logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಶ್ರೀಲಂಕಾ ಸಂಸತ್ ಚುನಾವಣೆ: ಅಧ್ಯಕ್ಷ ಅನುರಾ ಆಡಳಿತ ಮೈತ್ರಿಕೂಟಕ್ಕೆ ದೊಡ್ಡ ಗೆಲುವು, ಭಾರತಕ್ಕೆ ಆಗುವ ಲಾಭಗಳೇನು?

ಶ್ರೀಲಂಕಾ ಸಂಸತ್ ಚುನಾವಣೆ: ಅಧ್ಯಕ್ಷ ಅನುರಾ ಆಡಳಿತ ಮೈತ್ರಿಕೂಟಕ್ಕೆ ದೊಡ್ಡ ಗೆಲುವು, ಭಾರತಕ್ಕೆ ಆಗುವ ಲಾಭಗಳೇನು?

Prasanna Kumar P N HT Kannada

Nov 16, 2024 03:25 PM IST

google News

ಶ್ರೀಲಂಕಾ ಸಂಸತ್ ಚುನಾವಣೆ: ಅಧ್ಯಕ್ಷ ಅನುರಾ ಆಡಳಿತ ಮೈತ್ರಿಕೂಟಕ್ಕೆ ದೊಡ್ಡ ಗೆಲುವು

    • Anura Kumara Dissanayake: 2024ರ ನವೆಂಬರ್ 14ರಂದು ನಡೆದ ಶ್ರೀಲಂಕಾದ ಸಂಸತ್ತಿನ ಚುನಾವಣೆಯಲ್ಲಿ ಅಧ್ಯಕ್ಷ ಅನುರಾ ಕುಮಾರ ಡಿಸಾನಾಯಕೆ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪವರ್ ಭರ್ಜರಿ ಗೆಲುವು ಸಾಧಿಸಿದೆ.
ಶ್ರೀಲಂಕಾ ಸಂಸತ್ ಚುನಾವಣೆ: ಅಧ್ಯಕ್ಷ ಅನುರಾ ಆಡಳಿತ ಮೈತ್ರಿಕೂಟಕ್ಕೆ ದೊಡ್ಡ ಗೆಲುವು
ಶ್ರೀಲಂಕಾ ಸಂಸತ್ ಚುನಾವಣೆ: ಅಧ್ಯಕ್ಷ ಅನುರಾ ಆಡಳಿತ ಮೈತ್ರಿಕೂಟಕ್ಕೆ ದೊಡ್ಡ ಗೆಲುವು (PTI)

ಕೊಲಂಬೊ (ಶ್ರೀಲಂಕಾ): ಸಾರ್ವತ್ರಿಕ ಚುನಾವಣೆಯಲ್ಲಿ ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ಡಿಸ್ಸಾನಾಯಕೆ (Anura Kumara Dissanayake) ಆಡಳಿತ ಮೈತ್ರಿಕೂಟವು ಪ್ರಚಂಡ ಗೆಲುವು ಸಾಧಿಸಿದೆ. ಇದರೊಂದಿಗೆ ನ್ಯಾಷನಲ್ ಪೀಪಲ್ಸ್ ಪವರ್ ಪಾರ್ಟಿ (NPP) ಭಾರಿ ಬಹುಮತ ಪಡೆದಿದೆ. ಎನ್​ಪಿಪಿ 225 ಸದಸ್ಯರ ಸದನದಲ್ಲಿ 159 ಸ್ಥಾನ ಗೆದ್ದು, 3ನೇ ಎರಡರಷ್ಟು ಬಹುಮತ ಪಡೆದುಕೊಂಡಿದೆ. ದಕ್ಷಿಣ ಪ್ರಾಂತ್ಯದ ರಾಜಧಾನಿ ಗಾಲೆಯಲ್ಲಿ ಎನ್​ಪಿಪಿ ಶೇಕಡಾ 70ರಷ್ಟು ಮತಗಳೊಂದಿಗೆ ಜಯ ಸಾಧಿಸಿದೆ.

ಮಾಜಿ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಬೆಂಬಲಿತ ಪ್ರಮುಖ ವಿರೋಧ ಪಕ್ಷಗಳಾದ ಸಮಗಿ ಜನ ಬಲವೇಗಯಾ (SJB) ಮತ್ತು ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ (NDF) ಕ್ರಮವಾಗಿ ಶೇಕಡಾ 11 ಮತ್ತು ಶೇಕಡಾ 5ರಷ್ಟು ಮತ ಪಡೆದಿವೆ. ವಿರೋಧ ಪಕ್ಷಗಳು ಕೇವಲ 40 ಸ್ಥಾನ ಪಡೆದಿದೆ. ಈ ಹಿಂದಿನ ಶಕ್ತಿಶಾಲಿ ರಾಜಪಕ್ಸೆಗಳ ಪಕ್ಷವಾದ ಶ್ರೀಲಂಕಾ ಪೊದುಜನ ಪೆರಮುನಾವು ಪಕ್ಷದ ಭವಿಷ್ಯ ಬಹುತೇಕ ಅಂತ್ಯಗೊಂಡಿತು. ಇದು 2020ರ ಸಾರ್ವತ್ರಿಕ ಚುನಾವಣೆಯಲ್ಲಿ 145 ಸ್ಥಾನ ಗೆದ್ದಿತ್ತು.

8 ಸಾವಿರ ಅಭ್ಯರ್ಥಿಗಳು ಕಣಕ್ಕೆ

ಶ್ರೀಲಂಕಾ ಸಂಸತ್ತಿನಲ್ಲಿ 225 ಸ್ಥಾನಗಳ ಪೈಕಿ ಬಹುಮತಕ್ಕೆ 113 ಸ್ಥಾನ ಗೆಲ್ಲುವುದು ಅಗತ್ಯವಾಗಿತ್ತು. ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಅಧ್ಯಕ್ಷರ ಚುನಾವಣೆಯಲ್ಲೂ ಕುಮಾರ ಡಿಸ್ಸಾನಾಯಕೆ ಭರ್ಜರಿ ಗೆಲುವು ಸಾಧಿಸಿ ಅಧ್ಯಕ್ಷರಾಗಿದ್ದರು. ಸೆಪ್ಟೆಂಬರ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಗೆ ಹೋಲಿಸಿದರೆ ಸಂಸತ್​ ಚುನಾವಣೆ ಎನ್​ಪಿಪಿಯ ಮತ ಹಂಚಿಕೆ ಗಣನೀಯವಾಗಿ ಹೆಚ್ಚಾಗಿದೆ. ತಮಿಳರು ಮತ್ತು ಮುಸ್ಲಿಮರು ನೆಲೆಸಿದ ಉತ್ತರ ಮತ್ತು ಪೂರ್ವದಲ್ಲಿ ಎನ್​ಪಿಪಿ ಜನಾದೇಶ ಗಮನ ಸೆಳೆದಿದೆ.

ಶ್ರೀಲಂಕಾವು 21 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದ್ದು, 17 ಮಿಲಿಯನ್ ಮತದಾರರನ್ನು ಹೊಂದಿದೆ. ಪ್ರತಿ 5 ವರ್ಷಗಳಿಗೊಮ್ಮೆ ನಡೆಯುವ ಸಂಸತ್ ಚುನಾವಣೆ ಇದೇ ಗುರುವಾಗ ನಡೆದಿತ್ತು. ಶೇಕಡಾ 65 ರಷ್ಟು ಮತದಾನ ನಡೆದಿದ್ದು. 2022ರಲ್ಲಿ ಉಂಟಾಗಿದ್ದ ಆರ್ಥಿಕ ಬಿಕ್ಕಟ್ಟಿನ ಬಳಿಕ ಮೊದಲ ಸಂಸತ್ ಚುನಾವಣೆ ನಡೆದಿದೆ. ತೀವ್ರ ಆರ್ಥಿಕ ಹಿಂಜರಿತ ಕಾರಣ ಅಂದಿನ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರನ್ನು ವಜಾ ಮಾಡಲಾಗಿತ್ತು. ಈ ಬಾರಿ ಚುನಾವಣೆಯಲ್ಲಿ 8 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ತಮಿಳರು-ಮುಸ್ಲಿಮರ ಮತಗಳು ಎನ್​ಪಿಪಿಗೆ

ಜಾಫ್ನಾದಲ್ಲಿ ಎನ್​ಪಿಪಿ 6 ಸ್ಥಾನಗಳಲ್ಲಿ 3 ಸ್ಥಾನಗಳನ್ನು ಗೆದ್ದಿದೆ. ಇಲಂಕೈ ತಮಿಳ್ ಅರಸು ಕಚ್ಚಿ (ITAK) ಸೇರಿದಂತೆ ಪ್ರಮುಖ ಉತ್ತರ ತಮಿಳು ಪಕ್ಷಗಳನ್ನು ಉರುಳಿಸಿದ ದಕ್ಷಿಣದ ಮೊದಲ ಪಕ್ಷವಾಯಿತು. ಕಳೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮಾಜಿ ವಿರೋಧ ಪಕ್ಷದ ನಾಯಕ ಸಜಿತ್ ಪ್ರೇಮದಾಸ ಅವರಿಗೆ ಮತ ಹಾಕಿದ ತಮಿಳರು ಮತ್ತು ಮುಸ್ಲಿಮರು ಈಗ ಎನ್‌ಪಿಪಿಗೆ ಮತ ಹಾಕಿದ್ದಾರೆ. ಪೂರ್ವದಲ್ಲಿ ಬ್ಯಾಟಿಕಲೋವನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಎನ್‌ಪಿಪಿಯು ತಮಿಳರು ಮತ್ತು ಮುಸ್ಲಿಮರನ್ನು ಪ್ರತಿನಿಧಿಸುವ ಪ್ರಮುಖ ಪ್ರಾದೇಶಿಕ ಪಕ್ಷಗಳನ್ನು ಸೋಲಿಸಿದೆ.

ದ್ವೀಪರಾಷ್ಟ್ರ ಸುಂದರವಾಗಿರುವುದರ ಜೊತೆಗೆ ನೈಸರ್ಗಿಕ ಸಂಪನ್ಮೂಲ ಮೂಲಕ ಜಾಗತಿಕ ಮಟ್ಟದಲ್ಲೂ ಆಕರ್ಷಿಸಿದೆ. ಆದರೆ, ಇತ್ತೀಚೆಗೆ ಭಾರಿ ದೊಡ್ಡ ಸಂಕಷ್ಟಕ್ಕೆ ತುತ್ತಾಗಿದ್ದರ ಪರಿಣಾಮ ಶ್ರೀಲಂಕಾ ಜನರು ತುತ್ತು ಅನ್ನಕ್ಕೂ ಪರದಾಡಿದ್ದರು. ಈ ಸಿಟ್ಟು ಸ್ಫೋಟಗೊಂಡು ಪ್ರತಿಭಟನೆಯ ರೂಪ ಪಡೆದುಕೊಂಡಿತ್ತು. ಹೀಗಾಗಿ, ಶ್ರೀಲಂಕಾ ದೇಶದಲ್ಲಿ ಹಿಂದೆ ಆಡಳಿತದಲ್ಲಿದ್ದ ಪಕ್ಷಗಳು, ಈ ಎಲೆಕ್ಷನ್​​ನಲ್ಲಿ ವಿನಾಶಗೊಂಡಿವೆ. ಆದರೆ ಈ ಚುನಾವಣೆ ಗೆಲುವಿನಿಂದ ಭಾರತಕ್ಕೆ ಏನೆಲ್ಲಾ ಲಾಭ ಇದೆ ಎಂಬುದು ಎಲ್ಲರ ಪ್ರಶ್ನೆಯಾಗಿದೆ.

ಉಭಯ ದೇಶಗಳು ಅಕ್ಕಪಕ್ಕ ಇವೆ. ಎಲ್ಲದಕ್ಕಿಂತ ಹೆಚ್ಚಾಗಿ, ಹಿಂದೂಮಹಾಸಾಗರದ ಮೇಲೆ ಬಲ ಪ್ರದರ್ಶನ ಮಾಡಲು ಭಾರತ, ಶ್ರೀಲಂಕಾ ಜೊತೆಗೆ ಉತ್ತಮ ಸಂಬಂಧ ಹೊಂದಬೇಕು. ಈ ಹಿಂದೆ ಚೀನಾ ಪರ ಒಲವು ಹೊಂದಿದ್ದ ಅಧ್ಯಕ್ಷ ಡಿಸಾನಾಯಕೆ ಅವರು ಪ್ರಾದೇಶಿಕ ಸ್ಥಿರತೆ ಮತ್ತು ಸಹಕಾರವನ್ನು ಕಾಪಾಡಿಕೊಳ್ಳಲು ಭಾರತಕ್ಕೆ ಬದ್ಧತೆಯ ಭರವಸೆ ನೀಡಲು ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.

ಶ್ರೀಲಂಕಾ ತನ್ನ ಆರ್ಥಿಕ ಬಿಕ್ಕಟ್ಟು ಮತ್ತು ರಾಜಕೀಯ ಅಸ್ಥಿರತೆಯಿಂದ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ಭಾರತದ ಕೈ ಜೋಡಿಸಿದರೆ ಪರಸ್ಪರ ಹಿತಾಸಕ್ತಿಗಳನ್ನು ಉತ್ತೇಜಿಸುವಲ್ಲಿ ಮತ್ತು ಪ್ರದೇಶದಲ್ಲಿ ಕಾರ್ಯತಂತ್ರದ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ನಿರ್ಣಾಯಕವಾಗಿರುತ್ತದೆ. ದಿಸ್ಸಾನಾಯಕೆ ಅವರ ಸರ್ಕಾರವು ಈಗ ದೃಢವಾಗಿ ನಿಯಂತ್ರಣದಲ್ಲಿದೆ. ಮುಂದಿನ ಹಾದಿಯು ಭೌಗೋಳಿಕ ರಾಜಕೀಯ ಡೈನಾಮಿಕ್ಸ್ ಅನ್ನು ಬದಲಾಯಿಸುವ ಮಧ್ಯೆ ಭಾರತ-ಶ್ರೀಲಂಕಾ ಸಂಬಂಧಗಳನ್ನು ಬಲಪಡಿಸಲು ಹೊಸ ಅಧ್ಯಕ್ಷ ಮತ್ತು ಹೊಸ ಸರ್ಕಾರ ಯಾವ ರೀತಿ ಸಂಬಂಧವನ್ನು ಗಟ್ಟಿಗೊಳಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ