Viral Video: ಈ ಬೀದಿಬದಿ ಬೇಲ್‌ಪುರಿ ಅಂಗಡಿಯಾತ ಮರ್ಸಿಡಿಸ್ ಬೆಂಜ್ ಕಾರು ಮಾಲೀಕ, ತೆರಿಗೆ ಚರ್ಚೆಗೆ ಕಾರಣವಾಯ್ತು ವೈರಲ್ ವಿಡಿಯೋ
Dec 12, 2024 10:46 AM IST
Viral Video: ಈ ಬೀದಿಬದಿ ಬೇಲ್‌ಪುರಿ ಅಂಗಡಿಯಾತ ಮರ್ಸಿಡಿಸ್ ಬೆಂಜ್ ಕಾರು ಮಾಲೀಕ
- Viral Video: ಮುಂಬೈನಲ್ಲಿ ಬೀದಿಬದಿಯಲ್ಲಿ ಬೇಲ್‌ಪುರಿ ಮಾರಾಟ ಮಾಡುತ್ತಿರುವ ವ್ಯಕ್ತಿಯೊಬ್ಬರು ಮರ್ಸಿಡಿಸ್ ಬೆಂಜ್ ಕಾರು ಹೊಂದಿದ್ದಾರೆ ಎಂದು ಕರ್ನಾಟಕದ ಶ್ರೀನಿಧಿ ಹಂದೆ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜತೆಗೆ, ಇಂತಹ ವ್ಯಾಪಾರಿಗಳು ತೆರಿಗೆ ಪಾವತಿಸಬೇಕಿಲ್ಲ ಎಂಬ ವಿಚಾರದ ಕುರಿತು ಚರ್ಚೆಗೆ ಕಾರಣವಾಗಿದೆ.
ಬೆಂಗಳೂರು: ಕರ್ನಾಟಕದ ವ್ಯಕ್ತಿಯೊಬ್ಬರು ಮುಂಬೈಗೆ ಭೇಟಿ ನೀಡಿದ ವೇಳೆ ಅಲ್ಲಿನ ಬೇಲ್‌ಪುರಿ ಶಾಪ್ ಮಾಲೀಕರೊಬ್ಬರು ಬೆಂಜ್ ಕಾರು ಹೊಂದಿರುವ ಕುರಿತು ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ರೀಲ್ಸ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನಗದು ರೂಪದಲ್ಲಿ ವಹಿವಾಟು ನಡೆಸುವ ಸಣ್ಣ ವ್ಯಾಪಾರಿಗಳು ಕೂಡ ತೆರಿಗೆ ವ್ಯಾಪ್ತಿಗೆ ಬರಬೇಕೆಂಬ ಚರ್ಚೆಗೆ ಕಿಡಿ ಹಚ್ಚಿದೆ. ಈ ವಿಡಿಯೋದಲ್ಲಿ ಬೀದಿಬದಿ ಬೇಲ್‌ಪುರಿ ಅಂಗಡಿಯಾತ ಮರ್ಸಿಡಿಸ್ ಬೆಂಜ್ ಕಾರು ಮಾಲೀಕ ಎಂಬ ವಿವರ ನೀಡಿದ್ದಾರೆ. ಜತೆಗೆ, ಈ ರೀತಿ ಸಾಕಷ್ಟು ಸಣ್ಣ ವ್ಯಾಪಾರಿಗಳು ಉತ್ತಮ ಆದಾಯ ಹೊಂದಿದ್ದರೂ ಸರಕಾರಕ್ಕೆ ತೆರಿಗೆ ಕಟ್ಟಬೇಕಿಲ್ಲ. ಆದರೆ, ವೇತನ ಪಡೆಯುವವರು ತಮ್ಮ ವೇತನದ ಬಹುಪಾಲನ್ನು ತೆರಿಗೆಯಾಗಿ ಕಟ್ಟುವ ಅನಿವಾರ್ಯತೆ ಇದೆ ಎಂದು ಹೇಳಿದ್ದಾರೆ. ಅವರ ವಿಡಿಯೋದ ಕುರಿತು ಪರ ವಿರೋಧ ಚರ್ಚೆಯಾಗುತ್ತಿದೆ.
ಕರ್ನಾಟಕದ ಶ್ರೀನಿಧಿ ಹಂದೆ ಹಂಚಿಕೊಂಡ ವಿಡಿಯೋದಲ್ಲೇನಿದೆ?
ಉಡುಪಿ ಮೂಲದ ಟೆಕ್ಕಿ, ಟ್ರಾವೆಲ್ ಬ್ಲಾಗರ್ ಶ್ರೀನಿಧಿ ಹಂದೆ ಕೆಲವು ದಿನಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ 2.7 ದಶಲಕ್ಷ ಅಂದರೆ 27 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಈ ವಿಡಿಯೋಗೆ 33 ಸಾವಿರ ಲೈಕುಗಳು, ನೂರಾರು ಕಾಮೆಂಟ್‌ಗಳು ಬಂದಿವೆ. ಸಾಕಷ್ಟು ಜನರು ಇವರ ವಿಡಿಯೋದಲ್ಲಿ ತಿಳಿಸಿದ ಸಂಗತಿಯನ್ನು ಒಪ್ಪಿದ್ದಾರೆ. ಇನ್ನು ಕೆಲವರು ಬೇಲ್‌ಪುರಿ ಶಾಪ್‌ನಂತಹ ವ್ಯಾಪಾರ ಮಾಡುವವರ ಶ್ರಮವನ್ನು ನೆನಪಿಸಿದ್ದಾರೆ. ಅಂದಹಾಗೆ ಮುಂಬೈನ ಸೆಂಟ್ರಲ್ ಅವೆನ್ಯು ರಸ್ತೆಯ ಸಮೀಪ ಈ ಬೇಲ್‌ಪುರಿ ಶಾಪ್ ಇದೆ.
ಶ್ರೀನಿಧಿ ಹಂದೆ ತನ್ನ ವಿಡಿಯೋಗೆ ಈ ಮುಂದಿನಂತೆ ವಿವರಣೆ ನೀಡಿದ್ದಾರೆ. "ನಿನ್ನೆ ಸಂಜೆ ಮುಂಬೈನ ರಸ್ತೆಬದಿಯ ಅಂಗಡಿಯೊಂದರಲ್ಲಿ ಚಾಟ್ ಸೇವಿಸಿದ್ದೇನೆ. ಅದರ ಓನರ್ ಹಲವು ಬೇಲ್‌ಪುರಿ ಸ್ಟಾಲ್‌ಗಳನ್ನು ಹೊಂದಿದ್ದಾರೆ. ಅವರಲ್ಲಿ ಮರ್ಸಿಡಿಸ್ ಬೆಂಜ್ ಕಾರು ಕೂಡ ಇದೆ. ಈ ಶಾಪ್‌ನ ವ್ಯಕ್ತಿ 40 ವರ್ಷಗಳಿಂದ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಮನೆಯಲ್ಲಿ ವಿಶ್ರಾಂತಿ ಪಡೆಯಬಹುದಿತ್ತು. ಆದರೆ ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಪ್ರತಿದಿನ ಸ್ಟಾಲ್‌ನಲ್ಲಿ ತಮ್ಮ ತಂಡಕ್ಕೆ ಮಾರ್ಗದರ್ಶನ ನೀಡುತ್ತಾರೆ" ಎಂದು ಶ್ರೀನಿಧಿ ಹಂದೆ ಬರೆದಿದ್ದಾರೆ.
"ಕಷ್ಟಪಟ್ಟು ದುಡಿಯುವ ಸಣ್ಣ ವ್ಯಾಪಾರ ಮಾಲೀಕರು ಯಾವುದೇ ಆದಾಯ ತೆರಿಗೆ, ಜಿಎಸ್‌ಟಿಯನ್ನು ತಪ್ಪಿಸಲು ನಗದು ರೂಪದಲ್ಲಿ ತಮ್ಮ ವಹಿವಾಟುಗಳನ್ನು ಮಾಡುತ್ತಾರೆ. ಆದರೆ, ಸಂಬಳ ಪಡೆಯುವ ಜನರು ಸರಕಾರಕ್ಕೆ ತಮ್ಮ ವೇತನದಲ್ಲಿ ತೆರಿಗೆ ಪಾವತಿಸಿ ಉಳಿದ ಹಣದಲ್ಲಿ ಇಎಂಐನಲ್ಲಿ ಐಫೋನ್ ಖರೀದಿಸುತ್ತಾರೆ. ಆದರೆ, ಈ ರೀತಿ ನಗದು ಪಡೆದು ವ್ಯಾಪಾರ ನಡೆಸುವವರು ತಮ್ಮ ಸಂಪಾದನೆಯನ್ನು ಮರು ಹೂಡಿಕೆ ಮಾಡಿ ವ್ಯಾಪಾರವನ್ನು ಬೆಳೆಸುತ್ತಾರೆ. ತಮ್ಮ ಜೀವನದಲ್ಲಿ ಯಶಸ್ಸು ಪಡೆಯುತ್ತಾರೆ. ಆದರೆ, ನಮ್ಮಲ್ಲಿ ಹೆಚ್ಚಿನವರು ಉದ್ಯೋಗ ಪಡೆಯುವುದೇ ಯಶಸ್ಸು ಎಂದು ಭಾವಿಸುತ್ತಾರೆ" ಎಂದು ಬರೆದಿದ್ದಾರೆ.
ತೆರಿಗೆ ಚರ್ಚೆಗೆ ಕಾರಣವಾದ ವೈರಲ್ ವಿಡಿಯೋ
"ಫುಡ್ ವೆಂಡರ್‌ಗಳ ಗಳಿಕೆಯನ್ನು ಪರಿಶೀಲಿಸಿ ಅವರಿಗೂ ತೆರಿಗೆ ವಿಧಿಸಬೇಕು" ಎಂದು ಈ ವಿಡಿಯೋಗೆ ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. "ಅವರು ಒಂದು ಸೇವ್‌ಪುರಿಗೆ 80-100 ರೂಪಾಯಿ ಚಾರ್ಜ್ ಮಾಡುತ್ತಾರೆ. ಇಂತಹ ಬೇಲ್‌ಪುರಿ ಅಂಗಡಿಗಳಲ್ಲಿ ಜನಜಂಗುಳಿ ಇರುತ್ತದೆ. ಅವರ ಸಂಪಾದನೆ ಎಷ್ಟಿರಬಹುದು ಯೋಚಿಸಿ" ಎಂದು ಇನ್ನೊಬ್ಬರು ಹೇಳಿದ್ದಾರೆ. "ತೆರಿಗೆ ಇಲಾಖೆಯು ವೇತನ ಪಡೆಯುವವರು ಮತ್ತು ಸಂಘಟಿತ ಬಿಸ್ನೆಸ್‌ಗಳಿಗೆ ಮಾತ್ರ ತೆರಿಗೆ ವಿಧಿಸುತ್ತದೆ. ಈ ರೀತಿಯ ವ್ಯಕ್ತಿಗಳಿಗೂ ತೆರಿಗೆ ವಿಧಿಸಲು ದಾರಿ ಹುಡುಕಬೇಕು" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. "ತೆರಿಗೆ ಎನ್ನುವುದು ಇರುವುದು ಪ್ರಾಮಾಣಿಕ ಜನರಿಗೆ ಮಾತ್ರ. ವಿದೇಶಗಳಲ್ಲಿ ಪ್ರಜೆಗಳು ಹೇಗೆ ತೆರಿಗೆ ಪಾವತಿಸುತ್ತಾರೆ ಎಂದು ನಾವು ಅಧ್ಯಯನ ಮಾಡುತ್ತೇವೆ. ಆದರೆ, ತೆರಿಗೆ ಪಾವತಿಸದೆಯೂ ದುಬೈನಲ್ಲಿ ಸರಕಾರ ರಸ್ತೆ, ಸೇತುವೆ, ಮೂಲಸೌಕರ್ಯಗಳನ್ನು ಹೇಗೆ ನಿರ್ಮಿಸುತ್ತಿದೆ ಎಂದು ಯಾರೂ ಮಾತನಾಡುವುದಿಲ್ಲ. ನಿಜವಾದ ಅಮೃತಕಾಲ ಇಲ್ಲಿ ಇಲ್ಲ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹೀಗೆ, ಸಾಕಷ್ಟು ಜನರು ಈ ವಿಡಿಯೋದಲ್ಲಿ ಹೇಳಿರುವ ವಿಚಾರದ ಕುರಿತು ಚರ್ಚಿಸಿದ್ದಾರೆ. ಇದೇ ಸಮಯದಲ್ಲಿ ಸಾಕಷ್ಟು ಜನರು ಈ ಪೋಸ್ಟ್ ಅನ್ನು ಆದಾಯ ತೆರಿಗೆ ಇಲಾಖೆಯ ಸೋಷಿಯಲ್ ಮೀಡಿಯಾ ಖಾತೆಗಳಿಗೆ ಟ್ಯಾಗ್ ಮಾಡಿದ್ದಾರೆ.
ಬೀದಿಬದಿ ವ್ಯಾಪಾರಿಗಳ ಕಷ್ಟದ ಕಡೆಗೂ ಗಮನ ನೀಡಿ
"ಬೀದಿಬದಿಯ ವ್ಯಾಪಾರಿ ಲಕ್ಷಾಂತರ ರೂಪಾಯಿ ಗಳಿಸುವ ಈ ವಿಡಿಯೋ ನೋಡಿ. ಆದರೆ, ಯಾರೂ ಆ ರೀತಿಯ ವ್ಯಾಪಾರಿಗಳ ಕಷ್ಟಗಳನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ದಿನದಲ್ಲಿ 6-10 ಗಂಟೆ ಅವರು ನಿಂತು ಕೆಲಸ ಮಾಡುತ್ತಾರೆ. ಮರುದಿನದ ವ್ಯಾಪಾರಕ್ಕಾಗಿ ರಾತ್ರಿಯಿಡಿ ಮನೆಯಲ್ಲಿ ಇವರು ಮಾಡುವ ತಯಾರಿ ಕುರಿತು ಯಾರೂ ಮಾತನಾಡುವುದಿಲ್ಲ. ಮುಂಜಾನೆ ಮಾರ್ಕೆಟ್‌ಗೆ ಹೋಗಿ ತರಕಾರಿ ತರಲು ಕಷ್ಟಪಡುವ ಅವರ ಕಷ್ಟದ ಕುರಿತು ಯಾರೂ ಮಾತನಾಡುವುದಿಲ್ಲ. ಅವರ ಆದಾಯದ ಕುರಿತು ಮಾತ್ರ ಎಲ್ಲರೂ ಮಾತನಾಡುತ್ತಾರೆ. ಈ ರೀತಿ ಫುಡ್ ಸ್ಟಾಲ್‌ನಲ್ಲಿ ವ್ಯಾಪಾರ ಆರಂಭಿಸುವ ಮೊದಲು ಸಾಕಷ್ಟು ತಯಾರಿ ಬೇಕಿರುತ್ತದೆ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. "ಇವರಿಗೆ ವಾರದ ಎಲ್ಲಾ ದಿನ ವ್ಯಾಪಾರ ಇರುವುದಿಲ್ಲ. ವಾರದಲ್ಲಿ ಕೆಲವು ದಿನ ಮಾತ್ರ ರಶ್ ಇರುತ್ತದೆ" "ಈ ರೀತಿಯ ವ್ಯಾಪಾರಿಗಳಿಗೆ ಸ್ಥಳೀಯ ರೌಡಿಗಳಿಂದ, ಪೊಲೀಸರಿಂದ, ಮುನ್ಸಿಪಾಲಿಟಿಯಿಂದ ನಿರಂತರ ಕಿರುಕುಳ ಇರುತ್ತದೆ" ಎಂದೆಲ್ಲ ಸಾಕಷ್ಟು ಜನರು ಬೀದಿಬದಿ ವ್ಯಾಪಾರಿಗಳ ಪರವಾಗಿಯೂ ಕಾಮೆಂಟ್ ಮಾಡಿದ್ದಾರೆ.