Asia Cup 2022: ಅರಬ್ಬರ ನಾಡಿನಲ್ಲಿ ಏಷ್ಯಾ ಕಪ್ 2022 ಆಯೋಜನೆ!; ಆರ್ಥಿಕ ಬಿಕ್ಕಟ್ಟಿನಿಂದ ಆತಿಥ್ಯ ವಹಿಸದಿರಲು ಶ್ರೀಲಂಕಾ ನಿರ್ಧಾರ
Aug 24, 2022 12:19 PM IST
ಅರಬ್ಬರ ನಾಡಿನಲ್ಲಿ ಏಷ್ಯಾ ಕಪ್ 2022 ಆಯೋಜನೆ!; ಆರ್ಥಿಕ ಬಿಕ್ಕಟ್ಟಿನಿಂದ ಆತಿಥ್ಯದಿಂದ ಹಿಂದೆ ಸರಿದ ಶ್ರೀಲಂಕಾ
- 2022ರ ಪ್ರಸಕ್ತ ವರ್ಷದ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಗಳೂ ಎಲ್ಲ ಅಂದುಕೊಂಡಂತೆ ಆಗಿದ್ದರೆ, ಶ್ರೀಲಂಕಾದಲ್ಲಿ ನಡೆಯಬೇಕಿತ್ತು. ಆದರೆ, ಅಲ್ಲಿನ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಆತಿಥ್ಯ ವಹಿಸದಿರಲು ಲಂಕಾ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ.
ನವದೆಹಲಿ: 2022ರ ಪ್ರಸಕ್ತ ವರ್ಷದ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿ ಎಲ್ಲ ಅಂದುಕೊಂಡಂತೆ ಆಗಿದ್ದರೆ, ಶ್ರೀಲಂಕಾದಲ್ಲಿ ನಡೆಯಬೇಕಿತ್ತು. ಆದರೆ, ಅಲ್ಲಿನ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಆತಿಥ್ಯ ವಹಿಸದಿರಲು ಲಂಕಾ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಈ ಸಲದ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಗಳನ್ನು UAE ಯಲ್ಲಿ ಆಯೋಜನೆ ಮಾಡಲು ನಿರ್ಧರಿಸಲಾಗಿದೆ.
ಈ ಸಂಬಂಧ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಏಷ್ಯಾ ಕಪ್ ಯುಎಇಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ. ಸದ್ಯ ಮಳೆಗಾಲದಲ್ಲಿ ನಾವಿರುವಿದರಿಂದ ಮಳೆಯಾಗದ ಏಕೈಕ ಸ್ಥಳವೆಂದರೆ ಅದು ಯುಎಇಯಾಗಿದೆ. ಹಾಗಾಗಿ ಅಲ್ಲಿಯೇ ಈ ಸಲದ ಏಷ್ಯಾ ಕಪ್ ಟೂರ್ನಿ ನಡೆಯಲಿದೆ ಎಂದು ಅಪೆಕ್ಸ್ ಕೌನ್ಸಿಲ್ ಸಭೆಯ ಬಳಿಕ ಮಾಹಿತಿ ನೀಡಿದ್ದಾರೆ.
ಶ್ರೀಲಂಕಾ ಕ್ರಿಕೆಟ್ ಬುಧವಾರ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ಗೆ ಈ ವಿಚಾರವನ್ನು ತಿಳಿಸಿದ್ದು, ದೇಶದಲ್ಲಿ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನ ಕಾರಣ ಮುಂಬರುವ ಏಷ್ಯಾ ಕಪ್ ಟಿ20 ಆವೃತ್ತಿಯ ಆತಿಥ್ಯ ವಹಿಸಲು ಮಂಡಳಿಯಿಂದ ಸಾಧ್ಯವಿಲ್ಲ ಎಂದಿತ್ತು. ಅಂದಹಾಗೆ, 2014 ಮತ್ತು 2016ರಲ್ಲಿ ಏಷ್ಯಾಕಪ್ ಆತಿಥ್ಯವನ್ನು ಶ್ರೀಲಂಕಾ ವಹಿಸಿಕೊಂಡಿತ್ತು.
ಶ್ರೀಲಂಕಾದಲ್ಲಿನ ಬಿಕ್ಕಟ್ಟಿನಿಂದಾಗಿ ಈಗಾಗಲೇ ಲಂಕಾ ಪ್ರೀಮಿಯರ್ ಲೀಗ್ (LPL) ನ ಮೂರನೇ ಆವೃತ್ತಿಯನ್ನು ಮುಂದೂಡಲಾಗಿದೆ ಎಂದು ಲಂಕಾ ಕ್ರಿಕೆಟ್ ಹೇಳಿದೆ. ಈ ನಿರ್ಧಾರದ ಬಳಿಕ ಏಷ್ಯಾ ಕಪ್ ಆಯೋಜನೆಯನ್ನೂ ಲಂಕಾ ಕ್ರಿಕೆಟ್ ಮಂಡಳಿ ಕೈಬಿಟ್ಟಿದೆ. ಅಂದಹಾಗೆ ಆಗಸ್ಟ್ 27 ರಿಂದ ಸೆಪ್ಟೆಂಬರ್ 11 ರವರೆಗೆ ಈ ಸಲದ ಏಷ್ಯಾಕಪ್ ನಡೆಯಲಿದ್ದು, ಟಿ20 ಮಾದರಿಯಲ್ಲಿ ನಡೆಯಲಿದೆ.
ಏಷಿಯನ್ ದೇಶಗಳು ಭಾಗಿ
ಏಷ್ಯಾ ಕಪ್‌ನಲ್ಲಿ ಏಷ್ಯಾದ ಪ್ರಮುಖ ಕ್ರಿಕೆಟ್ ಆಡುವ ದೇಶಗಳಾದ ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಭಾಗವಹಿಸಲಿವೆ. ಇತರೆ ಕೆಲ ದೇಶಗಳು ಅರ್ಹತಾ ಪಂದ್ಯಗಳಲ್ಲಿ ಗೆದ್ದರೆ ಮಾತ್ರ ಆಯ್ಕೆಯಾಗಲಿವೆ. ಆ ಸಾಲಿನಲ್ಲಿ ಯುಎಇ, ಸಿಂಗಾಪುರ್, ಹಾಂಗ್‌ಕಾಂಗ್, ಕುವೈತ್ ಸಹ ಅರ್ಹತಾ ಪಂದ್ಯಗಳನ್ನಾಡಲಿವೆ.