Swamiji Bangalore Marriage: ಬೆಂಗಳೂರು ಭಕ್ತೆ ವರಿಸಿದ ತಮಿಳುನಾಡಿನ ಮಠದ ಮುಖ್ಯಸ್ಥ; ಕೋಟ್ಯಂತರ ರೂ. ಆಸ್ತಿಯ ಮಠದ ಪೀಠ ತ್ಯಜಿಸಲು ಒತ್ತಡ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Swamiji Bangalore Marriage: ಬೆಂಗಳೂರು ಭಕ್ತೆ ವರಿಸಿದ ತಮಿಳುನಾಡಿನ ಮಠದ ಮುಖ್ಯಸ್ಥ; ಕೋಟ್ಯಂತರ ರೂ. ಆಸ್ತಿಯ ಮಠದ ಪೀಠ ತ್ಯಜಿಸಲು ಒತ್ತಡ

Swamiji Bangalore Marriage: ಬೆಂಗಳೂರು ಭಕ್ತೆ ವರಿಸಿದ ತಮಿಳುನಾಡಿನ ಮಠದ ಮುಖ್ಯಸ್ಥ; ಕೋಟ್ಯಂತರ ರೂ. ಆಸ್ತಿಯ ಮಠದ ಪೀಠ ತ್ಯಜಿಸಲು ಒತ್ತಡ

ಬೆಂಗಳೂರು ಮೂಲದ ಭಕ್ತೆಯೊಬ್ಬರನ್ನುತಮಿಳುನಾಡಿನ ಪ್ರಸಿದ್ದ ಕುಂಭಕೋಣಂನ ಸೂರ್ಯನಾರ್ ದೇವಸ್ಥಾನದ ಮುಖ್ಯಸ್ಥ ಮಹಾಲಿಂಗಸ್ವಾಮಿ ಅವರು ವಿವಾಹವಾಗಿದ್ದು ಈಗ ವಿವಾದ ಸೃಷ್ಟಿಸಿದೆ.

ತಮಿಳುನಾಡಿನ ಕುಂಭಕೋಣಂನ ಸೂರ್ಯನಾರ್ ದೇವಸ್ಥಾನದ ಮುಖ್ಯಸ್ಥ ಮಹಾಲಿಂಗಸ್ವಾಮಿ ಬೆಂಗಳೂರಿನ ಭಕ್ತೆಯನ್ನು ವಿವಾಹವಾಗಿರುವುದು ವಿವಾದ ಸೃಷ್ಟಿಸಿದೆ.
ತಮಿಳುನಾಡಿನ ಕುಂಭಕೋಣಂನ ಸೂರ್ಯನಾರ್ ದೇವಸ್ಥಾನದ ಮುಖ್ಯಸ್ಥ ಮಹಾಲಿಂಗಸ್ವಾಮಿ ಬೆಂಗಳೂರಿನ ಭಕ್ತೆಯನ್ನು ವಿವಾಹವಾಗಿರುವುದು ವಿವಾದ ಸೃಷ್ಟಿಸಿದೆ.

ಚೆನ್ನೈ: ತಮಿಳುನಾಡಿನ ಪುರಾತನ ಮಠವೊಂದರ ಭಕ್ತರು ಬೆಂಗಳೂರು ಮೂಲದ ಭಕ್ತೆಯನ್ನು ಪ್ರೇಮಿಸಿ ಬೆಂಗಳೂರಲ್ಲೇ ವಿವಾಹವಾಗಿದ್ದಾರೆ. ಕೋಟ್ಯಂತರ ರೂ. ಬೆಲೆ ಬಾಳುವ ಆಸ್ತಿ ಇರುವ ತಮಿಳುನಾಡಿನ ಪ್ರಸಿದ್ದ ಕುಂಭಕೋಣಂನ ಸೂರ್ಯನಾರ್ ದೇವಸ್ಥಾನದ ಮುಖ್ಯಸ್ಥ (ಆದೀನಂ) ಮಹಾಲಿಂಗಸ್ವಾಮಿ ಎಂಬುವವರು ಭಕ್ತೆಯನ್ನೇ ವಿವಾಹವಾಗಿ ವಿವಾದಕ್ಕೆ ಸಿಲುಕಿದ್ದಾರೆ. ವಿವಾಹವಾದವರು ಈ ಪೀಠದಲ್ಲಿ ಮುಂದುವರೆಯುವುದು ಬೇಡ ಎಂಬುದು ಸ್ಥಳೀಯರ ಒತ್ತಾಯ. ಈ ವಿವಾದ ತಮಿಳುನಾಡಿನ ಧಾರ್ಮಿಕ ದತ್ತಿ ಇಲಾಖೆಗೂ ತಲುಪಿದೆ. ಮಹಾಲಿಂಗ ಸ್ವಾಮೀಜಿ ಅವರನ್ನು ಪೀಠದಿಂದ ವಜಾಗೊಳಿಸಿ ಮಠದ ಆಡಳಿತವನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಬೇಕು ಎನ್ನುವ ಕುರಿತು ಇಲಾಖೆಗೆ ಭಕ್ತರು ದೂರು ನೀಡಿರುವುದರಿಂದ ಸರ್ಕಾರವೂ ಕಾನೂನು ಸಲಹೆ ಪಡೆಯಲು ಮುಂದಿನ ಕ್ರಮಕ್ಕೆ ಮುಂದಾಗಿದೆ. ಸ್ವಾಮೀಜಿ ಕೂಡ ಅಧಿಕೃತವಾಗಿಯೇ ಸರ್ಕಾರಕ್ಕೆ ಆಸ್ತಿಯೆನ್ನೆಲ್ಲಾ ಹಸ್ತಾಂತರಿಸಿ ಪೀಠ ತೊರೆದು ಬೆಂಗಳೂರಿಗೆ ಬಂದು ನೆಲೆಸುವ ಯೋಚನೆಯಲ್ಲಿದ್ಧಾರೆ.

ಆಗಿದ್ದೇನು

ಕುಂಭಕೋಣಂನ ಪ್ರಸಿದ್ಧ ಸೂರ್ಯನಾರ್ ದೇವಸ್ಥಾನದ ಮುಖ್ಯಸ್ಥ54 ವರ್ಷ ವಯಸ್ಸಿನ ಮಹಾಲಿಂಗ ಸ್ವಾಮಿ ಅವರು ಕಳೆದ ತಿಂಗಳು 47 ವರ್ಷದ ಭಕ್ತೆ ಹೇಮಶ್ರೀ ಅವರನ್ನು ವಿವಾಹವಾದರು. ಅಕ್ಟೋಬರ್ 10 ರಂದು ಬೆಂಗಳೂರಿನಲ್ಲಿ ನಡೆದ ವಿವಾಹವನ್ನು ಖಾಸಗಿ ಸಮಾರಂಭದಲ್ಲಿ ನಡೆಸಲಾಗಿತ್ತು. ಅಲ್ಲದೇ ವಿವಾಹ ನೊಂದಣಿಯನ್ನೂ ಮಾಡಿಸಲಾಗಿತ್ತು. ಒಂದು ತಿಂಗಳಿನಿಂದ ಗೌಪ್ಯವಾಗಿಯೇ ಇದ್ದ ಮಠದ ಮುಖ್ಯಸ್ಥರ ಮದುವೆ ವಿಚಾರ ಕೆಲವು ದಿನಗಳ ಹಿಂದೆಯಷ್ಟೇ ಬೆಳಕಿಗೆ ಬಂದಿದೆ.

ಸ್ವಾಮೀಜಿ ಅವರು ವಿವಾಹ ಮಾಡಿಕೊಂಡಿರುವ ಕುರಿತು ಮಠದ ಭಕ್ತರ ವಲಯದಲ್ಲಿ ಸಂಚಲನ ಮೂಡಿಸಿದ್ದು ಅಲ್ಲದೇ ಭಾರೀ ಚರ್ಚೆಗೂ ಕಾರಣವಾಗಿದೆ.

ಈ ವಿಚಾರವಾಗಿ ಮಾಹಿತಿ ಕಲೆ ಹಾಕಿದರೂ ಮಹಾಲಿಂಗಸ್ವಾಮೀಜಿ ಮೌನವಾಗಿದ್ದರು. ಆದರೆ ವಿರೋಧ ಹೆಚ್ಚಾಗುತ್ತಿದ್ದಂತೆ ಅವರು ಸಾಮಾಜಿಕ ಜಾಲ ತಾಣಗಳ ಮೂಲಕ ತಾವು ಬೆಂಗಳೂರು ಮೂಲದ ಭಕ್ತರಾದ ಹೇಮಶ್ರೀ ಎಂಬುವವರನ್ನು ವಿವಾಹವಾಗಿದ್ದಾಗಿ ಬಹಿರಂಗಪಡಿಸಿದ್ದರು. ಅವರು ಮದುವೆ ಅಧಿಕೃತಗೊಳಿಸುತ್ತಿದ್ದಂತೆ ವಿರೋಧದ ಪ್ರಮಾಣ ಅಧಿಕವಾಗಿದ್ದು ಪೀಠಾಧ್ಯಕ್ಷರು ಕೂಡಲೇ ಪೀಠ ತೊರೆದು ಬೇರೆಯವರಿಗೆ ಅಧಿಕಾರ ಹಸ್ತಾಂತರಿಸಬೇಕು ಎನ್ನುವ ಒತ್ತಾಯ ಶುರುವಾಗಿದೆ.

ವಿವಾಹ ಆಗಿದ್ದು ಏಕೆ

ಆಗಾಗ ಮಹಾಲಿಂಗ ಸ್ವಾಮಿಗಳ ಆಶೀರ್ವಾದವನ್ನು ಪಡೆಯುತ್ತಿದ್ದ ಆದೀನಾಂನ ಖಾಯಂ ಸಂದರ್ಶಕರಾದ ಬೆಂಗಳೂರಿನ ಹೇಮಶ್ರೀ ಅವರು ಕಾಲಕ್ರಮೇಣ ಅವರೊಂದಿಗೆ ನಿಕಟವಾದ ಬಾಂಧವ್ಯವನ್ನು ಬೆಳೆಸಿಕೊಂಡರು. ಈ ಸಂಬಂಧ ಅವರ ಮದುವೆಯ ನಿರ್ಧಾರಕ್ಕೆ ಕಾರಣವಾಯಿತು. ದಂಪತಿಗಳು ಬೆಂಗಳೂರಿನಲ್ಲಿ ತಮ್ಮ ಮದುವೆಯನ್ನು ನೋಂದಾಯಿಸಿಕೊಂಡು ಸರಳವಾಗಿ ವಿವಾಹ ಕೂಡ ಆದರು.

ನಾವಿಬ್ಬರೂ ಇಷ್ಟಪಟ್ಟೆವು. ಮದುವೆ ಆಗುವ ನಿರ್ಧಾರಕ್ಕೆ ಬಂದೆವು. ಪರಸ್ಪರ ಒಪ್ಪಿಗೆಯಿಂದ ಆಗಿದೆ. ಬೇರೆ ರೀತಿಯ ಸಂಬಂಧ ಇಟ್ಟುಕೊಳ್ಳುವ ಬದಲು ಮದುವೆಯಾದೆವು. ಹಿಂದೆಯೂ ಹಲವಾರು ಸ್ವಾಮೀಜಿಗಳು ಪೀಠದಲ್ಲಿದ್ದೂ ಮದುವೆಯಾಗಿರುವ ಉದಾಹರಣೆಗಳಿವೆ ಎನ್ನುವ ಸ್ಪಷ್ಟನೆಯನ್ನು ಸ್ವಾಮೀಜಿ ಆಪ್ತರ ಬಳಿ ನೀಡಿದ್ದಾರೆ.

ಬಲವಾದ ವಿರೋಧ

ಆದರೆ ಸೂರ್ಯನಾರ್ ದೇವಸ್ಥಾನದಲ್ಲಿ ನಂಬಿಕೆ ಇರುವ ಹಾಗೂ ಈಗಲೂ ಒಡನಾದಲ್ಲಿರುವ ಸಹಸ್ರಾರು ಭಕ್ತರು ಒಪ್ಪುತ್ತಿಲ್ಲ. ಹಿಂದೆ ಸೂರ್ಯನಾರ್ ದೇವಸ್ಥಾನದ ಪೀಠದಲ್ಲಿದ್ದವರು ಮದುವೆಯಾಗಿಲ್ಲ. ಇದರಿಂದ ಭಕ್ತರಾದ ನಮಗೆ ಕಸಿವಿಸಿಯಾಗಿದೆ. ಅವರನ್ನು ಗುರುಗಳ ರೀತಿಯಲ್ಲಿ ನೋಡಬಯಸುತ್ತೇವೆ. ಸನ್ಯಾಸಿಯನ್ನು ಕುಟುಂಬಸ್ಥರಾಗಿ ನೋಡಲು ಸರಿ ಎನ್ನಿಸುವುದಿಲ್ಲ. ಅವರು ಕುಟುಂಬಸ್ಥರಾಗಿ ಮುಂದುವರೆಯಲು ನಮ್ಮದೇನೂ ಅಭ್ಯಂತರವಿಲ್ಲ. ಬದಲಿಗೆ ಪೀಠದಲ್ಲಿ ಮುಂದುವರೆಯಬಾರದು. ಕೋಟ್ಯಂತರ ರೂ. ಆಸ್ತಿ ಇರುವ ಈ ದೇವಸ್ಥಾನಕ್ಕೆ ಶುದ್ದವಾಗಿರುವವರನ್ನೇ ಪೀಠಾಧ್ಯಕ್ಷರಾಗಿ ನೇಮಿಸಬೇಕು ಎನ್ನುವುದು ಭಕ್ತರ ಆಗ್ರಹ.

ಮಹಾಲಿಂಗ ಸ್ವಾಮಿಗಿಂತ ಮೊದಲು ಈ ಸ್ಥಾನವನ್ನು ಶಂಕರಲಿಂಗ ಸ್ವಾಮಿಗಳು ಹೊಂದಿದ್ದರು, ಅವರು 2022 ರಲ್ಲಿ 102 ನೇ ವಯಸ್ಸಿನಲ್ಲಿ ನಿಧನರಾದರು. ಆನಂತರ ಮಹಾಲಿಂಗಸ್ವಾಮಿ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. ಇದಕ್ಕೂ ಮೊದಲು ಇವರು ದೇವಸ್ಥಾನದಲ್ಲಿಯೇ ಇದ್ದವರು.

ಸರ್ಕಾರದ ನಿಲುವೇನು

ಈ ನಡುವೆ ಕೆಲ ಭಕ್ತರು ಮಹಾಲಿಂಗಸ್ವಾಮಿ ವಿರುದ್ದ ತಮಿಳುನಾಡು ಸರ್ಕಾರದ ಧಾರ್ಮಿಕ ದತ್ತಿ ಹಾಗೂ ಹಿಂದೂ ದೇಗುಲಗಳ ಇಲಾಖೆಗೆ ದೂರು ನೀಡಿದ್ದಾರೆ. ಅಲ್ಲದೇ ಮಹಾಲಿಂಗಸ್ವಾಮಿ ಕೂಡ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಈ ವಿವಾದ ನಮ್ಮ ಗಮನಕ್ಕೆ ಬಂದಿದೆ. ಈಗಾಗಲೇ ಕಾನೂನು ಸಲಹೆ ಪಡೆಯಲು ಸೂಚಿಸಲಾಗಿದೆ.ಕಾನೂನಿನ ರೀತಿಯಲ್ಲೇ ಎಲ್ಲವೂ ಆಗಲಿದೆ. ಇದಕ್ಕೆ ಸ್ವಲ್ಪ ಸಮಯ ಬೇಕಾಗಬಹುದು ಎನ್ನುವುದು ತಮಿಳುನಾಡಿನ ಧಾರ್ಮಿಕ ದತ್ತಿ ಇಲಾಖೆ ಸಚಿವ ಶೇಖರಬಾಬು ವಿವರಣೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.