Explainer: ಗೌತಮ್ ಅದಾನಿ ಮೇಲೆ ಮತ್ತೆ ಆರೋಪ, ಅದಾನಿ ಸಮೂಹದ ಸ್ಪಷ್ಟನೆ, ರಾಹುಲ್ ಗಾಂಧಿಯಿಂದ ಹೊಸ ಬೇಡಿಕೆ, ಏನಿದು ಹೊಸ ಬೆಳವಣಿಗೆ
Adani-OCCRP issue: ಅದಾನಿ ಗ್ರೂಪ್ ತಮ್ಮದೇ ಕಂಪನಿಗಳ ಷೇರುಗಳ ಮೇಲೆ ಮಾರಿಷಸ್ ಮೂಲದ ಒಪೆಕ್ಯೂ ಇನ್ವೆಸ್ಟ್‌ಮೆಂಟ್ ಫಂಡ್ ಹೆಸರಿನ ಕಂಪನಿ ಮೂಲಕ ದೊಡ್ಡ ಪ್ರಮಾಣದಲ್ಲಿ ರಹಸ್ಯವಾಗಿ ಹೂಡಿಕೆ ಮಾಡಿದೆ ಎಂಬ ಹೊಸ ಆರೋಪ ಕೇಳಿಬಂದಿದೆ. ಇದಕ್ಕೆ ಅದಾನಿ ಸಮೂಹ ಸ್ಪಷ್ಟನೆ ನೀಡಿದೆ. ರಾಹುಲ್ ಗಾಂಧಿ ಈ ಆರೋಪದ ಕುರಿತು ತನಿಖೆಗೆ ಆಗ್ರಹಿಸಿದ್ದಾರೆ.
ಬೆಂಗಳೂರು: ಗೌತಮ್ ಅದಾನಿ ನೇತೃತ್ವದ ಅದಾನಿ ಸಮೂಹ ಮತ್ತೆ ಸುದ್ದಿಯಲ್ಲಿದೆ. ಅಪರಾಧ ತನಿಖಾ ಸಂಸ್ಥೆಯೊಂದರ ವರದಿಯ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಫೋರ್ಬ್ಸ್ ಪಟ್ಟಿಯ ಪ್ರಕಾರ ಜಗತ್ತಿನ 24ನೇ ಅಗ್ರ ಶ್ರೀಮಂತ ಗೌತಮ್ ಅದಾನಿ ಯಾರು, ಹೊಸ ಆರೋಪವೇನು, ಈ ಆರೋಪಕ್ಕೆ ಅದಾನಿ ಸಮೂಹ ನೀಡಿದ ಸ್ಪಷ್ಟನೆ ಏನು, ಈ ವಿಷಯದ ಕುರಿತು ರಾಹುಲ್ ಗಾಂಧಿ ಬೇಡಿಕೆಯೇನು, ರಾಹುಲ್ ಗಾಂಧಿಗೂ ಅದಾನಿಗೂ ವೈಮನಸ್ಯ ಸ್ಥಿತಿ ಏಕೆ ಇದೆ, ಅದಾನಿ ಸಾಮ್ರಾಜ್ಯ ಎಷ್ಟು ದೊಡ್ಡದಾಗಿದೆ, ಹಿಂಡನ್‌ಬರ್ಗ್ ವಿವಾದ ಏನು, ಹೀಗೆ ಗೌತಮ್ ಅದಾನಿ ಮಾಲಿಕತ್ವದ ಅದಾನಿ ಗ್ರೂಪ್‌ಗೆ ಸಂಬಂಧಪಟ್ಟ ಹಲವು ವಿಷಯಗಳನ್ನು ತಿಳಿದುಕೊಳ್ಳೋಣ.
ಗೌತಮ್ ಅದಾನಿ ಕಂಪನಿ ಮೇಲೆ ಹೊಸ ಆರೋಪ
ಈ ಹಿಂದೆ ಹಿಂಡನ್‌ಬರ್ಗ್ ವರದಿಯಿಂದಾಗಿ ಅದಾನಿ ಗ್ರೂಪ್ ಕೆಲವು ಸಮಯ ಹಿನ್ನೆಡೆ ಅನುಭವಿಸಿತ್ತು. ಇದೀಗ ಮತ್ತೆ ಅದಾನಿ ಸಮೂಹದ ಮೇಲೆ ಹೊಸ ಆರೋಪ ಕೇಳಿಬಂದಿದೆ. 2013-18 ಸಮಯದಲ್ಲಿ ಅದಾನಿ ಗ್ರೂಪ್ ತಮ್ಮದೇ ಕಂಪನಿಗಳ ಷೇರುಗಳ ಮೇಲೆ ಮಾರಿಷಸ್ ಮೂಲದ ಒಪೆಕ್ಯೂ ಇನ್ವೆಸ್ಟ್‌ಮೆಂಟ್ ಫಂಡ್ ಹೆಸರಿನ ಕಂಪನಿ ಮೂಲಕ ದೊಡ್ಡ ಪ್ರಮಾಣದಲ್ಲಿ ರಹಸ್ಯವಾಗಿ ಹೂಡಿಕೆ ಮಾಡಿತ್ತು ಎಂಬ ಆರೋಪ ಮಾಡಲಾಗಿದೆ. ದ ಆರ್ಗನೈಸ್ಡ್ ಕ್ರೈಮ್ ಆ್ಯಂಡ್ ಕರಪಕ್ಷನ್ ರಿಪೋರ್ಟಿಂಗ್ ಪ್ರಾಜೆಕ್ಟ್ (ಒಸಿಸಿಆರ್‌ಪಿ) ಈ ಆರೋಪ ಮಾಡಿದೆ. ಆರೋಪದಲ್ಲಿ ಹೇಳಲಾದ ಸಮಯದಲ್ಲಿ ಅದಾನಿ ಗ್ರೂಪ್‌ನ ಷೇರು ದರದಲ್ಲಿ ಗಮನಾರ್ಹ ಹೆಚ್ಚಳವಾಗಿತ್ತು.
ದುಬೈನಲ್ಲಿ ವಿನೋದ್ ಅದಾನಿ ಕಂಪನಿಯೊಂದನ್ನು ಹೊಂದಿದ್ದಾರೆ. ವಿನೋದ್ ಅದಾನಿಯು ಗೌತಮ್ ಅದಾನಿಯ ಸಹೋದರ. ಇವರ ಪರವಾಗಿ ದುಬೈನ ನಾಸೆರ್ ಆಲಿ ಶಬಾನ್ ಮತ್ತು ತೈವಾನ್‌ನ ಚಾಂಗ್ ಚುಂಗ್ ಲಿಂಗ್ ಎಂಬ ಇಬ್ಬರು ಮಾರಿಷಸ್ ಮೂಲದ ಎರಡು ಸಂಸ್ಥೆಗಳ ಮೂಲಕ ಹಲವು ವರ್ಷ ಅದಾನಿ ಸಮೂಹಕ್ಕೆ ಷೇರು ವ್ಯವಹಾರ ನಡೆಸಿದ್ದಾರೆ. ಪರೋಕ್ಷವಾಗಿ ತಮ್ಮ ಕಂಪನಿಗೆ ಈ ರೀತಿ ಹೂಡಿಕೆ ಮಾಡಿಸಿಕೊಳ್ಳಲಾಗಿದೆ ಎನ್ನುವುದು ಆರೋಪವಾಗಿದೆ. ಈ ರೀತಿ ಷೇರು ಹೂಡಿಕೆ ಮಾಡಿರೋದ್ರಿಂದ ಅದಾನಿ ಸಮೂಹದ ಷೇರು ಮೌಲ್ಯ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿತ್ತು ಎಂದು ಆರೋಪಿಸಲಾಗಿದೆ.
ಆರೋಪದ ಕುರಿತು ಅದಾನಿ ಗ್ರೂಪ್ ಸ್ಟಷ್ಟನೆ
ಇದು ಅನಗತ್ಯವಾಗಿ ಮತ್ತೆ ಮಾಡಲಾದ ಹಳೆ ಆರೋಪ ಎಂದು ಅದಾನಿ ಗ್ರೂಪ್ ಪ್ರತಿಕ್ರಿಯೆ ನೀಡಿದೆ. ದಶಕಗಳ ಹಿಂದೆ ತನಿಖೆ ನಡೆಸಿ ಕ್ಲೀನ್‌ಚಿಟ್ ನೀಡಲಾದ ಪ್ರಕರಣದ ಮಾಹಿತಿಯನ್ನು ಇಟ್ಟುಕೊಂಡು ಹೊಸ ಆರೋಪ ಮಾಡಲಾಗಿದೆ ಎಂದು ಆದಾನಿ ಗ್ರೂಪ್ ಸ್ಪಷ್ಟನೆ ನೀಡಿದೆ.
ಹಿಂಡನ್‌ಬರ್ಗ್ ವರದಿ ನೆನಪು
ಅಮೆರಿಕದ ಹಿಂಡೆನ್‌ಬರ್ಗ್ ರಿಸರ್ಚ್ ಹೂಡಿಕೆ ಸಂಸ್ಥೆಯು ಅದಾನಿ ಗ್ರೂಪ್‌ನ ಆರ್ಥಿಕ ಸ್ಥಿತಿಗತಿಗಳ ಕುರಿತು ಸಂಚಲನ ಉಂಟುಮಾಡುವಂತ ವರದಿಯನ್ನು ಈ ವರ್ಷದ ಜನವರಿಯಲ್ಲಿ ಬಿಡುಗಡೆ ಮಾಡಿತ್ತು. ಅದಾನಿ ಸಮೂಹದ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎಂದು ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿತ್ತು. ಹಿಂಡೆನ್‌ಬರ್ಗ್ ವರದಿಯಲ್ಲಿ ಅದಾನಿ ಸಮೂಹದ ಮೇಲೆ ನಾನಾ ಆರೋಪಗಳನ್ನು ಮಾಡಲಾಗಿತ್ತು. ಇದಕ್ಕೆ ಗೌತಮ್ ಆದಾನಿ ಸೂಕ್ತ ಪ್ರತಿಕ್ರಿಯೆಗಳನ್ನು ನೀಡಿದ್ದರು. ಈ ಸಮಯದಲ್ಲಿ ಅದಾನಿ ಸಮೂಹದ ಷೇರುಗಳು ನೆಲಕಚ್ಚಿದ್ದವು. ಅದಾನಿ ಗ್ರೂಪ್‌ನಲ್ಲಿ ಹೂಡಿಕೆ ಮಾಡಿರುವ ಎಲ್‌ಐಸಿಯಂತಹ ಕಂಪನಿಗಳ ಷೇರು ದರ ಸಹ ಕುಸಿತ ಕಂಡಿದ್ದವು.
ರಾಹುಲ್ ಗಾಂಧಿಯಿಂದ ತನಿಖೆಗೆ ಆಗ್ರಹ
ನಿನ್ನೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೂಡ ಅದಾನಿ ಸಮೂಹದ ಮೇಲೆ ಹಲವು ಆರೋಪ ಮಾಡಿದ್ದು, ತನಿಖೆ ಮಾಡಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದರು. ಅದಾನಿ ಗ್ರೂಪ್ ಬದಲಿ ಕಂಪನಿಗಳ ಮೂಲಕ ತನ್ನದೇ ಕಂಪನಿಯ ಷೇರುಗಳ ಮೇಲೆ ಹೂಡಿಕೆ ಮಾಡಿದೆ ಎಂಬ ಆರೋಪದ ಕುರಿತು ಜಂಟಿ ಸದನ ಸಮಿತಿ ತನಿಖೆ ನಡೆಸುವಂತೆ ಗುರುವಾರ ಬೇಡಿಕೆ ಇಟ್ಟಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಅದಾನಿ ತನಿಖೆಯನ್ನು ತಡೆಯುತ್ತಿದ್ದಾರೆ ಎಂದು ಆರೋಪಿಸಿದ್ದರು. ಗೌತಮ್ ಅದಾನಿ ಸಹೋದರ ವಿನೋದ್ ಅದಾನಿ, ನಾಸರ್ ಅಲಿ ಶಬನ್ ಅಹ್ಲಿ ಹಾಗೂ ಚಾಂಗ್ ಚುಂಗ್–ಲಿಂಗ್ ಎಂಬ ಮೂವರು ಮಾಡಿರುವ ಈ ವಂಚನೆಯನ್ನು ತನಿಖೆ ನಡೆಸಬೇಕೆಂದು ಅವರು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದರು. ಅದಾನಿ ಕುರಿತು ತನಿಖೆ ನಡೆಸಲು ಪ್ರಧಾನಿ ನರೇಂದ್ರ ಮೋದಿಗೆ ಒಲವು ಇಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದರು.
ಗೌತಮ್ ಅದಾನಿ ಯಾರು?
ಗೌತಮ್ ಅದಾನಿಯು ಫೋರ್ಬ್ಸ್ ನಿಯತಕಾಲಿಕೆಯ ರಿಯಲ್ ಟೈಮ್ ಕೋಟ್ಯಧಿಪತಿಗಳ ಪಟ್ಟಿಯಲ್ಲಿ ವಿಶ್ವದ ಎರಡನೇ ಸ್ಥಾನ, ಮೂರನೇ ಸ್ಥಾನ ಹೊಂದಿದ್ದರು. ಈಗ ಇವರು ಈ ಪಟ್ಟಿಯಲ್ಲಿ ಅಗ್ರ 24ನೇ ಸ್ಥಾನದಲ್ಲಿದ್ದಾರೆ. ಗುಜರಾತ್‌ನ ಅಹಮದಾಬಾದ್‌ನ ಜೈನ್ ಕುಟುಂಬದ ಗೌತಮ್ ಅದಾನಿಯ ತಂದೆ ಜವಳಿ ವ್ಯಾಪಾರಿಯಾಗಿದ್ದರು. ಗೌತಮ್ ಅದಾನಿ ಪದವಿ ಓದುತ್ತಿರುವಾಗಲೇ ಉದ್ಯಮದತ್ತ ಮುಖ ಮಾಡಿದ್ದರು. ಅಂದರೆ ಕಾಲೇಜನ್ನು ಅರ್ಧದಲ್ಲಿಯೇ ಬಿಟ್ಟಿದ್ದರು. ಮುಂಬೈಗೆ 1978ರಲ್ಲಿ ಆಗಮಿಸಿದ ಇವರ ಬಳಿ ಆಗ ನೂರು ರೂಪಾಯಿ ಇತ್ತಂತೆ. ಆರಂಭದಲ್ಲಿ ವಜ್ರ ವಿಂಗಡಿಸುವ ಉದ್ಯೋಗ ಮಾಡುತ್ತಿದ್ದರು. ಬಳಿಕ ಇವರು ಸ್ವಂತ ಉದ್ಯಮದತ್ತ ಮುಖ ಮಾಡಿದರು.
ಅದಾನಿ ಸಮೂಹವು ಭಾರತದ ಬೃಹತ್ ಉದ್ಯಮ. ವಿದ್ಯುತ್, ಮೂಲಸೌಕರ್ಯ, ಲಾಜಿಸ್ಟ್ರಿಕ್ ಸೇರಿದಂತೆ ಹಲವು ಉದ್ಯಮಗಳಲ್ಲಿ ತೊಡಗಿಸಿಕೊಂಡಿದೆ. 1988ರಲ್ಲಿ ಗೌತಮ್ ಅದಾನಿಯು ಅದಾನಿ ಗ್ರೂಪ್ ಸ್ಥಾಪಿಸಿದರು. ವರ್ಷದಿಂದ ವರ್ಷಕ್ಕೆ ಇದು ಬೃಹತ್ ಉದ್ಯಮವಾಗಿ ಬೆಳೆದ ಪರಿ ರೋಚಕ. 1993 ರಲ್ಲಿ ಅದಾನಿ ಎಕ್ಸ್‌ಪೋರ್ಟ್ಸ್ ಲಿಮಿಟೆಡ್ ಸ್ಥಾಪಿಸಲಾಗಿತ್ತು. ಅದಾನಿ ಅಗ್ರಿ ಫ್ರೆಶ್, ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್, ಅದಾನಿ ಸಿಮೆಂಟ್, ಅದಾನಿ ಕಾನೆಕ್ಸ್, ಅದಾನಿ ಡಿಫೆನ್ಸ್ ಆಂಡ್ ಏರೋಸ್ಪೇಸ್, ಅದಾನಿ ಡಿಜಿಟಲ್ ಲ್ಯಾಬ್ಸ್, ಅದಾನಿ ಮೈನಿಂಗ್, ಅದಾನಿ ಶಿಪ್ಪಿಂಗ್, ಅದಾನಿ ಸೋಲಾರ್ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಕಂಪನಿಗಳನ್ನು ಹೊಂದಿದೆ. 2023ರ ಲೆಕ್ಕದ ಪ್ರಕಾರ ಅದಾನಿ ಸಮೂಹದ ಒಟ್ಟು ಆದಾಯ 136977 ಕೋಟಿ ರೂಪಾಯಿ.