110 ಕಿಮೀ ವೇಗಮಿತಿ ಇದ್ದರೂ ಕಂಪನಿಗಳ್ಯಾಕೆ 200- 300kmph ವೇಗದ ಕಾರುಗಳನ್ನು ನಿರ್ಮಿಸುತ್ತವೆ? ಶ್ರೀನಿಧಿ ಹಂದೆ ಬಹಿರಂಗಪಡಿಸಿದ್ರು ಕಠೋರ ಸತ್ಯ
ಕನ್ನಡ ಸುದ್ದಿ  /  ಜೀವನಶೈಲಿ  /  110 ಕಿಮೀ ವೇಗಮಿತಿ ಇದ್ದರೂ ಕಂಪನಿಗಳ್ಯಾಕೆ 200- 300kmph ವೇಗದ ಕಾರುಗಳನ್ನು ನಿರ್ಮಿಸುತ್ತವೆ? ಶ್ರೀನಿಧಿ ಹಂದೆ ಬಹಿರಂಗಪಡಿಸಿದ್ರು ಕಠೋರ ಸತ್ಯ

110 ಕಿಮೀ ವೇಗಮಿತಿ ಇದ್ದರೂ ಕಂಪನಿಗಳ್ಯಾಕೆ 200- 300kmph ವೇಗದ ಕಾರುಗಳನ್ನು ನಿರ್ಮಿಸುತ್ತವೆ? ಶ್ರೀನಿಧಿ ಹಂದೆ ಬಹಿರಂಗಪಡಿಸಿದ್ರು ಕಠೋರ ಸತ್ಯ

ಭಾರತದ ರಸ್ತೆಯಲ್ಲಿ ಕಾನೂನುಪ್ರಕಾರ ಗಂಟೆಗೆ 110 ಕಿ.ಮೀ. ವೇಗದಲ್ಲಿ ಹೋಗಲು ಅವಕಾಶ ಇಲ್ಲದೆ ಇದ್ದರೂ ವಾಹನ ತಯಾರಕರು ಏಕೆ ಅತ್ಯಧಿಕ ವೇಗದ ವಾಹನಗಳನ್ನು ಬಿಡುಗಡೆ ಮಾಡುತ್ತವೆ? ಇದರ ಹಿಂದೆ ಭಾರತದ ಆರ್ಥಿಕತೆಯ ಲೆಕ್ಕಾಚಾರ ಇದೆ ಎಂದು ಮಾರ್ಮಿಕವಾಗಿ ಶ್ರೀನಿಧಿ ಹಂದೆ ಹೇಳಿದ್ದಾರೆ.

ಭಾರತದಲ್ಲಿ ವಾಹನಗಳಿಗೆ ವೇಗಮಿತಿ- ಶ್ರೀನಿಧಿ ಹಂದೆ ವಿಡಿಯೋ
ಭಾರತದಲ್ಲಿ ವಾಹನಗಳಿಗೆ ವೇಗಮಿತಿ- ಶ್ರೀನಿಧಿ ಹಂದೆ ವಿಡಿಯೋ (Road Photo- wikipedia)

ಬೆಂಗಳೂರು: ಪ್ರಮುಖ ಐಟಿ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿರುವ ಉಡುಪಿ ಮೂಲದ ಟ್ರಾವೆಲ್‌ ಬ್ಲಾಗರ್‌ ಶ್ರೀನಿಧಿ ಹಂದೆ ಇತ್ತೀಚೆಗೆ ತೆರಿಗೆ ಉಳಿತಾಯದ ಕುರಿತು ಮಾಡಿರುವ ರೀಲ್ಸ್‌ ವೈರಲ್‌ ಆಗಿತ್ತು. ತನ್ನ ವಿವಿಧ ಆಟೋ ರಿವ್ಯೂಗಳಿಂದ ಗಮನ ಸೆಳೆದಿರುವ ಶ್ರೀನಿಧಿ ಬತ್ತಳಿಕೆಯಿಂದ ಇದೀಗ ಇನ್ನೊಂದು ವಿಡಿಯೋ ಹೊರಬಿದ್ದಿದೆ. "ಭಾರತದಲ್ಲಿ ರಸ್ತೆಯಲ್ಲಿ ಕಾನೂನು ಪ್ರಕಾರ ವಾಹನ ಸಂಚಾರಕ್ಕೆ ಗರಿಷ್ಠ ವೇಗಮಿತಿ 110 ಕಿಮಿ ಇದ್ದರೂ ಕಾರು ಕಂಪನಿಗಳು ಏಕೆ ಪ್ರತಿಗಂಟೆಗೆ 200 ಕಿ.ಮೀ., 300 ಕಿ.ಮೀ. ವೇಗದ ಕಾರುಗಳನ್ನು ಬಿಡುಗಡೆ ಮಾಡುತ್ತವೆ?" ಎಂಬ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರ ನೀಡಿದ್ದಾರೆ.

"ಸಾಮಾನ್ಯವಾಗಿ ದೇಶದ ಹೆಚ್ಚಿನ ರಸ್ತೆಗಳಲ್ಲಿ ಕಾನೂನು ಪ್ರಕಾರ ಗರಿಷ್ಠ 110 ಕಿ.ಮೀ. ವೇಗದಲ್ಲಿ ಹೋಗಬಹುದು. ಹೀಗಿದ್ದರೂ ಕಾರು ತಯಾರಿಕಾ ಕಂಪನಿಗಳು 200-300 ಕಿ.ಮೀ. ವೇಗದ ಕಾರುಗಳನ್ನು ಏಕೆ ಬಿಡುಗಡೆ ಮಾಡುತ್ತವೆ? ವಾಹನ ತಯಾರಕರು ನಿರ್ಮಾಣ ಹಂತದಲ್ಲಿಯೇ ವಾಹನಗಳಿಗೆ ಗರಿಷ್ಠ 110 ಕಿ.ಮೀ. ವೇಗ ಮಿತಿ ಹಾಕಬಹುದಲ್ವ? ಯಾಕೆ ಹೀಗೆ ಮಾಡುತ್ತಿಲ್ಲ" ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ. "ಕಾರು ಕಂಪನಿಗಳಿಗೆ 110 ಕಿ.ಮೀ.ಗಿಂತ ಹೆಚ್ಚು ವೇಗದ ವಾಹನಗಳನ್ನು ನಿರ್ಮಾಣ ಮಾಡದಂತೆ ಸರಕಾರ ಸೂಚಿಸಬಹುದಲ್ವೆ? ಆದ್ರೆ, ಯಾಕೆ ಈ ಕುರಿತು ಯಾರೂ ಕಾಳಜಿ ವಹಿಸುತ್ತಿಲ್ಲ? ಇದರ ಹಿಂದೆ ದೇಶದ ಆರ್ಥಿಕ ವ್ಯವಸ್ಥೆ ಇದೆ. ಎಕಾನಮಿ ಕಾರಣದಿಂದ ಯಾರೂ ಹೀಗೆ ಮಾಡುತ್ತಿಲ್ಲ" ಎಂದು ಹೇಳಿದ್ದಾರೆ.

ನೀವೊಂದು ಕಾರು ಖರೀದಿಸುವಾಗ ಅರ್ಧದಷ್ಟು ಹಣ ಸರಕಾರಕ್ಕೆ ಹೋಗುತ್ತದೆ. ಎಕ್ಸ್‌ ಶೋರೂಂ ದರದಲ್ಲಿ ಶೇಕಡ 28ರಷ್ಟು ಜಿಎಸ್‌ಟಿ ((ಸಿಕೆಡಿ, ಸಿಬಿಯು, ಹೈಬ್ರಿಡ್‌ ಇತ್ಯಾದಿ ಇತರೆ ಪಾವತಿಯೂ ಇದೆ) ಪಾವತಿಸುತ್ತೇವೆ. ಇದೇ ಸಮಯದಲ್ಲಿ ನೀವು ಕಾರು ಖರೀದಿಸಿ ಅತ್ಯಧಿಕ ವೇಗದಲ್ಲಿ ಹೋದರೆ ಸರಕಾರಕ್ಕೆ ಲಾಭವಾಗುತ್ತದೆ. ವಾಹನ ವೇಗವಾಗಿ ಹೋದ್ರೆ ಸ್ಕಿಡ್‌ ಆಗಬಹುದು, ಅಪಘಾತವಾಗಬಹುದು. ಇದರಿಂದ ಆಸ್ಪತ್ರೆಗಳಿಗೆ, ಗ್ಯಾರೇಜ್‌ಗಳಿಗೆ, ವಿಮಾ ಕಂಪನಿಗಳಿಗೆ ಬಿಸ್ನೆಸ್‌ ಆಗುತ್ತದೆ. ಈ ಮೂಲಕ ದೇಶದ ಆರ್ಥಿಕ ವ್ಯವಸ್ಥೆ ಸುಸ್ಥಿತಿಯಲ್ಲಿ ಇರುತ್ತದೆ. ಎಲ್ಲಾದರೂ ಎಲ್ಲಾ ಕಾರು ಕಂಪನಿಗಳು 110 ಕಿ.ಮೀ. ವೇಗಮಿತಿ ಹಾಕಿದರೆ, ಆಲ್ಟೋ ಮತ್ತು ಲಂಬೋರ್ಗಿನಿಗೆ ಒಂದೇ ರೀತಿಯ ಸ್ಪೀಡ್‌ ಲಿಮಿಟ್‌ ಹಾಕಿದರೆ ಅರ್ಥವ್ಯವಸ್ಥೆ ಬಿದ್ದುಹೋಗುತ್ತದೆ. ಈ ರೀತಿ ವೇಗಮಿತಿ ಹಾಕಿದರೆ ಯಾರಿಗೂ ದುಬಾರಿ ಕಾರುಗಳನ್ನು ಖರೀದಿಸಲು ಆಸಕ್ತಿ ಇರುವುದಿಲ್ಲ. ಟ್ರಾಫಿಕ್‌ ಪೊಲೀಸರಿಗೂ ಫೈನ್‌ ಹಾಕಲು ಅವಕಾಶ ಇರುವುದಿಲ್ಲ. ಇದೇ ಕಾರಣಕ್ಕೆ ಸರಕಾರ ವಾಹನ ತಯಾರಿಸುವ ಹಂತದಲ್ಲಿಯೇ ವೇಗಮಿತಿ ಹಾಕಲು ತಿಳಿಸುವುದಿಲ್ಲ" ಎಂದು ಶ್ರೀನಿಧಿ ಹಂದೆ ಮಾರ್ಮಿಕವಾಗಿ ಹೇಳಿದ್ದಾರೆ.

ಈ ವಿಡಿಯೋಗೆ ಸಾಕಷ್ಟು ಕಾಮೆಂಟ್‌ ಬಂದಿವೆ. ಕೆಲವರು ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇಯ ಕಥೆಯನ್ನೂ ಹೇಳಿದ್ದಾರೆ. "ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಈಗ 100 ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ಹೋದರೆ ಎಐ ಕ್ಯಾಮೆರಾಗಳು ಕ್ಯಾಪ್ಚರ್‌ ಮಾಡುತ್ತವೆ, ದಂಡ ಬೀಳುತ್ತದೆ. ಇಲ್ಲಿ ಈಗಾಗಲೇ ಆರ್ಥಿಕತೆ ಕುಸಿದುಬಿದ್ದಿದೆ" ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. "ಹೈದರಾಬಾದ್‌ ಏರ್‌ಪೋರ್ಟ್‌ ರಸ್ತೆಯಲ್ಲಿ ಗಂಟೆಗೆ ಕಾನೂನುಪ್ರಕಾರವಾಗಿ ಗರಿಷ್ಠ 120 ಕಿ.ಮೀ. ವೇಗದಲ್ಲಿ ಹೋಗಬಹುದು" ಎಂದು ಇನ್ನೊಬ್ಬರು ಹೇಳಿದ್ದಾರೆ.

ಭಾರತದಲ್ಲಿ ವಾಹನಗಳಿಗೆ ವೇಗಮಿತಿ ಎಷ್ಟು?

ಮೋಟಾರ್‌ ವಾಹನಗಳು (8+1 ಸೀಟು ವಾಹನಗಳು): ಎಕ್ಸ್‌ಪ್ರೆಸ್‌ವೇಯಲ್ಲಿ ಗಂಟೆಗೆ ಗರಿಷ್ಠ 120 ಕಿ.ಮೀ. ವೇಗಲದ್ಲಿ, 4 ಲೇನ್‌ ಮತ್ತು ಅದಕ್ಕಿಂತ ಹೆಚ್ಚು ಲೇನ್‌ ಇರುವಲ್ಲಿ 100 ಕಿ.ಮೀ., ಮುನ್ಸಿಪಲ್‌ ವ್ಯಾಪ್ತಿಯಲ್ಲಿ 70 ಕಿ.ಮೀ. ಇತರೆ ರಸ್ತೆಯಲ್ಲಿ ಗಂಟೆಗೆ ಗರಿಷ್ಠ 70 ಕಿ.ಮೀ. ವೇಗದಲ್ಲಿ ಸಾಗಲು ಅವಕಾಶವಿದೆ.

ಮೋಟಾರ್‌ ವಾಹನಗಳು (9+1 ಸೀಟಿಗಿಂತ ಹೆಚ್ಚು ಸೀಟುಗಳನ್ನು ವಾಹನಗಳು): ಎಕ್ಸ್‌ಪ್ರೆಸ್‌ವೇಯಲ್ಲಿ ಗಂಟೆಗೆ ಗರಿಷ್ಠ 100 ಕಿ.ಮೀ. ವೇಗಲದ್ಲಿ, 4 ಲೇನ್‌ ಮತ್ತು ಅದಕ್ಕಿಂತ ಹೆಚ್ಚು ಲೇನ್‌ ಇರುವಲ್ಲಿ 90 ಕಿ.ಮೀ., ಮುನ್ಸಿಪಲ್‌ ವ್ಯಾಪ್ತಿಯಲ್ಲಿ 60 ಕಿ.ಮೀ. ಇತರೆ ರಸ್ತೆಯಲ್ಲಿ ಗಂಟೆಗೆ ಗರಿಷ್ಠ 60 ಕಿ.ಮೀ. ವೇಗದಲ್ಲಿ ಸಾಗಲು ಅವಕಾಶವಿದೆ.

ಸರಕು ಸಾಗಾಣೆ ವಾಹನಗಳು (ಎನ್‌ ಕೆಟಗರಿ): ಎಕ್ಸ್‌ಪ್ರೆಸ್‌ವೇಯಲ್ಲಿ ಗಂಟೆಗೆ ಗರಿಷ್ಠ 80 ಕಿ.ಮೀ. ವೇಗಲದ್ಲಿ, 4 ಲೇನ್‌ ಮತ್ತು ಅದಕ್ಕಿಂತ ಹೆಚ್ಚು ಲೇನ್‌ ಇರುವಲ್ಲಿ 80 ಕಿ.ಮೀ., ಮುನ್ಸಿಪಲ್‌ ವ್ಯಾಪ್ತಿಯಲ್ಲಿ 60 ಕಿ.ಮೀ. ಇತರೆ ರಸ್ತೆಯಲ್ಲಿ ಗಂಟೆಗೆ ಗರಿಷ್ಠ 60 ಕಿ.ಮೀ. ವೇಗದಲ್ಲಿ ಸಾಗಲು ಅವಕಾಶವಿದೆ.

ದ್ವಿಚಕ್ರವಾಹನಗಳು: ಎಕ್ಸ್‌ಪ್ರೆಸ್‌ವೇಯಲ್ಲಿ ಗಂಟೆಗೆ ಗರಿಷ್ಠ 80 ಕಿ.ಮೀ. ವೇಗದಲ್ಲಿ , 4 ಲೇನ್‌ ಮತ್ತು ಅದಕ್ಕಿಂತ ಹೆಚ್ಚು ಲೇನ್‌ ಇರುವಲ್ಲಿ 80 ಕಿ.ಮೀ., ಮುನ್ಸಿಪಲ್‌ ವ್ಯಾಪ್ತಿಯಲ್ಲಿ 60 ಕಿ.ಮೀ. ಇತರೆ ರಸ್ತೆಯಲ್ಲಿ ಗಂಟೆಗೆ ಗರಿಷ್ಠ 60 ಕಿ.ಮೀ. ವೇಗದಲ್ಲಿ ಸಾಗಲು ಅವಕಾಶವಿದೆ.

ಕ್ವಾಡ್ರಿಸೈಕಲ್‌ಗಳು: 4 ಲೇನ್‌ ಮತ್ತು ಅದಕ್ಕಿಂತ ಹೆಚ್ಚು ಲೇನ್‌ ಇರುವಲ್ಲಿ 60 ಕಿ.ಮೀ., ಮುನ್ಸಿಪಲ್‌ ವ್ಯಾಪ್ತಿಯಲ್ಲಿ 50 ಕಿ.ಮೀ. ಇತರೆ ರಸ್ತೆಯಲ್ಲಿ ಗಂಟೆಗೆ ಗರಿಷ್ಠ 50 ಕಿ.ಮೀ. ವೇಗದಲ್ಲಿ ಸಾಗಲು ಅವಕಾಶವಿದೆ.

ಮೂರು ಚಕ್ರದ ವಾಹನಗಳು: 4 ಲೇನ್‌ ಮತ್ತು ಅದಕ್ಕಿಂತ ಹೆಚ್ಚು ಲೇನ್‌ ಇರುವಲ್ಲಿ 50 ಕಿ.ಮೀ., ಮುನ್ಸಿಪಲ್‌ ವ್ಯಾಪ್ತಿಯಲ್ಲಿ 50 ಕಿ.ಮೀ. ಇತರೆ ರಸ್ತೆಯಲ್ಲಿ ಗಂಟೆಗೆ ಗರಿಷ್ಠ 50 ಕಿ.ಮೀ. ವೇಗದಲ್ಲಿ ಸಾಗಲು ಅವಕಾಶವಿದೆ.

ಗಮನಿಸಿ: ಕೆಲವು ಬಗೆಯ ವಾಹನಗಳಿಗೆ ಎಕ್ಸ್‌ಪ್ರೆಸ್‌ವೇಗೆ ಪ್ರವೇಶಿಸಲು ಅವಕಾಶ ನೀಡಲಾಗುವುದಿಲ್ಲ. ಇದು ಸರಕಾರವು ರಾಷ್ಟ್ರೀಯ ಹೆದ್ದಾರಿಯ ವೇಗಮಿತಿ ಕುರಿತು ಈ ಹಿಂದೆ ಹೊರಡಿಸಿದ ಅಧಿಸೂಚನೆ ಆಧರಿಸಿದ ಮಾಹಿತಿಯಾಗಿದೆ.

Whats_app_banner