Gautam Adani: ಜಗತ್ತಿನ ಅಗ್ರ 20 ಶ್ರೀಮಂತರ ಪಟ್ಟಿಯಿಂದಲೂ ಜಾರಿದ ಗೌತಮ್ ಅದಾನಿ, 16.2 ಶತಕೋಟಿ ಡಾಲರ್ ಆದಾಯ ನಷ್ಟ
ಉದ್ಯಮಿ ಗೌತಮ್ ಅದಾನಿ, ಫೋರ್ಬ್ಸ್‌ನ ಜಗತ್ತಿನ ರಿಯಲ್ ಟೈಮ್ ಶತಕೋಟ್ಯಧಿಪತಿಗಳು ಪಟ್ಟಿಯಲ್ಲಿ 22ನೇ ಸ್ಥಾನಕ್ಕೆ ಜಾರಿದ್ದಾರೆ. ಇವರ ಸಂಪತ್ತು ಶೇಕಡ 21.77ರಷ್ಟು ಅಥವಾ 16.2 ಶತಕೋಟಿ ಡಾಲರ್‌ನಷ್ಟು ಕುಸಿದಿದೆ.
ನವದೆಹಲಿ: ಉದ್ಯಮಿ ಗೌತಮ್ ಅದಾನಿ, ಫೋರ್ಬ್ಸ್‌ನ ಜಗತ್ತಿನ ರಿಯಲ್ ಟೈಮ್ ಶತಕೋಟ್ಯಧಿಪತಿಗಳು ಪಟ್ಟಿಯಲ್ಲಿ 22ನೇ ಸ್ಥಾನಕ್ಕೆ ಜಾರಿದ್ದಾರೆ. ಇವರ ಸಂಪತ್ತು ಶೇಕಡ 21.77ರಷ್ಟು ಅಥವಾ 16.2 ಶತಕೋಟಿ ಡಾಲರ್‌ನಷ್ಟು ಕುಸಿದಿದೆ.
ಇವರ ಈಗಿನ ಸಂಪತ್ತಿನ ನಿವ್ವಳ ಮೌಲ್ಯ ಇಂದು ಮಧ್ಯಾಹ್ನ 1.23 ಗಂಟೆಗೆ 81.1 ಬಿಲಿಯನ್ ಡಾಲರ್ ಆಗಿತ್ತು. ಇದೇ ಸಂದರ್ಭದಲ್ಲಿ ರಿಲಯೆನ್ಸ್ ಇಂಡಸ್ಟ್ರೀಸ್‌ನ ಮುಖೇಶ್ ಅಂಬಾನಿಯವರ ನಿವ್ವಳ ಮೌಲ್ಯ 82 ಬಿಲಿಯನ್ ಡಾಲರ್ ಆಗಿತ್ತು. 2023ರ ಈ ಹಿಂದಿನ ಫೋರ್ಬ್ಸ್ ಪಟ್ಟಿಯಲ್ಲಿ ಅದಾನಿ ಅಗ್ರ ಹತ್ತರೊಳಗಿನ ಸ್ಥಾನ ಪಡೆದಿದ್ದರು. ಮುಖೇಶ್ ಅಂಬಾನಿ ಸ್ಥಾನವು ಅಗ್ರ 15ನೇ ಸ್ಥಾನದಲ್ಲಿತ್ತು.
ಗುರುವಾರ ಅಂದ್ರೆ ನಿನ್ನೆ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ 2023 ರ ಫೋರ್ಬ್ಸ್ ರಿಯಲ್-ಟೈಮ್ ಬಿಲಿಯನೇರ್ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದ್ದರು, ನಂತರ ಮತ್ತಷ್ಟು ಕುಸಿದು ಪಟ್ಟಿಯಲ್ಲಿ 15 ನೇ ಸ್ಥಾನಕ್ಕೆ ಬಂದರು. ಈ ಮೂಲಕ ಮುಖೇಶ್ ಅಂಬಾನಿಯ ಲೆವೆಲ್‌ಗೆ ಬಂದಿದ್ದರು.
ಗೌತಮ್ ಅದಾನಿ ಒಡೆತನದ ಅದಾನಿ ಗ್ರೂಪ್ ಕಂಪನಿಗಳ ಷೇರುಗಳು ಬುಧವಾರವೂ ಭಾರೀ ಕುಸಿತ ಕಂಡಿತ್ತು. ಕಳೆದ ಐದು ವಹಿವಾಟು ಅವಧಿಗಳಲ್ಲಿ ಸಮೂಹದ ಕಂಪನಿಗಳು 92 ಬಿಲಿಯನ್ ಡಾಲರ್ (7.52 ಲಕ್ಷ ಕೋಟಿ ರೂ.) ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿವೆ ಎಂದು ಬ್ಲ್ಯೂಂಬರ್ಗ್ ವರದಿ ತಿಳಿಸಿತ್ತು.
ಗೌತಮ್ ಅದಾನಿಯವರ ವೈಯಕ್ತಿಕ ಸಂಪತ್ತು ಕೂಡ ಇದೇ ಅವಧಿಯಲ್ಲಿ 40 ಬಿಲಿಯನ್ ಡಾಲರ್‌ನಷ್ಟು (3.27 ಲಕ್ಷ ಕೋಟಿ ರೂ.) ಕುಸಿತ ಕಂಡಿದೆ. ಇದರಿಂದ ಅವರು ಫೋರ್ಬ್ಸ್ ಜಾಗತಿಕ ಸಿರಿವಂತರ ಪಟ್ಟಿಯಲ್ಲಿ 15ನೇ ಸ್ಥಾನಕ್ಕೆ ಜಾರಿದ್ದರು. ಇಂದು ಇವರು ಅಗ್ರ 22 ಸ್ಥಾನಕ್ಕೆ ಜಾರಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿ.ನ ಮುಖ್ಯಸ್ಥ ಮುಕೇಶ್ ಅಂಬಾನಿ 83.7 ಬಿಲಿಯನ್ ಡಾಲರ್ ಆಸ್ತಿ ಹೊಂದಿದ್ದು ಜಾಗತಿಕ ಸಿರಿವಂತರ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ. ಈ ಮೂಲಕ ಅವರೇ ಈಗ ಏಷ್ಯಾ ಹಾಗೂ ಭಾರತದ ನಂ.1 ಶ್ರೀಮಂತರಾಗಿದ್ದಾರೆ.
ರಾಜೀನಾಮೆ ನೀಡಿದ ಬ್ರಿಟನ್ ಮಾಜಿ ಪ್ರಧಾನಿ ಸಹೋದರ
ಬ್ರಿಟನ್‌ನ ಮಾಜಿ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಅವರ ಕಿರಿಯ ಸಹೋದರ ಲಾರ್ಡ್ ಜೋ ಜಾನ್ಸನ್ ಅವರು, ಈಗ ಹಿಂಪಡೆಯಲಾಗಿರುವ ಅದಾನಿ ಎಂಟರ್‌ಪ್ರೈಸಸ್ ಫಾಲೋ-ಆನ್ ಪಬ್ಲಿಕ್ ಆಫರ್‌ನೊಂದಿಗೆ (ಎಫ್‌ಪಿಒ) ಸಂಬಂಧ ಹೊಂದಿರುವ, ಯುಕೆ ಮೂಲದ ಹೂಡಿಕೆ ಸಂಸ್ಥೆಯ ಕಾರ್ಯನಿರ್ವಾಹಕೇತರ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕಳೆದ ವರ್ಷ ಜೂನ್‌ನಲ್ಲಿ ಲಂಡನ್ ಮೂಲದ ಎಲಾರಾ ಕ್ಯಾಪಿಟಲ್ ಪಿಎಲ್‌ಸಿಯ ನಿರ್ದೇಶಕರಾಗಿ 51 ವರ್ಷದ ಲಾರ್ಡ್ ಜೋ ಜಾನ್ಸನ್ ನೇಮಕಗೊಂಡಿದ್ದರು. ಈ ಕುರಿತು ಯುಕೆ ಕಂಪನಿಗಳ ಹೌಸ್ ದಾಖಲೆಗಳನ್ನು ಉಲ್ಲೇಖಿಸಿ, 'ದಿ ಫೈನಾನ್ಷಿಯಲ್ ಟೈಮ್ಸ್' ಪತ್ರಿಕೆ ವರದಿ ಮಾಡಿದೆ. ಈ ವರದಿ ಇದೀಗ ಜಾಗತಿಕವಾಗಿ ಗಮನ ಸೆಳೆದಿದೆ. ಈ ಕುರಿತು ವಿಶೇಷ ವರದಿ ಇಲ್ಲಿದೆ.