 PM IST
ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು.
ರಾಜಸ್ಥಾನ ವಿಧಾನಸಭೆಯ ಚುನಾವಣೆಯ ಮತದಾನ ಚುರುಕಿನಿಂದ ಸಾಗಿದ್ದು, ಮತದಾರರು ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.
ಜೈಪುರ್ (ರಾಜಸ್ಥಾನ): ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ನಡುವಿನ ನೇರಾ ನೇರ ಪೈಪೋಟಿಗೆ ವೇದಿಕೆ ಕಲ್ಪಿಸಿರುವ ರಾಜಸ್ಥಾನ ವಿಧಾನಸಭೆ ಚುನಾವಣೆಗೆ (Rajasthan Assembly Election 2023) ಇಂದು (ನವೆಂಬರ್ 25, ಶನಿವಾರ) ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಮತದಾರರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.
ರಾಜಸ್ಥಾನದಲ್ಲಿ ಒಟ್ಟು 200 ವಿಧಾನಸಭೆ ಕ್ಷೇತ್ರಗಳಿದ್ದು, ಒಂದು ಕ್ಷೇತ್ರದಲ್ಲಿ ಮತದಾನ ನಡೆಯುತ್ತಿಲ್ಲ. ಕರಣ್‌ಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಹಾಲಿ ಶಾಸಕ ಗುರ್ಮಿತ್ ಸಿಂಗ್ ಕುನಾರ್ ಅವರು ಅಕಾಲಿನ ಮರಣ ಹೊಂದಿದ್ದಾರೆ. ಹೀಗಾಗಿ ಇಲ್ಲಿ ಮತದಾನ ನಡೆಯುತ್ತಿಲ್ಲ. ಉಳಿದಂತೆ ಒಂದೇ ಹಂತದಲ್ಲೇ 199 ಕ್ಷೇತ್ರಗಳಿಗೆ ವೋಟಿಂಗ್ ನಡೆಯುತ್ತಿದೆ.
ರಾಜಸ್ಥಾನ ವಿಧಾನಸಭೆ ಚುನಾವಣೆಯ ಸಂಪೂರ್ಣ ಚಿತ್ರಣ
ರಾಜಸ್ಥಾನದಲ್ಲಿ ಒಟ್ಟು 5,26,90,146 ಮತದಾರರು ಇದ್ದಾರೆ. ಇವರಲ್ಲಿ 1,70,99,334 ಮತದಾರರು 18 ರಿಂದ 30 ವರ್ಷದೊಳಗಿನವರಾಗಿದ್ದಾರೆ. 22,61,008 ಮಂದಿ ಮೊದಲ ಬಾರಿಗೆ ಮತದಾನ ಮಾಡುತ್ತಿದ್ದಾರೆ. ರಾಜ್ಯಾದ್ಯಂತ 51,507 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 199 ಕ್ಷೇತ್ರಗಳಿಂದ ಒಟ್ಟು 1,862 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಆಡಳಿತಾರೂಢ ಕಾಂಗ್ರೆಸ್ 199 ಕ್ಷೇತ್ರಗಳಲ್ಲೂ ಸ್ಪರ್ಧಿಸಿದೆ. ಮಿತ್ರಪಕ್ಷ ಆರ್‌ಎಲ್‌ಡಿಗೆ ಒಂದು ಸ್ಥಾನವನ್ನು ಬಿಟ್ಟುಕೊಟ್ಟಿದೆ. ಮತ್ತೊಂದೆಡೆ ಬಿಜೆಪಿ ಒಟ್ಟು 200 ಕ್ಷೇತ್ರಗಳಲ್ಲೂ( 1 ಕ್ಷೇತ್ರದಲ್ಲಿ ಮತದಾನ ನಡೆಯುತ್ತಿಲ್ಲ) ಅಖಾಡಕ್ಕೆ ಇಳಿದಿದೆ. ಕಾಂಗ್ರೆಸ್ ಮತ್ತು ಬಿಜೆಪಿಯಲ್ಲದೆ, ಸಿಪಿಎಂ, ಆರ್‌ಎಲ್‌ಪಿ, ಭಾರತ್ ಆದಿವಾಸಿ ಪಕ್ಷ, ಭಾರತೀಯ ಟ್ರೈಬಲ್ ಪಾರ್ಟಿ, ಆಮ್ ಆದ್ಮಿ ಪಕ್ಷ ಹಾಗೂ ಎಂಐಎಂ ಕೂಡ ವಿವಿಧ ಕ್ಷೇತ್ರಗಳಲ್ಲಿ ಪರೀಕ್ಷೆಗಳಿದಿವೆ. ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಸೀಟು ಸಿಗದೆ ಬಂಡಾವೆದಿದ್ದ 40 ಮಂದಿ ಸ್ಪರ್ಧಾ ಕಣದಲ್ಲಿದ್ದು, ಇವರ ಫಲಿತಾಂಶ ಕುತೂಹಲ ಮೂಡಿಸಿದೆ.
ಸಿಎಂ ಅಶೋಕ್ ಗೆಹ್ಲೋಟ್, ಸಚಿನ್ ಪೈಲಟ್, ರಾಜಸ್ಥಾನ ಕಾಂಗ್ರೆಸ್ ರಾಜ್ಯಾಧ್ಯಕ್ಷ ಗೋವಿಂದ್ ಸಿಂಗ್ ದೋತಸ್ರಾ, ವಿಧಾನಸಭೆ ಸ್ಪೀಕರ್ ಸಿಪಿ ಜೋಶಿ, ಶಾಂತಿ ಧರಿವಾಲ್, ಬಿಡಿ ಕಲ್ಲ, ಭನ್ವರ್ ಉದಯ್ ಲಾಲ್, ಮಹೇಂದ್ರಜಿತ್ ಸಿಂಗ್ ಮಾಳವೀಯ, ಅಶೋಕ್ ಚಂದನಾ ಸೇರಿದಂತೆ ಹಲವು ಸಚಿವರು ಚುನಾವಣಾ ಕಣದಲ್ಲಿದ್ದಾರೆ.
ಇತ್ತ ಕೇಸರಿ ಪಕ್ಷ ಬಿಜೆಪಿಯಿಂದ ವಿರೋಧ ಪಕ್ಷದ ನಾಯಕ ರಾಜೇಂದ್ರ ರಾಥೋಡ್, ವಿರೋಧ ಪಕ್ಷದ ಉಪ ನಾಯಕ ಹಾಗೂ ಮಾಜಿ ರಾಜ್ಯಾಧ್ಯಕ್ಷ ಸತೀಶ್ ಪುನಿಯಾ, ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜದೇ, ಸಂಸದರಾದ ದಿಯಾ ಕುಮಾರಿ, ರಾಜ್ಯವರ್ಧನ್ ರಾಥೋಡ್, ಬಾಬಾ ಬಾಲ್ಕನಾಥ್ ಹಾಗೂ ಕಿರೋಡಿ ಲಾಲ್ ಮೀನಾ ಕೂಡ ಈ ಬಾರಿ ವಿಧಾನಸಭೆ ಚನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.
4 ಹಂತಗಳಲ್ಲಿ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ
ರಾಜಸ್ಥಾನ, ತೆಲಂಗಾಣ, ಛತ್ತೀಸ್‌ಗಢ, ಮಧ್ಯಪ್ರದೇಶ ಹಾಗೂ ಮಿಜೋರಾಂ ಸೇರಿ ಒಟ್ಟು 5 ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ನವೆಂಬರ್ 7 ರಂದು ಮಿಜೋರಾಂ, ನವೆಂಬರ್ 17 ರಂದು ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ವಿಧಾನಸಭೆಗೆ ಚುನಾವಣೆ ನಡೆದಿದ್ದು, ನವೆಂಬರ್ 25 ರಾಜಸ್ಥಾನ ಹಾಗೂ ನವೆಂಬರ್ 30ಕ್ಕೆ ತೆಲಂಗಾಣ ಮತದಾನ ನಡೆಯಲಿದೆ. ಡಿಸೆಂಬರ್ 3 ರಂದು ಪಂಚ ರಾಜ್ಯಗಳ ಫಲಿತಾಂಶ ಪ್ರಕಟವಾಗಲಿದೆ.