Stock market today: ಅದಾನಿ ಗ್ರೂಪ್ ಲಂಚ ಪ್ರಕರಣದಿಂದ ಭಾರತೀಯ ಷೇರುಪೇಟೆ ತತ್ತರ, ಸೆನ್ಸೆಕ್ಸ್- ನಿಫ್ಟಿ ಎಷ್ಟು ಕುಸಿದಿದೆ ನೋಡಿ
Nov 21, 2024 01:51 PM IST
Stock market today: ಅದಾನಿ ಗ್ರೂಪ್ ಲಂಚ ಪ್ರಕರಣದಿಂದ ಭಾರತೀಯ ಷೇರುಪೇಟೆ ತತ್ತರ, ಸೆನ್ಸೆಕ್ಸ್- ನಿಫ್ಟಿ ಕುಸಿತ
- Stock market today: ಅಮೆರಿಕದ ಫೆಡರಲ್ ಕೋರ್ಟ್ ಅದಾನಿ ಗ್ರೂಪ್ ಮೇಲೆ ಮಾಡಿರುವ ಲಂಚ-ವಂಚನೆ ಆರೋಪ ಮತ್ತು ಇತರೆ ಕಾರಣಗಳಿಂದ ಭಾರತೀಯ ಷೇರುಪೇಟೆಯ ಸೂಚ್ಯಂಕಗಳಾದ ನಿಫ್ಟಿ ಮತ್ತು ಸೆನ್ಸೆಕ್ಸ್‌ಗಳು ತತ್ತರಿಸಿವೆ. ಇಂದಿನ ಇಂಟ್ರಾಡೇಯಲ್ಲಿ ಸೆನ್ಸೆಕ್ಸ್ 900 ಅಂಕಗಳಷ್ಟು ಕುಸಿದಿದೆ.
Stock market today: ಅಮೆರಿಕದ ಪ್ರಾಸಿಕ್ಯೂಟರ್‌ಗಳು ಗೌತಮ್ ಅದಾನಿ ಮತ್ತು ಇತರರರ ವಿರುದ್ಧ ಲಂಚದ ಆರೋಪ ಮಾಡಿದ್ದಾರೆ. 250 ದಶಲಕ್ಷ ಡಾಲರ್ ಲಂಚ ಮತ್ತು ವಂಚನೆ ಆರೋಪವು ಅದಾನಿ ಗ್ರೂಪ್‌ನ ಮೇಲೆ ಬಂದ ತಕ್ಷಣ ಅದಾನಿ ಷೇರುದಾರರು ಷೇರು ಮಾರಾಟ ಮಾಡಲು ಆರಂಭಿಸಿದ್ದಾರೆ. ಇದರಿಂದ ಅದಾನಿ ಗ್ರೂಪ್‌ನ ಷೇರುಗಳಲ್ಲಿ ಶೇಕಡ 20ರಷ್ಟು ಕುಸಿತ ಕಂಡುಬಂದಿದೆ. ಇದು ಭಾರತದ ಸೆನ್ಸೆಕ್ಸ್ ಮತ್ತು ನಿಫ್ಟಿ ಮೇಲೂ ನಕಾರಾತ್ಮಕ ಪರಿಣಾಮ ಬೀರಿದೆ. ಭಾರತೀಯ ಷೇರುಪೇಟೆಯ ಸೆನ್ಸೆಕ್ಸ್ ಈ ವರದಿ ಬರೆಯುವ ಹೊತ್ತಿಗೆ 900 ಅಂಕಗಳಷ್ಟು ಕುಸಿದಿತ್ತು. ನಿಫ್ಟಿ ಕೂಡ 23,300 ಅಂಕಕ್ಕೆ ಇಳಿದಿದೆ. ಭಾರತೀಯ ಷೇರುಪೇಟೆ ಇಂದು ಕುಸಿಯಲು ಅದಾನಿ ಗ್ರೂಪ್ ಸ್ಟಾಕ್ ಕುಸಿತದೊಂದಿಗೆ ಇನ್ನೂ ಹಲವು ಅಂಶಗಳು ಕಾರಣವಾದವು.
ನವೆಂಬರ್ 21ರ ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಶೇಕಡ 1ರಷ್ಟು ಇಳಿಕೆ ಕಂಡಿವೆ. ಭೌಗೋಳಿಕ ರಾಜಕೀಯ ಟೆನ್ಷನ್ ಹೆಚ್ಚಾಗಿರುವುದು ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆದಾರರು ದೊಡ್ಡ ಪ್ರಮಾಣದಲ್ಲಿ ಷೇರು ಮಾರಾಟ ಆರಂಭಿಸಿರುವುದರಿಂದ ಭಾರತೀಯ ಷೇರುಪೇಟೆ ಅಕ್ಷರಶಃ ಕ್ರ್ಯಾಶ್ ಆಗಿದೆ.
ಬಿಎಸ್‌ಇ ಸೆನ್ಸೆಕ್ಸ್ ಗುರುವಾರದ ವಹಿವಾಟಿನಲ್ಲಿ 77,711.11kಕ್ಕೆ ವಹಿವಾಟು ಆರಂಭಿಸಿತು. 900 ಪಾಯಿಂಟ್‌ಗಳಿಗಿಂತ ಹೆಚ್ಚು ಕುಸಿದು ಇಂಟ್ರಾಡೇ ಕನಿಷ್ಠ 76,802.73 ಕ್ಕೆ ತಲುಪಿತು. ಮಧ್ಯಾಹ್ನ 12.35ರ ಸುಮಾರಿಗೆ ಸ್ವಲ್ಪಮಟ್ಟಿಗೆ ಚೇತರಿಕೆ ಕಂಡು 77,127.42ಕ್ಕೆ ವಹಿವಾಟು ನಡೆಸಿತು. ಬೆಳಗಿನ ವಹಿವಾಟಿನಲ್ಲಿ ಎನ್‌ಎಸ್‌ಇ ನಿಫ್ಟಿ 179.75 ಪಾಯಿಂಟ್‌ಗಳ ಕುಸಿತ ಕಂಡು 23,338.75ಕ್ಕೆ ತಲುಪಿದೆ.
ಅಂದಹಾಗೆ, ಇಂದಿನ ಷೇರುಪೇಟೆ ಕುಸಿತಕ್ಕೆ ಕೇವಲ ಅದಾನಿ ಗ್ರೂಪ್‌ನ ಷೇರುಗಳು ಕುಸಿತ ಕಂಡಿರುವುದು ಮಾತ್ರ ಕಾರಣವಲ್ಲ. ಆದರೆ, ಇದು ಪ್ರಮುಖ ಕಾರಣ ಎಂದು ಅಲ್ಲಗೆಳೆಯಲಾಗುವುದಿಲ್ಲ. ಇದರೊಂದಿಗೆ ಭಾರತದ ವಿವಿಧ ರಾಜ್ಯಗಳ ಚುನಾವಣಾ ಫಲಿತಾಂಶದ ಕುರಿತಾದ ಭಾವನೆಗಳು ಷೇರುಪೇಟೆ ಮೇಲೆ ಪರಿಣಾಮ ಬೀರಿವೆ. ಮಹಾರಾಷ್ಟ್ರ ರಾಜ್ಯ ಸರಕಾರದ ಮೇಲೆ ಚುನಾವಣಾ ಫಲಿತಾಂಶ ಏನು ಪರಿಣಾಮ ಬೀರಬಹುದು ಎಂಬ ಆಲೋಚನೆಯೂ ಮಾರುಕಟ್ಟೆ ಮೇಲೆ ಒತ್ತಡ ತಂದಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಅದಾನಿ ಗ್ರೂಪ್ ಮೇಲೆ ಲಂಚದ ಆರೋಪ
ಗೌತಮ್ ಅದಾನಿ ಮತ್ತು ಇನ್ನೂ ಹಲವರ ಮೇಲೆ ನ್ಯೂಯಾರ್ಕ್‌ನ ಫೆಡರಲ್ ಕೋರ್ಡ್ ಲಂಚ ಮತ್ತು ವಂಚನೆಯ ಆರೋಪ ಮಾಡಿದೆ. ಇದಾದ ಬಳಿಕ ಅದಾನಿ ಗ್ರೂಪ್ ಷೇರುಗಳು ಶೇಕಡ 20ರಷ್ಟು ಕುಸಿದಿದೆ. ಭಾರತಕ್ಕೆ ಸೌರ ವಿದ್ಯುತ್ ಗುತ್ತಿಗೆ ಪಡೆಯಲು ಅದಾನಿ ಗ್ರೂಪ್ 250 ದಶಲಕ್ಷ ಡಾಲರ್ ಲಂಚ ನೀಡಿದೆ ಎನ್ನುವ ಆರೋಪ ಇದಾಗಿದೆ.
ಇಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಐಆದ ಷೇರುಗಳು ಶೇಕಡ 5.16ರಷ್ಟು ಕುಸಿದಿದೆ. ಅದಾನಿ ಗ್ರೂಪ್‌ಗೆ ಎಸ್‌ಬಿಐ ಬ್ಯಾಂಕ್ ಪ್ರಮುಖ ಸಾಲದಾತ. ಹೀಗಾಗಿ, ಅದಾನಿ ಗ್ರೂಪ್ ಷೇರುಗಳ ಜತೆಗೆ ಷೇರುದಾರರು ಎಸ್‌ಬಿಐ ಷೇರುಗಳ ಮಾರಾಟವನ್ನೂ ಹೆಚ್ಚಿಸಿದ್ದಾರೆ.
ಜಿಯೋಪೊಲಿಟಿಕಲ್ ಕಾರಣಗಳು
ರಷ್ಯಾ-ಉಕ್ರೇನ್ ಯುದ್ಧಕ್ಕೆ ಸಂಬಂಧಪಟ್ಟಂತೆ ಜಿಯೋ ಪೊಲಿಟಿಕಲ್ ಟೆನ್ಷನ್‌ಗಳು ಕೂಡ ಜಾಗತಿಕ ಮತ್ತು ದೇಶೀಯ ಷೇರುಪೇಟೆ ಮೇಲೆ ಪರಿಣಾಮ ಬೀರಿವೆ.
ವಿದೇಶಿ ಹೂಡಿಕೆಯ ಹೊರಹರಿವು
ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಷೇರು ಮಾರಾಟ ಹೆಚ್ಚಳ ಕೂಡ ಭಾರತೀಯ ಮಾರುಕಟ್ಟೆ ಕ್ರ್ಯಾಶ್ ಆಗಲು ಕಾರಣವಾಯಿತು.
Disclaimer: ಷೇರು ಮಾರುಕಟ್ಟೆ ಕುರಿತಾದ ಮಾಹಿತಿಗಾಗಿ ಈ ಬರಹ ಪ್ರಕಟಿಸಲಾಗಿದೆ. ಹಿಂದೂಸ್ತಾನ್ ಟೈಮ್ಸ್ ಕನ್ನಡವು ಯಾವುದೇ ಷೇರು ಖರೀದಿಗೆ ಅಥವಾ ಮಾರಾಟಕ್ಕೆ ಶಿಫಾರಸು ಮಾಡುವುದಿಲ್ಲ. ಷೇರು ಮಾರುಕಟ್ಟೆಯು ಹಣಕಾಸು ಅಪಾಯಗಳನ್ನು ಹೊಂದಿರುತ್ತದೆ. ಹೂಡಿಕೆದಾರರು ಸ್ವಂತ ವಿವೇಚನೆಯಿಂದ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.