Year in review 2022: ಬೆಳ್ಳಿ ಬೆಡಗಿಯರಿಗೆ ಬಂಗಾರವಾದ 2022; ಭಾರತ ಮಹಿಳಾ ಕ್ರಿಕೆಟ್ ತಂಡದ ವರ್ಷದ ಸಾಧನೆಗಳಿವು
Dec 26, 2022 10:26 PM IST
ಭಾರತ ಕ್ರಿಕೆಟ್ ತಂಡ
- ಈ ವರ್ಷ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟ ಹೇಗಿತ್ತು? ನಾರಿಮಣಿಯರ ಪ್ರಮುಖ ಗೆಲುವುಗಳಾವುವು? ಈ ಬಗ್ಗೆ ಸಮಗ್ರ ಮಾಹಿತಿ ಇಲ್ಲಿದೆ ಓದಿ…
ಭಾರತದ ಮಹಿಳಾ ಕ್ರಿಕೆಟ್‌ಗೆ ಈ ವರ್ಷ ಸುಗ್ಗಿಕಾಲ. ಪುರುಷರಷ್ಟೇ ಸಮಾನ ವೇತನವನ್ನು ಮಹಿಳಾ ಕ್ರಿಕೆಟಿಗರಿಗೂ ಘೋಷಿಸುವ ಮೂಲಕ, ಬಿಸಿಸಿಐಯು ಜಾಗತಿಕ ಕ್ರೀಡಾಕ್ಷೇತ್ರದಲ್ಲಿ ಐತಿಹಾಸಿಕ ನಿರ್ಧಾರಕ್ಕೆ ಬಂದಿತು. ಈ ಮೂಲಕ ಕ್ರೀಡಾ ಕ್ಷೇತ್ರದಲ್ಲಿ ಪುರುಷ-ಮಹಿಳೆ ಎಂಬ ತಾರತಮ್ಯವೇ ಇಲ್ಲ, ಎಲ್ಲರೂ ಸಮಾನರು ಎಂಬ ಹೊಸ ಸಂದೇಶವನ್ನು ಜಗತ್ತಿಗೆ ಬಿಸಿಸಿಐ ರವಾನಿಸಿತು. ಭಾರತ ಕ್ರೀಡಾ ರಂಗದಲ್ಲೇ ಇದೊಂದು ಮಹತ್ವದ ನಿರ್ಧಾರವಾಯ್ತು.
ಭಾರತೀಯ ವನಿತೆಯರು ಈ ಬಾರಿ ಕ್ರಿಕೆಟ್ ಮೈದಾನದಲ್ಲಿ ಮೋಡಿ ಮಾಡಿದರು. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚೊಚ್ಚಲ ಪ್ರವೇಶದಲ್ಲೇ ಬೆಳ್ಳಿ ಗೆದ್ದ ಸಾಧನೆ ನಮ್ಮ ದೇಶದ ವನಿತೆಯರದ್ದು. ಏಷ್ಯಾಕಪ್ ಗೆಲುವು, ಆಸೀಸ್ ವಿರುದ್ಧ ಐತಿಹಾಸಿಕ ಜಯಭೇರಿ, ಆಂಗ್ಲರ ನೆಲದಲ್ಲಿ ಸರಣಿ ಕ್ಲೀನ್‌ಸ್ವೀಪ್ ಸೇರಿದಂತೆ ಕೆಲ ಪ್ರಮುಖ ಘಟನಾವಳಿಗಳಿಗೆ ಈ ವರ್ಷ ಭಾರತ ಮಹಿಳಾ ಕ್ರಿಕೆಟ್ ಪಾತ್ರವಾಯ್ತು. ಇದರ ವಿವರವಾದ ಮಾಹಿತಿ ಇಲ್ಲಿದೆ ನೋಡಿ.
ಇಂಗ್ಲೆಂಡ್ ವಿರುದ್ಧ ಏಕದನ ಸರಣಿ ಕ್ಲೀನ್ ಸ್ವೀಪ್
ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. ಇಲ್ಲಿ ಆಂಗ್ಲರ ವಿರುದ್ಧ ಏಕದಿನ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿತು. ಟೀಂ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್ ಅಮೋಘ ಪ್ರದರ್ಶನದಿಂದ ಭಾರತ ಬರೋಬ್ಬರಿ 23 ವರ್ಷಗಳ ಬಳಿಕ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಗೆದ್ದು ದಾಖಲೆ ನಿರ್ಮಿಸಿತು. ಆಂಗ್ಲರ ನಾಡಲ್ಲಿ ಕೌರ್ ನಾಯಕತ್ವದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಹೊಸ ದಾಖಲೆ ನಿರ್ಮಿಸಿತು.
ಟಿ20 ಸರಣಿ ಸೋಲು
ಏಕದಿನ ಸರಣಿಗೂ ಮುನ್ನ ನಡೆದ ಮೂರು ಪಂದ್ಯಗಳ ಟಿ20 ಸರಣಿಯನ್ನು ಇಂಗ್ಲೆಂಡ್ ಮಹಿಳೆಯರು ವಶಪಡಿಸಿಕೊಂಡಿದ್ದರು. ಮೊದಲ ಪಂದ್ಯವನ್ನು ಇಂಗ್ಲೆಂಡ್ ಒಂಬತ್ತು ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. ಬಳಿಕ ನಡೆದ ಎರಡನೇ ಪಂದ್ಯದಲ್ಲಿ ಕಂಬ್ಯಾಕ್ ಮಾಡಿದ ಭಾರತ, ಆತಿಥೇಯರನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿದ್ದದರು. ಆ ಬಳಿಕ ಮೂರನೇ ಟಿ20 ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಗೆದ್ದ ಇಂಗ್ಲೆಂಡ್, ತವರಿನ ಸರಣಿ ವಶಪಡಿಸಿಕೊಂಡಿತ್ತು. ಇದಕ್ಕೆ ಪ್ರತಿಯಾಗಿ ಭಾರತ ಏಕದಿನ ಸರಣಿಯನ್ನು ಭರ್ಜರಿಯಾಗಿ ಗೆದ್ದಿತ್ತು.
ಹರ್ಮನ್‌ಪ್ರೀತ್ ಕೌರ್ ದಾಖಲೆಯ ಶತಕ
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕಿ ಕೌರ್, ದಾಖಲೆಯ ಶತಕ ಸಿಡಿಸಿದರು. ಮೊದಲ ಏಕದಿನದಲ್ಲೂ ಅಜೇಯ ಪ್ರದರ್ಶನ ನೀಡಿ ತಂಡವನ್ನು ಗೆಲ್ಲಿಸಿದ್ದ ನಾಯಕಿ, ಎರಡನೇ ಪಂದ್ಯದಲ್ಲೂ ಅಮೋಘ ಆಟ ಪ್ರದರ್ಶಿಸಿದರು. ಭಾರತದ ಬ್ಯಾಟಿಂಗ್ ದಾಳಿಯನ್ನು ಮುನ್ನಡೆಸಿದ ಕೌರ್, ಶತಕ ಸಿಡಿಸಿ ಸಂಭ್ರಮಿಸಿದರು. ಏಕದಿನ ಕ್ರಿಕೆಟ್‌ನಲ್ಲಿ 5ನೇ ಶತಕ ಸಿಡಿಸಿದ ಕೌರ್, 111 ಎಸೆತಗಳಲ್ಲಿ ಅಜೇಯ 143 ರನ್ ಗಳಿಸಿ ದಾಖಲೆ ನಿರ್ಮಿಸಿದರು. ಇವರ ಈ ಇನ್ನಿಂಗ್ಸ್‌ನಲ್ಲಿ 18 ಬೌಂಡರಿ ಹಾಗೂ 4 ಸಿಕ್ಸರ್ ಕೂಡಾ ಸೇರಿತ್ತು. 5ನೇ ಶತಕ ಗಳಿಸುವ ಮೂಲಕ, ಏಕದಿನ ಶತಕ ಪಟ್ಟಿಯಲ್ಲಿ ಸ್ಮೃತಿ ಮಂಧನಾರೊಂದಿಗೆ ಸ್ಥಾನ ಹಂಚಿಕೊಂಡರು.
ಇಂಗ್ಲೆಂಡ್‌ನಲ್ಲಿ ನಡೆದ ಏಕದಿನ ಸರಣಿಯಲ್ಲಿ ಅವಿಸ್ಮರಣೀಯ ಪ್ರದರ್ಶನ ನೀಡಿದ ಕೌರ್‌ಗೆ, ಸೆಪ್ಟೆಂಬರ್ ತಿಂಗಳ ಮಹಿಳಾ ಆಟಗಾರ್ತಿ ಪ್ರಶಸ್ತಿ ನೀಡಲಾಗಿದೆ. ಕೌರ್ ಆಟದ ನೆರವಿನಿಂದ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ತಮ್ಮ ಎರಡನೇ ಅತ್ಯಧಿಕ ಸ್ಕೋರ್ ದಾಖಲಿಸಿದ ಟೀಂ ಇಂಡಿಯಾ, ಐದು ವಿಕೆಟ್ ನಷ್ಟಕ್ಕೆ 333 ರನ್ ಗಳಿಸಿತು.
ವಿಶ್ವಕಪ್‌ನಲ್ಲಿ ಸೋಲು
ಈ ವರ್ಷದ ಆರಂಭದಲ್ಲಿ ನಡೆದ ಮಹಿಳಾ ಕ್ರಿಕೆಟ್ ಏಕದಿನ ವಿಶ್ವಕಪ್‌ನಲ್ಲಿ, ಭಾರತದ ವನಿತೆಯರು ಗ್ರೂಪ್ ಹಂತದಲ್ಲಿ ನಿರ್ಗಮಿಸಿದರು. ಅಗ್ರ ನಾಲ್ಕು ತಂಡದೊಳಗೆ ಗ್ರೂಪ್ ಹಂತವನ್ನು ಪೂರ್ಣಗೊಳಿಸಲು ವಿಫಲವಾದ ಭಾರತ, ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಫೈನಲ್ ಪ್ರವೇಶಿಸಿದ ಆಸ್ಟ್ರೇಲಿಯಾ, ಇಂಗ್ಲೆಂಡ್ ವಿರುದ್ಧ ಭರ್ಜರಿಯಾಗಿ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿತು.
ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಗೆದ್ದ ಭಾರತ ಬೆಡಗಿಯರು
ಈ ವರ್ಷದ ಜುಲೈನಿಂದ ಆಗಸ್ಟ್ ತಿಂಗಳವರೆಗೆ, ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಬೆಳ್ಳಿ ಪದಕ ಗೆದ್ದಿತು. ಇದೇ ಮೊದಲ ಬಾರಿಗೆ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಕ್ರಿಕೆಟ್ ಪ್ರವೇಶಿಸಿದ್ದು, ಟಿ20 ಮಾದರಿಯ ಪಂದ್ಯ ಆಡಿಸಲಾಯ್ತು. ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ರೋಚಕವಾಗಿ ಸೋತ ಭಾರತ, ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿತು. ಚಿನ್ನದ ಪದಕ ಕಳೆದುಕೊಂಡರೂ, ಚೊಚ್ಚಲ ಯತ್ನದಲ್ಲೇ ಬೆಳ್ಳಿ ಗೆದ್ದ ಭಾರತ ವನಿತೆಯರ ಸಾಧನೆ ಸಣ್ಣದೇನಲ್ಲ.
ಏಷ್ಯಾಕಪ್ ಗೆಲುವಿನೊಂದಿಗೆ ಮತ್ತೆ ಏಷ್ಯಾದ ಬಲಿಷ್ಠ ತಂಡ
ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಏಷ್ಯಾಕಪ್‌ನಲ್ಲಿ ಭಾರತ ಮಹಿಳೆಯರ ತಂಡ ಕಪ್ ಗೆದ್ದು ಮಿಂಚಿತು. ಫೈನಲ್ ಪಂದ್ಯದಲ್ಲಿ ದ್ವೀಪರಾಷ್ಟ್ರ ಶ್ರೀಲಂಕಾ ವಿರುದ್ಧ ಸುಲಭ ಗೆಲುವು ಸಾಧಿಸಿದ ಕೌರ್ ಪಡೆ, ಏಳನೇ ಬಾರಿಗೆ ಏಷ್ಯಾದ ಚಾಂಪಿಯನ್ ಆಗಿ ಹೊರಹೊಮ್ಮಿತು. ಈವರೆಗೆ ಒಟ್ಟು ಎಂಟು ಬಾರಿ ಮಹಿಳಾ ಕ್ರಿಕೆಟ್ ಏಷ್ಯಾಕಪ್ ನಡೆದಿದ್ದು, ಇದರಲ್ಲಿ ಏಳು ಬಾರಿ ಭಾರತವೇ ಗೆದ್ದಿದೆ. ಒಂದು ಬಾರಿ ಮಾತ್ರ(2018) ಬಾಂಗ್ಲಾದೇಶ ಗೆದ್ದುಕೊಂಡಿದೆ. ಈ ಬಾರಿ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಭಾರತ ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟಿಂಗ್ ಮಾಡಿದ ಲಂಕಾ, 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 65 ರನ್ ಗಳಿಸಲಷ್ಟೇ ಶಕ್ತವಾಯ್ತು. ಇದಕ್ಕೆ ಪ್ರತಿಯಾಗಿ ಭಾರತವು ಕೇವಲ 8.3 ಓವರ್‌ಗಳಲ್ಲಿ 2 ವಿಕೆಟ್ ಮಾತ್ರ ಕಳೆದುಕೊಂಡು 71 ರನ್ ಗಳಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಆಸ್ಟ್ರೇಲಿಯಾಗೆ ಮೊದಲ ಸೋಲುಣಿಸಿದ ಭಾರತ
ಸದ್ಯ ಭಾರತದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಐದು ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ. ಈಗಾಗಲೇ ಸರಣಿಯನ್ನು 3-1ರಿಂದ ಆಸ್ಟ್ರೇಲಿಯಾ ವಶಪಡಿಸಿಕೊಂಡಿದೆ. ಇದರಲ್ಲಿ ಭಾರತ ಎರಡನೇ ಪಂದ್ಯವನ್ನು ರೋಚಕವಾಗಿ ಸೂಪರ್ ಓವರ್‌ನಲ್ಲಿ ಗೆದ್ದಿತ್ತು. ಇದು ಭಾರತ ತಂಡಕ್ಕೆ ವಿಶೇಷ ಗೆಲುವು. ಈ ವರ್ಷ ಟಿ20ಯಲ್ಲಿ ಆಜೇಯರಾಗಿದ್ದ ಆಸೀಸ್ ವನಿತೆಯರಿಗೆ, ಭಾರತ ಮಹಿಳೆಯರು ಸೋಲಿನ ರುಚಿ ತೋರಿಸಿದರು.
ಟೈ ಬ್ರೇಕರ್‌ಗಾಗಿ ಸೂಪರ್ ಓವರ್ ಮೂಲಕ ವಿಜೇತರನ್ನು ನಿರ್ಧರಿಸಲಾಯ್ತು. ಸೂಪರ್ ಓವರ್‌ನಲ್ಲೂ ಮತ್ತದೇ ಆಟ ಪ್ರದರ್ಶಿಸಿದ ಭಾರತ, ಆಸೀಸ್ ವನಿತೆಯರನ್ನು ಸೋಲಿಸಿದ್ದಾರೆ. ಇದು 2022ರಲ್ಲಿ ಆಸೀಸ್ ವನಿತೆಯರಿಗೆ ಮೊದಲ ಟಿ20 ಸೋಲು ಎಂಬುದು ವಿಶೇಷ.
ಎರಡನೇ ಟಿ20ಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಾರಿಯರು, ನಿಗದಿತ 20 ಓವರ್‌ಗಳಲ್ಲಿ ಕೇವಲ 1 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿದರು. ಗುರಿ ಬೆನ್ನತ್ತಿದ ಭಾರತ, ಆರಂಭದಿಂದಲೇ ಸ್ಫೋಟಕ ಆಟಕ್ಕೆ ಮುಂದಾಯಿತು. ಆರಂಭಿಕರಾದ ಸ್ಮೃತಿ ಮಂಧನಾ, ಶಿಫಾಲಿ ವರ್ಮಾ ಹಾಗೂ ಅಂತಿಮ ಹಂತದಲ್ಲಿ ರಿಚಾ ಘೋಷ್ ನಿರ್ಣಾಯಕ ಆಟ ಪ್ರದರ್ಶಿಸಿದರು. ಕೊನೆಯ ಕ್ಷಣದಲ್ಲಿ ಒತ್ತಡದ ನಡುವೆಯೂ ರಿಚಾ ಘೋಷ್ ಆಟ ಬೊಂಬಾಟ್ ಆಗಿತ್ತು. ಅಂತಿಮವಾಗಿ 5 ವಿಕೆಟ್ ಕಳೆದುಕೊಂಡು 187 ರನ್ ಗಳಿಸಿ ಪಂದ್ಯ ಟೈ ಆಯಿತು. ಕೊನೆಯದಾಗಿ ಟೈ ಬ್ರೇಕರ್‌ನಲ್ಲಿ ಭಾರತ ಗೆದ್ದು ಬೀಗಿತು. ಭಾರತವು ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿ 1 ವಿಕೆಟ್ ಕಳೆದುಕೊಂಡು 20 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಆಸೀಸ್ ವನಿತೆಯರು 17 ರನ್ ಗಳಿಸುವಲ್ಲಿ ಶಕ್ತರಾದರು.
ಮಹಿಳಾ ಕ್ರಿಕೆಟಿಗರಿಗೆ ಸಮಾನ ವೇತನ; ಬಿಸಿಸಿಐ ಐತಿಹಾಸಿಕ ಘೋಷಣೆ
ಮೈದಾನದಲ್ಲಿ ವನಿತೆಯರ ಕ್ರಿಕೆಟ್ ಆಟವನ್ನು ಹೊರತುಪಡಿಸಿ, ಈ ಬಾರಿ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿರುವ ಬಿಸಿಸಿಐ ಐತಿಹಾಸಿಕ ಕ್ರಮವೊಂದಕ್ಕೆ ಸಾಕ್ಷಿಯಾಯ್ತು. ಭಾರತ ಕ್ರಿಕೆಟ್‌ನಲ್ಲಿ ಕೇಂದ್ರೀಯ ಒಪ್ಪಂದದ ಎಲ್ಲಾ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಸಮಾನ ವೇತನ ನೀಡುವುದಾಗಿ ಬಿಸಿಸಿಐ ಘೋಷಿಸಿತು. ಇದು ಜಾಗತಿಕ ಕ್ರಿಕೆಟ್ ಮತ್ತು ಕ್ರೀಡಾ ಕ್ಷೇತ್ರದಲ್ಲೇ ಐತಿಹಾಸಿಕ ನಿರ್ಧಾರ. ಬಿಸಿಸಿಐನ ಈ ನಿರ್ಧಾರವು ಭಾರತೀಯ ಕ್ರಿಕೆಟ್ ಆಟಗಾರರು ಹಾಗೂ ದಿಗ್ಗಜರ ಪ್ರಶಂಸೆಗೆ ಪಾತ್ರವಾಯ್ತು.
“ಲಿಂಗ ತಾರತಮ್ಯವನ್ನು ತೊಡೆದುಹಾಕುವಲ್ಲಿ ಬಿಸಿಸಿಐ ಮೊದಲ ಹೆಜ್ಜೆಯನ್ನು ಇಟ್ಟಿದೆ. ಇದನ್ನು ಘೋಷಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ. ನಮ್ಮ ಒಪ್ಪಂದದ ಮಹಿಳಾ ಕ್ರಿಕೆಟಿಗರಿಗೆ ನಾವು ಸಮಾನ ವೇತನ ನೀತಿಯನ್ನು ಜಾರಿಗೆ ತರುತ್ತಿದ್ದೇವೆ. ನಾವು ಲಿಂಗ ಸಮಾನತೆಯ ಹೊಸ ಯುಗಕ್ಕೆ ಪ್ರವೇಶ ಪಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್‌ನಲ್ಲಿ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಪಂದ್ಯದ ಶುಲ್ಕ ಒಂದೇ ಆಗಿರುತ್ತದೆ,” ಎಂದು ಹೊಸ ನಿರ್ಧಾರದ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಶಾ ತಿಳಿಸಿದ್ದಾರೆ.
ಹೊಸ ವೇತನ ನೀತಿಯ ಪ್ರಕಾರ , ಹರ್ಮನ್‌ಪ್ರೀತ್ ಕೌರ್ ಮತ್ತು ನೇತೃತ್ವದ ಭಾರತ ತಂಡದ ಕ್ರಿಕೆಟ್ ಆಟಗಾರ್ತಿಯರು ಪ್ರತಿ ಟೆಸ್ಟ್‌ಗೆ 15 ಲಕ್ಷ ರೂಪಾಯಿ, ಏಕದಿನ ಪಂದ್ಯಕ್ಕೆ 6 ಲಕ್ಷ ರೂಪಾಯಿ ಮತ್ತು ಟಿ20 ಪಂದ್ಯಗಳಿಗೆ ತಲಾ 3 ಲಕ್ಷ ರೂಪಾಯಿ ಪಂದ್ಯ ಶುಲ್ಕವನ್ನು ಪಡೆಯಲಿದ್ದಾರೆ. ಇದೇ ಮೊತ್ತದ ವೇತನವನ್ನು ಭಾರತದ ಪುರುಷ ಕ್ರಿಕೆಟಿಗರು ಕೂಡಾ ಗಳಿಸುತ್ತಿದ್ದಾರೆ.
ದೀಪ್ತಿ ಶರ್ಮಾ ಮತ್ತು ಮಂಕಡ್ ಔಟ್
ಭಾರತ ಮತ್ತು ಇಂಗ್ಲೆಂಡ್ ಮಹಿಳಾ ತಂಡದ ನಡುವಿನ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯ, ರೋಮಾಂಚಕ ಅಂತ್ಯವನ್ನು ಕಂಡಿತು. ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ದೀಪ್ತಿ ಶರ್ಮಾ ಅವರು ಮಂಕಡಿಂಗ್ ಮೂಲಕ ಕೊನೆಯ ವಿಕೆಟ್ ಕಿತ್ತರು. ಇದು ಒಂದೆಡೆ ಹೊಗಳಿಕೆಗೆ ಪಾತ್ರವಾದರೆ, ಸಾಕಷ್ಟು ಚರ್ಚೆಗೂ ಗ್ರಾಸವಾಯ್ತು. 44ನೇ ಓವರ್ ಎಸೆಯುತ್ತಿದ್ದ ದೀಪ್ತಿ ಶರ್ಮಾ, ನಾಲ್ಕನೇ ಎಸೆತ ಎಸೆಯುವ ಮುನ್ನ ಮಂಕಡಿಂಗ್ ರನೌಟ್ ಮಾಡಿದರು. ಇದನ್ನು ಔಟ್ ಎಂದು ಘೋಷಿಸಲಾಯ್ತು. ಹೀಗಾಗಿ ಇದು ಚರ್ಚೆಗೆ ಒಳಗಾದರೂ, ಕ್ರಿಕೆಟ್ ತಜ್ಞರು ಭಾರತ ಮಾಡಿದ್ದು ಸರಿ ಎಂದಿದ್ದರು. ನಾಯಕಿ ಕೌರ್ ಸೇರಿ ಭಾರತದ ಕ್ರಿಕೆಟಿಗರು ಭಾರತದ ಕ್ರೀಡಾ ಸ್ಫೂರ್ತಿಯನ್ನು ಮೆಚ್ಚಿದ್ದರು.
ಈ ವರ್ಷದ ಫೆಬ್ರವರಿ ತಿಂಗಳಲ್ಲಿ ನ್ಯೂಜಿಲ್ಯಾಂಡ್‌ನಲ್ಲಿ ನಡೆದ ದ್ವಿಪಕ್ಷೀಯಯ ಸರಣಿಯಲ್ಲಿ ಸೋಲು, ವಿಶ್ವಕಪ್‌ನಲ್ಲಿ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದನ್ನು ಹೊರತುಪಡಿಸಿದರೆ, ಭಾರತ ಮಹಿಳಾ ಕ್ರಿಕೆಟ್ ತಂಡದ ಈ ವರ್ಷದ ಒಟ್ಟಾರೆ ಪ್ರದರ್ಶನ ಅತ್ಯತ್ತಮವಾಗಿತ್ತು. ಈ ವರ್ಷ ಪುರುಷರ ಕ್ರಿಕೆಟ್ ತಂಡಕ್ಕಿಂತಲೂ ಮಹಿಳಾ ಆಟಗಾರ್ತಿಯರು ಅಮೋಘ ಆಟ ಪ್ರದರ್ಶಿಸಿದರು. ಕ್ರೀಸ್‌ನಲ್ಲಿ ಧೈರ್ಯದಿಂದ ಬ್ಯಾಟ್ ಬೀಸಿ, ನಾವು ಯಾರಿಗೂ ಕಮ್ಮಿ ಇಲ್ಲ ಎಂಬುದನ್ನು ಸಾಬೀತುಪಡಿಸಿದರು.