ಕೇಂದ್ರ ಬಜೆಟ್ 2024; ಮೋದಿನೋಮಿಕ್ಸ್ ಮೇಲೆ ಮೈತ್ರಿ ಪ್ರಭಾವ, ಮಿತ್ರರಾದ ಚಂದ್ರಬಾಬು, ನಿತೀಶ್ ಬೇಡಿಕೆ ಈಡೇರಿಸಬೇಕಾದ ಒತ್ತಡ ಪ್ರಧಾನಿ ಮೋದಿಗೆ,
Jul 23, 2024 07:30 AM IST
ಕೇಂದ್ರ ಬಜೆಟ್ 2024; ಮಿತ್ರರಾದ ಚಂದ್ರಬಾಬು, ನಿತೀಶ್ ಬೇಡಿಕೆ ಈಡೇರಿಸಬೇಕಾದ ಒತ್ತಡ ಪ್ರಧಾನಿ ಮೋದಿಗೆ ಎದುರಾಗಿದೆ. ಆಂಧ್ರ, ಬಿಹಾರಗಳ ಬೇಡಿಕೆಗಳ ವಿವರ ಹೀಗಿದೆ.
ಕೇಂದ್ರ ಬಜೆಟ್ 2024 25ರ ಮಂಡನೆ ಇಂದು ನಡೆಯಲಿದೆ. ಈ ಹಂತದಲ್ಲಿ ಮಿತ್ರರಾದ ಚಂದ್ರಬಾಬು, ನಿತೀಶ್ ಬೇಡಿಕೆ ಈಡೇರಿಸಬೇಕಾದ ಒತ್ತಡ ಪ್ರಧಾನಿ ಮೋದಿಗೆ ಎದುರಾಗಿದ್ದು, ಅದನ್ನು ಅವರು ಹೇಗೆ ನಿಭಾಯಿಸಿದ್ದಾರೆ ಎಂಬುದ ಬಜೆಟ್ ಮೂಲಕ ಬಹಿರಂಗವಾಗಲಿದೆ. ಅದಕ್ಕೂ ಮೊದಲು ಲಭ್ಯ ಮಾಹಿತಿ ಪ್ರಕಾರ, ಆಂಧ್ರ, ಬಿಹಾರಗಳ ಬೇಡಿಕೆಗಳ ವಿವರ ಹೀಗಿದೆ.
ನವದೆಹಲಿ: ವಿಕಸಿತ ಭಾರತ ಮತ್ತು ಅಮೃತ ಕಾಲದ ಪಥದಲ್ಲಿ ಭಾರತವನ್ನು ಮುನ್ನಡೆಸಲು ಸಜ್ಜಾಗಿರುವ ಬಿಜೆಪಿ ನಾಯಕ ನರೇಂದ್ರ ಮೋದಿ ಅವರಿಗೆ ಪ್ರಧಾನಿಯಾಗಿ ಈ ಬಾರಿ ಮೈತ್ರಿ ಸರ್ಕಾರ ನಡೆಸುವ ಯೋಗ. ಹೀಗಾಗಿ ಸವಾಲುಗಳು ಹೆಚ್ಚು. ಮೂರನೇ ಅವಧಿಯ ಸರ್ಕಾರ ಮೈತ್ರಿ ಸರ್ಕಾರವಾದ ಕಾರಣ ಮೋದಿನೋಮಿಕ್ಸ್ ಮೇಲೆ ಹೆಚ್ಚಿನ ರೀತಿಯಲ್ಲಿ ಮೈತ್ರಿ ಪ್ರಭಾವ ಬೀರಲಿದೆ. ಮಿತ್ರ ಪಕ್ಷಗಳ ಬೇಡಿಕೆಗೆ ಪ್ರಧಾನಿ ನರೇಂದ್ರ ಮೋದಿ ಮಣಿಯಬೇಕಾದ ಸನ್ನಿವೇಶಗಳು ಹೆಚ್ಚು.
ಎನ್‌ಡಿಎ ಸರ್ಕಾರದ ಪ್ರಮುಖ ಮಿತ್ರ ಪಕ್ಷ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಮುಖ್ಯಸ್ಥ ನಾರಾ ಚಂದ್ರಬಾಬು ನಾಯ್ಡು ಆಂಧ್ರಪ್ರದೇಶದ ಮುಖ್ಯಮಂತ್ರಿಯೂ ಆಗಿದ್ದು, ತಮ್ಮ ರಾಜ್ಯಕ್ಕೆ ಸಂಬಂಧಿಸಿದ ನಿರ್ದಿಷ್ಟ ಬೇಡಿಕೆಗಳನ್ನು ಪಟ್ಟಿ ಮುಂದಿಟ್ಟಿದ್ದಾರೆ. ಇದು ಬಿಜೆಪಿಯ ಉನ್ನತ ನಾಯಕರ ನಡುವಿನ ಇತ್ತೀಚಿನ ಸಭೆಯಲ್ಲಿ ಕಳವಳಕ್ಕೆ ಕಾರಣವಾಗಿತ್ತು. ಇದಲ್ಲದೆ, ಮುಂಬರುವ ಬಜೆಟ್ 2024 ರಲ್ಲಿ ಆಂಧ್ರಪ್ರದೇಶಕ್ಕೆ ನಾಯ್ಡು 1 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಿನ ಹಣವನ್ನು ಕೋರಿದ್ದಾರೆ ಎಂದು ಬ್ಲೂಮ್‌ಬರ್ಗ್ ವರದಿ ಹೇಳಿದೆ.
ಕೇಂದ್ರ ಬಜೆಟ್ 2024; ಮಿತ್ರರ ಬೇಡಿಕೆಗೆ ಮಣಿಯಬೇಕಾಗಬಹುದು ಮೋದಿ
ತೆಲುಗು ದೇಶಂ ಪಾರ್ಟಿ ಬೇಡಿಕೆ: ಮೈತ್ರಿ ಸರ್ಕಾರ ಮುನ್ನಡೆಸುತ್ತಿರುವ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು ಈ ಸಲ ಬಜೆಟ್‌ನಲ್ಲಿ ಮಿತ್ರರ ಬೇಡಿಕೆಗೆ ಮಣಿಯಬೇಕಾಗಬಹುದು. ನಾಯ್ಡು ಅವರಿಗೆ ಆರ್ಥಿಕ ನೆರವು ನೀಡಲು ಪ್ರಧಾನಿ ನರೇಂದ್ರ ಮೋದಿ ತಾತ್ತ್ವಿಕವಾಗಿ ಒಪ್ಪಿಕೊಂಡಿದ್ದಾರೆ. ಇದಲ್ಲದೆ, ಟಿಡಿಪಿ ನಾಯಕ ಚಂದ್ರ ಬಾಬು ನಾಯ್ಡು ಅವರು ಶುಕ್ರವಾರ (ಜುಲೈ 19) ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ವಿವರಗಳನ್ನು ಚರ್ಚಿಸಿದರು. ಆದರೆ, ಸರ್ಕಾರ ಇನ್ನೂ ನಿಖರವಾದ ಬೆಂಬಲದ ಮೊತ್ತವನ್ನು ಒಪ್ಪಿಕೊಂಡಿಲ್ಲ ಎಂದು ಬ್ಲೂಮ್‌ಬರ್ಗ್ ವರದಿ ವಿವರಿಸಿದೆ.
ಚುನಾವಣಾ ಪ್ರಚಾರದ ಸಮಯದಲ್ಲಿ ಆಂಧ್ರಪ್ರದೇಶದ ಅಭಿವೃದ್ಧಿ ಪ್ರಗತಿಯನ್ನು ಪುನಃಸ್ಥಾಪಿಸಲು ಬಿಜೆಪಿ ಭರವಸೆ ನೀಡಿರುವುದರಿಂದ, ಆ ಬೇಡಿಕೆಗಳನ್ನು ಈಡೇರಿಸುವುದು ಮಾತ್ರ ಅನಿವಾರ್ಯವಾಗಿದೆ.
ಜೆಡಿಯು ಬೇಡಿಕೆ: ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮತ್ತೊಂದು ಪ್ರಮುಖ ಮಿತ್ರ ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಜೆಡಿಯು ಅವರ ರಾಜ್ಯಕ್ಕೆ ಹೆಚ್ಚುವರಿ ಅನುದಾನವನ್ನು ಕೋರಿದೆ. ನಿತೀಶ್ ಕುಮಾರ್ ಕೂಡ ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಜೊತೆಗೆ ಮಾತುಕತೆ ನಡೆಸಿದ್ದರು. ಬಿಹಾರಕ್ಕೆ ವಿಶೇಷ ಸ್ಥಾನಮಾನ, ಪ್ರವಾಹ ಪರಿಹಾರ, ಮೂಲಸೌಕರ್ಯಕ್ಕೆ ಅನುದಾನಗಳನ್ನು ನಿತೀಶ್ ಕುಮಾರ್ ಕೇಳಿದ್ದಾರೆ ಎಂದು ರಾಯಿಟರ್ಸ್ ವರದಿ ಹೇಳಿದೆ.
ರಾಯಿಟರ್ಸ್ ವರದಿಯ ಪ್ರಕಾರ, ಈ ಎರಡು ರಾಜ್ಯಗಳು, ಆಂಧ್ರಪ್ರದೇಶ ಮತ್ತು ಬಿಹಾರಗಳು 2025ರ ಮಾರ್ಚ್‌ಗೆ ಕೊನೆಗೊಳ್ಳುವ ಹಣಕಾಸು ವರ್ಷಕ್ಕೆ 48,000 ಕೋಟಿ ರೂಪಾಯಿ ಹೆಚ್ಚುವರಿ ಅನುದಾನದ ಬೇಡಿಕೆ ಮುಂದಿಟ್ಟಿವೆ. ಮೂಲಸೌಕರ್ಯ ವೆಚ್ಚಕ್ಕಾಗಿ ರಾಜ್ಯಗಳಿಗೆ ಸರ್ಕಾರವು ನೀಡುತ್ತಿರುವ ಬೇಷರತ್ತಾದ ದೀರ್ಘಾವಧಿಯ ಸಾಲವನ್ನು ದುಪ್ಪಟ್ಟು ಮಾಡುವಂತೆ ಎರಡೂ ರಾಜ್ಯಗಳು ಕೇಂದ್ರವನ್ನು ಕೇಳಿಕೊಂಡಿವೆ. ಈ ರಾಜ್ಯಗಳು ಬೇಡಿಕೆಗಳನ್ನು ಪಟ್ಟಿ ಮಾಡಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿವೆ.
ಕೇಂದ್ರ ಬಜೆಟ್ 2024 25; ಆಂಧ್ರ ಪ್ರದೇಶದ ಪ್ರಮುಖ ಬೇಡಿಕೆಗಳು
1) ಅಮರಾವತಿಗೆ ಹೊರ ವರ್ತುಲ ರಸ್ತೆ ಯೋಜನೆ (2018 ರಿಂದ ಪರಿಗಣನೆಯಲ್ಲಿದೆ).
2) ಹೈದರಾಬಾದ್‌ನಿಂದ ವಿಶಾಖಪಟ್ಟಣಂ ರಾಷ್ಟ್ರೀಯ ಹೆದ್ದಾರಿ (ಇದು 6/8-ಲೇನಿಂಗ್) ಇದು 2019ರಿಂದ ಪರಿಶೀಲನೆಯಲ್ಲಿದೆ.
3) ದುಗರಾಜಪಟ್ಟಣಂ ಬಂದರಿನ ಅಭಿವೃದ್ಧಿಗೆ ರಾಜ್ಯದ ಬೆಂಬಲ (2012 ರಲ್ಲಿ ಹಡಗು ಮತ್ತು ಬಂದರುಗಳ ಸಚಿವಾಲಯದಿಂದ ಪ್ರಸ್ತಾವನೆ ಸ್ವೀಕಾರ),
4) ಆಂಧ್ರಪ್ರದೇಶ IPS ಕೇಡರ್ ಪರಿಶೀಲನೆ (2015 ರಿಂದ ಬಾಕಿ),
5) ಗ್ರೇಹೌಂಡ್ಸ್ ತರಬೇತಿ ಕೇಂದ್ರಕ್ಕೆ 385 ಕೋಟಿ ಬಿಡುಗಡೆ (ಭಾಗಶಃ ಕಂತು 2018 ರಲ್ಲಿ ಬಿಡುಗಡೆಯಾಗಿದೆ).
ಕೇಂದ್ರ ಬಜೆಟ್‌ನಲ್ಲಿ ವಿಕಸಿತ ಭಾರತ; ಮೋದಿನೋಮಿಕ್ಸ್‌ನಲ್ಲಿ ಅನುದಾನದ ಲೆಕ್ಕಾಚಾರ
ಚಂದ್ರಬಾಬು ನಾಯ್ಡು ಮತ್ತು ಬಿಜೆಪಿ ನಾಯಕರ ನಡುವಿನ ಇತ್ತೀಚಿನ ಸಭೆಯಲ್ಲಿ, ಆಂಧ್ರಪ್ರದೇಶದ ಪ್ರಸ್ತಾವಿತ ಹಣಕಾಸು ಪ್ಯಾಕೇಜ್‌ನಲ್ಲಿ 2025ರ ಮಾರ್ಚ್‌ವರೆಗಿನ ಹಣಕಾಸು ವರ್ಷದಲ್ಲಿ ಹೆಚ್ಚುವರಿ ಶೇಕಡ 0.5 ಸಾಲವನ್ನು ಅನುಮತಿಸುವ ಮೂಲಕ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ 3 ಪ್ರತಿಶತ ವಿತ್ತೀಯ ಕೊರತೆಯ ಮಿತಿಯನ್ನು ಹೆಚ್ಚಿಸುವುದು ಸೇರಿದೆ. ಅದು ಸುಮಾರು 7000 ಕೋಟಿ ರೂಪಾಯಿಗೆ ಸಮಾನವಾಗಿರುತ್ತದೆ ಎಂದು ಬ್ಲೂಮ್‌ಬರ್ಗ್ ವರದಿ ವಿವರಿಸಿದೆ.
ಅಮರಾವತಿಯ ಹೊಸ ರಾಜಧಾನಿಯನ್ನು ನಿರ್ಮಿಸಲು 50,000 ಕೋಟಿ ರೂಪಾಯಿ ಬೇಡಿಕೆ. ಅದರಲ್ಲಿ 15,000 ಕೋಟಿ ರೂಪಾಯಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ವಿನಿಯೋಗಿಸಲಾಗುವುದು. ಪೋಲಾವರಂ ನೀರಾವರಿ ಯೋಜನೆಗೆ ಈ ಆರ್ಥಿಕ ವರ್ಷದಲ್ಲಿ 12,000 ಕೋಟಿ ರೂಪಾಯಿ ಮತ್ತು ಮುಂದೆ ಹೋಗುವ ಹೆಚ್ಚಿನ ನಿಧಿಗಳಿಗೆ ಬದ್ಧತೆ; ಮಿತಿಮೀರಿದ ಸಾಲವನ್ನು ತೆರವುಗೊಳಿಸಲು ಮುಂದಿನ ಐದು ವರ್ಷಗಳಲ್ಲಿ 15,000 ಕೋಟಿ ರೂ. ಫೆಡರಲ್ ಸರ್ಕಾರದ 50 ವರ್ಷಗಳ ಸಾಲ ಯೋಜನೆಯಡಿ ಮೂಲಸೌಕರ್ಯ ಅಭಿವೃದ್ಧಿಗೆ 10,000 ಕೋಟಿ ರೂಪಾಯಿ ಮೀಸಲಿಡುವ ಸಾಧ್ಯತೆ ಇದೆ.
ಲೋಕಸಭೆ ಚುನಾವಣೆಗೆ ಮೊದಲು 2024 ರ ಫೆಬ್ರವರಿ 1 ರಂದು ಮಧ್ಯಂತರ ಬಜೆಟ್‌ನಲ್ಲಿ, ನಿರ್ಮಲಾ ಸೀತಾರಾಮನ್ ಅವರು ಒಟ್ಟು 1.3 ಲಕ್ಷ ಕೋಟಿ ರೂಪಾಯಿಯನ್ನು ಬಂಡವಾಳ ವೆಚ್ಚಕ್ಕಾಗಿ ರಾಜ್ಯಗಳಿಗೆ ಐವತ್ತು ವರ್ಷಗಳ ಬಡ್ಡಿ ರಹಿತ ಸಾಲದ ಯೋಜನೆಯನ್ನು ಮುಂದುವರೆಸುವುದಾಗಿ ಘೋಷಿಸಿದ್ದರು. ಇದಲ್ಲದೆ, ವಿಕಸಿತ್ ಭಾರತ್‌ನ ಮೈಲಿಗಲ್ಲು ಸಂಬಂಧಿತ ಸುಧಾರಣೆಗಳಿಗಾಗಿ ರಾಜ್ಯ ಸರ್ಕಾರಗಳನ್ನು ಬೆಂಬಲಿಸಲು ಈ ವರ್ಷ ಐವತ್ತು ವರ್ಷಗಳ ಬಡ್ಡಿ ರಹಿತ ಸಾಲವಾಗಿ 75,000 ಕೋಟಿ ರೂಪಾಯಿ ಒದಗಿಸುವುದಾಗಿ ಘೋಷಿಸಿದ್ದರು.
(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆ ಎಚ್‌ಟಿ ಕನ್ನಡ ಬೆಸ್ಟ್. ತಾಜಾ ವಿದ್ಯಮಾನ ಮತ್ತು ಬಜೆಟ್ ವಿವರಣೆ, ರಾಜಕೀಯ ವಿಶ್ಲೇಷಣೆಗಳಿಗಾಗಿ kannada.hindustantimes.com/nation-and-world ಕ್ಕೆ ಭೇಟಿ ನೀಡಿ.)