ತೆರಿಗೆದಾರರನ್ನು ಕೂರಿಸಿಕೊಂಡು ರಾಜ್ಯದ ಕಥೆ-ವ್ಯಥೆ ಸಾರುವ ಬಿಎಂಟಿಸಿ ವಜ್ರ ಬಸ್‌ಗಳು! ರಾಜೀವ ಹೆಗಡೆ ಬರಹ
ಕನ್ನಡ ಸುದ್ದಿ  /  ಕರ್ನಾಟಕ  /  ತೆರಿಗೆದಾರರನ್ನು ಕೂರಿಸಿಕೊಂಡು ರಾಜ್ಯದ ಕಥೆ-ವ್ಯಥೆ ಸಾರುವ ಬಿಎಂಟಿಸಿ ವಜ್ರ ಬಸ್‌ಗಳು! ರಾಜೀವ ಹೆಗಡೆ ಬರಹ

ತೆರಿಗೆದಾರರನ್ನು ಕೂರಿಸಿಕೊಂಡು ರಾಜ್ಯದ ಕಥೆ-ವ್ಯಥೆ ಸಾರುವ ಬಿಎಂಟಿಸಿ ವಜ್ರ ಬಸ್‌ಗಳು! ರಾಜೀವ ಹೆಗಡೆ ಬರಹ

BMTC Vajra Bus: "ಹೊರಗಿನಿಂದ ನೋಡುವರಿಗೆ, ́ಇವರು ಏಸಿ ಬಸ್‌ನಲ್ಲಿ ಆರಾಮಾಗಿ ಹೋಗುತ್ತಿದ್ದಾರೆʼ ಎನಿಸುತ್ತದೆ. ಬಸ್‌ನಲ್ಲಿದ್ದವರು ಕೆಲವೊಮ್ಮೆ ಉಸಿರುಗಟ್ಟುವ ವಾತಾವರಣದಲ್ಲಿದ್ದರೆ, ಇನ್ನು ಕೆಲವು ಬಾರಿ ಪ್ಯಾಂಟ್‌ ಒದ್ದೆ ಮಾಡಿಕೊಂಡು ಒದ್ದಾಡುತ್ತಿರುತ್ತಾರೆ" ಎಂದು ಬಿಎಂಟಿಸಿ ವಜ್ರ ಬಸ್‌ಗಳ ವಸ್ತುಸ್ಥಿತಿಯನ್ನು ರಾಜೀವ ಹೆಗಡೆ ಇಲ್ಲಿ ತೆರೆದಿಟ್ಟಿದ್ದಾರೆ.

ವಾಯು ವಜ್ರ ಬಸ್‌ನಲ್ಲಿ ಏರ್‌ಕಂಡಿಷನ್‌ ವ್ಯವಸ್ಥೆಯಲ್ಲಿ ಸೋರಿಕೆ
ವಾಯು ವಜ್ರ ಬಸ್‌ನಲ್ಲಿ ಏರ್‌ಕಂಡಿಷನ್‌ ವ್ಯವಸ್ಥೆಯಲ್ಲಿ ಸೋರಿಕೆ

BMTC Vajra Bus: ಏಷ್ಯಾದ ಪ್ರತಿಷ್ಠಿತ ಸಾರ್ವಜನಿಕ ಸಾರಿಗೆಗಳಲ್ಲಿ ಬಿಎಂಟಿಸಿ ಕೂಡ ಒಂದು. ದಶಕಗಳಿಂದ ಭಾರತದ ಮಟ್ಟಿಗೆ ಅತ್ಯಂತ ಪ್ರತಿಷ್ಠಿತ ಸರ್ಕಾರಿ ಸಂಸ್ಥೆಯಾಗಿದೆ. ಆದರೆ ದಿನಕಳೆದಂತೆ ಬಿಎಂಟಿಸಿ ಮಾಳಿಗೆ ಸೋರತೊಡಗಿದೆ, ವ್ಯವಸ್ಥೆ ಸೊರಗುತ್ತಿದೆ. ಕಾಕತಾಳೀಯ ಎನ್ನುವಂತೆ ಗ್ಯಾರಂಟಿ ಯೋಜನೆಗಳು ಬಿಎಂಟಿಸಿಯನ್ನು ಇನ್ನಷ್ಟು ಉಸಿರುಗಟ್ಟಿಸುತ್ತಿದೆ. ಬೆಂಗಳೂರಿಗೆ ಬಂದ ಆರಂಭದ ಆರು ವರ್ಷಗಳ ಕಾಲ ನಾನು ಕಾಯಂ ಬಿಎಂಟಿಸಿ ಬಳಸುತ್ತಿದ್ದೆ. ಅದಾದ ಬಳಿಕ ಇನ್ನೇಳು ವರ್ಷಗಳ ಕಾಲ ಬಿಎಂಟಿಸಿ ಬಸ್‌ ಪ್ರಯಾಣ ಅಪರೂಪವಾಗಿತ್ತು. ಈಗ ಕೆಲ ತಿಂಗಳಿಂದ ಪ್ರತಿದಿನ ನಾನು ವೋಲ್ವೋ ವಜ್ರ ಬಸ್‌ ಬಳಸುತ್ತಿದ್ದೇನೆ. ಸಾಕಷ್ಟು ದಿನಗಳಿಂದ ಆ ಬಸ್‌ನಲ್ಲಿನ ಅವ್ಯವಸ್ಥೆ ನೋಡಿ ಸುಸ್ತಾಗಿತ್ತು. ಇವತ್ತು ಅಸಹನೀಯ ಎನ್ನುವ ಮಟ್ಟಿಗೆ ಆಗಿದ್ದರಿಂದ ಬರೆಯುತ್ತಿದ್ದೇನೆ.

ನಾವು ಲಕ್ಷಗಟ್ಟಲೇ ರಸ್ತೆ ತೆರಿಗೆಯ ಜತೆಗೆ ನೂರಾರು ರೂಪಾಯಿ ಟೋಲ್‌ ಶುಲ್ಕ ಕಟ್ಟಿ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿ ಹೋಗುತ್ತೇವೆ. ಆದರೆ ನಮ್ಮನ್ನು ಸ್ವಾಗತಿಸುವುದು ಗಂಟೆಗಟ್ಟಲೇ ಕಾಯಿಸುವ ಡೈವರ್ಷನ್‌ಗಳು. ಅದೇ ರೀತಿ ಸಾಮಾನ್ಯ ಬಸ್‌ನ ದುಪ್ಪಟ್ಟು ಹಣ ನೀಡಿ ವೋಲ್ವೋ ವಜ್ರದಲ್ಲಿ ಹೋಗೋಣವೆಂದು ಕೂತಾಗ ನಮ್ಮನ್ನು ಏಸಿ ಕೆಟ್ಟು ಹೋಗಿರುವ ಅಥವಾ ಆಗಾಗ ಕೆಲಸ ಮಾಡುವ ಬಸ್‌ಗಳು ಸ್ವಾಗತಿಸುತ್ತವೆ.

ಈ ಡೈವರ್ಷನ್‌ಗಳನ್ನು ದಾಟಿಕೊಂಡು ಇನ್ನೇನು ಎಕ್ಸಲರೇಟರ್‌ ಮೇಲೆ ಕಾಲಿಡಬೇಕು ಎನ್ನುವಷ್ಟರಲ್ಲಿ ದೊಡ್ಡ, ದೊಡ್ಡ ಹೊಂಡಗಳು ಬರಮಾಡಿಕೊಂಡು, ಒಮ್ಮೆಲೆ ಶಾಕ್‌ ಕೊಡುತ್ತವೆ. ಇಲ್ಲಿಯೂ ಕೂಡ ಇನ್ನೇನು ನಿದ್ದೆಗೆ ಜಾರಬೇಕು ಎನ್ನುವಷ್ಟರಲ್ಲಿ ತಲೆಯ ಮೇಲೆ ಗಾಳಿ ಬರುವ ಜಾಗದಿಂದ ನೀರು ನಿಮ್ಮ ತಲೆ ಮೇಲೆ ತೊಟ್ಟಿಕ್ಕಿ ನಿದ್ರಾಭಂಗ ಮಾಡುತ್ತದೆ.

ಈ ಹೆದ್ದಾರಿಯಲ್ಲಿ ಹೋಗುವಾಗ ನಿಮ್ಮ ಮುಂದೆ ಹತ್ತಾರು ಅವ್ಯವಸ್ಥೆಗಳು ಕಣ್ಣಿಗೆ ಬೀಳುತ್ತವೆ. ಅದನ್ನು ಸ್ಥಳೀಯ ಯಾವುದಾದರೂ ಅಧಿಕಾರಿಗಳ ಗಮನಕ್ಕೆ ತರೋಣ ಎಂದು ಯಾವಾಗಾದರೂ ಪ್ರಯತ್ನ ಮಾಡಿದರೆ, ತಮಗೇ ಸಂಬಂಧವೇ ಇಲ್ಲದಂತೆ ಓಡಾಡಿಕೊಂಡಿರುತ್ತಾರೆ. ಹಾಗೆಯೇ 100ಕ್ಕೆ 99 ಬಸ್‌ಗಳಲ್ಲಿ ಏಸಿ ಬಸ್‌ಗಳಲ್ಲಿಯೂ ಕೂಡ ಗಾಳಿ ಹೊರಕ್ಕೆ ಬರುವ ವೇಗವನ್ನು ನಿಯಂತ್ರಿಸುವ ಕಂಟ್ರೋಲರ್‌ ಕಿತ್ತುಹೋಗಿ, ಜೋತಾಡಿಕೊಂಡಿರುತ್ತದೆ. ಅಧಿಕಾರಿಗಳ ರೀತಿ ಇಲ್ಲಿಯೂ ಏಸಿಗೆ ಕಂಟ್ರೋಲ್‌ ಇಲ್ಲ.

ನಮ್ಮ ಗೋಳನ್ನು ಕಿವಿಗೆ ಹಾಕಿಕೊಳ್ಳದ ಬೇಜವಾಬ್ದಾರಿ ಅಧಿಕಾರಿಗಳಿಗೆ ಬೈದುಕೊಳ್ಳುತ್ತ ಮನೆಯತ್ತ ಹೊರಟಾಗ, ಅದೇ ಕಚೇರಿಯಲ್ಲಿ ʼಜನರ ಕೆಲಸ ದೇವರ ಕೆಲಸʼ ಎನ್ನುವ ಬರಹದ ಅಡಿಗೆ ಇರುವ ಕಡತಗಳಿಗೆ ಧೂಳು ಹಿಡಿದಿರುವುದು ಕಾಣಿಸುತ್ತದೆ. ಹಾಗೆಯೇ ಈ ಬಸ್‌ನಲ್ಲಿಯೂ ಪ್ರತಿ ಸೀಟು, ಗ್ಲಾಸ್‌ಗಳ ಮೇಲೆ ಬೇಕಾದಷ್ಟು ಧೂಳುಗಳಿರುತ್ತವೆ.

ಒಟ್ಟಾರೆಯಾಗಿ ಹೊರಗಿನಿಂದ ನೋಡುವರಿಗೆ, ́ಇವರು ಏಸಿ ಬಸ್‌ನಲ್ಲಿ ಆರಾಮಾಗಿ, ತಂಪಾಗಿ, ಸೊಂಪಾಗಿ ಹೋಗುತ್ತಿದ್ದಾರೆʼ ಎನಿಸುತ್ತದೆ. ಆದರೆ ಬಸ್‌ನಲ್ಲಿದ್ದವನು ಕೆಲವೊಮ್ಮೆ ಏಸಿಯಿಲ್ಲದೇ ಉಸಿರುಗಟ್ಟುವ ವಾತಾವರಣದಲ್ಲಿದ್ದರೆ, ಇನ್ನು ಕೆಲವು ಬಾರಿ ಪ್ಯಾಂಟ್‌ ಒದ್ದೆ ಮಾಡಿಕೊಂಡು ಒದ್ದಾಡುತ್ತಿರುತ್ತಾರೆ. ಆಫೀಸ್‌ಗೆ ಹೋಗುವಾಗ ಧರಿಸಿದ ಶುಭ್ರ ಬಟ್ಟೆ ಎಲ್ಲಿ ಹೊಲಸಾಗುತ್ತದೆಯೋ ಎಂದು ಮನಸ್ಸಿನೊಳಗೆ ಆತಂಕದಲ್ಲಿರುತ್ತಾರೆ. ಇಷ್ಟಾಗಿಯೂ ದುಪ್ಪಟ್ಟು ಹಣ ತೆಗೆದುಕೊಂಡು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಮನದೊಳಗೆ ಕುದಿಯುತ್ತಿರುತ್ತಾರೆ. ತೆರಿಗೆದಾರರ ಕಥೆ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ನಮ್ಮಿಂದ ತೆರಿಗೆ ಕಟ್ಟಿಸಿಕೊಂಡು ಯಾವುದೇ ಅಗತ್ಯ ಮೂಲಸೌಕರ್ಯ, ಒಳ್ಳೆಯ ಶಾಲೆ, ಆಸ್ಪತ್ರೆಗಳನ್ನು ಸರ್ಕಾರ ನೀಡುವುದಿಲ್ಲ. ಟಿಕೆಟ್‌ ಕೊಡದಿದ್ದರೆ ಬಸ್‌ ಹತ್ತಿಸಿಕೊಳ್ಳುವುದಿಲ್ಲ, ತೆರಿಗೆ ಕಟ್ಟದಿದ್ದರೂ ಸುಮ್ಮನೇ ಬಿಡುವುದಿಲ್ಲ. ಆದರೆ ಬಸ್‌ ಇಳಿಯುವಾಗ ಹಾಗೂ ವರ್ಷದ ತುದಿಗೆ ಉಸಿರುಗಟ್ಟುವ ಸ್ಥಿತಿ ಮಾತ್ರ ನಮಗೆ ತಪ್ಪುವುದಿಲ್ಲ.

ಅಂದ್ಹಾಗೆ ಬಸ್‌ನಲ್ಲಿ ಆಗಿದ್ದಿಷ್ಟು....

ಕೆಲ ದಿನಗಳ ಹಿಂದೆ ಬೆಳಗ್ಗೆ 9.30ಕ್ಕೆ ಬನಶಂಕರಿ ಬಸ್‌ ನಿಲ್ದಾಣದ ಮುಂದೆ ವಜ್ರ ಬಸ್‌ ಏರಿ ಎಂದಿನಂತೆ ಹೋಗಿ ಕುಳಿತೆ. ಕೆಲ ಸೆಕೆಂಡ್‌ ಬಿಟ್ಟು ನೋಡಿದಾಗ ನನ್ನ ಪ್ಯಾಂಟ್‌ನ ಹಿಂಬದಿ ರಾಡಿಯಾಗಿತ್ತು. ಬಿಎಂಟಿಸಿ ಕಾರಣದಿಂದ ಅದೇ ಹೊಲಸಾದ ಪ್ಯಾಂಟ್‌ ಹಾಕಿಕೊಂಡು ಅಕ್ಷರಶಃ ʼತಿ...ಕ ಮುಚ್ಚಿಕೊಂಡುʼ ಆಫೀಸ್‌ಗೆ ಹೋಗುವಂತಾಯಿತು. ಅದಾದ ಬಳಿಕ ಸಾಕಷ್ಟು ಬಾರಿ ಏಸಿ ಆನ್‌ ಮಾಡದೇ ಗಲಾಟೆ ಮಾಡಿದ ಬಳಿಕ ಹಾಕುವುದು, ಕೆಲವೆಡೆ ಏಸಿ ಕೆಲಸ ಮಾಡದಿರುವುದು ಸಾಮಾನ್ಯವಾಗಿತ್ತು. ಇಂದು ನಾನೇರಿದ ಬಸ್‌ ಎಲ್ಲ ಅವ್ಯವಸ್ಥೆಯನ್ನು ತನ್ನೊಡಲಲ್ಲಿ ತುಂಬಿಕೊಂಡೇ ಚಲಿಸುತ್ತಿತ್ತು. ಬಲ ಬದಿಯ ಎಸಿ ಕೆಲಸವನ್ನೇ ಮಾಡುತ್ತಿರಲಿಲ್ಲ. ಬಲಬದಿಯ ಏಸಿಯಲ್ಲಿ ಎರಡು ಸೀಟುಗಳ ಮೇಲೆ ಏಸಿಯ ನೀರುಗಳು ಬಿದ್ದು ಒದ್ದೆಯಾಗಿದ್ದವು. ಗ್ಲಾಸ್‌ಗಳ ಮೇಲೆ ಒರಗಿ ನಿದ್ದೆ ಮಾಡೋಣವೆಂದರೆ ತಲೆ ಅಥವಾ ಶರ್ಟ್‌ ಹೊಲಸಾಗುವಷ್ಟು ಧೂಳುಗಳಿದ್ದವು.

ಸಂಚಾರ ದಟ್ಟಣೆಗೆ ಇದೇ ಕಾರಣ

ನಾನು ಪ್ರತಿದಿನ ಕಚೇರಿಗೆ ಕಾರು ತೆಗೆದುಕೊಂಡು ಹೋದರೆ ಸರಿಸುಮಾರು 300 ರೂಪಾಯಿ ಬೇಕು. ಅದೇ ಬಸ್‌ ಹಾಗೂ ಮೆಟ್ರೋದಲ್ಲಿ ಓಡಾಡಿದರೆ 100 ರೂ.ನಲ್ಲಿ ಮುಗಿಯುತ್ತದೆ. ಹಾಗೆಯೇ ಕಾರು ಚಲಾಯಿಸುವ ಟೆನ್ಶನ್‌ ಹಾಗೂ ಅದರಿಂದ ಬರುವ ಕೋಪ, ತಾಪಗಳು ಕಡಿಮೆಯಾಗುತ್ತವೆ. ಆದರೆ ನನ್ನಂತೆಯೇ ಪ್ರತಿದಿನ ಬೆಂಗಳೂರಿನಲ್ಲಿ ಕಚೇರಿಗೆ ಹೋಗುವ ಲಕ್ಷಾಂತರ ಜನರಿದ್ದಾರೆ. ಕೆಲಸದ ಅವಧಿಯಲ್ಲಿ ಪ್ರತಿದಿನ ಹತ್ತಾರು ಮೀಟಿಂಗ್‌ ಹಾಜರಾಗಬೇಕಾಗುತ್ತದೆ. ಈ ಸಂದರ್ಭದಲ್ಲಿ ಅಚ್ಚುಕಟ್ಟಾಗಿರಬೇಕು ಎಂದು ಕಾರ್ಪೊರೇಟ್‌ ಕಂಪೆನಿಗಳು ಬಯಸುತ್ತವೆ. ಆದರೆ ಇಂತಹ ಅವ್ಯವಸ್ಥೆಯಿಂದ ಅದು ಸಾಧ್ಯವಾಗುವುದು ಸುಲಭವಿಲ್ಲ. ಐಷಾರಾಮಿ ವ್ಯವಸ್ಥೆಗೆ ತಕ್ಕಂತೆ ಹಣ ಕೊಡಲು ಬೆಂಗಳೂರಿನಲ್ಲಿ ಲಕ್ಷಾಂತರ ಜನ ತಯಾರಿದ್ದಾರೆ. ಯಾರಿಗೂ ಕಾರಿನಲ್ಲಿ ಹೆಚ್ಚು ದುಡ್ಡು ಖರ್ಚು ಮಾಡಿಕೊಂಡು ಹೋಗಿ ಶೋಕಿ ಮಾಡುವ ಅನಿವಾರ್ಯತೆ ಇರುವುದಿಲ್ಲ. ಆದರೆ ಹಣಕ್ಕೆ ತಕ್ಕಂತೆ ಸೇವೆಗಳನ್ನು ನೀಡದಿದ್ದರೆ ಸಂಚಾರ ದಟ್ಟಣೆಯನ್ನು ಯಾವ ಸುರಂಗ ಮಾರ್ಗ, ಫ್ಲೈ ಓವರ್‌ನಿಂದಲೂ ಸರಿಪಡಿಲಾಗದು. ಇವೆಲ್ಲ ಕೇವಲ ʼಬ್ರಾಂಡ್‌ ಬೆಂಗಳೂರುʼ ಸಚಿವರ ಜೇಬು ತುಂಬಿಸುವ ಕಾರ್ಯಕ್ರಮಗಳಾಗಿ ಉಳಿಯಲಿವೆ.

ಮೇಲ್ನೋಟಕ್ಕೆ ಇವೆಲ್ಲ ಸಣ್ಣ ವಿಚಾರಗಳು ಎನಿಸಬಹುದು. ಆದರೆ ಇಂತಹ ಕಾರಣದಿಂದಲೇ ಬಿಎಂಟಿಸಿಯು ಪ್ರತಿದಿನ ಸಾವಿರಾರು ಪ್ರಯಾಣಿಕರನ್ನು ಕಳೆದುಕೊಂಡಿರುತ್ತದೆ. ಇದು ನೇರವಾಗಿ ಸಂಚಾರ ದಟ್ಟಣೆಗೆ ಕಾರಣವಾಗಿರುತ್ತದೆ.

ಅಂದ್ಹಾಗೆ ಸಾಕಷ್ಟು ವೋಲ್ವೋ ಬಸ್‌ಗಳ ಡಿಸ್‌ಪ್ಲೇ ಪ್ಯಾನಲ್‌ನಲ್ಲಿ ʼಬ್ರೇಕ್‌ ಸಿಸ್ಟಮ್‌ನ್ನು ಮುಂದಿನ ನಿಲ್ದಾಣದಲ್ಲಿ ಪರಿಶೀಲಿಸಿʼ ಎನ್ನುವ ಸಂದೇ ಯಾವಾಗಲೂ ಇರುತ್ತದೆ. ಹಾಗಿದ್ದರೆ ವೋಲ್ವೋ ಬಸ್‌ಗಳನ್ನು ನಿಯಮಿತ ಸಮಯಕ್ಕೆ ಸರ್ವಿಸ್‌ ಮಾಡಿಸುತ್ತಿಲ್ಲವೇ ಎನ್ನುವ ಸಂದೇಹ ಬರುತ್ತದೆ. ಈ ಬಗ್ಗೆ ಯಾವುದಾದರೂ ಮಾಧ್ಯಮಗಳು ಜನಪರವಾದ ಆಸಕ್ತಿ ಹೊಂದಿದ್ದರೆ ತನಿಖೆ ಮಾಡಬಹುದು.

ವಿಶೇಷ ಸೂಚನೆ: ದೇಶದ ಇತರ ರಾಜ್ಯಗಳಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇನ್ನು ಕೆಟ್ಟದಾಗಿದೆ ಎಂದು ಸಮರ್ಥನೆ ಕೊಡಲು ದಯವಿಟ್ಟು ಬರಬೇಡಿ. ರಾಯರ ಕುದುರೆ ಕತ್ತೆಯಾದಂತೆ ದಿನದಿಂದ ದಿನಕ್ಕೆ ಬಿಎಂಟಿಸಿ ಬಸ್‌ಗಳು ದಟ್ಟ ದಾರಿದ್ರ್ಯದತ್ತ ಸಾಗುತ್ತಿವೆ. ಬಸ್‌ಗಳನ್ನು ಸ್ವಚ್ಛವಾಗಿ ನಿರ್ವಹೆ ಮಾಡದಿರುವುದು ಒಂದೆಡೆಯಾದರೆ, ಬಹುತೇಕ ವೋಲ್ವೋ ಬಸ್‌ಗಳಿಗೆ ವಯಸ್ಸಾಗಿದೆ. ಈ ಬಗ್ಗೆ ಯಾರಾದರೂ ತುರ್ತಾಗಿ ಗಮನವಹಿಸುವ ಅಗತ್ಯವಿದೆ. ನಮ್ಮ ಬಿಎಂಟಿಸಿಯು ಎಂದಿಗೂ ಜನಪರವಾಗಿ, ಇನ್ನಷ್ಟು ಉತ್ತಮ ಸೇವೆ ಕೊಡಬೇಕು ಎನ್ನುವುದಷ್ಟೇ ಬೆಂಗಳೂರಿಗರ ಕನಸು.

ಕೊನೆಯದಾಗಿ: ಕಿತ್ತುಕೊಳ್ಳುವುದಕ್ಕೆ ತೋರುವ ಆಸಕ್ತಿಯನ್ನು, ಜನರಿಗೆ ಕೊಡುವ ಉತ್ತಮ ಸೇವೆಗಳತ್ತ ಕೂಡ ಗಮನವಹಿಸಿ. ಸರ್ಕಾರವಿಂದು ಯಾವುದನ್ನೂ ಪುಕ್ಕಟೇ ನೀಡುತ್ತಿಲ್ಲ ಗ್ಯಾರಂಟಿ ಯೋಜನೆ ಕಡ ಬೇರೆ ಜೇಬಿನಿಂದ ಕಿತ್ತುಕೊಂಡೇ ಕೊಡುತ್ತಿರುವ ಹಣವಾಗಿದೆ. ಆದರೆ ಕೊನೆಯ ಪಕ್ಷ, ನಮ್ಮಿಂದ ಹಣ ಪಡೆದು ಕೊಡುವ ಸೇವೆಗಾದರೂ ಸ್ವಲ್ಪ ನಿಯತ್ತು ತೋರಿಸಿ ಕೆಲಸ ಮಾಡಿ. ಆ ನಿಟ್ಟಿನಲ್ಲಿ ಸ್ವಚ್ಛತೆ ಹಾಗೂ ಉತ್ತಮ ಸೇವೆ ಕೊಡುವಲ್ಲಿ ಇವತ್ತಿನವರೆಗೆ ʼನಮ್ಮ ಮೆಟ್ರೋʼ ಒಳ್ಳೆಯ ಕೆಲಸ ಮಾಡುತ್ತಿದೆ.

- ಬರಹ: ರಾಜೀವ ಹೆಗಡೆ

Whats_app_banner