Hyundai IPO Review: ಹ್ಯುಂಡೈ ಮೋಟಾರ್ ಸಾರ್ವಜನಿಕ ಷೇರು ವಿತರಣೆ ನಾಳೆ ಆರಂಭ, ಅರ್ಜಿ ಸಲ್ಲಿಸುವ ಮುನ್ನ 5 ರಿಸ್ಕ್ ತಿಳಿದುಕೊಳ್ಳಿ
Hyundai IPO Review: ಸಾರ್ವಜನಿಕ ಷೇರು ವಿತರಣೆ(ಐಪಿಒ) ಮೂಲಕ ಷೇರುಪೇಟೆಯಲ್ಲಿ ಹಣ ಗಳಿಸಲು ಬಯಸುವವರು ಅಕ್ಟೋಬರ್ 15ರಂದು ಆರಂಭವಾಗಲಿರುವ ಹ್ಯುಂಡೈ ಮೋಟಾರ್ ಐಪಿಒಗೆ ಕಾತರದಿಂದ ಕಾಯುತ್ತಿದ್ದಾರೆ. ಹುಂಡೈ ಮೋಟಾರ್ ಐಪಿಒಗೆ ಬಿಡ್ ಸಲ್ಲಿಸುವುದೇ? ಬೇಡವೇ? ಈ ಐಪಿಒದ ರಿಸ್ಕ್ ಏನು? ಲಾಭವಾಗಬಹುದೇ? ನಷ್ಟವಾಗಬಹುದೇ? ಇತ್ಯಾದಿ ಪ್ರಶ್ನೆಗಳು ಷೇರು ಹೂಡಿಕೆದಾರರಲ್ಲಿದೆ.
ಹ್ಯುಂಡೈ ಮೋಟಾರ್ ಐಪಿಒ ವಿಮರ್ಶೆ: ಇದು ಹುಂಡೈ ಮೋಟಾರ್‌ನ 27,870.16 ಕೋಟಿ ರೂ. ಗಾತ್ರದ ಐಪಿಒ. 14.22 ಕೋಟಿ ಷೇರುಗಳ ಮಾರಾಟವಾಗಿದೆ. ಭಾರತೀಯ ಜೀವ ವಿಮಾ ನಿಗಮ(ಎಲ್‌ಐಸಿ) ಬಳಿಕದ ಬೃಹತ್ ಗಾತ್ರದ ಐಪಿಒ ಇದಾಗಿದೆ. ಹ್ಯುಂಡೈ ಐಪಿಒ ಅಕ್ಟೋಬರ್ 15, 2024ರಂದು ಆರಂಭವಾಗಲಿದೆ. ಬಿಡ್ ಅಕ್ಟೋಬರ್ 17, 2024 ರಂದು ಮುಕ್ತಾಯಗೊಳ್ಳುತ್ತದೆ. ಐಪಿಒ ಹಂಚಿಕೆ ಶುಕ್ರವಾರ ಅಂದ್ರೆ ಅಕ್ಟೋಬರ್ 18ರಂದು ಅಂತಿಮಗೊಳ್ಳುವ ನಿರೀಕ್ಷೆಯಿದೆ. ಈ ಐಪಿಒವನ್ನು ತಾತ್ಕಾಲಿಕವಾಗಿ ಬಿಎಸ್‌ಇ, ಎನ್‌ಎಸ್‌ಇನಲ್ಲಿ ಲಿಸ್ಟ್ ಮಾಡಲಾಗುತ್ತದೆ. ಅಕ್ಟೋಬರ್ 22, 2024ರಂದು ಷೇರುಪೇಟೆಯಲ್ಲಿ ಲಿಸ್ಟ್ ಆಗಲಿದೆ. ಹ್ಯುಂಡೈ ಮೋಟಾರ್ ಐಪಿಒ ದರ ಪ್ರತಿ ಷೇರಿಗೆ 1865 ರೂಪಾಯಿಯಿಂದ 1960 ರೂವರೆಗೆ ನಿಗದಿಪಡಿಸಲಾಗಿದೆ. ಆಸಕ್ತರು ಕನಿಷ್ಠ ಒಂದು ಲಾಟ್‌ಗೆ ಅರ್ಜಿ ಸಲ್ಲಿಸಬಹುದು. ಒಂದು ಲಾಟ್‌ನಲ್ಲಿ 7 ಷೇರುಗಳಿವೆ. ಒಂದು ಲಾಟ್ ಖರೀದಿಸಲು 13,720 ರೂಪಾಯಿ ಬೇಕಿದೆ. 15 ಲಾಟ್‌ಗೂ ಅರ್ಜಿ ಸಲ್ಲಿಸಬಹುದು. 15 ಲಾಟ್‌ನಲ್ಲಿ 105 ಷೇರುಗಳು ಇರುತ್ತವೆ. ಇಷ್ಟು ಲಾಟ್‌ಗಳಿಗೆ 2,05,800 ರೂಪಾಯಿ ನೀಡಬೇಕು. ಬಿಎನ್‌ಐಐ ಹೂಡಿಕೆದರರು 73 ಲಾಟ್‌ಗೆ 1,001,560 ರೂಪಾಯಿ ನೀಡಬೇಕು. ಇದು 511 ಷೇರುಗಳನ್ನು ಹೊಂದಿರುತ್ತದೆ. ಕಂಪನಿಯ ಉದ್ಯೋಗಿಗಳಿಗೆ 186 ರೂ ಇಶ್ಯೂ ದರಕ್ಕೆ 778,400 ಷೇರುಗಳನ್ನು ಮೀಸಲಿರಿಸಲಾಗಿದೆ. ಈ ಐಪಿಒದ ಲೀಡ್ ಮ್ಯಾನೇಜರ್ ಯಾರೆಂಬ ಪ್ರಶ್ನೆ ನಿಮ್ಮಲ್ಲಿಇರಬಹುದು. ಕೋಟಕ್ ಮಹೀಂದ್ರಾ ಕ್ಯಾಪಿಟಲ್ ಕಂಪನಿ ಲಿಮಿಟೆಡ್, ಸಿಟಿಗ್ರೂಪ್ ಗ್ಲೋಬಲ್ ಮಾರ್ಕೆಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಎಚ್‌ಎಸ್‌ಬಿಸಿ ಸೆಕ್ಯುರಿಟೀಸ್ & ಕ್ಯಾಪಿಟಲ್ ಮಾರ್ಕೆಟ್ಸ್ ಪ್ರೈವೇಟ್ ಲಿಮಿಟೆಡ್, ಜೆಪಿ ಮೋರ್ಗಾನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಮೋರ್ಗಾನ್ ಸ್ಟಾನ್ಲಿ ಇಂಡಿಯಾ ಕಂಪನಿ ಪ್ರೈವೇಟ್ ಲಿಮಿಟೆಡ್ ಈ ಐಪಿಒದ ಲೀಡ್ ಮ್ಯಾನೇಜರ್ ಆಗಿರುತ್ತಾರೆ. ಇದು ಒಎಫ್‌ಎಸ್ ಐಪಿಒ. ಅಂದಹಾಗೆ, ಇದು ಭಾರತದ ಇದುವರೆಗಿನ ಅತಿದೊಡ್ಡ ಷೇರು ಕೊಡುಗೆ. 2024ರಲ್ಲಿ ಜಗತ್ತಿನ ಎರಡನೇ ಅತಿದೊಡ್ಡ ಐಪಿಒ ಆಗಲಿದೆ.
ಇದು ಹೊಸ ಷೇರು ಕೊಡುಗೆಯಲ್ಲ
ಹುಂಡೈ ಮೋಟಾರ್ ಇಂಡಿಯಾ ಐಪಿಒದಲ್ಲಿ ಹೊಸ ಷೇರುಗಳನ್ನು ನೀಡುವುದಿಲ್ಲ. ದಕ್ಷಿಣ ಕೊರಿಯಾದ ಮೂಲ ಕಂಪನಿಯು 19 ಶತಕೋಟಿ ಡಾಲರ್ ಮೌಲ್ಯದ ಸಂಪೂರ್ಣ ಸ್ವಾಮ್ಯದ ಘಟಕದಲ್ಲಿ ತನ್ನ ಶೇಕಡ 17.5 ಪಾಲನ್ನು ಮಾರಾಟ ಮಾಡುತ್ತದೆ. ಕಂಪನಿಯು ತನ್ನ ತಾಯ್ನಾಡು ದಕ್ಷಿಣ ಕೊರಿಯಾದ ಹೊರಗೆ ಮೊದಲ ಬಾರಿಗೆ ಷೇರು ಲಿಸ್ಟ್ ಮಾಡುತ್ತಿದೆ.
ಭಾರತದ ಅತಿ ದೊಡ್ಡ ಐಪಿಒ
ದಕ್ಷಿಣ ಕೊರಿಯಾದ ಹ್ಯುಂಡೈ ಮೋಟಾರ್ ಕಂಪನಿಯ ಭಾರತೀಯ ಅಂಗಸಂಸ್ಥೆಯ ಐಪಿಒ ಭಾರತದಲ್ಲಿ ಅತಿದೊಡ್ಡ ಸಾರ್ವಜನಿಕ ವಿತರಣೆಯಾಗಲಿದೆ, ಇದು ಮೇ 2022 ರಲ್ಲಿ ಬಿಡ್ಡಿಂಗ್‌ಗಾಗಿ ತೆರೆಯಲಾದ ರೂ 21,000 ಕೋಟಿ ಮೌಲ್ಯದ ಜೀವ ವಿಮಾ ನಿಗಮದ (ಎಲ್‌ಐಸಿ) ಐಪಿಒವನ್ನು ಮೀರಿಸುತ್ತದೆ. ಹುಂಡೈ ಮೋಟಾರ್ ಇಂಡಿಯಾ ಐಪಿಒ ಇತ್ತೀಚೆಗೆ ಏಷ್ಯಾದ ಅತಿದೊಡ್ಡ ಐಪಿಒಗಳಲ್ಲಿ ಒಂದಾಗಿದೆ. ಇದು 2024ರಲ್ಲಿ ವಿಶ್ವದ ಎರಡನೇ ಅತಿ ದೊಡ್ಡ ಐಪಿಒ ಆಗಿದೆ, ಈ ವರ್ಷ ಜುಲೈನಲ್ಲಿ ಅಮೆರಿಕದ ಲೈನೇಜ್ ಐಎನ್‌ಸಿಯು 5.1 ಶತಕೋಟಿ ಡಾಲರ್ ಮೌಲ್ಯದ ಐಪಿಒ ಬಿಡುಗಡೆ ಮಾಡಿತ್ತು.
ಹ್ಯುಂಡೈ ಐಪಿಒದ ರಿಸ್ಕ್‌ಗಳು
ರೆಡ್ ಹೆರಿಂಗ್ ಪ್ರಾಸ್ಪೆಕ್ಟ್ಸ್ (ಆರ್‌ಎಸ್‌ಪಿ) ಪ್ರಕಾರ ಈ ಐಪಿಒ ಕೆಲವು ರಿಸ್ಕ್‌ಗಳನ್ನು ಹೊಂದಿದೆ.
- ಕಂಪನಿಯ ಕಾರ್ಯಾಚರಣೆಗಳಿಗೆ ಅಗತ್ಯವಿರುವ ಬಿಡಿಭಾಗಗಳು ಮತ್ತು ವಸ್ತುಗಳ ದರ ಹೆಚ್ಚಳವು ಕಂಪನಿಯ ವ್ಯವಹಾರ ಮತ್ತು ಕಾರ್ಯಾಚರಣೆಗಳ ಫಲಿತಾಂಶಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.
- ಈ ಗ್ರೂಪ್‌ನ ಕಂಪನಿಗಳಲ್ಲಿ ಕಿಯಾ ಕಾರ್ಪ್ ಮತ್ತು ಕಿಯಾ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಕೂಡ ಹ್ಯುಂಡೈ ಇಂಡಿಯಾದಂತೆ ವ್ಯಾಪಾರ ಮಾಡುತ್ತದೆ. ಇದು ಹಿತಾಸಕ್ತಿಗಳ ಸಂಘರ್ಷಕ್ಕೆ ಕಾರಣವಾಗಬಹುದು. ವ್ಯವಹಾರದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.
- ಗ್ರೂಪ್ ಕಂಪನಿಯು ಪ್ರಮುಖವಾಗಿ ಮೊಬಿಸ್ ಇಂಡಿಯಾ ಲಿಮಿಟೆಡ್ ಅನ್ನು ಅವಲಂಬಿಸಿದೆ. ಮೊಬಿಸ್ ಇಂಡಿಯಾ ಲಿಮಿಟೆಡ್ ಎನ್ನುವುದು ಹ್ಯುಂಡೈ ಮೊಬಿಸ್‌ನ ಅಂಗಸಂಸ್ಥೆಯಾಗಿದೆ. ವಾಹನ ಮಾರಾಟದ ಬಳಿಕ ಸೇವೆಗಳಿಗೆ ಮತ್ತು ಕಂಪನಿಯ ಡೀಲರ್‌ಗಳಿಗೆ ಬಿಡಿಭಾಗಗಳನ್ನು ಪೂರೈಸುವ ಕಾರ್ಯವನ್ನು ಮೊಬಿಸ್ ಮಾಡುತ್ತದೆ.
- ಇಷ್ಟು ಮಾತ್ರವಲ್ಲದೆ ಕಂಪನಿಯ ಪ್ರಯಾಣಿಕ ವಾಹನಗಳು ಮತ್ತು ಬಿಡಿಭಾಗಗಳ ಉತ್ಪಾದನಾ ಪ್ರಕ್ರಿಯೆಯಲ್ಲಿ ಕಂಪನಿಯು ಬಳಸುವ ಮಾಡ್ಯುಲರ್ ಭಾಗಗಳನ್ನು ಪೂರೈಸಲು ಹ್ಯುಂಡೈ ಇಂಡಿಯಾ ಮೊಬಿಸ್ ಅನ್ನು ಅವಲಂಬಿಸಿರುತ್ತದೆ. ಜೂನ್ ತ್ರೈಮಾಸಿಕದಲ್ಲಿ ಸರಬರಾಜು ಮಾಡಿದ ಒಟ್ಟು ಭಾಗಗಳು ಮತ್ತು ಸಾಮಗ್ರಿಗಳ ಪಾಲು ಶೇಕಡ 17.91ರಷ್ಟಿದೆ.
- ವಾಹನಗಳ ಎಜಿನ್‌ಗಳು ಮತ್ತು ಟ್ರಾನ್ಸ್‌ಮಿಷನ್ ಜೋಡಣೆ, ಸಂಶೋಧನೆ ಮತ್ತು ಅಭಿವೃದ್ಧಿ, ಬಿಡಿಭಾಗಗಳು ಮತ್ತು ಸಾಮಗ್ರಿಗಳನ್ನು ಒಳಗೊಂಡಂತೆ ಕಾರ್ಯಾಚರಣೆಗಳಿಗಾಗಿ ಕಂಪನಿಯು ತನ್ನ ಪ್ರವರ್ತಕರಾದ ಎಚ್‌ಎಂಸಿಯನ್ನು ಅವಲಂಬಿಸಿದೆ.
ಈ ಐದು ರಿಸ್ಕ್‌ಗಳ ನಡುವೆಯೂ ಹ್ಯುಂಡೈ ಐಪಿಒಗೆ ಅರ್ಜಿ ಸಲ್ಲಿಸಬಹುದು ಎಂದು ಸಾಕಷ್ಟು ಷೇರುಪೇಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ತಕ್ಷಣಕ್ಕೆ ಲಾಭ ಪಡೆಯಲು ಬಯಸುವವರು ಜಿಎಂಪಿ ದರ ಮತ್ತು ಇತರೆ ಅಂಶಗಳನ್ನು ಅವಲೋಕಿಸಿಕೊಂಡು ಅರ್ಜಿ ಸಲ್ಲಿಸಬಹುದೇ? ಬೇಡವೇ ಎಂಬ ನಿರ್ಧಾರ ಕೈಗೊಳ್ಳಬಹುದು.
ಹ್ಯುಂಡೈ ಐಪಿಒ ಜಿಎಂಪಿ
ಸೋಮವಾರ ಹ್ಯುಂಡೈ ಐಪಿಒ ಜಿಎಂಪಿ 60 ರೂಪಾಯಿ ಇದೆ. ಅಂದರೆ, ಪ್ರತಿಷೇರಿಗೆ ಅಂದಾಜು 60 ರೂಪಾಯಿ ಹೆಚ್ಚು ಮೊತ್ತಕ್ಕೆ ಲಿಸ್ಟ್ ಆಗುವ ನಿರೀಕ್ಷೆಯಿದೆ. ಒಂದು ಲಾಟ್‌ನಲ್ಲಿ ಏಳು ಷೇರಿಗೆ 420 ರೂಪಾಯಿ ಏರಿಕೆ ಕಾಣುವ ಸೂಚನೆಯಿದೆ. ಆರಂಭದಲ್ಲಿ ಹ್ಯುಂಡೈ ಐಪಿಒ ಜಿಎಂಪಿ 370 ರೂಪಾಯಿ ಇತ್ತು. ಬಳಿಕ ಕುಸಿಯಲು ಆರಂಭವಾಗಿತ್ತು.
ಡಿಸ್‌ಕ್ಲೈಮರ್: ಷೇರುಪೇಟೆ, ಐಪಿಒ ಮಾಹಿತಿಗಾಗಿ ಈ ವಿವರ ನೀಡಲಾಗಿದೆ. ಷೇರುಪೇಟೆ ಹೂಡಿಕೆ ಸಾಕಷ್ಟು ಹಣಕಾಸಿನ ಅಪಾಯಗಳನ್ನು ಹೊಂದಿರುತ್ತದೆ. ಹೂಡಿಕೆದಾರರು ಸಾಕಷ್ಟು ರಿಸರ್ಚ್ ಮಾಡಿ ತಮ್ಮ ಸ್ವಂತ ವಿವೇಚನೆಯಿಂದ ಹೂಡಿಕೆ ನಿರ್ಧಾರ ಕೈಗೊಳ್ಳಬೇಕು.