logo
ಕನ್ನಡ ಸುದ್ದಿ  /  ಕ್ರೀಡೆ  /  Year In Review 2022: ಭಾರತ ಕ್ರಿಕೆಟ್‌ ತಂಡಕ್ಕೆ ಬೇವು-ಬೆಲ್ಲವಾದ '22'; ಸಿಹಿ ದಾಖಲೆಗಳಿಷ್ಟು, ಕಹಿಯಿಷ್ಟು...

Year in Review 2022: ಭಾರತ ಕ್ರಿಕೆಟ್‌ ತಂಡಕ್ಕೆ ಬೇವು-ಬೆಲ್ಲವಾದ '22'; ಸಿಹಿ ದಾಖಲೆಗಳಿಷ್ಟು, ಕಹಿಯಿಷ್ಟು...

Jayaraj HT Kannada

Dec 26, 2022 10:27 PM IST

google News

ಭಾರತ ಪುರುಷರ ಕ್ರಿಕೆಟ್‌ ತಂಡಕ್ಕೆ 2022 ಹೇಗಿತ್ತು?

    • ಭಾರತ ತಂಡ ಈ ವರ್ಷ ಕೆಲ ಉನ್ನತ ದಾಖಲೆಗಳನ್ನು ಮಾಡಿದೆ. ಆದ್ರೆ ಈ ವರ್ಷದ ಪ್ರಮುಖ ಟೂರ್ನಿಗಳು ಎನಿಸಿದ ವಿಶ್ವಕಪ್‌ ಹಾಗೂ ಏಷ್ಯಾಕಪ್‌ ಸೋಲು, ಅಭಿಮಾನಿಗಳಿಗೆ ಭಾರಿ ಬೇಸರ ತರಿಸಿದೆ. ಆದರೂ, ಕೆಲ ವೈಯಕ್ತಿಕ ಶ್ರೇಷ್ಠ ಪ್ರದರ್ಶನ ಭಾರತ ತಂಡದ ಜನಪ್ರಿಯತೆಯನ್ನು ಹೆಚ್ಚಿಸಿದೆ.
ಭಾರತ ಪುರುಷರ ಕ್ರಿಕೆಟ್‌ ತಂಡಕ್ಕೆ 2022 ಹೇಗಿತ್ತು?
ಭಾರತ ಪುರುಷರ ಕ್ರಿಕೆಟ್‌ ತಂಡಕ್ಕೆ 2022 ಹೇಗಿತ್ತು?

ಭಾರತ ಪುರುಷರ ಕ್ರಿಕೆಟ್‌ ತಂಡಕ್ಕೆ ಈ ವರ್ಷ ಸಿಹಿ-ಕಹಿಗಳ ಮಿಶ್ರಣ. ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌, ಅದಕ್ಕೂ ಮುನ್ನ ಏಷ್ಯಾಕಪ್‌ನಲ್ಲಿ ಕಳಪೆ ಪ್ರದರ್ಶನ, ಈ ತಿಂಗಳಲ್ಲಿ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ ಅನಿರೀಕ್ಷಿತ ಸೋಲು... ಹೀಗೆ ಭಾರತ ಕ್ರಿಕೆಟ್‌ ತಂಡದ ಸಾಧನೆಗಿಂತ, ಕಳಪೆ ಪ್ರದರ್ಶನದ್ದೇ ಪಟ್ಟಿ ದೊಡ್ಡದಿದೆ. ಕಳಪೆ ಪ್ರದರ್ಶನ ಎಂದು ಹೇಳುವುದಕ್ಕಿಂತ ಉತ್ತಮ ಹಾಗೂ ಸ್ಥಿರ ಪ್ರದರ್ಶನ ನೀಡುವಲ್ಲಿ ಭಾರತ ತಂಡ ವಿಫಲವಾಯ್ತು. ಇದು ಅಭಿಮಾನಿಗಳ ಬೇಸರಕ್ಕೂ ಕಾರಣವಾಗಿದೆ. ವೈಯಕ್ತಿಕ ಶ್ರೇಷ್ಠ ಪ್ರದರ್ಶನ ಹೊರತುಪಡಿಸಿ, ಭಾರತ ಕ್ರಿಕೆಟ್‌ ತಂಡದ ವಿಚಾರವಾಗಿ ಸಿಹಿಗಿಂತ ಕಹಿಯೇ ಹೆಚ್ಚು ಎನ್ನಬಹುದು.

ಈ ವರ್ಷ ಭಾರತ ಕ್ರಿಕೆಟ್‌ ತಂಡದಲ್ಲಿ, ಜಾಗತಿಕ ಮಟ್ಟದಲ್ಲಿ ಹೆಚ್ಚು ಪ್ರತಿಧ್ವನಿಸಿದ ಹೆಸರು ಸೂರ್ಯಕುಮಾರ್‌ ಯಾದವ್‌. ಇವರ ಬ್ಯಾಟಿಂಗ್‌ನಲ್ಲಿ ಸಿಡಿದ ರನ್‌ ಮಳೆ ಒಂದೆಡೆಯಾದರೆ, ಟಿ20 ಶ್ರೇಯಾಂಕದಲ್ಲಿ ನಂಬರ್‌ ವನ್‌ ಸ್ಥಾನಕ್ಕೇರಿದ್ದು, ಪ್ರಮುಖ ಮೈಲಿಗಲ್ಲು. ಇದರ ಹೊರತಾಗಿ, ಏಷ್ಯಾಕಪ್‌ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಸೆಂಚುರಿ ಸಿಡಿಸಿ ವಿರಾಟ್‌ ಕೊಹ್ಲಿ ಶತಕದ ಬರ ನೀಗಿಸಿದ್ದು, ಭಾರತೀಯರ ಪಾಲಿಗೆ ಸಂತಸದ ಕ್ಷಣ. ಆ ಬಳಿಕ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಅಜೇಯ ಆಟವಾಡಿ, ಭಾರತಕ್ಕೆ ಗೆಲುವು ತಂದುಕೊಟ್ಟ ವಿರಾಟ್‌ ಆಟ ಈ ವರ್ಷದ ಅವಿಸ್ಮರಣೀಯ ಕ್ಷಣ. ಈ ತಿಂಗಳಲ್ಲಿ ಭಾರತ ಬಾಂಗ್ಲಾ ವಿರುದ್ಧ ಏಕದಿನ ಸರಣಿ ಸೋತರೂ, ಇಶಾನ್‌ ಕಿಶನ್‌ ದ್ವಿಶತಕ ದಾಖಲೆ ಮತ್ತು ಕೊನೆಯ ಪಂದ್ಯದಲ್ಲಿ ಭಾರತ ಗಳಿಸಿದ 227 ರನ್‌ಗಳ ಭರ್ಜರಿ ಜಯ ಆ ಸೋಲಿನ ನೋವನ್ನು ಮರೆ ಮಾಡಿತು.

ಇದನ್ನು ಹೊರತುಪಡಿಸಿದರೆ, ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಜಸ್ಪ್ರೀತ್‌ ಬೂಮ್ರಾ ಆಟ ಕೂಡಾ ದಾಖಲೆಯಾಗಿದೆ. ಸ್ಟುವರ್ಟ್‌ ಬ್ರಾಡ್‌ ಎಸೆದ ಒಂದೇ ಓವರ್‌ನಲ್ಲಿ ಬುಮ್ರಾ 35 ರನ್‌ ಸಿಡಿಸಿದ್ದರು. ಮತ್ತೊಂದೆಡೆ ಭಾರತ ಟಿ20 ತಂಡಕ್ಕೆ ದಿನೇಶ್‌ ಕಾರ್ತಿಕ್‌ ಕಂಬ್ಯಾಕ್‌, ಹಲವು ಯುವ ಆಟಗಾರರ ಪದಾರ್ಪಣೆ,‌ ಏಕದಿನ ಕ್ರಿಕೆಟ್‌ನಲ್ಲಿ ಶ್ರೇಯಸ್ ಅಯ್ಯರ್‌ ಸ್ಥಿರ ಫಾರ್ಮ್‌, ಹಾರ್ದಿಕ್‌ ಪಾಂಡ್ಯ ನಾಯಕತ್ವಕ್ಕೆ ಮೆಚ್ಚುಗೆ... ಇವು ಭಾರತ ಕ್ರಿಕೆಟ್‌ ತಂಡದ ಈ ವರ್ಷದ ಹೈಲೈಟ್ಸ್‌. ಈಗ ಈ ವರ್ಷ ಭಾರತ ಕ್ರಿಕೆಟ್‌ನಲ್ಲಿ ಘಟಿಸಿದ ಪ್ರಮುಖ ಅಂಶಗಳತ್ತ ಕಣ್ಣಾಡಿಸಿಕೊಂಡು ಬರೋಣ...

ಸೂರ್ಯಕುಮಾರ್‌ ಯಾದವ್‌ ನಂಬರ್‌ ವನ್‌

ಈತ ಅನ್ಯಗ್ರಹದಿಂದ ಬಂದಿರಬಹುದು ಎಂಬಂತೆ, ಹಲವು ಕ್ರಿಕೆಟ್‌ ದಿಗ್ಗಜರು ಸ್ಕೈ ಆಟವನ್ನು ಕೊಂಡಾಡಿದ್ದಾರೆ. ಭಾರತದ ಪರ ಈ ವರ್ಷ ಹಲವು ಪಂದ್ಯಗಳಲ್ಲಿ ನಿರ್ಣಾಯಕ ಪ್ರದರ್ಶನ ನೀಡಿ, ತಂಡಕ್ಕೆ ಗೆಲುವು ತಂದುಕೊಟ್ಟ ಶ್ರೇಯಸ್ಸು ಸೂರ್ಯಕುಮಾರ್‌ಗೆ ಸಲ್ಲುತ್ತದೆ. ವಿಭಿನ್ನ ಶೈಲಿ, ಸ್ಫೋಟಕ ಬ್ಯಾಟಿಂಗ್‌, ನಿರ್ಭೀತ ಸ್ಟ್ರೈಕ್‌ ಸೂರ್ಯ ಬ್ಯಾಟಿಂಗ್‌ನ ಪ್ಲಸ್‌ ಪಾಯಿಂಟ್‌. ಅದಕ್ಕೆ ತಕ್ಕನಾಗಿ, ಅವರು ಟಿ20 ಕ್ರಿಕೆಟ್‌ನಲ್ಲಿ ನಂಬರ್‌ ವನ್‌ ಆಟಗಾರನಾಗಿ ಮುಂದುವರೆದಿದ್ದಾರೆ. ಒಂದು ಕ್ಯಾಲೆಂಡರ್ ವರ್ಷದಲ್ಲಿ ಟಿ20ಯಲ್ಲಿ 1,000 ರನ್ ಗಳಿಸಿದ ಮೊದಲ ಟೀಮ್ ಇಂಡಿಯಾ ಆಟಗಾರ ಎಂಬ ಹೆಗ್ಗಳಿಕೆಗೆ ಸೂರ್ಯಕುಮಾರ್ ಈ ವರ್ಷ ಪಾತ್ರರಾದರು. ಅಲ್ಲದೆ ಒಂದು ಟಿ20 ವಿಶ್ವಕಪ್‌ನಲ್ಲಿ 100 ಕ್ಕಿಂತ ಹೆಚ್ಚು ಎಸೆತಗಳನ್ನು ಎದುರಿಸಿ ಅತ್ಯಧಿಕ ಸ್ಟ್ರೈಕ್‌ರೇಟ್ ಹೊಂದಿದವರ ಪಟ್ಟಿಯಲ್ಲೂ ಸೂರ್ಯಕುಮಾರ್ ಅಗ್ರಸ್ಥಾನದಲ್ಲಿ ನಿಂತಿದ್ದಾರೆ. 2022ರ ಟಿ20 ವಿಶ್ವಕಪ್‌ನಲ್ಲಿ ಸೂರ್ಯಕುಮಾರ್ 193.96 ಸ್ಟ್ರೈಕ್‌ರೇಟ್‌ನಿಂದ ಬ್ಯಾಟಿಂಗ್ ಮಾಡಿದ್ದಾರೆ.

ಈ ವರ್ಷ ಸೂರ್ಯಕುಮಾರ್ ಒಟ್ಟು 32 ಟಿ20 ಪಂದ್ಯಗಳಲ್ಲಿ ಆಡಿದ್ದು, ಒಟ್ಟು 1,214 ರನ್‌ ಕಲೆ ಹಾಕಿದ್ದಾರೆ. 2 ಶತಕ ಸಿಡಿಸಿರುವ ಇವರ ಅತ್ಯಧಿಕ ರನ್‌ 117. ಬ್ಯಾಟಿಂಗ್‌ ಸರಾಸರಿ 46.69. ಇದು ಟಿ20 ಕ್ರಿಕೆಟ್‌ನಲ್ಲಿ ಉತ್ತಮ ಸರಾಸರಿ. ಬರೋಬ್ಬರಿ 185.6ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟಿಂಗ್‌ ಮಾಡಿ ಎದುರಾಳಿ ತಂಡಗಳಿಗೆ ಸ್ಫೋಟಕವಾಗಿ ಕಾಡಿದ್ದಾರೆ. ಈ ವಿಶ್ವಕಪ್‌ನಲ್ಲಿ ಅವರು 59.75ರ ಅಸಾಮಾನ್ಯ ಸರಾಸರಿ ಮತ್ತು 189.68 ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 239 ರನ್ ಗಳಿಸಿದ್ದರು. ಅವರು ಟೂರ್ನಿಯಲ್ಲಿ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ.

ಶತಕದ ಬರ ನೀಗಿಸಿದ ಕಿಂಗ್‌!

ಸತತ ಮೂರು ವರ್ಷಗಳಿಂದ ಫಾರ್ಮ್‌ ಸಮಸ್ಯೆಯಿಂದ ಬಳಲುತ್ತಿದ್ದ ವಿಶ್ವ ಕ್ರಿಕೆಟ್‌ನ ಕಿಂಗ್‌ ಕೊಹ್ಲಿ ಫಾರ್ಮ್‌ಗೆ ಮರಳಿದ್ದು, ಈ ವರ್ಷ ಭಾರತೀಯ ಕ್ರಿಕೆಟ್‌ಗೆ ಸುಗ್ಗಿ ಕಾಲ. ವಿರಾಟ್‌ ಫಾರ್ಮ್‌ ಭಾರತ ತಂಡಕ್ಕೆ ತುಂಬಾ ಮುಖ್ಯ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಭಾರತೀಯ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದ ವಿರಾಟ್‌ ಕೊಹ್ಲಿಯ ಶತಕ, ಏಷ್ಯಾಕಪ್‌ನಲ್ಲಿ ಬಂದಿತ್ತು. ಆ ಮುಂಚೆಯೇ ಭಾರತ ಟೂರ್ನಿಯಿಂದ ಹೊರಬಿದ್ದಿದ್ದರೂ, ಏಷ್ಯಾಕಪ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದ ವಿರಾಟ್‌ ಅಫ್ಘಾನಿಸ್ತಾನ ವಿರುದ್ಧ ಶತಕ ಸಿಡಿಸಿದ್ದರು. ಕೇವಲ 53 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದರು. ಅದು ಅಂತಾರಾಷ್ಟ್ರೀಯ ಟಿ20ಯಲ್ಲಿ ವಿರಾಟ್ ಕೊಹ್ಲಿ ಬಾರಿಸಿದ ಮೊದಲ ಶತಕವೂ ಹೌದು. ಇದರೊಂದಿಗೆ 1021 ದಿನಗಳ ಬಳಿಕ ವಿರಾಟ್ ಕೊಹ್ಲಿ ಬ್ಯಾಟ್‌ನ ಶತಕದ ಬರ ನೀಗಿದಂತಾಯ್ತು. ಅದು ವಿರಾಟ್ ಪಾಲಿಗೆ ಅಂತಾರಾಷ್ಟ್ರೀಯ ವೃತ್ತಿ ಬದುಕಿನ 71ನೇ ಶತಕ.

ಪಾಕ್‌ ವಿರುದ್ಧದ ಆ ಇನ್ನಿಂಗ್ಸ್‌ ಮರೆಯಲು ಹೇಗೆ ಸಾಧ್ಯ?

ಅದು ಈ ಬಾರಿಯ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ಮೊದಲ ಪಂದ್ಯ. ಆಸ್ಟ್ರೇಲಿಯಾದ ಐತಿಹಾಸಿಕ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (MCG)ನಲ್ಲಿ ಬರೋಬ್ಬರಿ 90 ಸಾವಿರಕ್ಕೂ ಹೆಚ್ಚು ಅಭಿಮಾನಿಗಳಿಗೆ ಅಂದು ಕ್ರೀಡಾ ಹಬ್ಬ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಭಾರತ ರೋಚಕವಾಗಿ ಗೆದ್ದು ಬೀಗಿತು.‌ ಒಂದು ಹಂತದಲ್ಲಿ ಸೋಲುವ ಹಂತಕ್ಕೆ ಬಂದಿದ್ದ ಭಾರತಕ್ಕೆ ಆಸರೆಯಾಗಿದ್ದು ವಿರಾಟ್‌ ಕೊಹ್ಲಿ. ಕೇವಲ 53 ಎಸೆತಗಳನ್ನು ಎದುರಿಸಿದ ವಿರಾಟ್, ಆರು ಬೌಂಡರಿಗಳು ಮತ್ತು ನಾಲ್ಕು ದೈತ್ಯ ಸಿಕ್ಸರ್‌ಗಳಿಂದ ಭರ್ಜರಿ 82 ರನ್ ಚಚ್ಚಿದ್ದರು. ಇವರ ಆಟ ಭಾರತಕ್ಕೆ ಗೆಲುವು ತಂದುಕೊಟ್ಟಿತು. ಅಂತಿಮ ಎಸೆತದಲ್ಲಿ ಆರ್‌ ಅಶ್ವಿನ್‌ ವಿನ್ನಿಂಗ್‌ ರನ್‌ ಬಾರಿಸುವ ಮೂಲಕ ಭಾರತ ಜಯಶೀಲವಾಯ್ತು.

ಆದರೆ, ಇದೇ ವಿಶ್ವಕಪ್‌ನಲ್ಲಿ ಭಾರತ ಸೆಮೀಸ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಸೋಲುವ ಮೂಲಕ ನಿರಾಶೆ ಅನುಭವಿಸಿತು.

ಬುಮ್ರಾ ಟೆಸ್ಟ್‌ ನಾಯಕ, ಬ್ಯಾಟಿಂಗ್‌ನಲ್ಲಿ ದಾಖಲೆ

ಈ ವರ್ಷ ಇಂಗ್ಲೆಂಡ್‌ ವಿರುದ್ಧ ನಡೆದ ಮರುನಿಗದಿಪಡಿಸಿದ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾಗೆ ತಾತ್ಕಾಲಿಕ ನಾಯಕನಾದ ಜಸ್ಪ್ರೀತ್‌ ಬುಮ್ರಾ, ಬೌಲಿಂಗ್‌ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲಿ ಮಿಂಚು ಹರಿಸಿದರು. ಸ್ಟುವರ್ಟ್‌ ಬ್ರಾಡ್‌ ಎಸೆದ ಓವರ್‌ನಲ್ಲಿ ಬರೋಬ್ಬರಿ 35 ರನ್‌ ಸಿಡಿಸಿ ದಾಖಲೆ ನಿರ್ಮಿಸಿದರು. ಅದು ಕೂಡಾ ಕೊನೆಯ ವಿಕೆಟ್‌ಗೆ. ಆ ಮೂಲಕ 2007ರ ಟಿ20 ವಿಶ್ವಕಪ್‌ನಲ್ಲಿ ಇದೇ ಬೌಲರ್‌ ವಿರುದ್ಧ ಯುವರಾಜ್‌ ಸಿಂಗ್‌ ಸಿಡಿಸಿದ ಆರು ಸಿಕ್ಸರ್‌ಗಳನನ್ನು ನೆನಪಿಸಿದರು.

ಈ ಟೆಸ್ಟ್‌ ಪಂದ್ಯದ ಮೂಲಕ ಬುಮ್ರಾ ಮೊದಲ ಬಾರಿಗೆ ನಾಯಕತ್ವ ವಹಿಸಿಕೊಂಡರು. ಅದುವರೆಗೂ ಯಾವುದೇ ಪ್ರಮುಖ ತಂಡವೊಂದರ ನಾಯಕತ್ವ ವಹಿಸಿಕೊಳ್ಳದ ವೇಗಿ, ಮೊದಲ ಬಾರಿಗೆ ನೇರವಾಗಿ ಭಾರತ ಟೆಸ್ಟ್‌ ತಂಡವನ್ನು ಮುನ್ನಡೆಸಿದರು. ಈ ಪಂದ್ಯವನ್ನು ಭಾರತ 7 ವಿಕೆಟ್‌ಗಳ ಅಂತರದಿಂದ ಸೋತಿತು.

ಏಕದಿನ ಕ್ರಿಕೆಟ್‌ನಲ್ಲಿ ಶ್ರೇಯಸ್‌ ಅಯ್ಯರ್‌ ಫಾರ್ಮ್‌

ಈ ವರ್ಷ ಭಾರತ ಏಕದಿನ ಕ್ರಿಕೆಟ್‌ ತಂಡದಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವವರು ಶ್ರೇಯಸ್‌ ಅಯ್ಯರ್‌. ಸಿಕ್ಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡಿರುವ ಅಯ್ಯರ್‌, ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ವರ್ಷ ಈವರೆಗೆ ಒಟ್ಟು 17 ಪಂದ್ಯಗಳನ್ನು ಆಡಿರುವ ಅಯ್ಯರ್‌, 55.69 ಸರಾಸರಿಯಲ್ಲಿ ಬ್ಯಾಟ್‌ ಬೀಸಿ 724 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ 6 ಅರ್ಧಶತಕ ಹಾಗೂ ಒಂದು ಶತಕ ಕೂಡಾ ಸೇರಿದೆ.

ಅರ್ಷದೀಪ್‌ ಸಿಂಗ್‌ ಟೀಂ ಇಂಡಿಯಾ ಕಾಯಂ ಸದಸ್ಯ, ಬೌಲಿಂಗ್‌ ದಾಖಲೆ

ಐಪಿಎಲ್‌ನಲ್ಲಿ ಮಾರಕ ಬೌಲಿಂಗ್‌ ದಾಳಿಯಿಂದ ಗುರುತಿಸಿಕೊಂಡು, ಟೀಂ ಇಂಡಿಯಾಗೆ ಈ ವರ್ಷ ಪದಾರ್ಪಣೆ ಮಾಡಿದ ಯುವ ವೇಗಿ ಅರ್ಷದೀಪ್‌ ಸಿಂಗ್‌. 23ರ ಹರೆಯದ ಈ ಪಂಜಾಬ್‌ ವೇಗಿ ಸದ್ಯ ಭಾರತ ತಂಡದ ಅನರ್ಘ್ಯ ರತ್ನ. ಡೆತ್‌ ಓವರ್‌ಗಳಿಗೆ ಹೇಳಿ ಮಾಡಿಸಿದ ಬೌಲರ್‌. ಭಾರತ ಟಿ20 ತಂಡದಲ್ಲಿ ಕಾಯಂ ಸದಸ್ಯನಾಗಿ ಗುರುತಿಸಿಕೊಂಡ ಅರ್ಷದೀಪ್‌, ಏಕದಿನ ತಂಡದಲ್ಲೂ ಮಿಂಚುತ್ತಿದ್ದಾರೆ. ಇಂಗ್ಲೆಂಡ್‌ ವಿರುದ್ಧ ಜುಲೈನಲ್ಲಿ ನಡೆದ ಟಿ20 ಪಂದ್ಯದ ಮೂಲಕ ಅಂತಾರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ ವೇಗಿ, ಈವರೆಗೆ ಒಟ್ಟು 21 ಪಂದ್ಯಗಳನ್ನಾಡಿದ್ದಾರೆ. 8.17ರ ಎಕಾನಮಿಯಲ್ಲಿ ರನ್‌ ಬಿಟ್ಟುಕೊಟ್ಟು ಒಟ್ಟು 33 ವಿಕೆಟ್‌ ಕಬಳಿಸಿದ್ದಾರೆ. ಇವರ ಬೆಸ್ಟ್‌ ಇನ್ನಿಂಗ್ಸ್‌ 4/37. ಪ್ರಮುಖವಾಗಿ ಡೆತ್‌ ಓವರ್‌ಗಳಲ್ಲಿ ಇವರ ಬೌಲಿಂಗ್‌ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಒಂದೇ ವರ್ಷ ಅತಿ ಹೆಚ್ಚು ಪಂದ್ಯಗಳಲ್ಲಿ ಗೆಲುವು; ಆಸ್ಟ್ರೇಲಿಯಾ ದಾಖಲೆ ಬ್ರೇಕ್‌

ಅಕ್ಟೋಬರ್‌ ತಿಂಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಗೆಲ್ಲುವ ಮೂಲಕ ಭಾರತ ತಂಡ ದಾಖಲೆಯೊಂದನ್ನು ಬರೆಯಿತು. ಒಂದೇ ಕ್ಯಾಲೆಂಟರ್‌ ವರ್ಷದಲ್ಲಿ ಹೆಚ್ಚಿನ ಪಂದ್ಯಗಳನ್ನು ಗೆಲ್ಲುವ ಮೂಲಕ ಆಸೀಸ್‌ ದಾಖಲೆಯನು ಸರಿಗಟ್ಟಿತು. ಭಾರತವು ಮೂರು ಪಂದ್ಯಗಳ ಏಕದಿನ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಸರಣಿಯನ್ನು 2-1 ರಿಂದ ವಶಪಡಿಸಿಕೊಂಡಿತು. ಆವರೆಗೆ ಆಸ್ಟ್ರೇಲಿಯ ತಂಡ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಪಂದ್ಯಗಳಲ್ಲಿ ಜಯಗಳಿಸಿದ ದಾಖಲೆ ಹೊಂದಿತ್ತು. 47 ಪಂದ್ಯಗಳಿಂದ 38 ಗೆಲುವಿನೊಂದಿಗೆ ಕಾಂಗರೂಗಳು ಅಗ್ರಸ್ಥಾನದಲ್ಲಿದ್ದರು. ಆದರೆ, ಹರಿಣಗಳ ವಿರುದ್ಧ ಗೆಲ್ಲುವ ಮೂಲಕ, ಭಾರತವು 55 ಪಂದ್ಯಗಳಿಂದ 38 ಗೆಲುವು ದಾಖಲಿಸಿ ಆಸ್ಟ್ರೇಲಿಯಾ ದಾಖಲೆಯನ್ನು ಮುರಿಯಿತು.

ಇಶಾನ್‌ ಕಿಶನ್‌ ದ್ವಿಶತಕ

ಇತ್ತೀಚೆಗೆ ಮುಗಿದ ಬಾಂಗ್ಲಾದೇಶ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ, ಇಶಾನ್‌ ಕಿಶನ್‌ ದಾಖಲೆಯ ದ್ವಿಶತಕ ಸಿಡಿಸಿದರು. ರೋಹಿತ್‌ ಅನುಪಸ್ಥಿತಿಯಲ್ಲಿ ಆಡುವ ಬಳಗದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಇಶಾನ್‌ ನಿರ್ಭೀತಿಯಿಂದ ಬ್ಯಾಟ್‌ ಬೀಸಿದರು. ಏಕದಿನ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ದಾಖಲಿಸಿದ ಬಳಿಕ, ಅದನ್ನು ದ್ವಿಶತಕವಾಗಿ ಪರಿವರ್ತಿಸಿದರು. ಕೇವಲ 126 ಎಸೆತಗಳಲ್ಲಿ 23‌ ಬೌಂಡರಿ ಹಾಗೂ 9 ಸಿಕ್ಸರ್‌ಗಳ ನೆರವಿನಿಂದ ಈ ದಾಖಲೆ ನಿರ್ಮಿಸಿದ್ದಾರೆ. ಅಂತಿಮವಾಗಿ ಅವರು 210 ರನ್‌ ಗಳಿಸಿ ಕಿಶನ್‌ ಔಟಾದರು.

ಚಟ್ಟೋಗ್ರಾಮ್‌ನ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೇವಲ 126 ಎಸೆತಗಳಲ್ಲಿ ದ್ವಿಶತಕ ಸಿಡಿಸುವ ಮೂಲಕ ಇಶಾನ್‌ ದಾಖಲೆ ನಿರ್ಮಿಸಿದರು. ಅಲ್ಲದೆ ಏಕದಿನ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ವಿಶ್ವದ ಏಳನೇ ಬ್ಯಾಟರ್ ಎನಿಸಿಕೊಂಡರು. ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ ಮತ್ತು ವೀರೇಂದ್ರ ಸೆಹ್ವಾಗ್ ಬಳಿಕ ದ್ವಿಶತಕ ಸಿಡಿಸಿದ ಭಾರತದಿಂದ ನಾಲ್ಕನೇ ಆಟಗಾರ ಎನಿಸಿಕೊಂಡರು. ಅಲ್ಲದೆ ಏಕದಿನ ಇನ್ನಿಂಗ್ಸ್‌ನಲ್ಲಿ ವೇಗವಾಗಿ 200 ರನ್ ಗಳಿಸಿದ ಗೇಲ್‌ ದಾಖಲೆಯನ್ನು ಮುರಿದರು.

ಭಾರತ ತಂಡ ಈ ವರ್ಷ ಕೆಲ ಉನ್ನತ ದಾಖಲೆಗಳನ್ನು ಮಾಡಿದೆ. ಆದ್ರೆ ಈ ವರ್ಷದ ಪ್ರಮುಖ ಟೂರ್ನಿಗಳು ಎನಿಸಿದ ವಿಶ್ವಕಪ್‌ ಹಾಗೂ ಏಷ್ಯಾಕಪ್‌ ಸೋಲು, ಅಭಿಮಾನಿಗಳಿಗೆ ಭಾರಿ ಬೇಸರ ತರಿಸಿದೆ. ಮತ್ತೊಂದೆಡೆ ಈ ತಿಂಗಳಲ್ಲಿ ನಡೆದ ಬಾಂಗ್ಲಾ ವಿರುದ್ಧದ ಏಕದಿನ ಸರಣಿ ಸೋಲು, ಟೀಂ ಇಂಡಿಯಾಗೆ ಮುಜುಗರ ತರಿಸಿದೆ. ಇನ್ನೊಂದೆಡೆ ಮುಂಬರುವ ಏಷ್ಯಾಕಪ್‌ ಹಾಗೂ ಏಕದಿನ ವಿಶ್ವಕಪ್‌ ಆತಿಥ್ಯದ ಕುರಿತು ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಗಳ ನಡುವೆ ವಾಗ್ವಾದವೂ ಜೋರಾಗಿದೆ. ಈ ಬಗ್ಗೆ ಇನ್ನು ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಇದರ ನಡುವೆ ಮುಂದಿನ ವರ್ಷ ಮಹತ್ವದ ಏಕದಿನ ವಿಶ್ವಕಪ್‌ ನಡೆಯಲಿದ್ದು, ಇದಕ್ಕಾಗಿ ಭಾರತ ಸಿದ್ಧತೆ ನಡೆಸಬೇಕಿದೆ. ಮುಂದಿನ ವರ್ಷವಾದರೂ, ಕಪ್‌ ಗೆದ್ದು ಐಸಿಸಿ ಟ್ರೋಫಿ ಬರವನ್ನು ನೀಗಿಸಬೇಕಿದೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ