logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಹ್ಯುಂಡೈ ಇಂಡಿಯಾ ಐಪಿಒ ಲಿಸ್ಟ್‌ ಆಯ್ತು; ತಲೆಮೇಲೆ ಕೈಹೊತ್ತ ಹೂಡಿಕೆದಾರರು, ಮಾರಿದ್ರೆ ನಷ್ಟ, ಇಟ್ಕೊಂಡ್ರೆ...!

ಹ್ಯುಂಡೈ ಇಂಡಿಯಾ ಐಪಿಒ ಲಿಸ್ಟ್‌ ಆಯ್ತು; ತಲೆಮೇಲೆ ಕೈಹೊತ್ತ ಹೂಡಿಕೆದಾರರು, ಮಾರಿದ್ರೆ ನಷ್ಟ, ಇಟ್ಕೊಂಡ್ರೆ...!

Praveen Chandra B HT Kannada

Oct 22, 2024 12:11 PM IST

google News

ಹ್ಯುಂಡೈ ಇಂಡಿಯಾ ಐಪಿಒ ಲಿಸ್ಟಿಂಗ್‌ ಮತ್ತು ಈಗಿನ ಷೇರು ದರ ಇಳಿಕೆ ಕಂಡಿದೆ

    • Hyundai Motor India shares listing Price: ಹ್ಯುಂಡೈ ಮೋಟಾರ್‌ ಇಂಡಿಯಾದ ಷೇರುಗಳು ಶೇಕಡ 1.32ರಷ್ಟು ಕಡಿಮೆ ದರದಲ್ಲಿ ಲಿಸ್ಟ್‌ ಆಗಿವೆ. ಷೇರು ಪಡೆದವರು ದೀರ್ಘಕಾಲ ಇಟ್ಟುಕೊಳ್ಳಬಹುದೇ? ಹೊಸ ಹೂಡಿಕೆದಾರರು ಈಗ ಹ್ಯುಂಡೈ ಇಂಡಿಯಾದ ಷೇರುಗಳನ್ನು ಖರೀದಿಸಬಹುದೇ? ಆಲೋಚಿಸುವ ಸಮಯ.
ಹ್ಯುಂಡೈ ಇಂಡಿಯಾ ಐಪಿಒ ಲಿಸ್ಟಿಂಗ್‌ ಮತ್ತು ಈಗಿನ ಷೇರು ದರ ಇಳಿಕೆ ಕಂಡಿದೆ
ಹ್ಯುಂಡೈ ಇಂಡಿಯಾ ಐಪಿಒ ಲಿಸ್ಟಿಂಗ್‌ ಮತ್ತು ಈಗಿನ ಷೇರು ದರ ಇಳಿಕೆ ಕಂಡಿದೆ (REUTERS)

Hyundai Motor India shares listing Price: ಹ್ಯುಂಡೈ ಮೋಟಾರ್‌ ಇಂಡಿಯಾ ಐಪಿಒ ಲಿಸ್ಟಿಂಗ್‌ ದಿನದಂದು ಲಾಭ ಮಾಡಿಕೊಳ್ಳುವ ನಿರೀಕ್ಷೆಯಲ್ಲಿದ್ದ ಐಪಿಒ ಪ್ರಿಯರು ನಿರಾಶೆಗೊಂಡಿದ್ದಾರೆ. ಹ್ಯುಂಡೈ ಇಂಡಿಯಾದ ಐಪಿಒಗೆ ಅರ್ಜಿ ಸಲ್ಲಿಸಿ, ವಿತರಣೆ ಪಡೆದವರು ಆತಂಕದಿಂದಲೇ ಇಂದು ಹತ್ತು ಗಂಟೆಗೆ ತಮ್ಮ ಪೋರ್ಟ್‌ಪೊಲಿಯೋ ನೋಡುತ್ತಿದ್ದರು. ಜಿಎಂಪಿ ಮುನ್ಸೂಚನೆ ಪ್ರಕಾರ ಪ್ರತಿಷೇರಿಗೆ ಸುಮಾರು ಶೇಕಡ 3ರಷ್ಟು ದರ ಹೆಚ್ಚುವ ಸೂಚನೆ ಇತ್ತು. ಆದರೆ, ಐಪಿಒಗೆ ನೀಡಿರುವ ಹಣಕ್ಕಿಂತ ಶೇಕಡ 1.32 ಕಡಿಮೆ ದರದಲ್ಲಿ ಹ್ಯುಂಡೈ ಮೋಟಾರ್‌ ಐಪಿಒ ಲಿಸ್ಟ್‌ ಆಗಿದೆ. ಪ್ರತಿಷೇರಿಗೆ ಐಪಿಒ ದರ 1960 ರೂಪಾಯಿ ಇತ್ತು. ಆದರೆ, 1,934 ರೂಗೆ ಲಿಸ್ಟ್‌ ಆಗಿತ್ತು. ಈಗ 11 ಗಂಟೆಯ ಆಸುಪಾಸಿನಲ್ಲೂ ಶೇಕಡ 2ರ ಆಸುಪಾಸಿನಲ್ಲಿ ಇಳಿಕೆ ಹಾದಿಯಲ್ಲಿಯೇ ಇದೆ.

ಕಡಿಮೆ ಜಿಎಂಪಿ ಇದ್ದ ಕಾರಣ ಸಾಕಷ್ಟು ಜನರು ಈ ಐಪಿಒದಿಂದ ದೂರ ಉಳಿದಿದ್ದರು. ವಿಶೇಷವಾಗಿ ಐಪಿಒ ವಿತರಣೆ ಆಗಿ ಲಿಸ್ಟ್‌ ಆದ ಬಳಿಕ ಕೆಲವೇ ದಿನಗಳಲ್ಲಿ ಮಾರಾಟ ಮಾಡಿ ಲಾಭ ಗಳಿಸಲು ಬಯಸುವರು ಹ್ಯುಂಡೈ ಮೋಟಾರ್‌ ಇಂಡಿಯಾದ ಐಪಿಒದಿಂದ ದೂರ ಉಳಿದಿದ್ದರು. ಆದರೆ, ದೀರ್ಘಕಾಲದ ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಸಾಕಷ್ಟು ಜನರು ಅರ್ಜಿ ಸಲ್ಲಿಸಿದ್ದರು. ಇದೀಗ ಷೇರು ಲಿಸ್ಟ್‌ ಆದ ಬಳಿಕ ಇನ್ನಷ್ಟು ದರ ಕಡಿಮೆಯಾದಗ ಸಾಕಷ್ಟು ಹೂಡಿಕೆದಾರರು ಹ್ಯುಂಡೈ ಮೋಟಾರ್‌ ಇಂಡಿಯಾದ ಷೇರುಗಳನ್ನು ಖರೀದಿಸುವ ಸಾಧ್ಯತೆ ಇದೆ.

ದಕ್ಷಿಣ ಕೊರಿಯಾದ ವಾಹನ ತಯಾರಕ ಕಂಪನಿ ಹ್ಯುಂಡೈನ ಭಾರತೀಯ ಅಂಗಸಂಸ್ಥೆಯಾದ ಹುಂಡೈ ಮೋಟಾರ್ ಇಂಡಿಯಾ ತನ್ನ ಆರಂಭಿಕ ಷೇರು ಮಾರಾಟಕ್ಕೆ ನೀರಸ ಪ್ರಕ್ರಿಯೆ ಪಡೆದುಕೊಂಡಿದೆ. ಅರ್ಹ ಸಾಂಸ್ಥಿಕ ಖರೀದಿದಾರರಿಂದ ಉತ್ತಮ ಬೇಡಿಕೆ ಪಡೆದುಕೊಂಡಿತ್ತು. ಭಾರತದ ಐಪಿಒ ಇತಿಹಾಸದಲ್ಲಿಯೇ ಅತಿದೊಡ್ಡ ಐಪಿಒ ಎಂಬ ಖ್ಯಾತಿಗೆ ಹ್ಯುಂಡೈ ಪಾತ್ರವಾಗಿದೆ. ಆದರೆ, ಜಿಎಂಪಿ ವಿಷಯದಲ್ಲಿ ಸಾಕಷ್ಟು ಚಂಚಲ ವಾತಾವರಣ ಇತ್ತು.

ಹ್ಯುಂಡೈ ಮೋಟಾರ್‌ ಇಂಡಿಯಾ ಐಪಿಒ ಮೂಲಕ ಷೇರುಗಳನ್ನು ತಮ್ಮದಾಗಿಸಿಕೊಂಡವರು ತಕ್ಷಣ ಮಾರಾಟ ಮಾಡಿದರೆ ನಷ್ಟ ಖಾತ್ರಿ. ಹಾಕಿರುವ ಹಣವಾದರೂ ಬರಲಿ ಎಂದು ಕೆಲವರು ಈ ಷೇರುಗಳು ಪ್ಲಸ್‌ ಆಗೋದನ್ನು ಕಾಯಬಹುದು. ಪ್ಲಸ್‌ 18ರ ಮೇಲೆ ಆದ್ರೆ ಮಾತ್ರ ನಷ್ಟವಿಲ್ಲ. ಅಲ್ಪಾವಧಿ ಷೇರು ಮಾರಾಟಕ್ಕೆ ಶೇಕಡ 18 ತೆರಿಗೆ ಕಟ್ಟುವ ಕಾರಣ ಈ ಷೇರು ದರ ಶೇಕಡ 18ಕ್ಕಿಂತ ಮೇಲಕ್ಕೆ ಹೋದಾಗ ಮಾರಾಟ ಮಾಡಲು ಕೆಲವರು ಕಾಯುತ್ತಿರಬಹುದು. ಇನ್ನೊಂದೆರಡು ನಾಲ್ಕು ವರ್ಷ ಈ ಹಣ ನನ್ನದ್ದಲ್ಲ ಎಂದುಕೊಳ್ಳುವೆ ಎಂದು ಲಾಂಗ್‌ಟರ್ಮ್‌ ಪ್ಲ್ಯಾನ್‌ ಹಾಕಿಕೊಂಡು ನಿಶ್ಚಿಂತೆಯಿಂದಲೂ ಇರಬಹುದು. ಇನ್ನೊಂದಿಷ್ಟು ಜನರು ಹ್ಯುಂಡೈ ಮೋಟಾರ್‌ ಇಂಡಿಯಾದ ಷೇರುಗಳು ಇನ್ನು ಕೆಲವು ದಿನ ಕುಸಿಯುವಷ್ಟು ಕುಸಿಯಲಿ, ಆಮೇಲೆ ಒಂದಿಷ್ಟು ಷೇರು ಖರೀದಿಸಿಟ್ಟುಕೊಳ್ಳೋಣ ಎಂದು ಯೋಜಿಸುತ್ತಿರಬಹುದು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ